ಬಂಧನದ ಕಾರಣಗಳನ್ನು ಲಿಖಿತ ರೂಪದಲ್ಲೇ ನೀಡಬೇಕು; ಪಿಎಂಎಲ್‌ಎ, ಯುಎಪಿಎ ಕೇಸ್‌ಗಳಿಗೂ ಇದು ಅನ್ವಯ: ತನಿಖಾ ಸಂಸ್ಥೆಗಳಿಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ

ದೆಹಲಿ: ಯಾವುದೇ ವ್ಯಕ್ತಿಯನ್ನು ಬಂಧಿಸುವ ಸಂದರ್ಭದಲ್ಲಿ ಆತನ ಬಂಧನಕ್ಕೆ ಕಾರಣವೇನು ಎಂಬುದನ್ನು ಲಿಖಿತ ರೂಪದಲ್ಲಿ ಹಾಗೂ ಆ ವ್ಯಕ್ತಿಗೆ ಅರ್ಥವಾಗುವ ಭಾಷೆಯಲ್ಲೇ ಕಡ್ಡಾಯವಾಗಿ ತಿಳಿಸಬೇಕು ಎಂದು ಸುಪ್ರೀಂ ಕೋರ್ಟ್ ತನಿಖಾ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದೆ.

ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್ ಮತ್ತು ಅತುಲ್ ಚಂದೂರ್ಕರ್ ಅವರನ್ನೊಳಗೊಂಡ ನ್ಯಾಯಪೀಠವು ಪ್ರಕರಣವೊಂದರ ವಿಚಾರಣೆ ನಡೆಸಿ ಮಹತ್ವದ ತೀರ್ಪು ಪ್ರಕಟಿಸಿದೆ. ಬಂಧನದ ವೇಳೆ ತನಿಖಾ ಸಂಸ್ಥೆಗಳು ಆರೋಪಿಗೆ ಬಂಧನದ ವಿವರಗಳನ್ನು ಕಡ್ಡಾಯವಾಗಿ ತಿಳಿಸಬೇಕು. ಜತೆಗೆ ಆ ವಿವರಗಳು ಲಿಖಿತವಾಗಿರಬೇಕು ಮತ್ತು ಆತನಿಗೆ ಅರ್ಥವಾಗುವ ಭಾಷೆಯಲ್ಲೇ ಇರಬೇಕು ಎಂದು ಪೀಠ ಸ್ಪಷ್ಟಪಡಿಸಿದೆ.

ಸಂವಿಧಾನದ 22(1)ನೇ ವಿಧಿಯನ್ನು ಉಲ್ಲೇಖಿಸಿದ ನ್ಯಾಯಾಲಯ, ಬಂಧನದ ಕಾರಣಗಳನ್ನು ತಿಳಿಸದೆ ಯಾವುದೇ ವ್ಯಕ್ತಿಯನ್ನು ವಶದಲ್ಲಿ ಇರಿಸಿಕೊಳ್ಳಲು ಅವಕಾಶವಿಲ್ಲ ಎಂದು ಹೇಳಿದೆ. ಅಪರಾಧದ ಸ್ವರೂಪ ಅಥವಾ ಅದರ ತೀವ್ರತೆ ಏನೇ ಇರಲಿ, ಸಂವಿಧಾನ ನೀಡಿರುವ ಈ ರಕ್ಷಣೆಯು ಅತ್ಯಂತ ಪವಿತ್ರವಾದದ್ದು ಎಂದು ನ್ಯಾಯಪೀಠ ಪ್ರತಿಪಾದಿಸಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಹಾಗೂ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಯಂತಹ ಕಠಿಣ ಮತ್ತು ವಿಶೇಷ ಕಾನೂನುಗಳ ಅಡಿಯಲ್ಲಿ ಕೈಗೊಳ್ಳುವ ಬಂಧನಗಳಿಗೂ ಈ ನಿಯಮ ಅನ್ವಯವಾಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಸಂವಿಧಾನದ 22(1)ನೇ ವಿಧಿಯ ಉಲ್ಲಂಘನೆಯ ಕಾರಣದಿಂದ ಬಿಡುಗಡೆಯಾದ ವ್ಯಕ್ತಿಯನ್ನು ಪುನಃ ಬಂಧಿಸುವುದಕ್ಕೆ ಸಂಬಂಧಿಸಿದಂತೆಯೂ ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅಂತಹ ವ್ಯಕ್ತಿಯನ್ನು ಮರುಬಂಧಿಸಲು ಪೊಲೀಸರು ಮೊದಲು ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು. ಮರುಬಂಧನಕ್ಕೆ ಅರ್ಜಿ ಸಲ್ಲಿಸುವ ಮುನ್ನವೇ ಬಂಧನಕ್ಕೆ ಸಂಬಂಧಿಸಿದ ಕಾರಣಗಳನ್ನು ಲಿಖಿತ ರೂಪದಲ್ಲಿ ಆತನಿಗೆ ತಲುಪಿಸಬೇಕು. ಜತೆಗೆ, ಆ ಅರ್ಜಿಗೆ ಮೊದಲು ಬಂಧಿಸಿದ್ದ ಪೊಲೀಸ್ ಅಧಿಕಾರಿಯ ತಕ್ಷಣದ ಮೇಲಧಿಕಾರಿಯ ಅನುಮೋದನೆ ಇರಬೇಕು ಎಂದು ನ್ಯಾಯಪೀಠ ನಿರ್ದೇಶಿಸಿದೆ.

ಆರಂಭಿಕ ಬಂಧನದ ವೇಳೆ ಬಂಧನದ ಕಾರಣಗಳನ್ನು ಏಕೆ ತಿಳಿಸಿರಲಿಲ್ಲ ಎಂಬ ಸ್ಪಷ್ಟ ವಿವರಣೆಯನ್ನು ಆ ಅರ್ಜಿಯಲ್ಲಿ ನಮೂದಿಸಬೇಕು ಎಂದು ನ್ಯಾಯಮೂರ್ತಿ ಭುಯಾನ್ ತಿಳಿಸಿದ್ದಾರೆ. ಸಂವಿಧಾನದ 22(1)ನೇ ವಿಧಿಯನ್ನು ಉಲ್ಲಂಘಿಸಿ ಕಾನೂನುಬಾಹಿರವಾಗಿ ಬಂಧಿಸಲು ಕಾರಣರಾದ ಪೊಲೀಸ್ ಅಧಿಕಾರಿಯ ವಿರುದ್ಧ ಇಲಾಖಾ ಮಟ್ಟದ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದೂ ನ್ಯಾಯಾಲಯ ಆದೇಶಿಸಿದೆ.

Related Articles

ಇತ್ತೀಚಿನ ಸುದ್ದಿಗಳು