ಬೆಂಗಳೂರು: ಪರಿಶಿಷ್ಟ ಜಾತಿಯ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಡಿಸೆಂಬರ್ 11ರಂದು ನಡೆದ ಹೋರಾಟವನ್ನು ಹತ್ತಿಕ್ಕಲು ಸರ್ಕಾರ ಪೊಲೀಸ್ ಬಲಪ್ರಯೋಗದ ಮೂಲಕ ಮುಂದಾಗಿದ್ದನ್ನು ಸ್ಲಂ ಜನಾಂದೋಲನ ಕರ್ನಾಟಕ ಖಂಡಿಸಿದ್ದು, ಫ್ರೀಡಂ ಪಾರ್ಕಿನಲ್ಲಿನಡೆಯುತ್ತಿರುವ ಒಳಮೀಸಲಾತಿ ಜಾರಿಗೆ ಆಗ್ರಹಿಸಿದ ನಾಲ್ಕನೇ ದಿನದ ಧರಣಿಗೆ ಬೆಂಗಳೂರಿನ ಸಾವಿತ್ರಿ ಬಾಪುಲೆ ಮಹಿಳಾ ಸಂಘಟನೆ ಹಾಗೂ ಸ್ಲ ಜನಾಂದೋಲನ ರಾಜ್ಯ ಸಮಿತಿ ಬೆಂಬಲ ಸೂಚಿಸಿವೆ.
ಒಳಮೀಸಲಾತಿ ಹೋರಾಟವನ್ನು ಬೆಂಬಲಿಸಿ ಮಾತನಾಡಿದ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿಯವರು, ಭಾರತದ ಸುಧೀರ್ಘ ಹೋರಾಟದ ಇತಿಹಾಸವನ್ನು ಹೊಂದಿರುವ ಒಳಮೀಸಲಾತಿ ಹೋರಾಟವನ್ನು ಸರ್ಕಾರಗಳು ಗಂಭೀರವಾಗಿ ಪರಿಗಣಿಸಿಲ್ಲ. ಮೂರು ದಶಕಗಳಿಂದ ಹೋರಾಟ ನಡೆಸುತ್ತಿದ್ದರೂ ಪರಿಶಿಷ್ಟ ಜಾತಿಯಲ್ಲಿ ರುಬ 101 ಜಾತಿಗಳಿಗೆ ಜನಸಂಖ್ಯಾವಾರು ಪ್ರಾತಿನಿಧ್ಯತೆ ಸಿಕ್ಕಿಲ್ಲ. ಹಾಗಾಗಿ ಸಂವಿಧಾನದ ಸಾಮಾಜಿಕ ನ್ಯಾಯವನ್ನು ಜಾರಿಗೊಳಿಸಿವ ಸಲುವಾಗಿ ಒಳಮೀಸಲಾತಿ ಜಾರಿಗೊಳಿಸುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ಒಳಮೀಸಲಾತಿಯನ್ನು ಅಂಬೇಡ್ಕರ್ ದೃಷ್ಠಿಕೋನದಲ್ಲಿ ಅಸಮಾನತೆಯ ಭಾಗವಾಗಿ ನೋಡಬೇಕು. ಸರ್ಕಾರ ಸಂಪುಟ ಉಪಸಮಿತಿ ಮಾಡುವ ಬದಲಾಗಿ ಒಳಮೀಸಲಾತಿಯನ್ನು ವಿಧಾನಮಂಡಲದಲ್ಲಿ ನಿರ್ಣಯಿಸಿ ಜಾರಿ ಮಾಡಲು ಈ ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಮಂಡಿಸಬೇಕು. ಇದನ್ನು ಬಿಟ್ಟು ಕಾಲಹರಣ ಮಾಡುವುದು ಅಥವಾ ಚುನಾವಣೆಗೆ ಲಾಭ ಮಾಡಿಕೊಳ್ಳುವುದನ್ನು ಬಿಡಬೇಕು ಎಂದರು.
ಸ್ಲಂಜನಾಂದೋಲನ ಕರ್ನಾಟಕ ನಗರ ವಂಚಿತ ಸಮುದಾಯಗಳ ವೇದಿಕೆಯಾಗಿದ್ದು, ಇಂದಿನ ಈ ಹೋರಾಟದಲ್ಲಿ ಸಾವಿತ್ರಿ ಬಾಪುಲೆ ಮಹಿಳಾ ಸಂಘಟನೆಯಿಂದ ಮಾದಿಗ, ಹೊಲೆಯ, ಮತ್ತು ಅಲೆಮಾರಿ ಸಂಬಂಧಿತ ಉಪಜಾತಿಗಳು ಪಾಲ್ಗೊಂಡಿರುವುದು ವಿಶೇವಾಗಿದೆ. ಹಾಗಾಗಿ ಪರಿಶಿಷ್ಟ ಜಾತಿಯ ಒತ್ತಾಸೆಯಾಗಿ ಒಳಮೀಸಲಾತಿಯನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿದರು.
ಧರಣಿಯನ್ನು ಬೆಂಬಲಿಸಿ ದಲಿತ ಸಂಘರ್ಷ ಸಮಿತಿಯ ಮುಖಂಡರಾದ ವೆಂಕಟಗಿರಿಯಪ್ಪ, ಗಂಗಾಧರ್ ಗಂಗನಬೀಡು, ಕೆಜೆಎಸ್ ನ ಮರಿಯಪ್ಪ, ವಸತಿ ಹಕ್ಕು ಹೋರಾಟ ಸಮಿತಿಯ ಕುಮಾರ್ ಸಮತಳ, ದಲಿತ ಬಹುಜನ ಚಳುವಳಿಯ ಎಂ.ವೆಂಕಟೇಶ್ ಮಾತನಾಡಿದರು. ಧರಣಿಯ ನೇತ್ರತ್ವವನ್ನು ಕರಿಯಪ್ಪ ಗುಡಿಮನಿ, ಹೆಣ್ಣೂರು ಶ್ರೀನಿವಾಸ, ಜೆಬಿ ರಾಜು ವಹಿಸಿದ್ದರು.