Home ಅಂಕಣ ಅಣ್ಣಾವ್ರ ಆ ನಿಲುವಿನಿಂದಾಗಿ ಕನ್ನಡಕ್ಕೆ ಕೈತಪ್ಪಿದ ಲಾಭ!?

ಅಣ್ಣಾವ್ರ ಆ ನಿಲುವಿನಿಂದಾಗಿ ಕನ್ನಡಕ್ಕೆ ಕೈತಪ್ಪಿದ ಲಾಭ!?

0

“.. ಅಣ್ಣಾವ್ರ ಆ ನಿಲುವಿನಿಂದ ಕನ್ನಡಕ್ಕೆ ಆಗಬಹುದಿದ್ದ ಲಾಭದಲ್ಲಿ ಒಂದಷ್ಟು ಕೈತಪ್ಪಿಹೋಯಿತೆನ್ನುವುದು ಮಾತ್ರ ಸತ್ಯ. ಯಾಕೆಂದರೆ, ಅಣ್ಣಾವ್ರಿಗೆ ಮಾತ್ರ ಆ ಶಕ್ತಿ ಇತ್ತು! ಅದೇನು ಗೊತ್ತಾ..?” ತಪ್ಪದೇ ಓದಿ.. ಮಾಚಯ್ಯ ಎಂ ಹಿಪ್ಪರಿಗಿಯವರ ಬರಹದಲ್ಲಿ

ಒಮ್ಮೆ ಡಾ. ರಾಜ್‌ಕುಮಾರ್‍‌ ಮತ್ತು ಯಡಿಯೂರಪ್ಪ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಮುಖಾಮುಖಿಯಾಗುವ ಸಂದರ್ಭ ಎದುರಾಯ್ತು. 1990ರ ದಶಕದ ಘಟನೆ. ಅಷ್ಟರಲ್ಲಾಗಲೇ ಯಡಿಯೂರಪ್ಪ ವಿರೋಧಪಕ್ಷದ ನಾಯಕನಾಗಿ, ಉದಯೋನ್ಮುಖ ರಾಜಕಾರಣಿ ಎಂದು ಹೆಸರು ಮಾಡಿದ್ದರು. ಇಬ್ಬರೂ ಅಕ್ಕಪಕ್ಕ ಕೂತಿದ್ದರಿಂದ ಸಹಜವಾಗಿಯೇ ಸಾಕಷ್ಟು ಮಾತಾಡಿದರು. ಯಡಿಯೂರಪ್ಪನವರು ಭಾಷಣ ಮಾಡುವುದಕ್ಕೆಂದು ಎದ್ದುಹೋದ ನಂತರ, ತನ್ನ ಇನ್ನೊಂದು ಬದಿಯಲ್ಲಿ ಕೂತಿದ್ದ ಆತ್ಮೀಯರತ್ತ ತಿರುಗಿದ ರಾಜಣ್ಣ, “ಈ ಯಡಿಯೂರಪ್ಪನವರು ಚೆನ್ನಾಗಿ ಮಾತಾಡ್ತಾರೆ. ಅಂದಂಗೆ ಇವ್ರು ಯಾವ ಪಾರ್ಟಿಯವ್ರು?” ಅಂತ ಕೇಳಿದರಂತೆ.

ರಾಜ್‌ಕುಮಾರ್‍‌ ಅವರಿಗೆ ರಾಜಕಾರಣದ ಬಗ್ಗೆ ಇದ್ದ ನಿರಾಸಕ್ತಿಗೆ ಇದೊಂದು ಒಳ್ಳೆಯ ಉದಾಹರಣೆ ಎಂದು ಪರಿಗಣಿಸಲಾಗುತ್ತೆ. ವಿರೋಧಪಕ್ಷದ ನಾಯಕನಾಗಿದ್ದ ಯಡಿಯೂರಪ್ಪ ಯಾವ ಪಾರ್ಟಿಯವರೆಂಬುದೂ ಅವರಿಗೆ ತಿಳಿದಿರಲಿಲ್ಲ! ಅಷ್ಟರಮಟ್ಟಿಗೆ ಅವರು ರಾಜಕೀಯದಿಂದ ವಿಮುಖರಾಗಿದ್ದರು.

