Home ಅಂಕಣ ಎಚ್‌ಡಿಕೆ ಬಾಯಿಂದ ಇದೆಂಥಾ ಅಸೂಕ್ಷ್ಮ ಮಾತು!?

ಎಚ್‌ಡಿಕೆ ಬಾಯಿಂದ ಇದೆಂಥಾ ಅಸೂಕ್ಷ್ಮ ಮಾತು!?

0

“ಛೇ..ಛೇ… ಈ ಕುಮಾರಸ್ವಾಮಿ ಹಿಂಗ್ಯಾಕಾದ್ರು?” “ಹೊಸದಾಗಿ ಆಗಿದ್ದಲ್ಲ…. ಅವ್ರು ಮೊದ್ಲಿಂದನೂ ಇರೋದೆ ಹಿಂಗೆ”.. ಸಚಿವ ಡಿ ಸುಧಾಕರ್ ಆಸ್ಪತ್ರೆಯಲ್ಲಿ ಪ್ರಜ್ಞೆ ಕಳೆದುಕೊಂಡು ಮಲಗಿರುವಾಗ ಕೇಂದ್ರ ಸಚಿವ ಕುಮಾರಸ್ವಾಮಿ ನೀಡಿದ ತೀರಾ ಅಸೂಕ್ಷ್ಮ ಹೇಳಿಕೆಯ ಸುತ್ತ ಈ ಬರಹ.. ಮಾಚಯ್ಯ ಎಂ ಹಿಪ್ಪರಿಗಿ ಅವರ ಬರಹದಲ್ಲಿ

ಮೊದಲನೆಯ ನನ್ನ ಪ್ರಶ್ನೆಗೆ ಗೆಳೆಯ ಹೀಗೆ ಉತ್ತರಿಸಿದಾಗ, ನನಗೆ ಥಟ್ಟನೆ ಒಂದು ತೀರ್ಮಾನಕ್ಕೆ ಬರಲಾಗಲಿಲ್ಲ. ಯಾಕೆಂದರೆ, ದೇವೇಗೌಡರನ್ನು ಈ ನಾಡು ಸುದೀರ್ಘ ಕಾಲದಿಂದ ನೋಡುತ್ತಾ ಬಂದಿದೆ. ರಾಜಕೀಯ ತಂತ್ರಗಾರಿಕೆ, ಸೈದ್ದಾಂತಿಕ ರಾಜಿತನ, ಕುಟುಂಬ ವಾತ್ಸಲ್ಯದಂತಹ ದೋಷಗಳನ್ನು ಹೊರತುಪಡಿಸಿದರೆ ವ್ಯಕ್ತಿಗತವಾಗಿ ವ್ಯವಹರಿಸುವಾಗ ತುಂಬಾ ನಾಜೂಕಿನಿಂದ ನಡೆದುಕೊಂಡು ಬಂದವರು. ತನ್ನ ಸ್ಥಾನದ ಘನತೆಗೆ ಮುಕ್ಕು ಬರುವಂತೆ ವರ್ತಿಸಿದ್ದು ತೀರಾ ವಿರಳ. ನೆನಪಿರುವಂತೆ, ಒಮ್ಮೆ ಆವೇಶದಲ್ಲಿ ಯಡಿಯೂರಪ್ಪನವರಿಗೆ “ಬೋ…ಮಗ” ಎಂದು ಹೇಳಿ, ಆನಂತರ, ಅದಕ್ಕೆ ವಿಷಾದವನ್ನೂ ವ್ಯಕ್ತಪಡಿಸಿದ್ದುಂಟು. ಅಂತವರ ಮಗನಾದ ಕುಮಾರಸ್ವಾಮಿಯವರು ರಾಜಕೀಯವಾಗಿ ಅದೇನೆ ಯಡವಟ್ಟುಗಳನ್ನು ಮಾಡಿಕೊಳ್ಳಲಿ, ಆದರೆ ಸಾರ್ವಜನಿಕವಾಗಿ ವ್ಯವಹರಿಸುವಾಗ ಇಷ್ಟು ಅಸೂಕ್ಷ್ಮತೆಯಿಂದ ಮಾತಾಡುವಷ್ಟು ಸಡಿಲ ವ್ಯಕ್ತಿತ್ವದವರೇ?

