Monday, June 17, 2024

ಸತ್ಯ | ನ್ಯಾಯ |ಧರ್ಮ

ಗಡಿರೇಖೆ ಪ್ರದೇಶದಲ್ಲಿ ಚೀನಾ ಸೈನಿಕರ ಉಪಟಳ : ಸಂಸತ್ ನಲ್ಲಿ ತೇಪೆ ಹಚ್ಚಲು ಮುಂದಾದ ಬಿಜೆಪಿ

ಒಂದು ಕಡೆ ‘ಚೀನಾದೊಂದಿಗಿನ ಗಡಿ ಘರ್ಷಣೆಯಲ್ಲಿ ನಮ್ಮ ಸೈನಿಕರು ಯಾರೂ ಸಾವನ್ನಪ್ಪಿಲ್ಲ ಅಥವಾ ಗಂಭೀರವಾಗಿ ಗಾಯಗೊಂಡಿಲ್ಲ’ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಸತ್ತಿನಲ್ಲಿ ಹೇಳಿದ್ದಾರೆ. ಇನ್ನೊಂದು ಕಡೆ ಚೀನಾದ ಸುಮಾರು 300 ಕ್ಕೂ ಹೆಚ್ಚಿನ ಸೈನಿಕರು ಭಾರತೀಯ ಸೈನಿಕರೊಂದಿಗೆ ನಡೆಸಿದ ಸೆಣಸಾಟದಲ್ಲಿ 6 ಸೈನಿಕರು ಗಂಭೀರ ಗಾಯಗೊಂಡ ಹಿನ್ನೆಲೆಯಲ್ಲಿ ಸೇನಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅಸಲಿಗೆ ಚೀನಾ ಸೈನಿಕರು ಈಗಾಗಲೇ ಭಾರತದ ಗಡಿರೇಖೆಯನ್ನು ಅರುಣಾಚಲ ಪ್ರದೇಶ, ಅಸ್ಸಾಂ ಭಾಗದಲ್ಲಿ ಕಿಲೋಮೀಟರ್ ಗಟ್ಟಲೆ ವಶಪಡಿಸಿಕೊಂಡು, ದೊಡ್ಡ ದೊಡ್ಡ ಹಳ್ಳಿಗಳನ್ನೇ ನಿರ್ಮಾಣ ಮಾಡಿದ್ದಾರೆ. ಈ ನಡುವೆ ಮತ್ತೆ ಗಡಿ ಭಾಗದಲ್ಲಿ ಚೀನಾ ಸೈನಿಕರು ಭಾರತೀಯ ಸೈನಿಕರೊಂದಿಗೆ ಜಗಳಕ್ಕೆ ನಿಂತಿದ್ದಾರೆ. ಇಷ್ಟಾದರೂ ಈ ಬಗ್ಗೆ ಕೇಂದ್ರ ಸರ್ಕಾರ ಏನೂ ನಡೆದೇ ಇಲ್ಲವೆಂಬಂತೆ ತೇಪೆ ಹಚ್ಚುವ ಕೆಲಸಕ್ಕೆ ಮುಂದಾಗಿದೆ.

ಅಂದಹಾಗೆ ಗಡಿ ಭಾಗದಲ್ಲಿ ಆದ ಈ ಘರ್ಷಣೆ ನಡೆದದ್ದು ಡಿಸೆಂಬರ್ 9 ರಂದು. ಇಂದು ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಗಡಿ ರೇಖೆ ಉಲ್ಲಂಘನೆ ಬಗ್ಗೆ ಚರ್ಚೆ ನಡೆಸಬೇಕು ಎಂದು ಪಟ್ಟು ಹಿಡಿದು ಕೂತ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗಡಿ ಭಾಗದಲ್ಲಿ ಎಲ್ಲವೂ ಸುರಕ್ಷಿತ ಎಂಬ ಹೇಳಿಕೆ ನೀಡಿದ್ದಾರೆ. ಡಿ.9 ರಂದೇ ನಡೆದ ಈ ದಾಳಿಯ ಬಗ್ಗೆ ಕೇಂದ್ರ ಸರ್ಕಾರ ಮತ್ತು ಗಡಿ ಮಿಲಿಟರಿ ಪಡೆ ಈ ವರೆಗೂ ಯಾವುದೇ ವಿಚಾರವನ್ನು ಬಹಿರಂಗಪಡಿಸಲಿಲ್ಲ.

