Home ದೆಹಲಿ ವಿನೇಶ್ ಫೋಗಟ್‌ಗೆ ಕೋರ್ಟಿನಲ್ಲಿ ಜಯ: ಟ್ರಯಲ್ಸ್‌ನಲ್ಲಿ ಭಾಗವಹಿಸಲು ಸುಪ್ರೀಂ ಕೋರ್ಟ್ ಅನುಮತಿ

ವಿನೇಶ್ ಫೋಗಟ್‌ಗೆ ಕೋರ್ಟಿನಲ್ಲಿ ಜಯ: ಟ್ರಯಲ್ಸ್‌ನಲ್ಲಿ ಭಾಗವಹಿಸಲು ಸುಪ್ರೀಂ ಕೋರ್ಟ್ ಅನುಮತಿ

0

ದೆಹಲಿ: 2026ರ ಏಷ್ಯನ್ ಕ್ರೀಡಾಕೂಟದ ಆಯ್ಕೆ ಭಾಗವಹಿಸಲು ಒಲಿಂಪಿಯನ್ ಕುಸ್ತಿಪಟು ವಿನೇಶ್ ಫೋಗಟ್‌ಗೆ ಅವಕಾಶ ಕಲ್ಪಿಸಿ ದೆಹಲಿ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಶುಕ್ರವಾರ (ಮೇ 29) ಈ ಕುರಿತು ತೀರ್ಪು ಪ್ರಕಟಿಸಿರುವ ಸರ್ವೋಚ್ಚ ನ್ಯಾಯಾಲಯವು, ಟ್ರಯಲ್ಸ್‌ನಲ್ಲಿ ಭಾಗವಹಿಸಲು ಫೋಗಟ್‌ಗೆ ಹಸಿರು ನಿಶಾನೆ ನೀಡಿದೆ.

ಫೋಗಟ್‌ಗೆ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಅನುಮತಿ ನೀಡಿದ್ದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಭಾರತೀಯ ಕುಸ್ತಿ ಒಕ್ಕೂಟ (WFI) ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಆರಾಧೆ ಅವರ ಪೀಠವು, ಹೈಕೋರ್ಟ್ ಈ ವಿಷಯವನ್ನು ಪರಿಶೀಲಿಸಿದ ರೀತಿಯ ಬಗ್ಗೆ ಕಳವಳ ವ್ಯಕ್ತಪಡಿಸಿತಾದರೂ, ಕೊನೆಯ ಕ್ಷಣದಲ್ಲಿ ಮಧ್ಯಪ್ರವೇಶ ಮಾಡಲು ನಿರಾಕರಿಸಿತು.

ಕುಸ್ತಿ ಕ್ಷೇತ್ರದಲ್ಲಿ ವಿನೇಶ್ ಫೋಗಟ್ ಮಾಡಿರುವ ಸಾಧನೆಗಳ ಮೂಲಕ ಅವರು ದೇಶಕ್ಕೆ ಕೀರ್ತಿ ತಂದಿದ್ದಾರೆ ಎಂಬುದನ್ನು ಸುಪ್ರೀಂ ಕೋರ್ಟ್ ಗಮನಿಸಿತು. “ಬೇರೆ ಯಾರಾದರೂ ಆಗಿದ್ದರೆ ಪರಿಸ್ಥಿತಿ ಭಿನ್ನವಾಗಿರುತ್ತಿತ್ತು. ಆದರೆ ಅವರು ದೇಶಕ್ಕೆ ಹೆಮ್ಮೆ ತಂದಿದ್ದಾರೆ” ಎಂದು ಅಭಿಪ್ರಾಯಪಟ್ಟ ಪೀಠವು, ಹೈಕೋರ್ಟ್ ಆದೇಶದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿತು.

