ದೆಹಲಿ: ಸಿಸಿಟಿವಿ ಕ್ಯಾಮೆರಾಗಳ ಕೊರತೆಯಿಂದಾಗಿ ಪೊಲೀಸ್ ಠಾಣೆಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಕಸ್ಟಡಿ ಸಾವುಗಳು ಸಂಭವಿಸುತ್ತಿವೆ ಎಂದು ಮಾಧ್ಯಮಗಳಲ್ಲಿ ಬಂದ ವರದಿಯನ್ನು ಸುಪ್ರೀಂ ಕೋರ್ಟ್, ಸುಮೊಟೊ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿ ಸ್ವೀಕರಿಸಲು ನಿರ್ಧರಿಸಿದೆ.
2018ರಲ್ಲಿ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ತಾವೇ ಆದೇಶ ನೀಡಿದ್ದರೂ, ಅವುಗಳು ಇನ್ನೂ ಅನುಷ್ಠಾನಗೊಳ್ಳದಿರುವುದಕ್ಕೆ ನ್ಯಾಯಾಲಯ ಆಕ್ರೋಶ ವ್ಯಕ್ತಪಡಿಸಿದೆ.
2020ರ ಡಿಸೆಂಬರ್‌ನಲ್ಲಿ ಸಿಬಿಐ, ಇ.ಡಿ., ಎನ್‌ಐಎ ಸೇರಿದಂತೆ ಎಲ್ಲ ತನಿಖಾ ಸಂಸ್ಥೆಗಳ ಕಚೇರಿಗಳಲ್ಲೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.
ಈಗ ಈ ಸುಮೊಟೊ ವಿಚಾರಣೆಯಲ್ಲಿ, ಆ ಮಾರ್ಗಸೂಚಿಗಳು ಸರಿಯಾಗಿ ಜಾರಿಯಾಗುತ್ತಿವೆಯೇ ಇಲ್ಲವೇ ಎಂಬುದನ್ನು ಸಹ ಸುಪ್ರೀಂ ಕೋರ್ಟ್ ಪರಿಶೀಲಿಸಲಿದೆ.