ನಿಜಹೇಳಬೇಕೆಂದರೆ, ರಾಜ್‌ಕುಮಾರ್‍‌ ರಾಜಕಾರಣದಿಂದ ದೂರ ಉಳಿಯುವುದು ಸುಲಭದ ಮಾತಾಗಿರಲಿಲ್ಲ. ನಮ್ಮನಿಮ್ಮಂತಹ ಸಾಮಾನ್ಯ ಜನ ರಾಜಕಾರಣದ ಸನಿಹಕ್ಕೆ ಹೋಗಲು ಎಷ್ಟು ಹೆಣಗಾಡಬೇಕಾಗುತ್ತದೋ, ಆ ಹೆಣಗಾಟವನ್ನು ರಾಜ್‌ಕುಮಾರ್‍‌ ಅವರು ರಾಜಕಾರಣದಿಂದ ದೂರ ಉಳಿಯಲು ನಡೆಸಬೇಕಾಗಿತ್ತು. ಅವರಿಗಿದ್ದ ಜನಪ್ರೀತಿ, ಜನಪ್ರಿಯತೆ ಅಂತದ್ದು. ತೊಂಬತ್ತರ ದಶಕದಲ್ಲಿ ಪ್ರಬಲ ಸಾಂಸ್ಕೃತಿಕ ಶಕ್ತಿಯಾಗಿ ಬೆಳೆದಿದ್ದ ಡಾ.ರಾಜ್‌ ಅಭಿಮಾನಿಗಳ ಸಂಘ, ರಾಜಣ್ಣನನ್ನು ಶತಾಗತಾಯ ರಾಜಕಾರಣಕ್ಕೆ ಕರೆತರಬೇಕೆಂದು ರಾಜ್ಯಾದ್ಯಂತ ಸಹಿ ಸಂಗ್ರಹದ ಅಭಿಯಾನಕ್ಕೆ ಮುಂದಾದಾಗ “ನಾನು ಸರಸ್ವತಿ ಪುತ್ರನಾಗಿರುವುದಕ್ಕೆ ಬಯಸುತ್ತೇನೆಯೇ ಹೊರತು, ಲಕ್ಷ್ಮೀಪುತ್ರನಾಗುವುದಕ್ಕಲ್ಲ. ದಯವಿಟ್ಟು ನನ್ನನ್ನು ಒತ್ತಾಯಿಸಬೇಡಿ” ಎಂದು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದುಂಟು. ರಾಜ್‌ರನ್ನು ರಾಜಕಾರಣಕ್ಕೆ ಕರೆತರಲು ಬಂಗಾರಪ್ಪನವರು ನಡೆಸಿದ ಯತ್ನವೂ ಯಶ ಕಾಣಲಿಲ್ಲ.

ಪಕ್ಕದ ತಮಿಳುನಾಡಿನಲ್ಲಿ ಎಂಜಿಆರ್, ಆಂದ್ರದಲ್ಲಿ ಎನ್‌ಟಿಆರ್‍‌ ತರಹದ ಸಮಕಾಲೀನ ನಟರು ರಾಜಕೀಯ ಬಿರು ಅಲೆ ಎಬ್ಬಿಸುತ್ತಿದ್ದ ಹೊತ್ತಿನಲ್ಲಿ, ಆ ಎಲ್ಲಾ ಪ್ರಭಾವಗಳಿಂದ ಕಳಚಿಕೊಂಡು ರಾಜಕೀಯದಿಂದ ದೂರ ಉಳಿಯಲು ರಾಜ್‌ ನಿರ್ಧರಿಸಿದ್ದು ಕೇವಲ ನಿರಾಸಕ್ತಿಯಾಗಿರಲಿಲ್ಲ, ಅದೊಂದು ಬುದ್ದಿಪೂರ್ವಕ ನಿರ್ಧಾರವಾಗಿತ್ತು. ಆ ನಿರ್ಧಾರಕ್ಕೆ ಬದ್ದವಾಗುಳಿಯಲು ಅವರು ಸಾಕಷ್ಟು ಒತ್ತಡಗಳನ್ನು ತಾಳಿಕೊಳ್ಳಬೇಕಾಗಿ ಬಂತು. ಆದರೆ ತಮ್ಮ ನಿರ್ಧಾರದ ಜೊತೆ ಕೊನೆವರೆಗು ರಾಜಿಯಾಗಲಿಲ್ಲ.

