ಸ್ವಾತಂತ್ರ್ಯೋತ್ತರ ಭಾರತದ ಮೊದಲ ಪ್ರಧಾನಮಂತ್ರಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಆಡಳಿತಾವಧಿಯ ಸರಿ-ತಪ್ಪುಗಳ ಕುರಿತು ಚರ್ಚಿಸಲು, ಸಂಸತ್ತಿನ ವಿಶೇಷ ಅಧಿವೇಶನ ಕರೆಯುವಂತೆ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕೇಂದ್ರ ಸರ್ಕಾರಕ್ಕೆ ವ್ಯಂಗ್ಯದ ಸಲಹೆ ನೀಡಿದ್ದಾರೆ.
ನಿನ್ನೆ (ಸೋಮವಾರ) ಲೋಕಸಭೆಯಲ್ಲಿ ನಡೆದ ವಂದೇ ಮಾತರಂ ಗೀತೆ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪದೇ ಪದೇ ನೆಹರೂ ಅವರ ಹೆಸರನ್ನು ಉಲ್ಲೇಖಿಸುತ್ತಿದ್ದಕ್ಕೆ ತೀವ್ರ ಟಾಂಗ್ ನೀಡಿದರು.
“ಪ್ರಧಾನಿ ಮೋದಿ ಅವರ ಪ್ರತಿ ಭಾಷಣವೂ ಜವಾಹರಲಾಲ್ ನೆಹರೂ ಅವರಿಂದ ಆರಂಭವಾಗಿ, ಜವಾಹರಲಾಲ್ ನೆಹರೂ ಅವರಿಂದಲೇ ಮುಕ್ತಾಯವಾಗುತ್ತದೆ. ದೇಶದ ಎಲ್ಲಾ ಸಮಸ್ಯೆಗಳಿಗೆ ನೆಹರೂ ಆಡಳಿತವೇ ಕಾರಣ ಎಂದು ಪ್ರಧಾನಿ ಮೋದಿ ನಂಬಿದ್ದಾರೆ. ಬಹುಶಃ ದೇಶದ ಪ್ರಸ್ತುತ ಸಮಸ್ಯೆಗಳಿಗೂ ನೆಹರೂ ಕಾರಣವಿರಬಹುದು” ಎಂದು ಪ್ರಿಯಾಂಕಾ ಗಾಂಧಿ ವ್ಯಂಗ್ಯವಾಡಿದರು.
ಮೋದಿ ಅವರಿಗೆ ಸಲಹೆ ನೀಡಿದ ಪ್ರಿಯಾಂಕಾ, “ಪ್ರಧಾನಿ ಮೋದಿ ಅವರು ತಮ್ಮ ಪ್ರತಿ ಭಾಷಣದಲ್ಲೂ ನೆಹರೂ ಅವರನ್ನು ಉಲ್ಲೇಖಿಸದೆ ಇರಲಾರರು ಎಂಬುದು ನಮಗೆ ಗೊತ್ತಿದೆ. ನೆಹರೂ ಟೀಕೆ ಮಾಡಿದ್ದು ಸಾಕು ಎಂದರೂ ಅವರು ಕೇಳುವುದಿಲ್ಲ. ಹೀಗಾಗಿ ನೆಹರೂ ಅವರ ಕಾಲಘಟ್ಟದ ಎಲ್ಲಾ ತಪ್ಪುಗಳ ಬಗ್ಗೆ ಚರ್ಚಿಸಲು ಸಂಸತ್ತಿನ ವಿಶೇಷ ಅಧಿವೇಶನ ಕರೆಯಲಿ” ಎಂದು ಆಗ್ರಹಿಸಿದರು.
“ಕೇಂದ್ರ ಸರ್ಕಾರ ಕೇವಲ ಭೂತಕಾಲದ ಬಗ್ಗೆ ಮಾತನಾಡುತ್ತದೆ. ಪ್ರಧಾನಿ ಮೋದಿ ಅವರು ಸದನದಲ್ಲಿ ಪ್ರತಿಬಾರಿ ಮಾತನಾಡಿದಾಗಲೂ ಗತಕಾಲದ ಸರಿ-ತಪ್ಪುಗಳ ಬಗ್ಗೆಯೇ ಮಾತನಾಡುತ್ತಾರೆ. ಈ ಸರ್ಕಾರಕ್ಕೆ ವರ್ತಮಾನದ ಚಿಂತೆಯೇ ಇಲ್ಲವಾಗಿದೆ. ಹೀಗಾಗಿ ಇತಿಹಾಸದ ಬಗ್ಗೆ ಒಮ್ಮೆ ಮತ್ತು ಕೊನೆಯ ಬಾರಿ ಮಾತನಾಡಲು ವಿಶೇಷ ಅಧಿವೇಶನ ಕರೆಯುವುದು ಸೂಕ್ತ” ಎಂದು ಅವರು ಹೇಳಿದರು.
“ನೀವು ಇತಿಹಾಸದ ಬಗ್ಗೆ ಮಾತನಾಡುತ್ತೀರಿ, ನಾವು ಭವಿಷ್ಯದ ಬಗ್ಗೆ ಮಾತನಾಡುತ್ತೇವೆ. ನೀವು ಹಿಂದಿನ ತಪ್ಪುಗಳ ಬಗ್ಗೆ ಮಾತನಾಡುತ್ತೀರಿ, ನಾವು ವರ್ತಮಾನದ ಘೋರ ಸ್ಥಿತಿ ಬಗ್ಗೆ ಮಾತನಾಡುತ್ತೇವೆ” ಎಂದು ಪ್ರಿಯಾಂಕಾ ಗಾಂಧಿ ತಮ್ಮ ವಾದ ಮಂಡಿಸಿದರು.
ಇದಕ್ಕೂ ಮೊದಲು ಮಾತನಾಡಿದ್ದ ಪ್ರಧಾನಿ ಮೋದಿ, ವಂದೇ ಮಾತರಂ ಗೀತೆಯ ಶ್ರೇಷ್ಠತೆ ಮರುಸ್ಥಾಪನೆಗೆ ಅವಕಾಶ ದೊರೆತಿದೆ ಎಂದು ಹೇಳಿದ್ದರು. “ಕಾಂಗ್ರೆಸ್ ತುಂಡರಿಸಿದ್ದ ವಂದೇ ಮಾತರಂ ಗೀತೆಯ ಶ್ರೇಷ್ಠತೆಯನ್ನು ಮರುಸ್ಥಾಪಿಸಬೇಕಿದೆ. ದೇಶದ ಸ್ವಾತಂತ್ರ್ಯ ಚಳುವಳಿಗೆ ಕೊಡುಗೆ ನೀಡಿದ ಈ ಗೀತೆ, ದೇಶದ ಭವಿಷ್ಯ ನಿರ್ಮಾಣದಲ್ಲೂ ಕೊಡುಗೆ ನೀಡಲಿದೆ” ಎಂದು ಪ್ರಧಾನಿ ಮೋದಿ ಭರವಸೆ ವ್ಯಕ್ತಪಡಿಸಿದ್ದರು.
