ಬೆಂಗಳೂರು: ಮಾಗಡಿ ರಸ್ತೆಯ ಮೇಲ್ಭಾಗದಲ್ಲಿ ಸುಮನಹಳ್ಳಿ ಬಳಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸಿದ್ದ ಹೊರವರ್ತುಲ ರಸ್ತೆ ಮೇಲ್ಸೇತುವೆಯ ಒಂದು ಭಾಗದಲ್ಲಿ ಸುಮಾರು ಐದು ಅಡಿಯಷ್ಟು ಸುತ್ತಳತೆಯಷ್ಟು ರಸ್ತೆ ಕುಸಿದುಬಿದ್ದಿರುವುದು ಬೆಳಕಿಗೆ ಬಂದಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಮಿಸಿದ್ದ ಈ ರಸ್ತೆಯಲ್ಲಿ, 2019ರ ನವೆಂಬರ್ 2ರಂದು ಮೇಲುರಸ್ತೆ ಕುಸಿದು ಐದು ಅಡಿ ಸುತ್ತಳತೆಯ ಗುಂಡಿಯುಂಟಾಗಿ ಜನರಲ್ಲಿ ಆತಂಕ ಸೃಷ್ಟಿಸಿತ್ತು, ಆದರ ಈಗ ಅದೇ ಸ್ಥಳದಿಂದ ಸುಮಾರು 15 ಅಡಿ ಮುಂದೆ ಈ ಸೇತುವೆ ಕುಸಿದಿದ್ದು, ಆತಂಕ ಮರುಕಳಿಸಿದೆ. ಹೀಗಾಗಿ ಮೇಲ್ಸೇತುವೆಯ ಆರಂಭದಲ್ಲಿ ಗುಂಡಿ ಬಿದ್ದಿರುವ ಸ್ಥಳದ ಸುತ್ತ ಬ್ಯಾರಿಕೇಡ್ ಹಾಕಲಾಗಿದ್ದು, ವಾಹನ ಸಂಚಾರ ನಿಧಾನಗತಿಯಲ್ಲಿ ಚಲಿಸುತ್ತಿವೆ ಎಂದು ತಿಳಿದು ಬಂದಿದೆ.
ಈ ಕುರಿತು ಮಾಹಿತಿ ನೀಡಿರುವ ಬಿಬಿಎಂಪಿ ಪ್ರಧಾನ ಇಂಜನಿಯರ್ ಸಿ.ಎಸ್. ಪ್ರಹ್ಲಾದ್ ಅವರು,
2004–06ರಲ್ಲಿ ಬಿಡಿಎ ನಿರ್ಮಿಸಿದ್ದ ಹೊರವರ್ತುಲ ರಸ್ತೆಯ ಈ ಮೇಲ್ಸೇತುವೆಯನ್ನು ಬಿಬಿಎಂಪಿಗೆ 2014–15ರಲ್ಲಿ ಹಸ್ತಾಂತರಿಸಲಾಗಿತ್ತು. ಈ ರಸ್ತೆಯಲ್ಲಿ ಎರಡನೇ ಬಾರಿಗೆ ಈ ರೀತಿ ಗುಂಡಿ ಕುಸಿದಿದ್ದು, ಕಳಪೆ ಕಾಂಕ್ರೀಟ್ ಬಳಸಿರುವುದರಿಂದಲೇ ಇಂತಹ ಸಮಸ್ಯೆ ಎದುರಾಗಿದೆ. ಈ ಹಿನ್ನಲೆ ಸಂಬಂಧಿಸಿದ ತಜ್ಞರಿಂದ ಪರಿಶೀಲನೆ ನಡೆಸಿ, ಯಾವ ರೀತಿ ದುರಸ್ತಿ ಕಾರ್ಯ ನಡೆಸಬೇಕು ಎಂಬುದನ್ನು ಬುಧವಾರ ತೀರ್ಮಾನಿಸುತ್ತೇವೆ ಮತ್ತು ಬಿಬಿಎಂಪಿ ವತಿಯಿಂದಲೇ ನಾವು ದುರಸ್ತಿ ಕಾಮಗಾರಿ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದರು.
ರಸ್ತೆಯ ಮೇಲೆ ಜೋರಾಗಿ ಡ್ರಿಲ್ ಮಾಡುವಂತಿಲ್ಲ, ಹೀಗಾಗಿ ಮೇಲ್ಸೇತುವೆ ಮೇಲೆ ಕಾಮಗಾರಿ ನಡೆಸಬೇಕಿರುವುದರಿಂದ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಕಾಂಕ್ರೀಟ್ ಅನ್ನು ನಿಧಾನವಾಗಿ ತೆಗೆದು, ಹೊಸದಾಗಿ ಹಾಕಬೇಕಿದೆ.. ಹೀಗಾಗಿ ಸುಮಾರು ಮೂರು ತಿಂಗಳಷ್ಟು ಸಮಯ ಬೇಕಾಗಬಹುದು ಎಂದು ಪ್ರಹ್ಲಾದ್ ಹೇಳಿದರು.