ಕರ್ನಾಟಕದ ಸಚಿವ ಡಿ ಸುಧಾಕರ್‍‌ ಅವರು ತೀವ್ರ ಅನಾರೋಗ್ಯಕ್ಕೆ ತುತ್ತಾಗಿರೋದು, ಅವರಿಗೆ ಐಸಿಯು ಘಟಕದಲ್ಲಿಟ್ಟು ಚಿಕಿತ್ಸೆ ನೀಡುತ್ತಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ತಮ್ಮ ಕುಟುಂಬದ ವ್ಯಕ್ತಿಯೊಬ್ಬರನ್ನು, ಅದರಲ್ಲೂ ಆಧಾರಸ್ತಂಭವಾಗಿರುವ ಜೀವವನ್ನು ಹೀಗೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿಟ್ಟು ದೇವರಮೇಲೆ ಭಾರ ಹಾಕಿ ಕ್ಷಣಗಣನೆ ಮಾಡುವುದು ಆ ಕುಟುಂಬಸ್ಥರ ಪಾಲಿಗೆ ಎಂಥಾ ಆತಂಕದ್ದಾಗಿರುತ್ತೆ ಅನ್ನೋದು ಪ್ರತಿಯೊಬ್ಬರಿಗೂ ಗೊತ್ತು. ಒಮ್ಮೊಮ್ಮೆ ಡಾಕ್ಟರನ್ನು ಕಂಡು ಮಾತಾಡುವಾಗಲೂ, ಒಳಿತಿಗಿಂತ ಹೆಚ್ಚು ಕೆಡುಕಿನ ಊಹೆಗಳೇ ಕುಟುಂಬದ ಜೀವ ಹಿಂಡುತ್ತಿರುತ್ತವೆ. ಮತ್ತ್ಯಾವ ಹೊಸ ಕೆಟ್ಟ ಸುದ್ದಿ ಹೇಳುವರೋ? ಎನ್ನುವ ಅಂಜಿಕೆ ಅವರನ್ನು ಬೇಟೆಯಾಡುತ್ತಿರುತ್ತದೆ. ಆದರೂ ಗುಣಮುಖರಾಗಿ ಬರುತ್ತಾರೆಂಬ ಭರಸವೆ ಹೊತ್ತು ಆಸ್ಪತ್ರೆಯ ಆವರಣದಲ್ಲಿ ಊಟ, ನಿದ್ರೆ, ನೀರು ತೊರೆದು ಕಣ್ಣೀರು ಬಸಿಯುತ್ತಾ ಘಳಿಗೆಗಳ ಜೊತೆ ಸೆಣೆಸುತ್ತಿರುತ್ತಾರೆ. ಒಳಗಿರುವ ರೋಗಿಗೆ ಇದರ ಪರಿವೆ ಇರುತ್ತದೋ, ಇಲ್ಲವೋ ತಿಳಿಯದು. ಆದರೆ ಹೊರಗಿರುವವರ ವೇದನೆ, ಅನಿಶ್ಚಿತತೆ ಹೇಳತೀರದು. ಅಂತಹ ಸಮಯದಲ್ಲಿ ಆ ನೊಂದ ಕುಟುಂಬಕ್ಕೆ ಸಾಂತ್ವನ ಹೇಳುವುದು ತುಂಬಾ ಅಗತ್ಯವಿರುತ್ತದೆ. ಒಂದುವೇಳೆ, ಯಾವ್ಯಾವುದೋ ಕಾರಣದಿಂದ, ನಮಗೆ ಸಾಂತ್ವನ ಹೇಳಲು ಸಾಧ್ಯವಾಗದಿದ್ದರೆ; ಕಡೇಪಕ್ಷ, ಅವರ ಅಧೀರತೆಯನ್ನು ಮತ್ತಷ್ಟು ಹೆಚ್ಚಿಸುವ ಅಥವಾ ಅವರ ನೈತಿಕ ಸ್ಥೈರ್ಯವನ್ನು ಕುಸಿಯುವಂತೆ ಮಾಡುವ ಅಮಾನವೀಯ ಕೆಲಸವನ್ನು ಯಾರೂ ಮಾಡಬಾರದು.