ಒಬ್ಬ ವ್ಯಕ್ತಿಯಾಗಿ ತೆಗೆದುಕೊಂಡ ಅವರ ಈ ನಿರ್ಧಾರವನ್ನು ನಾವು ಗೌರವಿಸಲೇಬೇಕು. ಯಾಕೆಂದರೆ, ತನ್ನ ಬದುಕಿನ ಕುರಿತು ತಾನು ನಿರ್ಧಾರ ತೆಗೆದುಕೊಳ್ಳಲು ಪ್ರತಿ ವ್ಯಕ್ತಿಗೂ ಸ್ವಾತಂತ್ಯ್ರವಿರುತ್ತದೆ. ತನ್ನ ಇತಿಮಿತಿ, ಶಕ್ತಿ-ಸಾಮರ್ಥ್ಯ, ಪರಿಣಾಮ ಸಾಧ್ಯತೆಗಳ ಅಂಜಿಕೆ-ವಿಶ್ವಾಸಗಳು ಅಂತಹ ನಿರ್ಧಾರಗಳ ಮೇಲೆ ಪ್ರಭಾವ ಹೊಂದಿರುತ್ತವೆ. ಸ್ವತಃ ರಾಜ್‌ಕುಮಾರ್‍‌ ಅವರೇ ಹೇಳಿರುವಂತೆ, “ಎಲ್ಲಾ ಜಾತಿ, ಜನಾಂಗ, ಪಕ್ಷದವರು ನನ್ನನ್ನು ಬೆಳೆಸಿದ್ದಾರೆ. ಹಾಗಾಗಿ ನಾನು ಕನ್ನಡಿಗರ ಮನೆ ಮಗನಾಗಿರಲು ಬಯಸುತ್ತೇನೆಯೆ ಹೊರತು, ಒಂದು ಪಕ್ಷದ ರಾಜಕೀಯ ನಾಯಕನಾಗಿರಲು ಅಲ್ಲ” ಎಂಬ ಎಚ್ಚರ ಈ ತೀರ್ಮಾನದ ಹಿಂದಿತ್ತು. ರಾಜಕಾರಣದ ಕುರಿತು ಅವರ ಒಟ್ಟಾರೆ ಮಾತುಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿ ನೋಡಿದಾಗ, ನಿರೀಕ್ಷೆಗು ಮೀರಿ ತನಗೆ ಸಿಕ್ಕಿರುವ ಆ ಪ್ರೀತ್ಯಾಭಿಮಾನಗಳ ಬಗ್ಗೆ ಅವರು ವಿಪರೀತ ಜಾಗೃತರಾಗಿದ್ದುದು ನಮಗೆ ಅರ್ಥವಾಗುತ್ತದೆ.

ಅದು ಸಹಜವೂ ಹೌದು. ನಮ್ಮ ಜಾತಿಗ್ರಸ್ತ ವಾತಾವರಣದಲ್ಲಿ, ಪ್ರತಿಭೆಯ ಹೊರತಾಗಿ ಬೇರಾವ ಪೂರಕ ಸಂಗತಿಗಳೂ ಇಲ್ಲದ ರಾಜ್‌, ಇಷ್ಟು ಎತ್ತರಕ್ಕೆ ಬೆಳೆದು ನಿಂತಿದ್ದೇ ಒಂದು ಸೋಜಿಗ! ಇವ ನಮ್ಮವನೆಂದೆಣಿಸದೆ; ಇವನಾರವ, ಇವನಾರವ ಎಂಬ  ಕೊಳಕು ಆಲೋಚನೆಗಳಲ್ಲೆ ಕೊಳೆತುಹೋದ ಈ ಸಮಾಜದಲ್ಲಿ ಕೆಳಜಾತಿಯ ಪ್ರತಿಭೆಗಳನ್ನು ನಿರ್ದಾಕ್ಷಿಣವಾಗಿ ತುಳಿದುಹಾಕಲಾಗುತ್ತದೆ. ಇದನ್ನು ಧಿಕ್ಕರಿಸಿ ಮುನ್ನುಗ್ಗಬೇಕೆಂದರೆ ಪ್ರತಿಭೆಯ ಜೊತೆಗೆ ಅಪಾರ ಎದೆಗಾರಿಕೆಯೂ ನಿಮಗಿರಬೇಕಾಗುತ್ತದೆ. ಆದರೆ ಸಾರ್ವಜನಿಕವಾಗಿ ವ್ಯಕ್ತವಾದಂತೆ ರಾಜಣ್ಣ ಇಂಥಾ ನಿಷ್ಠುರ ಧೋರಣೆಯವರಾಗಿರಲಿಲ್ಲ. ವಿಪರೀತ ಮುಗ್ಧತೆ ಮತ್ತು ಗ್ರಾಮೀಣ ಬದುಕಿನ ಸರಳತೆಗಳು ಅವರ ವರ್ತನೆಗಳಲ್ಲಿ ಸಹಜವಾಗಿ ಪ್ರಕಟಗೊಂಡರೂ, ಆಂತರ್ಯದಲ್ಲಿ ಅವರು ಸದಾ ಎಚ್ಚರಿಯಾಗಿರುತ್ತಿದ್ದರು.