ಇನ್ನೊಂದು ಕಡೆ ಬಿಜೆಪಿ ಗುಜರಾತ್ ರಾಜ್ಯದ ಚುನಾವಣೆ ಸಂಭ್ರಮಾಚರಣೆಗೆ ಈ ಸುದ್ದಿ ತೊಡಕಾಗಬಾರದು ಎಂದು ಬೇಕಂತಲೇ ಇದನ್ನು ಬಹಿರಂಗಪಡಿಸಿಲ್ಲ ಎಂದು ಕಾಂಗ್ರೆಸ್ ಪಕ್ಷ ಗಂಭೀರ ಆರೋಪ ಮಾಡಿದೆ. ಡಿಸೆಂಬರ್ 8 ಕ್ಕೆ ಗುಜರಾತ್ ಫಲಿತಾಂಶ ಬಂದ ಮಾರನೇ ದಿನದಿಂದ ಗುಜರಾತ್ ರಾಜ್ಯಾದ್ಯಂತ ಬಿಜೆಪಿ ಸಂಭ್ರಮಾಚರಣೆ ಹಮ್ಮಿಕೊಂಡಿತ್ತು. ಈ ಸಂಭ್ರಮಾಚರಣೆಗೆ ಭಾರತೀಯ ಯೋಧರ ಮೇಲಿನ ದಾಳಿಯ ಸುದ್ದಿ ತೊಡಕಾಗಬಾರದು ಎಂಬ ಕಾರಣಕ್ಕೇ ಸರ್ಕಾರ ಇದನ್ನು ಗೌಪ್ಯವಾಗಿ ಇಟ್ಟಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಇತ್ತ ಇಷ್ಟೊಂದು ಗಂಭೀರದ ಸಮಸ್ಯೆ ಎದುರಾದಾಗ ದೇಶದ ಗೃಹ ಸಚಿವರಾಗಿ ಜವಾಬ್ದಾರಿಯುತರಾಗಿ ಪರಿಸ್ಥಿತಿ ಬಗ್ಗೆ ವಿಚಾರ ಮಾಡಬೇಕಾದ ಅಮಿತ್ ಷಾ ಅವರು ಕೂಡಾ ಕಾಂಗ್ರೆಸ್ ಮೇಲೆಯೇ ಆರೋಪ ಹೊರಿಸಿದ್ದಾರೆ. 2005 ರಿಂದ 2007 ರ ಅವಧಿಯಲ್ಲಿ ರಾಜೀವ್ ಗಾಂಧಿ ಫೌಂಡೇಶನ್ ಚೀನಾ ರಾಯಭಾರ ಕಚೇರಿಯಿಂದ 1.35 ಕೋಟಿ ರೂಪಾಯಿ ಅನುದಾನವನ್ನು ಪಡೆದುಕೊಂಡಿದೆ ಎಂಬ ಮಾತನ್ನು ಆಗಿದ್ದಾರೆ.

ಸಂಸತ್ತಿನ ಅಧಿವೇಶನದಲ್ಲಿ ನನಗೆ ಮಾತನಾಡಲು ಅವಕಾಶ ಸಿಗಲಿಲ್ಲ. ಸಿಕ್ಕಿದ್ದರೆ, ರಾಜೀವ್ ಗಾಂಧಿ ಫೌಂಡೇಶನ್ ಪಡೆದುಕೊಂಡ ಅನುಧಾನದ ಬಗ್ಗೆ ಪ್ರಸ್ತಾಪಿಸುತ್ತಿದ್ದೆ.. ಇದು ಎಫ್‌ಸಿಆರ್‌ಎ ಪ್ರಕಾರ ಸೂಕ್ತವಲ್ಲ. ಆದ್ದರಿಂದ ನಿಯಮಗಳ ಪ್ರಕಾರ, ಗೃಹ ಸಚಿವಾಲಯ ಅದರ ನೋಂದಣಿಯನ್ನು ರದ್ದುಗೊಳಿಸಿದೆ ಎಂದು ಅಮಿತ್ ಷಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಒಟ್ಟಾರೆ ಭಾರತೀಯ ಸೈನಿಕರ ಮೇಲಾದ ಹಲ್ಲೆಯ ಬಗ್ಗೆ, ಚೀನಾ ಗಡಿರೇಖೆ ಉಲ್ಲಂಘನೆ ಬಗ್ಗೆ ಮಾತನಾಡಿದರೆ ಆಡಳಿತ ಪಕ್ಷದ ನಾಯಕರು ಒಂದೋ ಸಮರ್ಥನೆ ಅಥವಾ ಬೇರೊಂದು ವಿಚಾರ ಪ್ರಸ್ತಾಪಿಸಿ ಮಾತನಾಡುತ್ತಿರುವುದು ವಿಚಾರವನ್ನು ತಿರುಚುವ ಕೆಲಸಕ್ಕೆ ಮುಂದಾಗಿದೆ ಎಂದೇ ಅಂದಾಜಿಸಬಹುದು.

Related Articles

ಇತ್ತೀಚಿನ ಸುದ್ದಿಗಳು