Monday, June 17, 2024

ಸತ್ಯ | ನ್ಯಾಯ |ಧರ್ಮ

ಸುಳ್ಳಿನ ಕನಸುಗಳಲ್ಲಿ ಟಿಪ್ಪು ಬಂಧನ, ಮನುವಾದಿಗಳಿಗೆ ಹೂರಣ.

ಸದಾ ಸೃಜನಶೀಲ ನಾಟಕಗಳ ಕಾರಣಕ್ಕೆ ಸುದ್ದಿಯಲ್ಲಿರುತ್ತಿದ್ದ ರಂಗಾಯಣ ಇತ್ತೀಚೆಗೆ ಬೇರೆ ಬೇರೆ ಕಾರಣಗಳಿಗಾಗಿ ಸುದ್ದಿಯಾಗುತ್ತಿದೆ. ಅಡ್ಡಂಡ ಕಾರ್ಯಪ್ಪ ಎನ್ನುವ ವ್ಯಕ್ತಿ ಅಧ್ಯಕ್ಷನಾದ ನಂತರ ಈ ರಂಗಸಂಸ್ಥೆಯೆನ್ನುವುದು ಅಪ್ಪಟ ಕೋಮುವಾದಿ ರಾಜಕಾರಣದ ಅಡ್ಡೆಯಾಗಿದೆ ಎನ್ನುತ್ತಾರೆ ಲೇಖಕರು. ಟಿಪ್ಪುವಿನ ಕುರಿತು ಸಲ್ಲದ ಸು‍ಳ್ಳುಗಳನ್ನು ಹಬ್ಬಿಸುವುದನ್ನು ನಿಲ್ಲಿಸಬೇಕು ಎನ್ನುತ್ತಾರೆ ಪತ್ರಕರ್ತ, ಬರಹಗಾರ ಆಕಾಶ್‌ ಆರ್‌. ಎಸ್‌.

ಇಂದಿನ ವಿದ್ಯಮಾನದಲ್ಲಿ ಕೋಮುವಾದವೂ ಗಾಳಿಯಲ್ಲಿ ಬೆರೆತು ಸಮಾಜದ ವಾತಾವರಣವನ್ನೇ ಹದಗೆಟ್ಟಿಸಿ ನಿಂತಿದೆ.  ಮನುಷ್ಯ ಮನುಷ್ಯನ ನಡುವೆ ಪ್ರೀತಿ ಕಳಚಿ ಬಿದ್ದು ದ್ವೇಷದ ಜ್ವಾಲೆ ಉರಿಯಲಾರಂಭಿಸಿದೆ. ಆದರೆ ವಿಪರ್ಯಸವೆಂದರೆ ಇತ್ತೀಚಿಗೆ ಕೋಮುವಾದದ ಕೊಳ್ಳಿ ಮನೆ, ಮಠ ಹಾಗೂ ಸಮಾಜವನ್ನು ಮಾತ್ರವಲ್ಲದೆ ಇತಿಹಾಸ ಪುಟಗಳನ್ನು ಸುಟ್ಟು ಬೂದಿ ಮಾಡಲು ಧಗಧಗನೆ ಉರಿಯುತ್ತಿದೆ.