ಜಾತಿಯ ಕುರಿತಾಗಿ ಕೇಳಿದ ಪ್ರಶ್ನೆಗೆ ಒಮ್ಮೆ ಅವರು ನೀಡಿದ, “”ನಾನು ಎಲ್ಲಾ ಜಾತಿಯ ಜನರು ನೀಡಿದ ಅನ್ನ ತಿಂದು ಬೆಳೆದವನು. ಹಾಗಾಗಿ ನಾನು ಎಲ್ಲಾ ಜಾತಿಗೆ ಸೇರಿದವನು. ಅಥವಾ ನನಗೆ ಜಾತಿಯೇ ಇಲ್ಲ” ಎಂಬ ಉತ್ತರ, ಅವರಿಗಿದ್ದ ಸಾಮಾಜಿಕ ಎಚ್ಚರಕ್ಕೆ ಸಾಕ್ಷಿ. ಜಾತಿ ಎಂಬ ವಿಷವಾಸ್ತವದ ವಿಸ್ತಾರವನ್ನು ಚೆನ್ನಾಗಿ ಅರಿತು, ಅದನ್ನು ಬಾಯ್ಮಾತಿನಲ್ಲಿ ಧಿಕ್ಕರಿಸುವಂತಹ ಹುಂಬನೂ ಅಲ್ಲದ; ಅದನ್ನು ಒಪ್ಪಿಕೊಂಡು ಅದರ ಸಂಕೀರ್ಣ ಜಾಲದೊಳಗೆ ಸಿಲುಕಿಕೊಳ್ಳಲೂ ಬಯಸದ ಒಬ್ಬ ಎಚ್ಚರವಂತ ವ್ಯಕ್ತಿ ಮಾತ್ರ ಹೀಗೆ ಜಾತಿಯ ಕುರಿತಾದ ಗೋಜಲಿನ ಪ್ರಶ್ನೆಯನ್ನು ಜಾಣತನದಿಂದ ದಾಟಬಲ್ಲ. ಅಂದರೆ ರಾಜ್‌ ಕೂಡಾ ತಮ್ಮ ವೃತ್ತಿ ಬದುಕಿನ ಆರಂಭದ ದಿನಗಳಲ್ಲಿ ಜಾತಿ ಕಾರಣದಿಂದಾಗಿ ನಡೆದ ಪ್ರತಿಭಾ ದಮನದ ಅಡ್ಡಿಗಳನ್ನು ತಮ್ಮದೇ ರೀತಿಯಲ್ಲಿ ಎದುರಿಸಿ ಬಂದವರಾಗಿದುದರಿಂದ ಆ ಎಚ್ಚರ ಅವರಲ್ಲಿ ಇದ್ದಿರಬಹುದು. ಅಂತಹ ಪ್ರತಿಕೂಲ ವಾತಾವರಣಗಳನ್ನು ದಾಟಿ ತನಗೆ ಸಿಕ್ಕಿರುವ ಈ ಜನಪ್ರೀತಿಯನ್ನು ಕಳೆದುಕೊಳ್ಳಬಾರದೆಂಬ personal compulsionಗೂ ಅವರ ವ್ಯಕ್ತಿತ್ವ ತುತ್ತಾಗಿದ್ದಿರಬಹುದು.

ಕಲಾಪ್ರತಿಭೆಯ ಕಾರಣದಿಂದಾಗಿ ತನಗೆ ಎದುರಾದ ಅಡೆತಡೆಗಳನ್ನು ಸಾಂಸ್ಕೃತಿಕ ರಾಜಕಾರಣದಲ್ಲಿ ಗೆಲ್ಲಲು ಸಾಧ್ಯವಾಗಿರುವ ತಾನು; ಜಾತಿಯೇ ಪ್ರಧಾನ ಭೂಮಿಕೆಯಾಗಿರುವ ಸಕ್ರಿಯ ರಾಜಕಾರಣಕ್ಕೆ ಕಾಲಿಟ್ಟಾಕ್ಷಣ ಆ ದಮನಕಾರಿ ಶಕ್ತಿಗಳಿಗೆ ಸುಲಭದ ತುತ್ತಾಗಿ, ಈಗ ಸಿಕ್ಕಿರುವ ಜನಪ್ರೀತಿಯನ್ನು ಕಳೆದುಕೊಂಡುಬಿಡಬಹುದೆನ್ನುವ ಪ್ರಜ್ಞೆ ಅವರನ್ನು ರಾಜಕೀಯದಿಂದ ದೂರ ಸರಿಯುವಂತೆ ಮಾಡಿದ್ದ ಸಂಭವವೇ ಹೆಚ್ಚು. ಇಂತಹ ಆಳವಾದ ಕಾರಣ ಅಥವಾ ಬಲವಾದ ಪ್ರಭಾವಗಳು ಇಲ್ಲದ ಹೊರತು, ಅವರ ಆ ನಿರ್ಧಾರ ಅಷ್ಟು ದೃಢವಾದುದಾಗಿರಲು ಮತ್ತು ಸುದೀರ್ಘವಾದುದಾಗಿರಲು ಸಾಧ್ಯವಿರಲಿಲ್ಲ. ತಮ್ಮ ಜೀವಿತದ ಒಂದೇಒಂದು ನಿದರ್ಶನದಲ್ಲೂ ಅವರು ಈ ನಿರ್ಧಾರವನ್ನು ಸಡಿಲಿಗೊಳಿಸಿದ, ಅಥವಾ ಚಂಚಲಗೊಂಡ ಉದಾಹರಣೆಗಳು ನಮಗೆ ಕಾಣಸಿಗುವುದಿಲ್ಲ. ಗೋಕಾಕ್‌ ಚಳುವಳಿಯಂತಹ ಅದ್ಭುತ ಯಶಸ್ಸು ಮತ್ತು ಮಾಸ್‌ಲೀಡರ್‍‌ಶಿಪ್‌ನ ಜನಬೆಂಬಲ ವ್ಯಕ್ತವಾದ ನಂತರವೂ, ಅವರು ತಮ್ಮ ನಿರ್ಧಾರಕ್ಕೆ ಬದ್ಧವಾಗಿದ್ದುದು ಇದನ್ನು ಸಾಬೀತು ಮಾಡುತ್ತದೆ.

