Home ರಾಜಕೀಯ ವಿಜಯ್ ನಿಲುವಿಗೆ ಸ್ವಪಕ್ಷದಲ್ಲೇ ತೀವ್ರ ವಿರೋಧ : ಜ್ಯೋತಿಷಿಗೆ OSD ಹುದ್ದೆ ಆದೇಶ ವಾಪಸ್

ವಿಜಯ್ ನಿಲುವಿಗೆ ಸ್ವಪಕ್ಷದಲ್ಲೇ ತೀವ್ರ ವಿರೋಧ : ಜ್ಯೋತಿಷಿಗೆ OSD ಹುದ್ದೆ ಆದೇಶ ವಾಪಸ್

0

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಜ್ಯೋತಿಷಿ ರಿಕ್ಕಿ ರಾಧನ್ ಪಂಡಿತ್ ಅವರನ್ನು ವಿಶೇಷ ಕರ್ತವ್ಯ ಅಧಿಕಾರಿ (OSD) ಆಗಿ ನೇಮಕ ಮಾಡಿದ್ದ ನಿರ್ಧಾರವನ್ನು ಮಿತ್ರಪಕ್ಷಗಳ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಹಿಂತೆಗೆದುಕೊಂಡಿದ್ದಾರೆ.

ಸೋಮವಾರ (ಮೇ 12) ರಾಧನ್ ಪಂಡಿತ್ ಅವರನ್ನು OSD ಆಗಿ ನೇಮಕ ಮಾಡಿದ ಕೆಲವೇ ಗಂಟೆಗಳಲ್ಲಿ ಆ ನಿರ್ಧಾರ ವ್ಯಾಪಕ ಟೀಕೆಗೆ ಗುರಿಯಾಯಿತು. ಟಿವಿಕೆ ನಾಯಕರು ಮತ್ತು ಸಮ್ಮಿಶ್ರ ಸರ್ಕಾರದ ಪ್ರಮುಖ ಅಂಗಪಕ್ಷ ವಿಸಿಕೆ ಕೂಡ ಈ ನಿರ್ಧಾರವನ್ನು ಬಹಿರಂಗವಾಗಿ ಪ್ರಶ್ನಿಸಿತು. ಜಾತ್ಯಾತೀತ ಆಡಳಿತ ನೀಡುವ ಭರವಸೆ ನೀಡಿದ್ದ ವಿಜಯ್, ತಮ್ಮ ಆಪ್ತ ವಲಯದಲ್ಲಿ ಜ್ಯೋತಿಷಿ ಒಬ್ಬರಿಗೆ ಸ್ಥಾನ ನೀಡುವುದು ಉಚಿತವಲ್ಲ ಎಂಬ ಅಸಮಾಧಾನ ಪಕ್ಷದ ಒಳಗಿಂದಲೇ ಕೇಳಿಬಂತು.

ರಾಧನ್ ಪಂಡಿತ್ ಯಾರು?

ರಿಕ್ಕಿ ರಾಧನ್ ಪಂಡಿತ್ ವೆಟ್ರಿವೇಲ್ ಅವರು ಟಿವಿಕೆ ಪಕ್ಷದ ಅಧಿಕೃತ ಮಾಧ್ಯಮ ವಕ್ತಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಟಿವಿಕೆ ಗೆಲ್ಲಲಿದೆ ಎಂದು ಮೊದಲೇ ಭವಿಷ್ಯ ನುಡಿದ ಖ್ಯಾತಿ ಅವರದ್ದು. ಅಲ್ಲದೇ ಸಿಎಂ ಪ್ರಮಾಣವಚನ ಸಮಾರಂಭವನ್ನು ಮುಂದೂಡುವಂತೆ ವಿಜಯ್ ಅವರಿಗೆ ಸಲಹೆ ನೀಡಿದ್ದರು ಎಂದು ಹೇಳಲಾಗುತ್ತಿದೆ.

ಟಿವಿಕೆ ನಾಯಕ ಸಿಟಿ ನಿರ್ಮಲ್ ಕುಮಾರ್ ಆರಂಭದಲ್ಲಿ ಈ ನೇಮಕವನ್ನು ಸಮರ್ಥಿಸಿಕೊಂಡು, “ರಾಧನ್ ಪಂಡಿತ್ ಅವರಿಗೆ OSD ಹುದ್ದೆ ನೀಡಿರುವುದು ಅವರ ಜ್ಯೋತಿಷ್ಯ ವೃತ್ತಿಗಾಗಿ ಅಲ್ಲ, ಪಕ್ಷಕ್ಕಾಗಿ ಅವರು ಸಲ್ಲಿಸಿದ ಸೇವೆಯನ್ನು ಗುರುತಿಸಿ ನೀಡಲಾಗಿದೆ” ಎಂದು ಸ್ಪಷ್ಟಪಡಿಸಿದ್ದರು. ಆದರೂ ವಿರೋಧ ತಣ್ಣಗಾಗಲಿಲ್ಲ.

ಒತ್ತಡ ಹೆಚ್ಚಾದಂತೆ ವಿಜಯ್ ಅವರು ಕೊನೆಗೆ ರಾಧನ್ ಪಂಡಿತ್ ಅವರ OSD ನೇಮಕವನ್ನು ರದ್ದುಗೊಳಿಸಿದ್ದಾರೆ. ಮಿತ್ರಪಕ್ಷಗಳ ಮನಸ್ಥಿತಿ ಅರಿತು ಹಿಂದಡಿ ಇಟ್ಟ ವಿಜಯ್ ಅವರ ಈ ನಡೆ, ಸಮ್ಮಿಶ್ರ ಆಡಳಿತದ ಸಂಘಟನಾ ಸ್ಥಿತಿಯ ದೃಷ್ಟಿಯಿಂದ ಮಹತ್ವದ್ದಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.


You cannot copy content of this page

Exit mobile version