ಇತ್ತೀಚಿನ ದಿನಗಳಲ್ಲಿ ಇತಿಹಾಸವನ್ನು ತಿರುಚುವ ಕೆಲಸ ಮಹೋನ್ನತವಾಗಿ ನಡೆಯುತ್ತಲೇ ಇದೆ. ಅದಕ್ಕೆ ಉದಾಹರಣೆಯೆಂಬಂತೆ ಬಾಬರಿ ಮಸೀದಿಯಿಂದ ಈಗೀನ ಮೈಸೂರಿನಲ್ಲಿ ನಡೆದ ಬಸ್‌ ನಿಲ್ದಾಣ ಸಂಗತಿ ನಮ್ಮ ಕಣ್ಣ ಮುಂದೆ ಕಾಣುತ್ತದೆ. ಆದರೆ ಇದೆಲ್ಲದರ ನಡುವೆ ಮನುವಾದಿಗಳು ಕಾಲ ಎಷ್ಟೇ ಕ್ರಮಿಸಿದರು ಟಿಪ್ಪುವನ್ನು ಮಾತ್ರ ಬೇತಾಳದ ತರ ಬೆನ್ನು ಬಿದ್ದಿದ್ದು, ಅವನ ಇತಿಹಾಸವನ್ನು ಸಂಪೂರ್ಣ ತಿರುಚುವ ಪ್ರಯತ್ನದಲ್ಲಿ ನಿರಂತರವಾಗಿ ತೊಡಗಿದ್ದಾರೆ. ಟಿಪ್ಪು ಈಗ ಮನುವಾದಿ ಪಾಳಯಕ್ಕೆ ಚಿನ್ನದ ಗಣಿಯಂತೆ ಭಾಸವಾಗಿದ್ದಾನೆ. ಅವನ ಇತಿಹಾಸವನ್ನು ಅಗೆದು ಅದನ್ನು ತಮ್ಮ ಇಚ್ಛೆಯಂತೆ ಮಾರ್ಪಾಡು ಮಾಡಿ ಅಲಂಕರಿಸಿಕೊಳ್ಳುತ್ತಿದ್ದಾರೆ. ಅದಕ್ಕೆ ಸಾಕ್ಷಿಯಂತೆ ಪಠ್ಯಪುಸ್ತಕ ಪರಿಷ್ಕರಣೆ, ಟಿಪ್ಪು ಪ್ರತಿಮೆಯ ವಿರುದ್ಧ ವಾಗ್ಧಾಳಿ, ಟಿಪ್ಪುವನ್ನು ಕೊಂದಿದ್ದು ಒಕ್ಕಲಿಗರು, ಟಿಪ್ಪು ಧರ್ಮ ವಿರೋಧಿ ಅಂತೆಲ್ಲಾ ಭಾಷಣಗಳು ರಾರಾಜಿಸುತ್ತಿವೆ. ಈಗ ಇದಕ್ಕೆ ಇನ್ನಷ್ಟು ಪುಷ್ಠಿಕೊಡುವ ನಿಟ್ಟಿನಲ್ಲಿ ಮನುವಾದಿಗಳು ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. “ಟಿಪ್ಪುವಿನ ನಿಜ ಕನಸುಗಳು”ಎಂದು ಸುಳ್ಳಿನ ಕಂತೆಯನ್ನು ಕಟ್ಟಿ ನಾಟಕದ ಮೂಲಕ ಸಮಾಜದಲ್ಲಿ ಕೋಮುದ್ವೇಷದ ಬೆಂಕಿಯನ್ನು ಹತ್ತಿಸಿ ಅದರಲ್ಲಿ ಚಳಿ ಕಾಯಿಸಿಕೊಳ್ಳಲು ಮುಂದಾಗಿದ್ದಾರೆ.

ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ದೇಶದ್ರೋಹಿ ಹಾಗೂ ದೇಶಭಕ್ತರೆಂಬ ಪದಗಳು ಬಹಳ ಚಾಲ್ತಿಯಲ್ಲಿದೆ. ಹಿಂದೂ ಧರ್ಮ ಹಾಗೂ ಹಿಂದುತ್ವ ಬಿಟ್ಟು ಬೇರೆ ಧರ್ಮವನ್ನು ಮೆಚ್ಚಿ ಮಾತನಾಡಿದರೆ ಸಾಕು ಸುಲಭವಾಗಿ ಪ್ರಜೆಗಳನ್ನು ಉಗ್ರವಾದಿಯಂತೆ, ಸಮಾಜಕ್ಕೆ ಮಾರಕವಾದ ವ್ಯಕ್ತಿಯಂತೆ ಬಿಂಬಿಸುವಲ್ಲಿ ಯಶಸ್ವಿಯಾಗಿ ನಡೆದುಕೊಂಡು ಹೋಗುತ್ತಿದೆ. ಮನುವಾದಿಗಳ ಈ ಯಶಸ್ವಿ ಪಯಣಕ್ಕೆ ಟಿಪ್ಪುವನ್ನು ರಹದಾರಿಯಾಗಿ ಮಾಡಿಕೊಂಡಿದ್ದಾರ ಎಂದರೆ ತಪ್ಪಗಲಾರದು. ಈಗ ಅಂತಹ ಕೋಮುವಾದಿ ರಾಜಕಾರಣಕ್ಕೆ ಮೈಸೂರು ರಂಗಾಯಣದಲ್ಲಿ ವೇದಿಕೆ ಸಜ್ಜಾಗಿ ನಿಂತಿದೆ.‌