ರಾಜಕಾರಣದಿಂದ ಹೀಗೆ ದೂರ ಉಳಿಯುವಿಕೆಯು ಅವರಲ್ಲಿ ರಾಜಕಾರಣದ ಬಗ್ಗೆ ನಿರಾಸಕ್ತಿಯನ್ನು ಬೆಳೆಸುವುದರ ಜೊತೆಗೆ, ರಾಜಕೀಯದ ಬಗ್ಗೆ ಕ್ಷುಲ್ಲಕ ಅಭಿಪ್ರಾಯವನ್ನೂ ಮೂಡಿಸಿತ್ತು. ಅವರ ಕಾಲಘಟ್ಟದಲ್ಲಿ, ಅವರ ಕಣ್ಣಮುಂದೆ ನಡೆದ ರಾಜಕೀಯ ಹಗರಣಗಳು, ಹದ್ದುಮೀರಿದ ವ್ಯಕ್ತಿಗತ ಟೀಕೆಗಳು, ಯಶಸ್ಸಿನ ಹೊರತಾಗಿಯೂ ನೆರೆ ರಾಜ್ಯದ ಸಮಕಾಲೀನ ನಟರು ಅನುಭವಿಸಿದ ಏಳುಬೀಳುಗಳು ಇದಕ್ಕೆ ಕಾರಣವಾಗಿರಬಹುದು. ಒಮ್ಮೆ ಕನ್ನಡದ ಪೋಷಕ ನಟ ಸುಂದರ್‍‌ ರಾಜ್‌ ಅವರು ರಾಜಕಾರಣ ಪ್ರವೇಶಿಸಲು ಮುಂದಾಗಿ, ರಾಜಣ್ಣನವರ ಆಶೀರ್ವಾದ ಪಡೆಯಲು ಹೋದಾಗ “ಸುಂದರ್, ಇದೆಲ್ಲಾ ನಮಗೆ ಬೇಕಾ? ನಾವು ಇರೋದು ಜನರನ್ನು ರಂಜಿಸೋಕೆ. ರಾಜಕೀಯದ ಕೆಸರು ನಮಗ್ಯಾಕೆ?”  ಎಂದು ಕೇಳಿದ್ದರಂತೆ. ಅಂದರೆ ರಾಜಕೀಯದ ಕುರಿತು ಅವರು ‘ಕೆಸರು’ ಎಂಬ ತೀರ್ಮಾನಕ್ಕೆ ಬಂದು ಬಿಟ್ಟಿದ್ದರು.

ಈ ಎಲ್ಲಾ ಪ್ರಭಾವಗಳಿಗೆ ಒಳಗಾಗಿ ಅವರು ರಾಜಕಾರಣದಿಂದ ದೂರ ಉಳಿಯುವ ತೀರ್ಮಾನಕ್ಕೆ ಬಂದಿದ್ದರು. ಮೊದಲೇ ಹೇಳಿದಂತೆ, ಅವರ ಈ ವ್ಯಕ್ತಿಗತ ನಿರ್ಧಾರವನ್ನು ನಾವು ಸ್ವಾಗತಿಸಲೇಬೇಕು. ರಾಜಕೀಯಕ್ಕೆ ಬಾರದಿರುವ ತೀರ್ಮಾನ ಆರಿಸಿಕೊಂಡಿದ್ದು ವೈಯಕ್ತಿಕವಾಗಿ ಅವರ ಘನತೆಯನ್ನು ಹೆಚ್ಚಿಸಿತಾದರೂ, ಅದು ‘ಕನ್ನಡತನ’ ಮತ್ತು ‘ಅಧಿಕಾರ ರಾಜಕಾರಣ’ದ ನಡುವೆ ಇರಬಹುದಾಗಿದ್ದ ಒಂದು ಅನನ್ಯ ಕೊಂಡಿಯನ್ನು ಕತ್ತರಿಸಿತು ಎಂಬುದನ್ನು ನಾವು ತಳ್ಳಿಹಾಕಲಾಗದು.

