ಗೋಮಾ: ಪೂರ್ವ ಕಾಂಗೋದಲ್ಲಿರುವ ಸೆಂಜ್ ಪಟ್ಟಣದ ಸಮೀಪ ಸೋಮವಾರ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಕನಿಷ್ಠ 30 ಜನರು ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸೈನ್ಯ ಮತ್ತು ಸರ್ಕಾರದ ಪರ ಸಶಸ್ತ್ರ ಗುಂಪುಗಳ ನಡುವಿನ ಘರ್ಷಣೆಯ ಭಾಗವಾಗಿ ಈ ದುರಂತ ಸಂಭವಿಸಿದೆ.
ಇತ್ತೀಚೆಗೆ ಅಮೆರಿಕದ ಮಧ್ಯಸ್ಥಿಕೆಯಲ್ಲಿ ವಾಷಿಂಗ್ಟನ್‌ನಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದರೂ, ಆ ಪ್ರದೇಶದಲ್ಲಿ ಅವರ ನಡುವಿನ ಘರ್ಷಣೆಗಳು ಮಾತ್ರ ನಿಂತಿಲ್ಲ. ರುವಾಂಡಾ ಗಡಿಯ ಸಮೀಪದಲ್ಲಿರುವ ಅಪಾರ ಖನಿಜ ಸಮೃದ್ಧ ನಿಕ್ಷೇಪಗಳಿಗೆ ನೆಲೆಯಾಗಿರುವ ಪ್ರದೇಶಗಳ ಮೇಲೆ ಹಿಡಿತ ಸಾಧಿಸಲು ಅಲ್ಲಿನ ಸರ್ಕಾರ, ಸರ್ಕಾರದ ಅಧೀನದಲ್ಲಿಲ್ಲದ ಸೇನೆ ಮತ್ತು ಕನಿಷ್ಠ 100ಕ್ಕೂ ಹೆಚ್ಚು ಸಶಸ್ತ್ರ ಗುಂಪುಗಳು ಪರಸ್ಪರ ಪೈಪೋಟಿ ನಡೆಸುತ್ತಿವೆ.
ಈ ನಿರಂತರ ಸಂಘರ್ಷದ ಪರಿಣಾಮವಾಗಿ, 70 ಲಕ್ಷಕ್ಕೂ ಹೆಚ್ಚು ಜನರು ತಮ್ಮ ಜೀವ ಮತ್ತು ಜೀವನೋಪಾಯವನ್ನು ಉಳಿಸಿಕೊಳ್ಳಲು ಅಲ್ಲಿಂದ ವಲಸೆ ಹೋಗಿದ್ದಾರೆ.
