Home Uncategorized ರಾಹುಲ್ ಗಾಂಧಿ ಅಕ್ರಮ ಆಸ್ತಿ ದೂರು: ಅಲಹಾಬಾದ್ ಹೈಕೋರ್ಟ್ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆ

ರಾಹುಲ್ ಗಾಂಧಿ ಅಕ್ರಮ ಆಸ್ತಿ ದೂರು: ಅಲಹಾಬಾದ್ ಹೈಕೋರ್ಟ್ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆ

0

ಹೊಸದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ದಾಖಲಾಗಿರುವ ಆದಾಯ ಮೀರಿ ಆಸ್ತಿ ಗಳಿಕೆ ದೂರಿಗೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ಪ್ರಕ್ರಿಯೆಗಳನ್ನು ಮುಂದೂಡುವಂತೆ ಸುಪ್ರೀಂ ಕೋರ್ಟ್ ಸೋಮವಾರ ಆದೇಶಿಸಿದೆ. ಇದರೊಂದಿಗೆ ಸಿಬಿಐ ಮತ್ತು ಇಡಿ ಸಂಸ್ಥೆಗಳು ಹೈಕೋರ್ಟ್‌ಗೆ ಯಾವುದೇ ವರದಿ ಸಲ್ಲಿಸದಂತೆಯೂ ಸುಪ್ರೀಂ ಕೋರ್ಟ್ ನಿರ್ಬಂಧ ವಿಧಿಸಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಹಾಗೂ ನ್ಯಾಯಮೂರ್ತಿ ವಿ. ಮೋಹನಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಈ ಮಹತ್ವದ ಆದೇಶ ನೀಡಿದೆ. ಕರ್ನಾಟಕ ಮೂಲದ ವಿಘ್ನೇಶ್ ಶಿಶಿರ್ ಎಂಬುವವರು ಸಲ್ಲಿಸಿದ್ದ ಅರ್ಜಿಯ ಆಧಾರದ ಮೇಲೆ, ರಾಹುಲ್ ಗಾಂಧಿ ಅವರ ಆಸ್ತಿ ವಿವರಗಳನ್ನು ಪರಿಶೀಲಿಸಿ ವರದಿ ನೀಡುವಂತೆ ಅಲಹಾಬಾದ್ ಹೈಕೋರ್ಟ್ ಈ ಹಿಂದೆ ಸಿಬಿಐ ಮತ್ತು ಇಡಿಗೆ ನಿರ್ದೇಶನ ನೀಡಿತ್ತು. ಹೈಕೋರ್ಟ್‌ನ ಈ ನಿರ್ದೇಶನವನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ರಾಹುಲ್ ಗಾಂಧಿ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, “ಹೈಕೋರ್ಟ್ ನಡೆಸುತ್ತಿರುವ ಈ ಪ್ರಕ್ರಿಯೆಯು ಕಾನೂನಿಗೆ ಬಾಹಿರವಾಗಿದ್ದು, ಇದು ಸಂಪೂರ್ಣವಾಗಿ ರಾಜಕೀಯ ದುರುದ್ದೇಶಪೂರಿತ ಕ್ರಮವಾಗಿದೆ” ಎಂದು ಪ್ರತಿಪಾದಿಸಿದರು. ಅಲ್ಲದೆ ಅರ್ಜಿದಾರರ ಉದ್ದೇಶವನ್ನು ಪ್ರಶ್ನಿಸಿದ ಅವರು, ಈ ಪ್ರಕರಣವನ್ನು ಅಲಹಾಬಾದ್ ಹೈಕೋರ್ಟ್‌ನಿಂದ ದೆಹಲಿ ಹೈಕೋರ್ಟ್‌ಗೆ ವರ್ಗಾಯಿಸಬೇಕೆಂದು ಮನವಿ ಮಾಡಿದರು.

ಅಲಹಾಬಾದ್ ಹೈಕೋರ್ಟ್‌ನಲ್ಲಿ ಆಗಸ್ಟ್ 20 ರಂದು ನಿಗದಿಯಾಗಿದ್ದ ವಿಚಾರಣೆಯನ್ನು ಮುಂದಿನ ಆದೇಶದವರೆಗೆ ಮುಂದೂಡುವಂತೆ ತಿಳಿಸಿದ ಸುಪ್ರೀಂ ಕೋರ್ಟ್, ನೈಸರ್ಗಿಕ ನ್ಯಾಯ ತತ್ವಗಳನ್ನು ಪಾಲಿಸುವುದು ಅತ್ಯಗತ್ಯ ಎಂದು ಸ್ಪಷ್ಟಪಡಿಸಿದೆ.

You cannot copy content of this page

Exit mobile version