ನಾಡು ಕಂಡ ಅಪ್ರತಿಮ ವೀರ, ಕ್ಷಿಪಣಿ ಜನಕ ಟಿಪ್ಪು ಸುಲ್ತಾನನ್ನು ಎಡಬಿಡದೆ ಬಿಜೆಪಿ ಸರ್ಕಾರ ತನ್ನ ಲಾಭಕ್ಕಾಗಿ ಬಳಸಿಕೊಳ್ಳುವ ಹೀನ ಕೃತ್ಯವೂ ದಿನೇ ದಿನೇ ಕಾಣುತ್ತಲೆ ಇವೆ. ಈಗ ಸೋ ಕಾಲ್ಡ್‌ ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಕೂಡ ಅವರ ಗುಂಪಿ ಸದಸ್ಯನಂತೆ ಎದ್ದು ಕಾಣುತ್ತಿದ್ದಾರೆ. ಬಿಜೆಪಿ ಕೋಮವಾದೀಕರಣವನ್ನು ರಾಜರೋಷವಾಗಿ ದೇಶದ್ಯಾಂತ ನಡೆಸುತ್ತಾ ಬಂದಿದ್ದು, ಕಲಾ ಸರಸ್ವತಿಗೂ ಕೂಡ ಈಗ ಕೇಸರಿ ಬಣ್ಣ ಬಳಿಯಲು ಹೊರಟಿದ್ದಾರೆ. ಮೈಸೂರಿನ ರಂಗಾಯಣಕ್ಕೆ ತನ್ನದೇ ಆದ ಇತಿಹಾವಿದೆ.

ರಂಗಾಯಣ ಲೇಖಕರು, ಪತ್ರಕರ್ತರು, ಸಾಹಿತಿಗಳು, ಯುವ ಸಮೂಹಗಳನ್ನು ಮುಕ್ತವಾಗಿ ಚಿಂತನೆಗೆ ಒಳಪಡಿಸುತ್ತಿತ್ತು. ಆದರೆ ಕಳೆದ 4 ವರ್ಷಗಳಿಂದ ಮನುವಾದಿತನ ಕಲಾವಿದನ್ನು ಹಾಗೂ ಕಲೆಯನ್ನು ಕೂಡ ಬಿಡದೆ ಆವರಿಸಿಕೊಂಡಿದೆ. ಕಳೆದ ಎರಡು ವರ್ಷಗಳ ಹಿಂದೆ  ಮೈಸೂರು ರಂಗಾಯಣ ಚರ್ಚೆ ಗ್ರಾಸವಾಗಿತ್ತು. ನಾಟಕದ ತರಬೇತಿಯ ಸಮಾರೋಪ ಸಮಾರಂಭಕ್ಕೆ ಕಲಾವಿದರ ಹೊರತಾಗಿ ಬಿಜೆಪಿಯ ಮಾಳವಿಕ ಅವಿನಾಶ್‌, ಸುಳ್ಳಿನ ಸರದಾರ ಚಕ್ರವರ್ತಿ ಸೂಲಿಬೇಲಿಯನ್ನು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕರೆದಿದ್ದರು.

