ಚಿತ್ರದುರ್ಗ: ಹಿರಿಯೂರು ತಾಲ್ಲೂಕಿನ ಗೊನ್ನೂರು ಬಳಿ ರಾಷ್ಟ್ರೀಯ ಹೆದ್ದಾರಿ-48ಕ್ಕೆ ಹೊಂದಿಕೊಂಡಿರುವ ಹೊಲದಲ್ಲಿ 19 ವರ್ಷದ ಯುವತಿಯ ಅರ್ಧ ಸುಟ್ಟ ಶವ ಪತ್ತೆಯಾದ ಒಂದು ದಿನದ ನಂತರ, ಆಕೆಯ ಸಾವಿಗೆ ಸಂಬಂಧಿಸಿದಂತೆ 21 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಮೃತೆ ಹರ್ಷಿತಾ (ಹೆಸರನ್ನು ಬದಲಾಯಿಸಲಾಗಿದೆ), ಚಿತ್ರದುರ್ಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎರಡನೇ ವರ್ಷದ ಬಿ.ಎ. ವಿದ್ಯಾರ್ಥಿನಿ. ಅವರು ಪಟ್ಟಣದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯದಲ್ಲಿ ವಾಸಿಸುತ್ತಿದ್ದರು. ಅಂದಹಾಗೆ, ಹರ್ಷಿತಾ ನಾಲ್ಕು ದಿನಗಳ ಹಿಂದೆ ಮನೆಗೆ ಹೋಗಲು ಕಾಲೇಜಿನಿಂದ ರಜೆ ಪಡೆದಿದ್ದರು. ಆದರೆ, ಅವರು ಮನೆ ತಲುಪದಿದ್ದಾಗ ಅವರ ಪೋಷಕರು ಚಿಂತಿತರಾದರು.
ಮಂಗಳವಾರ, ಗೊನ್ನೂರು ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಹೊಲವೊಂದರಲ್ಲಿ ಸುಟ್ಟ ಶವ ಪತ್ತೆಯಾಗಿತ್ತು. ಮೃತಳು ಹರ್ಷಿತಾ ಎಂದು ದೃಢಪಡಿಸಿದ ಪೊಲೀಸರು, ಆಕೆಯನ್ನು ಪೆಟ್ರೋಲ್ ಸುರಿದು ಸುಟ್ಟುಹಾಕಲಾಗಿದೆ ಎಂದು ಕಂಡುಕೊಂಡರು. ನಂತರ, ಪೊಲೀಸರು ಹರ್ಷಿತಾ ಅವರ ಸ್ನೇಹಿತನಾದ 21 ವರ್ಷದ ಚೇತನ್‌ನನ್ನು ಬುಧವಾರ ವಶಕ್ಕೆ ಪಡೆದುಕೊಂಡರು.
“ಹೆದ್ದಾರಿ-48ರಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಮೂತ್ರ ವಿಸರ್ಜನೆಗೆಂದು ತಮ್ಮ ವಾಹನ ನಿಲ್ಲಿಸಿದಾಗ ಶವವನ್ನು ಪತ್ತೆಯಾಯಿತು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಯಿತು.
ಪ್ರಾಥಮಿಕ ವಿಚಾರಣೆಯಲ್ಲಿ ಚೇತನ್ ಕೊಲೆಯ ಶಂಕಿತ ಆರೋಪಿ ಎಂದು ತಿಳಿದು ಬಂದ ನಂತರ, ನಾವು ಆತನನ್ನು ವಶಕ್ಕೆ ತೆಗೆದುಕೊಂಡೆವು. ಹರ್ಷಿತಾ ಸಾವಿಗೆ ಮುನ್ನ ಆಕೆಯ ಮೇಲೆ ದೌರ್ಜನ್ಯ ನಡೆಸಲಾಗಿದೆಯೇ ಎಂಬುದು ಮುಂದಿನ ತನಿಖೆಯಲ್ಲಿ ತಿಳಿಯಲಿದೆ” ಎಂದು ಎಸ್‌ಪಿ ರಂಜಿತ್ ಕುಮಾರ್ ಬಂಡಾರು ಅವರು ಪತ್ರಕರ್ತರಿಗೆ ತಿಳಿಸಿದರು.
ಈ ಮಧ್ಯೆ, ಈ ಬರ್ಬರ ಕೊಲೆಯನ್ನು ವಿರೋಧಿಸಿ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಚಿತ್ರದುರ್ಗದ ಒನಕೆ ಓಬವ್ವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.