Home ದೇಶ ಕ್ಯಾನ್ಸರ್ ರೋಗಿಗಳಿಗೆ ಒಳ್ಳೆಯ ಸುದ್ದಿ: ಔಷಧಗಳ ಬೆಲೆ ಶೇ. 70ರಷ್ಟು ಇಳಿಕೆ ಸಾಧ್ಯತೆ!

ಕ್ಯಾನ್ಸರ್ ರೋಗಿಗಳಿಗೆ ಒಳ್ಳೆಯ ಸುದ್ದಿ: ಔಷಧಗಳ ಬೆಲೆ ಶೇ. 70ರಷ್ಟು ಇಳಿಕೆ ಸಾಧ್ಯತೆ!

0

ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುವ ಜೀವರಕ್ಷಕ ಔಷಧಗಳ ದರ ಬರೋಬ್ಬರಿ ಶೇಕಡಾ 70 ರಷ್ಟು ಇಳಿಕೆಯಾಗುವ ನಿರೀಕ್ಷೆಯಿದೆ. ಒಟ್ಟು ಚಿಕಿತ್ಸಾ ವೆಚ್ಚದಲ್ಲಿ ಔಷಧಗಳ ಬೆಲೆಯೇ ಸಿಂಹಪಾಲು ಹೊಂದಿರುವುದರಿಂದ, ಕ್ಯಾನ್ಸರ್ ರೋಗಿಗಳು ಮತ್ತು ಅವರ ಕುಟುಂಬಗಳು ಎದುರಿಸುತ್ತಿದ್ದ ತೀವ್ರ ಆರ್ಥಿಕ ಹೊರೆಗೆ ಇದು ದೊಡ್ಡ ಮಟ್ಟದ ನೆಮ್ಮದಿ ತರಲಿದೆ.

ಕೆಲವು ಕ್ಯಾನ್ಸರ್ ಔಷಧಗಳ ಚಿಲ್ಲರೆ ದರ (ಪಿಟಿಆರ್ – Price to Retailer) ಮತ್ತು ಗರಿಷ್ಠ ಮಾರಾಟ ದರದ (ಎಂಆರ್‌ಪಿ – MRP) ನಡುವಿನ ಅಸಹಜ ವ್ಯತ್ಯಾಸದ ಬಗ್ಗೆ ಇತ್ತೀಚೆಗೆ ಸುಪ್ರೀಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿತ್ತು. ವಿಚಾರಣೆಯ ಸಂದರ್ಭದಲ್ಲಿ, ಮೆಡಿಕಲ್ ಶಾಪ್ ಅಥವಾ ರಿಟೇಲರ್‌ಗಳಿಗೆ ಸುಮಾರು 2,700 ರೂಪಾಯಿಗೆ ಸಿಗುವ ಕ್ಯಾನ್ಸರ್ ಔಷಧಿಯ ಮೇಲೆ ಬರೋಬ್ಬರಿ 27,000 ರೂಪಾಯಿ ಎಂಆರ್‌ಪಿ ನಿಗದಿಪಡಿಸಿ ಮಾರಾಟ ಮಾಡುತ್ತಿರುವುದನ್ನು ಉಲ್ಲೇಖಿಸಿದ್ದ ನ್ಯಾಯಾಲಯ, ಇದು “ಹಾಡುಹಗಲೇ ನಡೆಯುತ್ತಿರುವ ದರೋಡೆ” ಎಂದು ಕಿಡಿಕಾರಿತ್ತು.

ಸುಪ್ರೀಂ ಕೋರ್ಟ್‌ನ ಈ ಕಟು ಎಚ್ಚರಿಕೆಯ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರವು ಕ್ಯಾನ್ಸರ್ ಔಷಧಗಳನ್ನು ಕೈಗೆಟುಕುವ ದರದಲ್ಲಿ ಒದಗಿಸಲು ಕಠಿಣ ಕ್ರಮಕ್ಕೆ ಮುಂದಾಗಿದೆ. ನಿಯಂತ್ರಣ ಪಟ್ಟಿಯಲ್ಲಿಲ್ಲದ (ನಾನ್-ಷೆಡ್ಯೂಲ್ಡ್) ಎಲ್ಲಾ ಕ್ಯಾನ್ಸರ್ ನಿರೋಧಕ ಔಷಧಗಳ ಟ್ರೇಡ್ ಮಾರ್ಜಿನ್ (ಲಾಭಾಂಶದ ಮಿತಿ) ಅನ್ನು ಎಂಆರ್‌ಪಿ ಮೇಲೆ ಗರಿಷ್ಠ ಶೇಕಡಾ 30 ಕ್ಕೆ ಮಿತಿಗೊಳಿಸಲು ಸರ್ಕಾರ ತೀರ್ಮಾನಿಸಿದೆ.

ಸರ್ಕಾರದ ಈ ಮಹತ್ವದ ನಿರ್ಧಾರದಿಂದಾಗಿ ಕೆಲವು ಪ್ರಮುಖ ಕ್ಯಾನ್ಸರ್ ಔಷಧಗಳ ಎಂಆರ್‌ಪಿ ಶೇ. 70 ರಷ್ಟು ತಗ್ಗಲಿದ್ದು, ದೇಶದ ರೋಗಿಗಳಿಗೆ ವಾರ್ಷಿಕವಾಗಿ ಅಂದಾಜು 2,500 ಕೋಟಿ ರೂಪಾಯಿ ಉಳಿತಾಯವಾಗಲಿದೆ.

You cannot copy content of this page

Exit mobile version