ಆದರೆ ಇದನ್ನು ವಿರೋಧಿಸಿ ರಂಗಾಯಣ ಮಾಜಿ ನಿರ್ದೇಶಕ ಜರ್ನಾಧನ್‌ ಜನ್ನಿ, ಸಾಹಿತಿ ಬಂಜಗೆರೆ ಜಯಪ್ರಕಾಶ್‌ ಹಾಗೂ ಇಡೀ ಕಲಾವಿದ ಸಮೂವೇ ಕಾನೂನು ಹೋರಾಟಕ್ಕಿಳಿದಿದ್ದು, ಆ ಕ್ಷಣದಲ್ಲಿ ಅದು ನಿಂತು ಹೋಯಿತು.

ಈಗ ಮತ್ತೇ ಅಂತಹದೇ ಒಂದು ಕಾರಣಕ್ಕೆ ರಂಗಾಯಣ ಬಲಿಯಾಗುತ್ತಿದೆ. ಸೋ ಕಾಲ್ಡ್‌ ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ರಚನೆ ಹಾಗೂ ನಿರ್ದೇಶನ ಮಾಡಿರುವ “ಟಿಪ್ಪು ನಿಜ ಕನಸುಗಳು”ನಾಟಕದ ರಂಗ ಸಿದ್ದತೆ ನಡೆದಿದ್ದು, ಟಿಪ್ಪುವನ್ನು ಕೋಮುವಾದಿ ಎಂದು ಬಿಂಬಿಸುವಲ್ಲಿ ಬಹುತೇಕ  ಪ್ರಯತ್ನ ನಡೆದಿದ್ದು, ಇದಕ್ಕೆ ಬಿಜೆಪಿ ಬಳಗ ಕೂಡ ಉತ್ಸಾಹ ತೋರಿದೆ. ಕಾದಂಬರಿಕಾರ ಎಸ್‌.ಎಲ್‌.ಬೈರಪ್ಪ, ಸಂಸದ ಪ್ರತಾಪ್‌ಸಿಂಹ, ಲೇಖಕ ಡಾ.ಪ್ರಧಾನ ಗುರುದತ್ತ, ಶಾಸಕ ಕೆ.ಜಿ.ಬೊಪ್ಪಯ್ಯ, ಆರ್‌ಎಸ್‌ಎಸ್‌ ಮುಖಂಡ ಮಾ.ವೆಂಕಟರಾಮ, ಕರ್ನಾಟಕ ಸಾಹಿತಿ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ. ವಸಂತ ಕುಮಾರ, ಚಕ್ರವರ್ತಿ ಸೂಲಿಬೆಲಿ, ರೋಹಿತ್‌ಚಕ್ರತೀರ್ಥ  ಎಲ್ಲರೂ ಒಟ್ಟಾಗಿ ಸೇರಿ ಕೋಮು ವೈರಸ್‌ ಅನ್ನು ನಾಡಿನ ಉದ್ದಗಲಕ್ಕೂ ಹರಡಲು ತುದಿಗಾಲಲ್ಲಿ ನಿಂತಿದ್ದಾರೆ.

