Home ಬೆಂಗಳೂರು ಕೆರೆ ಸಂರಕ್ಷಣೆ ಮಸೂದೆ ತಿದ್ದುಪಡಿಯನ್ನು ಸೋಲಿಸುವ ಬಿಜೆಪಿ ಯೋಜನೆಗೆ ಕೈ ಕೊಟ್ಟ ದೋಸ್ತ್‌ ಜೆಡಿಎಸ್

ಕೆರೆ ಸಂರಕ್ಷಣೆ ಮಸೂದೆ ತಿದ್ದುಪಡಿಯನ್ನು ಸೋಲಿಸುವ ಬಿಜೆಪಿ ಯೋಜನೆಗೆ ಕೈ ಕೊಟ್ಟ ದೋಸ್ತ್‌ ಜೆಡಿಎಸ್

0

ಬೆಂಗಳೂರು: ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಮಸೂದೆ, 2025 ಅನ್ನು ಪರಿಷತ್ತಿನಲ್ಲಿ ಬುಧವಾರ ಸೋಲಿಸಲು ಬಿಜೆಪಿ ನಡೆಸಿದ ಪ್ರಯತ್ನಕ್ಕೆ ಮೈತ್ರಿ ಪಕ್ಷವಾದ ಜೆಡಿಎಸ್‌ನಿಂದ ಬೆಂಬಲ ಸಿಗಲಿಲ್ಲ. ಬದಲಾಗಿ, ಜೆಡಿಎಸ್ ಸದಸ್ಯರು ಈ ಮಸೂದೆಯ ಪರವಾಗಿ ಮಾತನಾಡಿದ ಕಾರಣ ಬಿಜೆಪಿಯ ಯೋಜನೆ ವಿಫಲಗೊಂಡಿತು.

ಪರಿಷತ್ತಿನ ವಿರೋಧ ಪಕ್ಷದ ನಾಯಕ ಹಾಗೂ ಹಿರಿಯ ಬಿಜೆಪಿ ನಾಯಕ ಚಲುವಾದಿ ಟಿ. ನಾರಾಯಣಸ್ವಾಮಿ, ಮಾಜಿ ಸಚಿವ ಸಿ.ಟಿ. ರವಿ, ಎನ್. ರವಿ ಕುಮಾರ್, ಹೇಮಲತಾ ನಾಯಕ್ ಅವರು ಬಿಜೆಪಿಯ ಪರವಾಗಿ ಮಸೂದೆ ವಿರುದ್ಧ ವಾದಿಸಿದರು. ‌

ಕೆರೆಗಳ ಬಫರ್ ವಲಯಗಳನ್ನು ಪರಿಷ್ಕರಿಸಲು ಪ್ರಸ್ತಾಪಿಸಲಾದ ಬದಲಾವಣೆಗಳ ಬಗ್ಗೆ ಅವರು ತಕರಾರು ವ್ಯಕ್ತಪಡಿಸಿದರು. ಆದರೆ, ಜೆಡಿಎಸ್‌ನ ವಿಧಾನ ಪರಿಷತ್ ಸದಸ್ಯರಾದ ಟಿ.ಎ. ಶರವಣ, ಜವರಾಯೀ ಗೌಡ ಮತ್ತು ವಿವೇಕಾನಂದ ಅವರು ಮಸೂದೆಯನ್ನು ಸ್ವಾಗತಿಸಿದ್ದು, ಬಿಜೆಪಿಗೆ ನಿರಾಸೆ ಮೂಡಿಸಿತು.

ಮಂಗಳವಾರ ವಿಧಾನಸಭೆಯಲ್ಲಿ ಅಂಗೀಕಾರಗೊಂಡ ಈ ಮಸೂದೆಯನ್ನು ಮಂಡಿಸಿದ ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಅವರು, ಈಗಿರುವ ಕೆರೆಗಳ ಬಫರ್ ವಲಯವನ್ನು ಸಾರ್ವತ್ರಿಕವಾಗಿ 30 ಮೀಟರ್ ನಿಗದಿಪಡಿಸುವ ಬದಲು, ತಿದ್ದುಪಡಿಯು ಪ್ರತಿ ಕೆರೆಯ ಗಡಿಗಳಿಗೆ ಅನುಗುಣವಾಗಿ ಬಫರ್ ವಲಯವನ್ನು ಪ್ರತ್ಯೇಕವಾಗಿ ಲೆಕ್ಕ ಹಾಕಲು ಪ್ರಸ್ತಾಪಿಸಿದೆ ಎಂದು ಪರಿಷತ್ತಿಗೆ ಮಾಹಿತಿ ನೀಡಿದರು.