ರಾಜ್‌ಕುಮಾರ್ ಅವರು ಕೇವಲ ನಟರಾಗಿರಲಿಲ್ಲ, ಅವರು ಕರ್ನಾಟಕದ ಅಘೋಷಿತ ಸಾಂಸ್ಕೃತಿಕ ರಾಯಭಾರಿಯಾಗಿದ್ದರು. ಗೋಕಾಕ್ ಚಳುವಳಿಯ ಸಂದರ್ಭದಲ್ಲಿ ಅವರು ಜನರನ್ನು ಒಗ್ಗೂಡಿಸಿದ ರೀತಿ ನೋಡಿದಾಗ, ಅವರು ರಾಜಕೀಯ ಪಕ್ಷವೊಂದನ್ನು ಕಟ್ಟಿದ್ದರೆ ಅಥವಾ ಬೆಂಬಲಿಸಿದ್ದರೆ, ಅದು ಕರ್ನಾಟಕದಲ್ಲಿ ಒಂದು ಪ್ರಬಲ ‘ಪ್ರಾದೇಶಿಕ ಅಸ್ಮಿತೆಯ’ ರಾಜಕೀಯ ಶಕ್ತಿಯಾಗಿ ಹೊರಹೊಮ್ಮುತ್ತಿತ್ತು. ತಮಿಳುನಾಡಿನಲ್ಲಿ ಎಂ.ಜಿ.ಆರ್ ಅಥವಾ ಆಂಧ್ರದಲ್ಲಿ ಎನ್.ಟಿ.ಆರ್ ಮಾಡಿದಂತೆ, ಕನ್ನಡತನವನ್ನೇ ಆಡಳಿತದ ಮೂಲಮಂತ್ರವಾಗಿಸುವ ಸಾಧ್ಯತೆ ಇರುತ್ತಿತ್ತು. ಗೋಕಾಕ್‌ ಚಳವಳಿಯು ಕನ್ನಡವನ್ನು ಎಷ್ಟರಮಟ್ಟಿಗೆ ಆಡಳಿತ ಕೇಂದ್ರಕ್ಕೆ ತಂದು ನಿಲ್ಲಿಸಿತೆಂದರೆ, ಅಷ್ಟು ದಿನ ಸಂಸ್ಕೃತಕ್ಕೆ ಪ್ರಥಮ ಭಾಷೆಯ ಸ್ಥಾನವನ್ನು ಕೊಟ್ಟು ಕನ್ನಡವನ್ನು ಹಿಂಬಡ್ತಿಗೆ ತಳ್ಳಿದ ವ್ಯವಸ್ಥೆಯನ್ನು ಬದಲಿಸಿ, ಕನ್ನಡಕ್ಕೆ ಪ್ರಥಮ ಭಾಷೆಯ ಸ್ಥಾನ, 125 ಅಂಕ ಗೊತ್ತು ಪಡಿಸುವಂತೆ ಮಾಡಿತ್ತು. ಡಾ. ರಾಜ್‌ಕುಮಾರ್ ಅವರು ಈ ಚಳುವಳಿಯ ನಾಯಕತ್ವ ವಹಿಸಿಕೊಂಡಾಗ, ಅದು ಕೇವಲ ಸಾಹಿತಿಗಳ ಹೋರಾಟವಾಗಿ ಉಳಿಯದೆ ಜನಸಾಮಾನ್ಯರ ಹೋರಾಟವಾಯಿತು. ಇದರಿಂದಾಗಿ ರಾಜಕೀಯ ಪಕ್ಷಗಳಿಗೆ “ಕರ್ನಾಟಕದಲ್ಲಿ ಅಧಿಕಾರ ಹಿಡಿಯಲು ಕನ್ನಡದ ಅಸ್ಮಿತೆಯನ್ನು ಕಡೆಗಣಿಸುವಂತಿಲ್ಲ” ಎಂಬ ಒಂದು ಸ್ಪಷ್ಟ ಸಂದೇಶ ರವಾನೆಯಾಯಿತು. ಅದರ ಪರಿಣಾಮವಾಗಿ 1982ರಲ್ಲಿ ರಾಮಕೃಷ್ಣ ಹೆಗಡೆ ಸಾರಥ್ಯದಲ್ಲಿ ಅಧಿಕಾರಕ್ಕೆ ಬಂದ ಪ್ರಪ್ರಥಮ ಕಾಂಗ್ರೆಸ್ಸೇತರ ಸರ್ಕಾರ ಅದೇ ಮೊದಲ ಬಾರಿಗೆ ಕನ್ನಡ ಕಾವಲು ಸಮಿತಿಯನ್ನು ರಚಿಸಿತು. ಆ ಸಮಿತಿಗೆ ಮೊದಲ ಸಲ ಅಧ್ಯಕ್ಷರಾಗಿದ್ದು, ಇಂದಿನ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರು. ನಂತರ ಆ ಕಾವಲು ಸಮಿತಿ, ಇಂದಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರವಾಗಿ ರೂಪಾಂತರವಾಯ್ತು. ಆಡಳಿತ ಪಡಸಾಲೆಗೆ ಇಷ್ಟು ವ್ಯಾಪಕವಾಗಿ ವಿಸ್ತರಿಸಿದ್ದ ಕನ್ನಡದ ಪ್ರಭಾವ, ರಾಜ್‌ ಅವರ ರಾಜಕೀಯ ನಿರಾಸಕ್ತಿಯಿಂದಾಗಿ ಕುಗ್ಗುತ್ತಾ ಬಂತು.