ಆದರೆ ಒಬ್ಬ ಹಿರಿಯ ರಾಜಕಾರಣಿಯಾಗಿ, ಮಾಜಿ ಮುಖ್ಯಮಂತ್ರಿಯಾಗಿ, ಹಾಲಿ ಕೇಂದ್ರ ಸಚಿವರೂ ಆದ ಕುಮಾರಸ್ವಾಮಿಯವರು ಈ ಕನಿಷ್ಠ ಸೌಜನ್ಯವನ್ನೂ ಕಳೆದುಕೊಂಡವರಂತೆ “ಆಸ್ಪತ್ರೆಯಲ್ಲಿರುವ ಸಚಿವರ ಆರೋಗ್ಯ ಸ್ಥಿತಿ ಯಾಕೆ ಮುಚ್ಚಿಟ್ಟಿದ್ದೀರಿ? ಅವರಿಂದ ಹೆಬ್ಬೆಟ್ಟು ಒತ್ತಿಸಿಕೊಳ್ಳುವುದಕ್ಕಾ?” ಎಂದು ಕೇಳಿದ್ದಾರೆ. ಈ ಮಾತಿನಲ್ಲಿ ರಾಜಕಾರಣದ ಕಾಲೆಳೆಯುವಿಕೆಯನ್ನು ಬಿಟ್ಟರೆ, ಸಾಮಾಜಿಕ ಕಾಳಜಿಯಾಗಲಿ, ಮಾನವೀಯ ಸೌಜನ್ಯವಾಗಲಿ ಕಾಣಿಸದು. ಒಬ್ಬ ವ್ಯಕ್ತಿ ಸಾವುಬದುಕಿನ ನಡುವೆ ಆಸ್ಪತ್ರೆಯಲ್ಲಿ ನರಳುತ್ತಿರುವಾಗ; ಆತನ ಕುಟುಂಬಸ್ಥರು ಆತನನ್ನು ಬದುಕಿಸಿಕೊಳ್ಳಲು ಹಗಲಿರುಳೆನ್ನದೆ ಪರಿತಪಿಸುತ್ತಿರುವಾಗ, ಸನ್ಮಾನ್ಯ ಕುಮಾರಸ್ವಾಮಿಯವರಿಗೆ ರಾಜಕೀಯವೇ ಮುಖ್ಯವಾಯ್ತಾ?

ಸ್ವತಃ ಕುಮಾರಸ್ವಾಮಿಯವರೇ ಹೇಳಿಕೊಳ್ಳುವಂತೆ, ಅವರಿಗೆ ಎರಡೆರಡು ಬಾರಿ ಓಪನ್‌ ಹಾರ್ಟ್‌ ಸರ್ಜರಿಯಾಗಿದೆ. ಕೆಲ ದಿನಗಳ ಹಿಂದಷ್ಟೇ ಸ್ಟ್ರೋಕ್‌ಗೆ ತುತ್ತಾಗಿ ಚೇತರಿಸಿಕೊಂಡಿದ್ದಾರೆ. ಆಸ್ಪತ್ರೆಯ ಬದುಕು, ಆತಂಕ, ಭರವಸೆಗಳು ಅವರಿಗೆ ಹೊಸದೇನೂ ಅಲ್ಲ. ದೇವರ ದಯೆಯಿಂದ, ಪ್ರತಿ ಸಲವೂ ಅವರು ಚೇತರಿಸಿಕೊಂಡು ಹೊರಬಂದಿದ್ದಾರೆ. ಇನ್ನೂ ಹಲವು ಕಾಲ ಅವರು ಇಷ್ಟೇ ಆರೋಗ್ಯದಿಂದ ನಳನಳಿಸುತ್ತಿರಲಿ ಎಂದೇ ಪ್ರತಿಯೊಬ್ಬರು ಹಾರೈಸೋಣ. ಅಷ್ಟೆಲ್ಲ ಅನುಭವ ಇದ್ದಾಗ್ಯೂ ಸಚಿವ ಸುಧಾಕರ್‍‌ ಅವರ ಕುಟುಂಬದ ಆತ್ಮಸ್ಥೈರ್ಯವನ್ನು ಉಡುಗಿಸುವಂತಹ ಈ ಆರೋಪ ಮಾಡುತ್ತಾರೆಂದರೆ ಏನೆನ್ನಬೇಕು?

