Monday, July 28, 2025

ಸತ್ಯ | ನ್ಯಾಯ |ಧರ್ಮ

ಸುನಿಲ್‌ ಬಜಿಲಕೇರಿಗೆ ಜಾಮೀನು ಮಂಜೂರು

ಮಂಗಳೂರು : ನಮೀಬಿಯಾ ಚೀತಾ ಗರ್ಭ ಧರಿಸಿರುವ ಕುರಿತು ತಮ್ಮ ಫೇಸ್‌ಬುಕ್‌ ನಲ್ಲಿ ಟೀಕಿಸಿ ಬರೆದಿದ್ದ ಸುನಿಲ್‌ ಬಜಿಲಕೇರಿಯನ್ನು ಶುಕ್ರವಾರ ಬಂಧಿಸಿ ಪೊಲೀಸ್‌ ಕಸ್ಟಡಿಗೆ ಕಳುಹಿಸಲಾಗಿತ್ತು. ಇದೀಗ ನ್ಯಾಯಾಲಯವು ಬಜಿಲಕೇರಿಯವರಿಗೆ ಜಾಮೀನು ಮಂಜೂರು ಮಾಡುವ ಆದೇಶ ಹೊರಡಿಸಿದೆ.

ಸಾಮಾಜಿಕ ಕಾರ್ಯಕರ್ತ ಸುನಿಲ್‌ ಬಜಿಲಕೇರಿ ಪ್ರಧಾನಿ ನರೇಂದ್ರ ಮೋದಿ ನಮೀಬಿಯಾದಿಂದ ತರಿಸಿದ್ದ ಚೀತಾಗಳ ಕುರಿತು ಟೀಕೆ ಮಾಡಿದ್ದು, ಗರ್ಭಿಣಿ ಮಹಿಳೆಯ ಫೋಟೋ ಗೆ ಚೀತಾ ಮುಖವನ್ನು ಎಡಿಟ್‌ ಮಾಡಿ ʼನಮೀಬಿಯಾ ಚೀತಾಗೆ ಸೀಮಂತ ಯಾವಾಗ?ʼ ಎಂದು ತಮ್ಮ ಫೇಸ್ ಬುಕ್‌ನಲ್ಲಿ ಬರೆದುಕೊಂಡಿದ್ದರು. ಇದು ಭಾರತೀಯ ಮಹಿಳೆಯರಿಗೆ ಮತ್ತು ಸಂಸ್ಕೃತಿಗೆ ಮಾಡುತ್ತಿರುವ ಅವಮಾನ ಎಂದು ಆರೋಪಿಸಿ ಬಿಜೆಪಿಗೆ ಸೇರಿದ ಮಹಿಳೆಯೊಬ್ಬರು ಸುನಿಲ್‌ ಬಜಿಲಕೇರಿಯವರ ವಿರುದ್ದ ದೂರು ನೀಡಿದ್ದರು.

ಈ ಹಿನ್ನಲೆ ಶುಕ್ರವಾರ ರಾತ್ರಿ ಸುನಿಲ್‌ ಬಜಿಲಕೇರಿ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಕಳುಹಿಸಿ ಹೆಚ್ಚಿನ ತನಿಖೆಗೆ ಪೊಲೀಸ್‌ ಕಸ್ಟಡಿಗೆ ನೀಡುವಂತೆ ಕೇಳಿದ್ದರು. ಆದರೆ ಇದೀಗ ನ್ಯಾಯಾಲಯವು ಬಜಿಲೇಕೇರಿಗೆ ಜಾಮೀನು ಮಂಜೂರು ಮಾಡಿ ಬಿಡುಗಡೆಗೊಳಿಸುವ ಆದೇಶ ನೀಡಿದೆ.

ಬಂಧನದ ಕುರಿತು ಆಕ್ರೋಶ ವ್ಯಕ್ತ ಪಡಿಸಿದ್ದ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್‌ ಕಾಟಿಪಳ್ಳ “ಯಾವುದೇ ರಾಜಕೀಯ ಉಲ್ಲೇಖ ಇಲ್ಲದ ಒಂದು ಸಾಮಾನ್ಯ ಪೋಸ್ಟ್‌ ಹಾಕಿದರೆ  ಜೈಲಿಗೆ ತಳ್ಳುವುದಾ? ಇವರಿಗೆ ಭಯ ಹುಟ್ಟಿಸಲು ಒಂದು ನೆಪ ಅಷ್ಟೇ. ಇದು ಜನಸಾಮಾನ್ಯರಿಗೆ “ ಬಾಯಿ ಮುಚ್ಚಿ ಕುಳಿತುಕೊಳ್ಳಿ” ಎಂದು ಬಿಜೆಪಿಗರು ಹಾಕಿದ ನೇರ ಬೆದರಿಕೆ” ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.

🔸ಇದನ್ನೂ ನೋಡಿ: ಪತ್ರಕರ್ತ ವಿಶ್ವೇಶ್ವರ ಭಟ್ಟರಿಂದ ರಾಷ್ಟ್ರಪತಿಗೆ ಅವಮಾನ!

Related Articles

ಇತ್ತೀಚಿನ ಸುದ್ದಿಗಳು

You cannot copy content of this page