ಆದಾಗ್ಯೂ, ವಿಚಾರಣೆಯ ಉದ್ದಕ್ಕೂ ದೆಹಲಿ ಹೈಕೋರ್ಟ್ ಈ ವಿಷಯವನ್ನು ನಿಭಾಯಿಸಿದ ವಿಧಾನದ ಬಗ್ಗೆ ಪೀಠವು ಆಕ್ಷೇಪ ವ್ಯಕ್ತಪಡಿಸಿತು. ಅರ್ಹತಾ ಮಾನದಂಡಗಳು ಎಲ್ಲಾ ಕುಸ್ತಿಪಟುಗಳಿಗೆ ಸಮಾನವಾಗಿ ಅನ್ವಯವಾಗುವಾಗ, ಡಬ್ಲ್ಯುಎಫ್‌ಐ (WFI) ನೀತಿಯನ್ನು ಕೇವಲ ಒಬ್ಬರನ್ನು ಹೊರಗಿಡುವ ಪ್ರಯತ್ನ ಎಂದು ಹೇಗೆ ಕರೆಯಬಹುದು ಎಂದು ನ್ಯಾಯಾಧೀಶರು ಪ್ರಶ್ನಿಸಿದರು.

ತಾಯ್ತನ ಮತ್ತು ಲಿಂಗ ತಾರತಮ್ಯಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಾಡಿದ್ದ ಕೆಲವು ಅವಲೋಕನಗಳಿಗೆ ಸುಪ್ರಿಂ ಪೀಠವು ಆಕ್ಷೇಪ ವ್ಯಕ್ತಪಡಿಸಿತು. ಅಂತಹ ಸಮಸ್ಯೆಗಳು ಕ್ರೀಡಾ ಆಡಳಿತದಲ್ಲಿ ನ್ಯಾಯಾಂಗ ಹಸ್ತಕ್ಷೇಪಕ್ಕೆ ಏಕೈಕ ಆಧಾರವಾಗಲು ಸಾಧ್ಯವಿಲ್ಲ ಮತ್ತು ಭಾರತವನ್ನು ಪ್ರತಿನಿಧಿಸುವ ಕ್ರೀಡಾಪಟುಗಳು ಎಲ್ಲಾ ಅರ್ಹತೆ ಹಾಗೂ ನಿಯಮಾವಳಿಗಳ ಅವಶ್ಯಕತೆಗಳನ್ನು ಕಡ್ಡಾಯವಾಗಿ ಪೂರೈಸಬೇಕು ಎಂದು ನ್ಯಾಯಾಲಯ ಹೇಳಿತು.

ದೆಹಲಿ ಹೈಕೋರ್ಟ್ ತೀರ್ಪು ಏನು?: ತಾಯ್ತನದ ಕಾರಣವನ್ನು ನೀಡಿ ಏಷ್ಯನ್ ಗೇಮ್ಸ್‌ನ ಟ್ರಯಲ್ಸ್‌ನಲ್ಲಿ ಭಾಗವಹಿಸಲು ವಿನೇಶ್ ಫೋಗಟ್‌ಗೆ ಭಾರತೀಯ ಕುಸ್ತಿ ಒಕ್ಕೂಟ ಅವಕಾಶ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಫೋಗಟ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್, “ತಾಯ್ತನವನ್ನು ಒಂದು ಅಂಗವೈಕಲ್ಯ ಅಥವಾ ವೃತ್ತಿಪರ ಅವಕಾಶಗಳಿಂದ ಕ್ರೀಡಾಪಟುಗಳನ್ನು ಹೊರಗಿಡುವ ಆಧಾರವಾಗಿ ಪರಿಗಣಿಸಲು ಸಾಧ್ಯವಿಲ್ಲ” ಎಂದು ಮಹತ್ವದ ತೀರ್ಪು ನೀಡಿತ್ತು. ಅಲ್ಲದೆ, ಟ್ರಯಲ್ಸ್‌ನಲ್ಲಿ ಭಾಗವಹಿಸಲು ಅವರಿಗೆ ತಕ್ಷಣವೇ ಅವಕಾಶ ನೀಡುವಂತೆ ಕ್ರೀಡಾ ಒಕ್ಕೂಟಕ್ಕೆ ನಿರ್ದೇಶನ ನೀಡಿತ್ತು.

You cannot copy content of this page

Exit mobile version