ರಾಜಕಾರಣದ ಕೆಸರೆರಚಾಟ ಎಷ್ಟೇ ಅತಿರೇಕಕ್ಕೆ ಹೋದರೂ, ವೈಯಕ್ತಿಕ ಬದುಕಿನಲ್ಲಿ ಕಹಿಗಳು ಕಾಳುಗಟ್ಟದಂತೆ ನಡೆದುಕೊಂಡು ಬಂದ ಮೇಲ್ಪಂಕ್ತಿ ಉದಾಹರಣೆಗಳು ಸಾಕಷ್ಟಿವೆ. ರಾಜಕಾರಣ ಇವತ್ತು ಸಂಪೂರ್ಣ ಬದಲಾಗಿದೆ; ಬದಲಾಗಿದೆ ಎನ್ನುವುದಕ್ಕಿಂತ, ಹೊಲಸಾಗಿದೆ ಎನ್ನುವುದೇ ಸೂಕ್ತವೇನು. ಆದಾಗ್ಯೂ ಸಾವು-ನೋವಿನ ಸಂದರ್ಭದಲ್ಲಿ ಸ್ಪಂದಿಸುವ ಗುಣಗಳನ್ನು ಇವತ್ತಿಗೂ ರಾಜಕಾರಣಿಗಳಲ್ಲಿ ಕಾಣುತ್ತೇವೆ. ಸಿದ್ದರಾಮಯ್ಯನವರ ಪುತ್ರ ಅಕಾಲಿಕ ಮರಣಕ್ಕೆ ತುತ್ತಾದಾಗ, ರಾಜಕೀಯ ಕಡು ಎದುರಾಳಿಯಾದ ಯಡಿಯೂರಪ್ಪನವರು ಪಾರ್ಥಿವ ಶರೀರದ ಮುಂದೆಯೇ ತಬ್ಬಿ ಸಂತೈಸಿದ ಚಿತ್ರ ಕಣ್ಣಿಗೆ ಕಟ್ಟಿದಂತಿದೆ. ಸೈದ್ದಾಂತಿಕವಾಗಿ ಕಡು ಕೋಮುವಾದಿಯಂತೆ ವರ್ತಿಸುವ ಬಸನಗೌಡ ಯತ್ನಾಳರು, ಸದನದಲ್ಲಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ ಸಂದರ್ಭದಲ್ಲಿ, ಕಲಾಪ ಮುಗಿಯುತ್ತಿದ್ದಂತೆ ಸಿದ್ದರಾಮಯ್ಯ ಆಸ್ಪತ್ರೆಗೆ ಭೇಟಿ ಕೊಟ್ಟು ವಿಚಾರಿಸಿದ್ದುಂಟು. ಸಿದ್ದರಾಮಯ್ಯನವರು ಕಾಲಿಗೆ ಏಟು ಮಾಡಿಕೊಂಡು ವ್ಹೀಲ್‌ ಚೇರ್‍‌ನಲ್ಲಿದ್ದ ಅವಧಿಯ ಒಂದು ಸಭೆಯಲ್ಲಿ ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ವೇದಿಕೆಗೆ ಬಂದಾಗ, ತ್ರಾಸಿನಿಂದ ಏಳಲು ಮುಂದಾದಾದರು. ಆಗ ರಾಜನಾಥರು ತಾವೇ ಖುದ್ದಾಗಿ ಅವರ ಬಳಿಹೋಗಿ, ಕುರ್ಚಿಯಲ್ಲೇ ಕೂತಿರುವಂತೆ ಒತ್ತಾಯಿಸಿ, ಆರೋಗ್ಯ ವಿಚಾರಿಸಿ “ನಿಮ್ಮಂತವರು ಬೇಗ ಗುಣಮುಖರಾಗಿ ರಾಜಕೀಯಕ್ಕೆ ಮರಳಬೇಕು” ಎಂದು ಹಾರೈಸಿದ್ದರು. ಅಷ್ಟೇ ಯಾಕೆ, ದೇವೇಗೌಡರು ತಮ್ಮ ಕಚೇರಿಗೆ ಬಂದಾಗಲೆಲ್ಲ ಪ್ರಧಾನಿ ಮೋದಿಯವರು ತಾವೇ ಎದ್ದು ಹೋಗಿ ಅವರನ್ನು ಸ್ವಾಗತಿಸಿ, ಅವರಿಗೆ ಕಂಫರ್ಟ್‌ ಮಾಡಿಕೊಡುತ್ತಿರೋದನ್ನೂ ನಾವು ಕಂಡಿದ್ದೇವೆ. ಒಳಗಿನ ಲೆಕ್ಕಾಚಾರಗಳು ಏನೇ ಇರಲಿ, ಆದರೆ ಮಾನವೀಯವಾಗಿ ಪ್ರಕಟಗೊಳ್ಳಬೇಕಾದ ಸಂದರ್ಭಗಳು ಎದುರಾದಾಗ ರಾಜಕಾರಣಿಯಾದವನು ಬಹಳ ಎಚ್ಚರಿಕೆಯಿಂದ ಅಭಿವ್ಯಕ್ತಗೊಳ್ಳಬೇಕಾಗುತ್ತದೆ. ಆಗಲೇ ಒಂದು ಸೌಜನ್ಯಮಯ ವಾತಾವರಣದ ಪಳೆಯುಳಿಕೆಯನ್ನು ಮುಂದಿನ ಪೀಳಿಗೆಗೆ ಬಿಟ್ಟುಹೋಗಲು ಸಾಧ್ಯ. ಒಂದುವೇಳೆ, ಮತ್ತೊಬ್ಬರ ಸಾವು-ನೋವು-ಆರೋಗ್ಯದ ಕುರಿತು ಖಚಿತ ಮಾಹಿತಿ ಇದ್ದಾಗ್ಯೂ, ಅದನ್ನು ರಾಜಕೀಯ ಲಾಭಕ್ಕೋಸ್ಕರ ಬಳಸಿಕೊಳ್ಳಬಾರದೆನ್ನುವ ಎಚ್ಚರಿಕೆ ಒಬ್ಬ ರಾಜಕಾರಣಿಗೆ ಇರಲೇಬೇಕಾದ ಮಿನಿಮಮ್‌ ಕನ್ಸರ್ನ್‌.

