ದೆಹಲಿ: ರಾಜ್ಯ ಬಾರ್ ಕೌನ್ಸಿಲ್‌ಗಳಲ್ಲಿ ಮಹಿಳಾ ವಕೀಲರಿಗೆ ಶೇ. 30 ರಷ್ಟು ಸೀಟುಗಳನ್ನು ಮೀಸಲಿಡಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ಸೋಮವಾರ ಆದೇಶಿಸಿದೆ. ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಸೂರ್ಯಕಾಂತ್ ಮತ್ತು ಜಸ್ಟಿಸ್ ಜೋಯ್ಮಾಲ್ಯ ಬಾಗ್ಚಿ ಅವರ ಧರ್ಮಪೀಠವು ಈ ನಿರ್ಧಾರವನ್ನು, ಚುನಾವಣಾ ಪ್ರಕ್ರಿಯೆ ಇನ್ನೂ ಪ್ರಾರಂಭವಾಗದ ರಾಜ್ಯಗಳಿಗೆ ಮಾತ್ರ ಅನ್ವಯಿಸಬೇಕು ಎಂದು ಸ್ಪಷ್ಟಪಡಿಸಿದೆ.
“ಕೌನ್ಸಿಲ್‌ಗಳಿಗೆ ಚುನಾವಣೆ ನಡೆಯದ ಪಕ್ಷದಲ್ಲಿ, ಆಯಾ ರಾಜ್ಯಗಳಲ್ಲಿ ಮಹಿಳೆಯರಿಗೆ ಶೇ. 20 ರಷ್ಟು ಸೀಟುಗಳನ್ನು ಕಾಯ್ದಿರಿಸಬೇಕು. ಸ್ಪರ್ಧಿಸಲು ಸಾಕಷ್ಟು ಮಹಿಳಾ ಅಭ್ಯರ್ಥಿಗಳು ಇಲ್ಲದ ಪಕ್ಷದಲ್ಲಿ, ಉಳಿದ 10% ಸೀಟುಗಳನ್ನು ಸಾಧ್ಯವಾದರೆ ಪುರುಷರಿಗೆ ಹಂಚಬಹುದು” ಎಂದು ನ್ಯಾಯಪೀಠವು ಸ್ಪಷ್ಟಪಡಿಸಿದೆ.
ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಅವರ ಪ್ರಕಾರ, ಆಂಧ್ರಪ್ರದೇಶ, ತೆಲಂಗಾಣ, ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶ ಸೇರಿದಂತೆ ಈಗಾಗಲೇ ಆರು ಬಾರ್ ಕೌನ್ಸಿಲ್‌ಗಳಲ್ಲಿ ಚುನಾವಣಾ ಪ್ರಕ್ರಿಯೆ ಆರಂಭವಾಗಿದೆ.
ಎಲ್ಲಾ ರಾಜ್ಯಗಳ ಬಾರ್ ಕೌನ್ಸಿಲ್‌ಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಮೀಸಲಾತಿ ಜಾರಿಗೊಳಿಸಬೇಕು ಎಂದು ವಕೀಲರಾದ ಯೋಗಮಯ ಎಂ.ಜಿ. ಮತ್ತು ಶೆಹ್ಲಾ ಚೌಧರಿ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ನಿರ್ದೇಶನ ನೀಡಿದೆ.
ಕಳೆದ ವರ್ಷದ ಮೇ 2 ರಂದು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್‌ನ ಕಾರ್ಯಕಾರಿ ಸಮಿತಿಯಲ್ಲಿ ಮಹಿಳೆಯರಿಗೆ ಶೇ. 33 ರಷ್ಟು ಮೀಸಲಾತಿ ಮತ್ತು ಒಂದು ಪದಾಧಿಕಾರಿ ಹುದ್ದೆಯನ್ನು ಕಾಯ್ದಿರಿಸುವಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿರುವುದು ಗಮನಾರ್ಹ.