ಟಿಪ್ಪುವಿಗೆ ಅನೇಕ ಕನಸುಗಳು ಇದ್ದವು ಅದನ್ನು ನಾನು ಅದನ್ನು ಪುಸ್ತಕ ರೂಪದಲ್ಲಿ ಈಗಾಗಲೇ ತಂದಿದ್ದು, ರಂಗ ಮೇಲೆ ತರಲಿದ್ದೇನೆ. ಕಾರಣ ಟಿಪ್ಪುವಿನ ನಿಜ ಕನಸುಗಳು ಎಲ್ಲರಿಗೂ ತಿಳಿಯಬೇಕು. ಆತನ ಧರ್ಮಾಂಧತೆ ಅರಿವಾಗಬೇಕು ಎಂದು ಕಾರ್ಯಪ್ಪ ಖಾಸಗಿ ನ್ಯೂಸ್‌ ಚಾನೆಲ್‌ನಲ್ಲಿ ತಿಳಿಸಿದ್ದರು. ಆದರೆ ಇದೇ ಟಿಪ್ಪುವನ್ನು ಈಗಿನ ಬಿಜೆಪಿ ಹಿರಿಯ ನಾಯಕ ಬಿಎಸ್‌ಯಡಿಯೂರಪ್ಪ ಕೆಜೆಪಿ ಪಕ್ಷ ಕಟ್ಟಿದಾಗ ತಲೆಯ ಮೇಲೆ ಹೊತ್ತಿ ಮೆರೆದಿರುವುದು ಇತಿಹಾಸ. ಈಗ ಅದೇ ಟಿಪ್ಪುವನ್ನು ಮತಾಂಧ, ಹಿಂದೂ ದೇವಾಲಗಳನ್ನು ಕೆಡವಿದ್ದಾನೆ ಎಂದೆಲ್ಲಾ ಇತಿಹಾಸ ತಿರುಚಲು ಹೊರಟಿರುವ ಮನುವಾದಿಗಳಿಗೆ ಇತಿಹಾಸ ಅರಿವಿಲ್ಲ ಎನಿಸುತ್ತದೆ. ಆದರೆ ನಾಡಿನ ಜನರು ಗಮನಹರಿಬೇಕಾದ ಸಂಗತಿ ಎಂದರೆ ಟಿಪ್ಪುವಿನ ಮೂಲಕ ಹಿಂದೂ ಮತ್ತು ಮುಸ್ಲಿಂರ ನಡುವೆ  ಕೋಮುವಾದ ಸೃಷ್ಟಿಸಿ ಅದನ್ನು ಓಟ್‌ ಬ್ಯಾಂಕ್‌ ಮಾರ್ಪಾಡು ಮಾಡುವ ಜಾಣತನವಾಗಿದೆ.

ದಿನೇ ದಿನೇ ಇಂತಹ ವಿಷಯದ ಬಗ್ಗೆ ಸೋ ಕಾಲ್ಡ್‌ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಲೆ ಇವೆ. ಆದರೆ ಇಂತಹ ಆತಂಕದ ವಿದ್ಯಾಮಾನದಲ್ಲಿ ನಮಗೆಲ್ಲಾ ಇತಿಹಾಸ ಅರಿವೂ ಮುಖ್ಯವಾಗಿದೆ. ಟಿಪ್ಪು ಕೇವಲ ರಾಜನಾಗದೆ ಪ್ರಜೆಗಳ ರಕ್ಷಕನಾಗಿದ್ದ. ಬಡವ, ನೊಂದವರ ಮೂಕ ಅಳಲಿಗೆ ಧ್ವನಿಯಾಗಿದ್ದ. ಟಿಪ್ಪು ಈ ನಾಡಿನ ಉದ್ದಗಲಕ್ಕೂ ತನ್ನ ಸಾಮಾಜಿಕ ನ್ಯಾಯ ಪರಿಕ್ಪನೆಯನ್ನು ಪಸರಿಸಿದವನು. ಜಮೀನಾದರು ಪದ್ದತಿಯನ್ನು ಒಕ್ಕಲಿಗರ ಮಡಿಲಿಗೆ ಹಾಕಿದ. ಸ್ತನ ತೆರಿಗೆ ಮುಕ್ತಗೊಳಿದ. ಅಷ್ಟೇಯೆಲ್ಲದೆ  ಹಿಂದೂ ದೇವಾಲಯ ನೆಲಸಮ ಮಾಡಿದ್ದಾನೆ ಈತ ಹಿಂದೂ ವಿರೋಧಿ ಎಂದು ಬೊಬ್ಬೆ ಹೊಡೆಯುವರು. ಇತಿಹಾಸ ಮೂಲಕ ಆತನ ಧರ್ಮ ಸಹಿಷ್ಣತೆಯನ್ನು ಅರಿಯಬೇಕಾಗಿದೆ.