ಆದರೆ ಕುಮಾರಸ್ವಾಮಿಯವರ ಆ ರಾಜಕೀಯ ಆರೋಪದಲ್ಲಿ ಅಂತಹ ಹೊಣೆಗಾರಿಕೆಯೂ ಇರಲಿಲ್ಲ, ಕಾಳಜಿಯೂ ಇರಲಿಲ್ಲ. ಇದ್ದುದು ಕೇವಲ ರಾಜಕಾರಣದ ಜಿದ್ದು ಮಾತ್ರ!!

ಒಂದುಕ್ಷಣ ಸುಧಾಕರ್‍‌ ಅವರ ಕುಟುಂಬ ಸದಸ್ಯರ ಸ್ಥಾನದಲ್ಲಿ ನಿಂತು ಕುಮಾರಸ್ವಾಮಿಯವರ ಮಾತುಗಳನ್ನು ಜೀರ್ಣಿಸಿಕೊಳ್ಳಲು ಯತ್ನಿಸಿ ನೋಡಿ, ಮನಸ್ಸಿಗೆ ಅದೆಷ್ಟು ಹಿಂಸೆಯಾಗುತ್ತದೆ. ಕುಮಾರಸ್ವಾಮಿಯವರು ಕಡೇಪಕ್ಷ, ತಾವು ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದಾಗ ತಮ್ಮ ಕುಟುಂಬಸ್ಥರು ಅನುಭವಿಸಿದ ಯಾತನೆಯನ್ನು ನೆನಪಿಸಿಕೊಂಡಿದ್ದರೂ ಇಂತಹ ಮಾತುಗಳನ್ನಾಡುತ್ತಿರಲಿಲ್ಲವೆನಿಸುತ್ತೆ. ಆಸ್ಪತ್ರೆಯಲ್ಲಿದ್ದಾಗ ಮಾತ್ರವಲ್ಲ,  ರಾಜಕೀಯ ವಾಗ್ವಾದ- ಸಂಘರ್ಷಗಳು ಅತಿರೇಕಕ್ಕೆ ಹೋದಾಗಲೆಲ್ಲ ಕುಮಾರಸ್ವಾಮಿಯವರ ಆರೋಗ್ಯದ ಬಗ್ಗೆ ಆತಂಕಕ್ಕೆ ಒಳಗಾಗುವ ಅವರ ಕುಟುಂಬಸ್ಥರು ಅವರನ್ನು ದಿಢೀರ್‍‌ ವಿದೇಶ ಪ್ರವಾಸಕ್ಕೆ ಕರೆದೊಯ್ದು, ಟೆನ್ಷನ್ನುಗಳಿಂದ ದೂರ ಮಾಡುವುದನ್ನೂ ನಾವು ನೋಡಿದ್ದೇವೆ. ಇದೇ ಒತ್ತಡದಲ್ಲಿದ್ದರೆ, ಅವರ ಆರೋಗ್ಯದ ಮೇಲೆ ಎಂಥಾ ದುಷ್ಪರಿಣಾಮ ಉಂಟಾಗುತ್ತದೋ ಎಂಬ ಆತಂಕ ಅದಕ್ಕೆ ಕಾರಣ. ಇದೆಲ್ಲವನ್ನು ಅರ್ಥ ಮಾಡಿಕೊಳ್ಳದಷ್ಟು ಅಸೂಕ್ಷ್ಮರಾ ಈ ಕುಮಾರಸ್ವಾಮಿಯವರು?