ನೆರೆಹೊರೆಯ ರಾಜ್ಯಗಳಲ್ಲಿ ಭಾಷಾಭಿಮಾನ ಮತ್ತು ರಾಜಕೀಯ ಅಧಿಕಾರ ಒಂದಕ್ಕೊಂದು ಪೂರಕವಾಗಿ ಬೆಳೆಯುತ್ತಿದ್ದ ಕಾಲದಲ್ಲಿ ಕರ್ನಾಟಕದಲ್ಲಿ ರಾಜಕಾರಣವು ಹೆಚ್ಚಾಗಿ ಜಾತಿ ಸಮೀಕರಣಗಳು ಮತ್ತು ರಾಷ್ಟ್ರೀಯ ಪಕ್ಷಗಳ ಕೇಂದ್ರಿತವಾಗಿ ಉಳಿಯಿತು. ಕನ್ನಡದ ನೆಲ-ಜಲ-ಭಾಷೆಯ ಹೆಸರಿನಲ್ಲಿ ಪ್ರಬಲ ಪ್ರಾದೇಶಿಕ ಪಕ್ಷವೊಂದು ದೀರ್ಘಕಾಲ ನೆಲೆ ನಿಲ್ಲಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಕರ್ನಾಟಕದ ರಾಜಕೀಯ ನಿರ್ಧಾರಗಳು ಹೆಚ್ಚಾಗಿ ದೆಹಲಿ ಕೇಂದ್ರಿತವಾಗಲು ಇದು ಪರೋಕ್ಷವಾಗಿ ಕಾರಣವಾಯಿತು.  ರಾಜ್‌ಕುಮಾರ್ ಅವರು ರಾಜಕೀಯಕ್ಕೆ ಬಂದಿದ್ದರೆ ‘ಕನ್ನಡತನ’ ಎಂಬುದು ಕೇವಲ ಸಾಹಿತ್ಯ, ಸಿನಿಮಾ ಮತ್ತು ಚಳುವಳಿಗಳಿಗೆ ಸೀಮಿತವಾಗದೆ, ಆಡಳಿತಾತ್ಮಕ ನೀತಿ (Policy) ಆಗಿ ಬದಲಾಗಲಿದ್ದ ಸಾಧ್ಯತೆಯನ್ನು ನಿರಾಕರಿಸಲಾಗದು. ಉದಾಹರಣೆಗೆ, ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ ಅಥವಾ ಗಡಿ ಭಾಗಗಳ ಅಭಿವೃದ್ಧಿಯಂತಹ ವಿಷಯಗಳು ಕೇವಲ ಬೇಡಿಕೆಗಳಾಗಿ ಇಷ್ಟುದಿನ ನರಳಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲವೇನೊ.