1765ರಿಂದ 1795ರ ನಡುವೆ ಟಿಪ್ಪು ಸುಲ್ತಾನ್‌ ಕೊಲ್ಲೂರಿಗೆ ಭೇಟಿ ನೀಡಿದ ಕಾರಣದಿಂದ ಈಗಲೂ ಸಹ  ಮೂಕಾಬಿಂಕೆಗೆ ಬೆಳಿಗ್ಗೆ 8ರಿಂದ 5.5ವರೆಗೆ ಸಲಾಂ ಮಂಗಳಾರತಿ ಮಾಡಲಾಗುತ್ತದೆ. ಅಷೇ ಅಲ್ಲದೆ ಕರಾವಳಿ, ಮೈಸೂರು ದೇವಳಗಳಾದ ನಂಜನಗೂಡು ಕಳಲೆ ಲಕ್ಷ್ಮೀ ಕಾಂತ, ಮೇಲುಕೋಟೆ ನಾರಾಯಣ ಸ್ವಾಮಿ, ನಂಜನೂಗೂಡು ನಂಜುಡೇಶ್ವರನಿಗೆ ಕಾಣಿಕೆ ಸಲ್ಲಿಸಿದ್ದಾನೆ. ಮರಾಠ ಪರಶುರಾಮ ಭಾವು ಶೃಂಗೇರಿ ದಾಳಿ ಮಾಡಿದಾಗ ಟಿಪ್ಪು ಶಾರಾದ ದೇವಿ ಪ್ರತಿಷ್ಠಾಪನೆ ಮೂರ್ತಿಗೆ  ಧನ ಸಹಾಯ ಮಾಡಿದ ದಾಖಲೆಗಳು ಸಹ ಇವೆ. 1760ರಿಂದ 1800ರವೆಗೆ ಟಿಪ್ಪು ಶೃಂಗೇರಿ ಸ್ವಾಮಿಗಳೊಟ್ಟಿಗೆ ಪತ್ರ ಸಂಪರ್ಕವಿಟ್ಟುಕೊಂಡಿದ್ದ ಎಂಬ ಪುರಾವೆಗಳು ದೊರಕಿವೆ (ಹಂಪಿ ವಿವಿ ಪ್ರಕಟಿತ ಕರ್ನಾಟಕ ಚರಿತ್ರೆ ಸಂಪುಟ:5). ಆದರೆ ಮನುವಾದಿ ಮನಸ್ಥಿತಿಗಳು ರಾಜಕಾರಣದ ದೆಸೆಯಲ್ಲಿ ಇತಿಹಾಸ ತಿರುಚುವ ಕೆಲಸ ಮಾಡುತ್ತಿದ್ದಾರೆ.  ಒಡೆದು ಆಳುವ ನೀತಿಯನ್ನು ಸರಾಸಾಟಿಯಿಲ್ಲದಂತೆ ನಡೆಸುತ್ತಿದ್ದಾರೆ.

ಟಿಪ್ಪು ನಿಜ ಕನಸುಗಳನ್ನು ಹೇಳುವ ನೆಪದಲ್ಲಿ ರಂಗಾಯಣದ ಸ್ವಾತಂತ್ರ್ಯ ಇಲ್ಲವಾಗಿಸಲಾಗುತ್ತಿದೆ. ರಂಗಾಯಣದಲ್ಲಿ ನಡೆಯುವ ನಾಟಕವನ್ನು ಉಚಿತವಾಗಿ ಅಥವಾ ಶುಲ್ಕವನ್ನು ಒಳಗೊಂಡಂತೆ ಮುಕ್ತವಾಗಿ ನಾಟಕವನ್ನು ನೋಡಬಹುದಾಗಿತ್ತು. ಆದರೆ ಈಗ ರಂಗಾಯಣದ ಸುತ್ತಲು ಸೋ ಕಾಲ್ಡ್‌ ಕಲಾವಿದರೂ ಹಾಗೂ ನಿರ್ದೇಶಕ ಆತಂಕವನ್ನು ಸೃಷ್ಟಿಸಿದ್ದಾರೆ. ಸುಳ್ಳಿನ ಕೋಣೆಯೊಳಗೆ ಎಲ್ಲಿ ಸತ್ಯದ ಬೆಳಕು ಪ್ರಜ್ವಲಿಸುತ್ತದೆ  ಎಂಬ ಭಯದಿಂದ 209 ಜನ ಪೊಲೀಸ್‌ ಭದ್ರತೆಯ ಕಾವಲಿನಲ್ಲಿ ನಾಟಕ ಪ್ರದರ್ಶನ ಮಾಡಲಾಗುತ್ತಿದೆ. ರಂಗದ ಕತ್ತಲ  ಕೋಣೆಯ ಮೂಲಕ  ಟಿಪ್ಪುವಿನ “ಸುಳ್ಳು”ಕನಸುಗಳನ್ನು ಬಲವಂತವಾಗಿ ಹೇರಲಾಗುತ್ತಿದೆ. ಟಿಕೇಟ್‌ ಖರೀದಿಸಿದರು ಸಹ ರಂಗಕರ್ಮಿ ಹಾಗೂ ಪತ್ರಕರ್ತರನ್ನು ನಾಟಕ ನೋಡಲು ಬಿಡದೆ ನಿರ್ಬಂದವನ್ನು ಹೇರಿದ್ದು, ಈ ಮೂಲಕ ರಂಗಾಯಣದ ಸ್ವಾತಂತ್ರ್ಯವೂ ಮನುವಾದಿಗಳ ಹಿಡಿತಕ್ಕೆ ಸಿಲುಕಿದೆ.

