Home ಹವಾಮಾನ ಸೂಪರ್ ಡೂಪರ್ ಎಲ್-ನಿನೋ: 150 ವರ್ಷಗಳಲ್ಲೇ ಅತ್ಯಂತ ಭೀಕರ ಹವಾಮಾನ ವೈಪರೀತ್ಯ ಎದುರಾಗುವ ಆತಂಕ!

ಸೂಪರ್ ಡೂಪರ್ ಎಲ್-ನಿನೋ: 150 ವರ್ಷಗಳಲ್ಲೇ ಅತ್ಯಂತ ಭೀಕರ ಹವಾಮಾನ ವೈಪರೀತ್ಯ ಎದುರಾಗುವ ಆತಂಕ!

0

ಜಾಗತಿಕ ಮಟ್ಟದಲ್ಲಿ ತಾಪಮಾನ ಏರಿಕೆಯ ಪರಿಣಾಮವಾಗಿ ಪ್ರಕೃತಿ ಮಹಾವಿಪತ್ತಿನತ್ತ ಮುಖಮಾಡಿದೆ. ಸಾಮಾನ್ಯ ಎಲ್-ನಿನೋ ಆಗಿ ಆರಂಭಗೊಂಡು, ನಂತರ ‘ಸೂಪರ್ ಎಲ್-ನಿನೋ’ ಹಾಗೂ ‘ಗಾಡ್ಜಿಲ್ಲಾ ಎಲ್-ನಿನೋ’ ಆಗಿ ಮಾರ್ಪಟ್ಟಿದ್ದ ಹವಾಮಾನ ವೈಪರೀತ್ಯವು ಈಗ ಮತ್ತಷ್ಟು ತೀವ್ರಗೊಂಡು ‘ಸೂಪರ್ ಡೂಪರ್ ಎಲ್-ನಿನೋ’ (Super Duper El Nino) ರೂಪ ತಳೆಯುತ್ತಿದೆ ಎಂದು ಜಾಗತಿಕ ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.

ಬರೋಬ್ಬರಿ 150 ವರ್ಷಗಳ ಹಿಂದೆ (1876-78ರಲ್ಲಿ) ವಿಶ್ವವನ್ನು ತಲ್ಲಣಗೊಳಿಸಿದ್ದ ಭೀಕರ ಎಲ್-ನಿನೋವನ್ನೂ ಮೀರಿಸಿ ಇದು ಅಪ್ಪಳಿಸುವ ಅಪಾಯವಿದೆ ಎಂದು ವಿಶ್ವ ಹವಾಮಾನ ಸಂಸ್ಥೆ (WMO) ಆತಂಕ ವ್ಯಕ್ತಪಡಿಸಿದೆ.

ಮುಂದಿನ ಮೂರು ತಿಂಗಳಲ್ಲಿ ಈ ವೈಪರೀತ್ಯವು ಪರಾಕಾಷ್ಠೆ ತಲುಪಲಿದ್ದು, ಪೆಸಿಫಿಕ್ ಮಹಾಸಾಗರದ ಮೇಲ್ಮೈ ತಾಪಮಾನವು ವಾಡಿಕೆಗಿಂತ 3.7 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಈ ವಿದ್ಯಮಾನದಿಂದಾಗಿ ಕೆಲವು ಕರಾವಳಿ ದೇಶಗಳಲ್ಲಿ ಭಾರಿ ಅತಿವೃಷ್ಟಿ ಮತ್ತು ಪ್ರವಾಹ ಉಂಟಾದರೆ, ಭಾರತ ಸೇರಿದಂತೆ ಪ್ರಮುಖ ಏಷ್ಯನ್ ರಾಷ್ಟ್ರಗಳಲ್ಲಿ ತೀವ್ರ ಮಳೆ ಕೊರತೆ ಮತ್ತು ಬರಗಾಲ ಆವರಿಸುವ ಭೀತಿ ಎದುರಾಗಿದೆ.

ಕೋಪರ್ನಿಕಸ್ ಕ್ಲೈಮೇಟ್ ಚೇಂಜ್ ಸರ್ವೀಸ್ ನೀಡಿದ ಮುನ್ಸೂಚನೆಗಳ ಪ್ರಕಾರ, ಅಕ್ಟೋಬರ್ ಮೂರನೇ ವಾರದಲ್ಲಿ ಸೂಪರ್ ಡೂಪರ್ ಎಲ್-ನಿನೋ ಮೊದಲ ಹಂತ ಆರಂಭವಾಗಿ, ಡಿಸೆಂಬರ್ ಅಂತ್ಯಕ್ಕೆ ಗರಿಷ್ಠ ಮಟ್ಟಕ್ಕೆ ತಲುಪುವ ಸಾಧ್ಯತೆ ಶೇ. 82 ರಷ್ಟಿದೆ.

ಈ ಬಿಕ್ಕಟ್ಟು 2027ರ ಫೆಬ್ರವರಿವರೆಗೆ ಮುಂದುವರಿಯುವ ಆತಂಕವಿದೆ. ಈಗಾಗಲೇ ದೇಶದಲ್ಲಿ ಮುಂಗಾರು ಮಳೆ ಕುಂಠಿತಗೊಂಡಿದ್ದು, ಧಾನ್ಯಗಳ ಇಳುವರಿ ಗಣನೀಯವಾಗಿ ಕುಸಿದು ಭವಿಷ್ಯದಲ್ಲಿ ಆಹಾರ ಸಂಕಷ್ಟ (Food Crisis) ಸೃಷ್ಟಿಯಾಗುವ ಅಪಾಯವಿದೆ ಎಂದು ವರದಿಗಳು ತಿಳಿಸಿವೆ.

You cannot copy content of this page

Exit mobile version