ಏನು ಆಗದಿದ್ದರೂ, ಕನ್ನಡ-ಕರ್ನಾಟಕ-ಕನ್ನಡತನಗಳು ರಾಜಕೀಯವಾಗಿ ಇಷ್ಟು ನಿರ್ಲಕ್ಷ್ಯಕ್ಕಂತೂ ತುತ್ತಾಗುತ್ತಿರಲಿಲ್ಲ. ಇವತ್ತು ಹಿಂದಿ ಹೇರಿಕೆಯ ವಿಚಾರದಲ್ಲಿ, ಕನ್ನಡಿಗರು ಅನ್ನಿಸಿಕೊಂಡ ರಾಷ್ಟ್ರೀಯ ಪಕ್ಷವೊಂದರ ನೇತಾರರೇ ಕನ್ನಡಕ್ಕೆ ಕುತ್ತು ತರುವಂತಹ ನಿಲುವು ತಳೆಯುತ್ತಿದ್ದಾರೆ, ಯಾವ ಅಳುಕೂ ಇಲ್ಲದೆ ಹಿಂದಿ ಮೋಹದ ಮಾತುಗಳನ್ನಾಡುತ್ತಿದ್ದಾರೆ. ಕನ್ನಡಿಗರಿಂದ ಚುನಾಯಿತವಾದ ಸರ್ಕಾರವೇ ಕನ್ನಡ ಶಾಲೆಗಳನ್ನು ಮುಚ್ಚುವ ಮಾತಾಡುತ್ತದೆ. ತನ್ನನ್ನು ತಾನು ಪ್ರಾದೇಶಿಕ ಎಂದು ಕರೆದುಕೊಳ್ಳುವ ಪಕ್ಷವೂ, ಅಧಿಕಾರಕ್ಕಾಗಿ ರಾಷ್ಟ್ರೀಯ ಪಕ್ಷಗಳ ಮೈತ್ರಿ ಅನಿವಾರ್ಯತೆಗೆ ಸಿಲುಕಿ ಕನ್ನಡವನ್ನು, ಕನ್ನಡಿಗರ ಆದ್ಯತೆಗಳನ್ನು ಕಡೆಗಣಿಸುತ್ತಿದೆ. ಇದಕ್ಕೆಲ್ಲ ಕಾರಣ, ಪಕ್ಕದ ಆಂದ್ರ ಮತ್ತು ತಮಿಳುನಾಡಿನಂತೆ ಭಾಷಾ ಅಸ್ಮಿತೆಯು ಅಲ್ಲಿನ ರಾಜಕಾರಣವನ್ನು ಪ್ರಭಾವಿಸುವ ರೀತಿ, ಇಲ್ಲಿನ  ಕನ್ನಡ ಇಲ್ಲಿಯ ರಾಜಕಾರಣವನ್ನು ಪ್ರಭಾವಿಸುವಲ್ಲಿ ಸೋತುಹೋದದ್ದು. ಅದನ್ನು ರಾಜ್‌ ಏಕಾಂಗಿಯಾಗಿ ಮಾಡುತ್ತಿದ್ದರು ಅಂತಲ್ಲ, ಆದರೆ ಆ ದಿಕ್ಕಿನಲ್ಲಿ ಚಲನೆಯಂತೂ ಲಭಿಸುತ್ತಿತ್ತು.

ಡಾ. ರಾಜ್‌ಕುಮಾರ್ ಈಗ ನಮ್ಮ ನಡುವೆ ಇಲ್ಲ. ಅವರ ನಿರ್ಧಾರಗಳಿಗೆ ಅವರದೆ ಆದ ಕಾರಣಗಳೂ ಇದ್ದಿರಬಹುದು. ಮತ್ತು ಅವರ ನಿರ್ಧಾರದ ಸ್ವಾತಂತ್ಯ್ರವನ್ನು ನಾವು ಗೌರವಿಸಲೂಬಹುದು. ಆದರೆ ಅಕಸ್ಮಾತ್‌ ರಾಜಣ್ಣ ಏನಾದರೂ ರಾಜಕೀಯವನ್ನು ಪ್ರಭಾವಿಸಲು ಮುಂದಾಗಿದ್ದರೆ, ಕನ್ನಡಕ್ಕೆ ಒಂದಷ್ಟು ಬಲ ಬರುತ್ತಿತ್ತು ಎಂಬುದು ಸುಳ್ಳಲ್ಲ. ತನ್ನ ಜೀವಿತಾವಧಿಯಲ್ಲಿ ಕನ್ನಡಕ್ಕೆ ವ್ಯಕ್ತಿಯೊಬ್ಬ ಕೊಡಬಹುದಾದ ಕೊಡುಗೆಗಳಿಗಿಂತ ಯಥೇಚ್ಛವಾದುದನ್ನೇ ರಾಜಣ್ಣ ಕೊಟ್ಟುಹೋಗಿದ್ದಾರೆ. ಆ ಪಟ್ಟಿಯಲ್ಲಿ ಅವರು ಅಗ್ರಗಣ್ಯ. ಹಾಗಾಗಿ ಅವರ ರಾಜಕೀಯ ನಿರಾಸಕ್ತಿ ನಿರ್ಧಾರದಿಂದ ಕನ್ನಡಕ್ಕೆ ನಷ್ಟವಾಯಿತು ಎಂದು ಖಂಡಿತ ಹೇಳಲಾಗದು. ಆದರೆ ಕನ್ನಡಕ್ಕೆ ಆಗಬಹುದಿದ್ದ ಲಾಭದಲ್ಲಿ ಒಂದಷ್ಟು ಕೈತಪ್ಪಿಹೋಯಿತೆನ್ನುವುದು ಮಾತ್ರ ಸತ್ಯ. ಯಾಕೆಂದರೆ, ಅಣ್ಣಾವ್ರಿಗೆ ಮಾತ್ರ ಆ ಶಕ್ತಿ ಇತ್ತು!

You cannot copy content of this page

Exit mobile version