“ಐದು ಗುಂಟೆ ಅಥವಾ ಅದಕ್ಕಿಂತ ಚಿಕ್ಕ ಕೆರೆಗಳಿಗೆ ಬಫರ್ ವಲಯ 0 ಮೀಟರ್ ಇರುತ್ತದೆ, ಐದು ಗುಂಟೆಯಿಂದ ಒಂದು ಎಕರೆ ವಿಸ್ತೀರ್ಣದ ಕೆರೆಗಳಿಗೆ 3 ಮೀಟರ್ ನಿಗದಿಪಡಿಸಲಾಗಿದೆ. ಒಂದು ಎಕರೆಯಿಂದ ಹತ್ತು ಎಕರೆ ವಿಸ್ತೀರ್ಣದ ಕೆರೆಗಳಿಗೆ ಬಫರ್ ವಲಯ 6 ಮೀಟರ್ ಇರುತ್ತದೆ. 10 ರಿಂದ 25 ಎಕರೆ ವಿಸ್ತೀರ್ಣದ ಕೆರೆಗಳಿಗೆ 12 ಮೀಟರ್, ಮತ್ತು 25 ರಿಂದ 100 ಎಕರೆ ವಿಸ್ತೀರ್ಣದ ಕೆರೆಗಳಿಗೆ 24 ಮೀಟರ್ ಇರುತ್ತದೆ. 100 ಎಕರೆಗಿಂತ ದೊಡ್ಡ ಕೆರೆಗಳಿಗೆ ಬಫರ್ ವಲಯ 30 ಮೀಟರ್ ಇರುತ್ತದೆ. ಆದರೆ, ನಾವು ಬಫರ್ ವಲಯದಲ್ಲಿ ಒಂದು ಅಡಿಯನ್ನೂ ಖಾಸಗಿ ಸಂಸ್ಥೆಗಳಿಗೆ ಬಿಟ್ಟುಕೊಡುವುದಿಲ್ಲ, ಅದನ್ನು ಮೂಲಸೌಕರ್ಯ ಅಭಿವೃದ್ಧಿಗೆ ಮಾತ್ರ ಬಳಸಲಾಗುವುದು” ಎಂದು ಬೋಸರಾಜು ಹೇಳಿದರು.

ಬಫರ್ ವಲಯದ ಪ್ರದೇಶವನ್ನು ಕಡಿಮೆ ಮಾಡುವುದರಿಂದ ಕೆರೆಗಳು ನಾಶವಾಗುತ್ತವೆ ಎಂದು ಚಲುವಾದಿ ಹೇಳಿದರು. “ಬೆಂಗಳೂರಿನಲ್ಲಿ ಪ್ರವಾಹ ಹೆಚ್ಚಾಗಲು ಕೆರೆಗಳ ಒತ್ತುವರಿ ಕಾರಣ. ಬಫರ್ ವಲಯವನ್ನು ಕಡಿಮೆ ಮಾಡುವುದರಿಂದ ಈ ಸಮಸ್ಯೆ ಇನ್ನಷ್ಟು ಉಲ್ಬಣಗೊಳ್ಳುತ್ತದೆ” ಎಂದು ಅವರು ತಿಳಿಸಿದರು.

ಚಲುವಾದಿ ಅವರ ಪಕ್ಷದ ಸಹೋದ್ಯೋಗಿ ರವಿ, ರಿಯಲ್ ಎಸ್ಟೇಟ್ ಮಾಫಿಯಾದ ಒತ್ತಡಕ್ಕೆ ಒಳಗಾಗಿ ಕಾಂಗ್ರೆಸ್ ಸರ್ಕಾರ ಈ ಮಸೂದೆ ತಂದಿದೆ ಎಂದು ಆರೋಪಿಸಿದರು. “ಇದು 50 ಮೀಟರ್ ಬಫರ್ ವಲಯವನ್ನು ಕಡ್ಡಾಯಗೊಳಿಸುವ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ (NGT) ಆದೇಶದ ಉಲ್ಲಂಘನೆಯಾಗಿದೆ” ಎಂದು ರವಿ ಹೇಳಿದರು. ಈ ಹಿಂದೆ ಬಿಜೆಪಿ ಸರ್ಕಾರವು ರಿಯಲ್ ಎಸ್ಟೇಟ್ ಕ್ಷೇತ್ರದ ಒತ್ತಡಕ್ಕೆ ಮಣಿದಿರಲಿಲ್ಲ ಎಂದು ಅವರು ಕಾಂಗ್ರೆಸ್‌ಗೆ ನೆನಪಿಸಿದರು.

ರಿಯಲ್ ಎಸ್ಟೇಟ್ ವಲಯದಿಂದ ‘ಸೂಟ್ಕೇಸ್‌ಗಳು’ ಸರ್ಕಾರದ ನಿರ್ಧಾರಗಳಿಗೆ ಕಾರಣವಾಗಿವೆ ಎಂಬ ರವಿ ಅವರ ಆರೋಪಗಳನ್ನು ತಳ್ಳಿಹಾಕಿದ ಬೋಸರಾಜು, “ಆ ಅನುಭವ ನಿಮಗೆ ಇರಬಹುದು, ನಮಗಿಲ್ಲ. ಅಲ್ಲದೆ, NGT ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಲು ಸಾಧ್ಯವಿಲ್ಲ” ಎಂದು ತಿರುಗೇಟು ನೀಡಿದರು.

You cannot copy content of this page

Exit mobile version