ರಂಗಾಯಣ ಎಂದರೆ ಅದೊಂದು ಅಭಿವ್ಯಕ್ತಿ ಸ್ವಾತಂತ್ರ್ಯ ಮುನ್ನುಡಿ ಇದ್ದಂತೆ. ಅಲ್ಲಿ ಕಲೆಯ ಹೊರತಾಗಿ ಧರ್ಮ, ಜಾತಿ, ಬಣ್ಣ, ವರ್ಗ ಇದ್ಯಾವೂ ಪರಿಗಣನೆ ತೆಗೆದುಕೊಳ್ಳುವುದಿಲ್ಲ. ಆದರೆ ಕಳೆದ 4 ವರ್ಷದ ಬೆಳವಣಿಗೆ ಗಮನಿಸಿದರೆ ಎಲ್ಲೋ ಒಂದು ಕಡೆ ರಂಗಾಯಣ ಕಳೆಗುಂದಿದ ಹಾಗೆ ಕಾಣುತ್ತದೆ. ಶಾಲೆಗೆ ಕೇಸರಿ ಬಣ್ಣ ಬಳಿಯುವಂತೆ ರಂಗಾಯಣವನ್ನು ಕೇಸರಿಮಯ ಮಾಡುವ ಹುನ್ನಾರದಲ್ಲಿ ಮನುವಾದಿಗಳು ತೊಡಗಿದ್ದಾರೆ ಎಂಬಂತೆ ಭಾಸವಾಗುತ್ತಿದೆ. ರಂಗಾಯಣ ಈ ಮಣ್ಣಿನ ಸೊಗಡು, ಅದು ಕಲಾ ಸರಸ್ವತಿ ದೇಗುಲ ಅಲ್ಲಿಂದ ಎಷ್ಟೋ ಪ್ರತಿಭೆಗಳು ಇಂದು ಬೆಳ್ಳಿ ಪರದೆ ಮೇಲೆ ಬಂದು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಇಂತಹ ಪುಣ್ಯ ನೆಲವನ್ನು ಮನುವಾದಿಗಳ ಚಿಂತನೆ ವಿಸ್ತಾರಕ್ಕೆ ವೇದಿಕೆಯಾಗಬಾರದು. ಅದನ್ನು ಮೊದಲಿನಂತೆ ಸಾಮರಸ್ಯದ ವಾತಾವಣವನ್ನು ತರಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಖಾಕಿ ಚಡ್ಡಿ ತೊಟ್ಟು ದಂಡ ಹಿಡಿದು ಅಲ್ಲೇ ಬೈಟೆಕ್‌ ಪೆರೇಡ್‌ ನಡೆದರು ಆಶ್ಚರ್ಯಪಡಬೇಕಿಲ್ಲ.

ಆಕಾಶ್‌.ಆರ್‌.ಎಸ್‌.

ಪತ್ರಕರ್ತರು

Related Articles

ಇತ್ತೀಚಿನ ಸುದ್ದಿಗಳು