ಸಾಮಾನ್ಯವಾಗಿ ಬೇರೆ ಯಾರೋ ನಮ್ಮ ಮೇಲೆ ಆರೋಪ ಹೊರಿಸಿ, ಆ ಆರೋಪಕ್ಕೆ ನಾವು ಪ್ರತಿಕ್ರಿಯಿಸುವಾಗ ಉದ್ವೇಗದಲ್ಲೋ, ಆವೇಶದಲ್ಲೋ ನಮ್ಮ ನಾಲಿಗೆ ಅಸೂಕ್ಷ್ಮತೆಯ ಮಾತುಗಳಿಂದ ಜಾರಿಬಿಡುವ ಸಂದರ್ಭ ಇರುತ್ತದೆ. ಅದನ್ನು ನಾವು ಮನ್ನಿಸಬಹುದು. ಆದರೆ ನಾವೇ ಬೇರೊಬ್ಬರ ಮೇಲೆ ಆರೋಪ ಹೊರಿಸುವಾಗ ಅಂತಹ ಉದ್ವೇಗ, ಆವೇಶಗಳಿಗೆ ಆಸ್ಪದವಿರುವುದಿಲ್ಲ. ಬಹಳ ಕಂಪೋಸ್ಡ್‌ ರೀತಿಯಲ್ಲಿ ನಮ್ಮ ಮಾತುಗಳಿರುತ್ತವೆ; ನಮ್ಮ ಮನಸ್ಸಿನ ಮೇಲೂ ಒತ್ತಡವಿರುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಆಡುವ ಅಸೂಕ್ಷ್ಮ ಮಾತುಗಳಿಗೆ ರಿಯಾಯಿತಿ ಕೊಡಲಾಗದು. ಕುಮಾರಸ್ವಾಮಿಯವರು, ಸಚಿವ ಸುಧಾಕರ್‍‌ ಅವರ ಆರೋಗ್ಯ ಪರಿಸ್ಥಿತಿಯನ್ನು ಕೇಂದ್ರೀಕರಿಸಿಕೊಂಡು ಆಡಿದ ಆ ಮಾತು ಪ್ರತಿಕ್ರಿಯೆ ರೂಪದಲ್ಲ, ಆರೋಪದ ರೂಪದ್ದು. ಹಾಗಾಗಿ ಕುಮಾರಸ್ವಾಮಿಯವರ ಈ ವರ್ತನೆ ರಾಜಕೀಯ ಪುಟಗಳಲ್ಲಿ ಕೆಟ್ಟ ಉದಾಹರಣೆಯಾಗಿ ದಾಖಲಾಗಲಿದೆ.

ಇವರು ಇತ್ತೀಚೆಗೆ ಹೀಗೆ ಬದಲಾದದ್ದೋ, ಅಥವಾ ನನ್ನ ಗೆಳೆಯ ಹೇಳಿದಂತೆ ಮೊದಲಿನಿಂದಲೂ ಇದ್ದುದೇ ಹೀಗಾ?

You cannot copy content of this page

Exit mobile version