ನವದೆಹಲಿ, ಏ. 29: ಧರ್ಮಸ್ಥಳ ಗ್ರಾಮದ ಸೌಜನ್ಯ ಕೊಲೆ ಮತ್ತು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸುಪ್ರೀಂಕೋರ್ಟ್ ನಲ್ಲಿ ನಡೆದ ವಿಚಾರಣೆಯಲ್ಲಿ ಮಹತ್ವದ ಆದೇಶಗಳು ಹೊರಬಿದ್ದಿವೆ. ಪ್ರಕರಣದ ಗಂಭೀರತೆ ಗಮನಿಸಿ ನ್ಯಾಯಾಲಯ ಹಲವು ಪ್ರಮುಖ ನಿರ್ದೇಶನಗಳನ್ನು ನೀಡಿದ್ದು, ಮುಂದಿನ ವಿಚಾರಣೆಯನ್ನು ಜುಲೈ 14ಕ್ಕೆ ಮುಂದೂಡಲಾಗಿದೆ.
ವಿಚಾರಣೆ ವೇಳೆ ನ್ಯಾಯಾಲಯವು ಪ್ರಕರಣದಲ್ಲಿನ ಎಲ್ಲಾ ಪ್ರಮುಖ ಸಾಕ್ಷಿಗಳಿಗೆ ತಕ್ಷಣದಿಂದಲೇ ರಕ್ಷಣೆ ಒದಗಿಸಬೇಕು ಎಂದು ಸ್ಪಷ್ಟ ಸೂಚನೆ ನೀಡಿದೆ. ಹಿಂದೆ ಕೆಲವು ಪ್ರಮುಖ ಸಾಕ್ಷಿಗಳು ಸಂಶಯಾಸ್ಪದವಾಗಿ ಸಾವನ್ನಪ್ಪಿರುವ ಹಿನ್ನೆಲೆ, ಈ ಕ್ರಮ ಕೈಗೊಳ್ಳಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.
ಇದೇ ವೇಳೆ, ಮರುತನಿಖೆ ಕುರಿತಂತೆ ತಮ್ಮ ನಿಲುವನ್ನು CBI ಹಾಗೂ ರಾಜ್ಯ ಸರ್ಕಾರವು ಎರಡು ವಾರಗಳೊಳಗೆ ಲಿಖಿತ ರೂಪದಲ್ಲಿ ಸಲ್ಲಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ. ಮರು ತನಿಖೆಯನ್ನು ಯಾವ ಸಂಸ್ಥೆ ಕೈಗೊಳ್ಳಬೇಕು ಎಂಬುದನ್ನೂ ಈ ವರದಿಯಲ್ಲಿ ಸ್ಪಷ್ಟಪಡಿಸಲು ಸೂಚಿಸಲಾಗಿದೆ.
ಪ್ರಕರಣದ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ತೋರಿದ ನಿರಾಸಕ್ತಿ ಕುರಿತು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡಿದೆ. ಇಂತಹ ಗಂಭೀರ ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿರುವುದು ಅಸಂಗತ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಅರ್ಜಿದಾರರ ಪರ ಹಿರಿಯ ನ್ಯಾಯವಾದಿಗಳು ಪ್ರಮುಖ ಸಾಕ್ಷಿಗಳು ಮತ್ತು ದಾಖಲೆಗಳ ವಿವರಗಳನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದರು. ಈ ಅಂಶಗಳನ್ನು ಪರಿಗಣಿಸಿ ಸಾಕ್ಷಿಗಳ ರಕ್ಷಣೆಗೆ ನ್ಯಾಯಾಲಯ ಆದೇಶ ನೀಡಿದೆ.
ಈ ಬೆಳವಣಿಗೆ ಸೌಜನ್ಯ ಪ್ರಕರಣದಲ್ಲಿ ದೊಡ್ಡ ತಿರುವಾಗಿ ಪರಿಗಣಿಸಲಾಗುತ್ತಿದೆ. ಸುಮಾರು 13 ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ಸೌಜನ್ಯ ತಾಯಿ ಕುಸುಮಾವತಿ ಹಾಗೂ ಹೋರಾಟಗಾರರಿಗೆ ಇದು ಮಹತ್ವದ ಬೆಂಬಲವಾಗಿ ಪರಿಣಮಿಸಿದೆ. ಪ್ರಕರಣಕ್ಕೆ ಸಂಬಂಧಿಸಿದ ಸಾಮಾಜಿಕ ಹೋರಾಟಕ್ಕೂ ಈ ಆದೇಶವು ನೈತಿಕ ಬಲ ತುಂಬಿದೆ ಎಂದು ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಅರ್ಜಿದಾರರ ಪರವಾಗಿ ಹಿರಿಯ ನ್ಯಾಯವಾದಿಗಳಾದ ಶೋಭಾ ಗುಪ್ತ, ಶೇಖರ ದೇವಸ, ನೂಲವಿ ಹಾಗೂ ಅಶುತೋಷ ದುಬೇ ಸೇರಿದಂತೆ ಹಲವು ವಕೀಲರು ಹಾಜರಿದ್ದರು. ಸಂತೋಷ ರಾವ್ ಪರವಾಗಿ ಹಿರಿಯ ನ್ಯಾಯವಾದಿ ಗುರುರಾಜ್ ವಾದ ಮಂಡಿಸಿದರು.
