ದೆಹಲಿ: ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ನಡೆಸುತ್ತಿರುವ ‘ವನತಾರಾ’ ಮೃಗಾಲಯದ ಬಗ್ಗೆ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದೆ. ಅಕ್ರಮವಾಗಿ ಪ್ರಾಣಿಗಳನ್ನು ಸಂಗ್ರಹಿಸುತ್ತಿದ್ದಾರೆ ಮತ್ತು ಆರ್ಥಿಕ ಅಕ್ರಮಗಳಲ್ಲಿ ತೊಡಗಿದ್ದಾರೆ ಎಂದು ವನ್ಯಜೀವಿ ಹಕ್ಕುಗಳ ಸಂಸ್ಥೆಗಳು ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದವು.
ದೂರುಗಳನ್ನು ಸ್ವೀಕರಿಸಿ ವಿಚಾರಣೆ ನಡೆಸಿದ ನ್ಯಾಯಪೀಠವು, ಮಾಜಿ ನ್ಯಾಯಮೂರ್ತಿಗಳನ್ನೊಳಗೊಂಡ ಸಮಿತಿಯನ್ನು ರಚಿಸಿ ತನಿಖೆ ನಡೆಸುವಂತೆ ಮತ್ತು ಸೆಪ್ಟೆಂಬರ್ 12ರೊಳಗೆ ವರದಿಯನ್ನು ಸಲ್ಲಿಸುವಂತೆ ಆದೇಶಿಸಿದೆ.
ಪಶ್ಚಿಮ ಗುಜರಾತ್‌ನ ಜಾಮ್‌ನಗರದಲ್ಲಿ ಅನಂತ್ ಅಂಬಾನಿ ಅವರ ನೇತೃತ್ವದಲ್ಲಿ ರಿಲಯನ್ಸ್ ಫೌಂಡೇಶನ್ ‘ವನತಾರಾ’ ಮೃಗಾಲಯವನ್ನು ನಡೆಸುತ್ತಿದೆ. 998 ಎಕರೆ ವಿಸ್ತೀರ್ಣದಲ್ಲಿ ಸುಮಾರು 1.5 ಲಕ್ಷಕ್ಕೂ ಹೆಚ್ಚು ಪ್ರಾಣಿಗಳಿವೆ ಮತ್ತು ಇದು ವಿಶ್ವದ ಅತಿದೊಡ್ಡ ಆನೆ ಸಂರಕ್ಷಣಾ ಕೇಂದ್ರ ಎಂದು ವನತಾರಾ ಪ್ರಚಾರ ಮಾಡುತ್ತದೆ.
ಆದರೆ, ವನ್ಯಜೀವಿ ಸಂರಕ್ಷಣೆ ಮತ್ತು ಪ್ರಾಣಿ ಹಕ್ಕುಗಳ ಸಂಸ್ಥೆಗಳು ಈ ಮೃಗಾಲಯದಲ್ಲಿ ಹಲವು ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿವೆ. ಅಕ್ರಮವಾಗಿ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಅವುಗಳು ಹೇಳಿವೆ.
ಪ್ರಾಣಿಗಳ ರಕ್ಷಣೆ, ಪುನರ್ವಸತಿ ಮತ್ತು ಅವುಗಳ ಆರೈಕೆಯ ಬಗ್ಗೆ ಈ ಸಂಸ್ಥೆಗಳು ಕಳವಳ ವ್ಯಕ್ತಪಡಿಸಿವೆ. ಸೆಂಟ್ರಲ್ ಝೂ ಅಧಿಕಾರಿಗಳ ಮೇಲ್ವಿಚಾರಣೆಯ ಕೊರತೆಯಿದೆ ಮತ್ತು ಹಣದಿಂದ ಎಲ್ಲವನ್ನೂ ಖರೀದಿಸಲು ಸಾಧ್ಯವಿಲ್ಲ ಎಂದು ಈ ಸಂಸ್ಥೆಗಳು ತಿಳಿಸಿವೆ.
ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ಮೃಗಾಲಯದ ಅಧಿಕಾರಿಗಳು, ಯಾವುದೇ ತಪ್ಪುಗಳು ನಡೆದಿಲ್ಲ ಮತ್ತು ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಹೇಳಿದ್ದಾರೆ.
ಕಳೆದ ವರ್ಷ ಅನಂತ್ ಅಂಬಾನಿ ವಿವಾಹಕ್ಕೆ ಸಾವಿರಾರು ಕೋಟಿ ಖರ್ಚು ಮಾಡಲಾಗಿತ್ತು. ಆ ಸಂದರ್ಭದಲ್ಲಿ, ಪ್ರಪಂಚದಾದ್ಯಂತದ ಗಣ್ಯರು ವನತಾರಾ ಮೃಗಲಾಯಕ್ಕೆ ಭೇಟಿ ನೀಡಿದ್ದರು.
ಪ್ರಾಣಿ ಸಂರಕ್ಷಣಾ ಕೇಂದ್ರವನ್ನು ಅತಿಥಿಗಳಿಗಾಗಿ ಒಂದು ವಿಲಾಸಿ ಸ್ಥಳವಾಗಿ ಪರಿವರ್ತಿಸಲಾಗಿದೆ ಎಂದು ಹಲವರು ಟೀಕಿಸಿದ್ದರು. ಈ ವರ್ಷ ಮಾರ್ಚ್‌ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮೃಗಾಲಯಕ್ಕೆ ಭೇಟಿ ನೀಡಿ ಪ್ರಶಂಸೆ ವ್ಯಕ್ತಪಡಿಸಿದ್ದು ಗಮನಾರ್ಹ.