ಬೆಂಗಳೂರು: ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರದ ಷಡ್ಯಂತ್ರದಲ್ಲಿ ಸೌಜನ್ಯ ತಾಯಿಯವರೂ ಭಾಗಿಯಾಗಿರಬಹುದು. ಹಾಗಾಗಿ, ಈ ಪ್ರಕರಣದಲ್ಲಿ ಅವರನ್ನೂ ವಿಚಾರಣೆಗೊಳಪಡಿಸಬೇಕು ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಸುಜಾತಾ ಭಟ್ ಅವರನ್ನು ಹೇಗೆ ಒಂದು ಗುಂಪು ಧರ್ಮಸ್ಥಳದ ವಿರುದ್ಧ ಸುಳ್ಳು ಹೇಳುವಂತೆ ಷಡ್ಯಂತ್ರ ಮಾಡಿತ್ತು ಎಂಬುದನ್ನು ನೆನಪಿಸಿಕೊಂಡರು.
ಆ ಗುಂಪು ದಿನದಿಂದ ದಿನಕ್ಕೆ ಸುಜಾತಾ ಭಟ್ ಅವರನ್ನು ಮುಂದಿಟ್ಟುಕೊಂಡು ಕಟ್ಟುಕಥೆಗಳನ್ನು ಹೆಣೆದಿತ್ತು. ಈಗ ಸುಜಾತಾ ಭಟ್ ಅವರೇ, ಯಾರೋ ತನ್ನನ್ನು ಬೆದರಿಸಿ ಹೀಗೆ ಮಾಡಿಸಿದ್ದರು ಎಂದು ಹೇಳಿದ್ದಾರೆ ಎಂದು ಸೂಲಿಬೆಲೆ ತಿಳಿಸಿದರು.
“ಸೌಜನ್ಯ ಮೇಲಿನ ಅತ್ಯಾಚಾರ ಖಂಡನೀಯ. ಆ ಹೆಣ್ಣುಮಗಳಿಗೆ ನ್ಯಾಯ ಸಿಗಬೇಕು. ಅತ್ಯಾಚಾರವೆಸಗಿದವರು ಜೈಲು ಸೇರಬೇಕು ಎಂದು ನಾನು ಕೂಡ ಆಗ್ರಹಿಸುತ್ತೇನೆ. ಈ ಬದ್ಧತೆಯನ್ನು ಇಟ್ಟುಕೊಂಡೇ ನಾನು ಮಾತನಾಡುತ್ತಿದ್ದೇನೆ.
ಈಗ ಹೇಗೆ ಮಾಸ್ಕ್ ಮ್ಯಾನ್ ಮತ್ತು ಸುಜಾತಾ ಭಟ್ ಷಡ್ಯಂತ್ರದ ಭಾಗವಾಗಿದ್ದಾರೋ, ಅದೇ ರೀತಿ ಸೌಜನ್ಯ ತಾಯಿ ಕುಸುಮಾವತಿ ಕೂಡ ಯಾವುದಾದರೂ ಷಡ್ಯಂತ್ರಕ್ಕೆ ಒಳಗಾಗಿದ್ದಾರಾ ಎಂಬ ಅನುಮಾನ ನನ್ನನ್ನು ಕಾಡುತ್ತಿದೆ.
ಆದ್ದರಿಂದ, ಈ ಪ್ರಕರಣದ ಪೂರ್ಣ ಸತ್ಯ ಹೊರಬರಲು ಅವರನ್ನೂ ವಿಚಾರಣೆ ನಡೆಸಬೇಕು” ಎಂದು ಚಕ್ರವರ್ತಿ ಸೂಲಿಬೆಲೆ ಆಗ್ರಹಿಸಿದರು.