ರಾಯಚೂರು: ರಾಯಚೂರು ಜಿಲ್ಲೆಯಲ್ಲಿ ಅರಣ್ಯ, ಹೌಸಿಂಗ್ ಬೋರ್ಡ್ ಹಾಗೂ ವಕ್ಫ್ ಜಾಗಗಳನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಆರೋಪದಡಿ ಸಚಿವ ಎನ್.ಎಸ್. ಬೋಸರಾಜ್ ವಿರುದ್ಧ ದಲಿತ ಸೇನೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಂಪೂರ್ಣ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ದೂರು ಸಲ್ಲಿಸಿದೆ.
ಸಂಘಟನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಜಾವೀದ್ ಖಾನ್ ಅವರು ಬುಧವಾರ ನೀಡಿದ ಹೇಳಿಕೆಯಲ್ಲಿ, ರಾಯಚೂರು ವಲಯದ ಸರ್ವೇ ಸಂಖ್ಯೆ 1252, 1253 ಮತ್ತು 1254ಕ್ಕೆ ಸೇರಿದ ಸುಮಾರು 5 ಎಕರೆ ಭೂಮಿ ಸರಕಾರಿ/ಮೀಸಲು ಅರಣ್ಯ ಭೂಮಿಯಾಗಿ ದಾಖಲಾಗಿರುವುದಾಗಿ ತಿಳಿಸಿದ್ದು, ದಾಖಲೆಗಳ ಪರಿಶೀಲನೆಯಲ್ಲಿ ಈ ಭೂಮಿ ಸಚಿವರ ಕುಟುಂಬ ಸದಸ್ಯರ ಹೆಸರಿಗೆ ವರ್ಗಾವಣೆಯಾಗಿದೆ ಎಂಬುದು ಬೆಳಕಿಗೆ ಬಂದಿದೆ ಎಂದು ಆರೋಪಿಸಿದ್ದಾರೆ.
ಸರಕಾರಿ ಮತ್ತು ಮೀಸಲು ಅರಣ್ಯ ಭೂಮಿಯ ಹಕ್ಕುಸ್ವಾಮ್ಯ ಬದಲಾವಣೆ ಕಾನೂನುಬದ್ಧವಾಗಿದೆಯೇ ಎಂಬುದರ ಬಗ್ಗೆ ಗಂಭೀರ ಅನುಮಾನ ವ್ಯಕ್ತವಾಗಿದ್ದು, ವಿಷಯವನ್ನು ಸಮಗ್ರವಾಗಿ ತನಿಖೆಗೆ ಒಳಪಡಿಸುವುದು ಅತ್ಯಾವಶ್ಯಕ ಎಂದು ಅವರು ಒತ್ತಾಯಿಸಿದ್ದಾರೆ.
ಇದಲ್ಲದೆ, ಮಾನ್ವಿ ತಾಲೂಕಿನ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿರುವ ಸರಕಾರಿ ಜಾಗವೂ ಸಚಿವರ ಹೆಸರಲ್ಲಿ ದಾಖಲಾಗಿರುವುದಾಗಿ ಹಾಗೂ ಪಟ್ಟಣದ ವ್ಯಾಪ್ತಿಯಲ್ಲಿರುವ ವಕ್ಫ್ ಜಾಗವೂ ಬೇನಾಮಿಗಳ ಹೆಸರಲ್ಲಿ ಇರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ನಡೆದ ಹೋರಾಟದ ಹಿನ್ನೆಲೆಯಲ್ಲಿ, ಸಂಬಂಧಿತ ಜಾಗವನ್ನು ಸರ್ಕಾರದ ವಶಕ್ಕೆ ಹಿಂತಿರುಗಿಸುವಂತೆ ಜಿಲ್ಲಾಡಳಿತ ಮತ್ತು ನ್ಯಾಯಾಲಯ ಆದೇಶ ನೀಡಿರುವುದಾಗಿ ತಿಳಿದುಬಂದಿದೆ. ಆದಾಗ್ಯೂ, ಅಧಿಕಾರದ ದುರುಪಯೋಗದ ಮೂಲಕ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿರುವುದರಿಂದ, ಸರ್ಕಾರವು ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದಲಿತ ಸೇನೆ ಆಗ್ರಹಿಸಿದೆ.
