Home ಅಂಕಣ ಮೋದಿ ಮತ್ತು ನೆಹರೂ : ಹದಿನೇಳಕ್ಕಿಂತ ಹನ್ನೆರಡು ದೊಡ್ಡದಾದ ಕತೆ!

ಮೋದಿ ಮತ್ತು ನೆಹರೂ : ಹದಿನೇಳಕ್ಕಿಂತ ಹನ್ನೆರಡು ದೊಡ್ಡದಾದ ಕತೆ!

0

“..1947ರಲ್ಲಿ ಭಾರತದ ಪ್ರಥಮ ಪ್ರಧಾನಿಯಾಗಿ ಆಯ್ಕೆಯಾಗಲು ನೆಹರೂ ಅವರಿಗೆ ಅರ್ಹತೆಯಿತ್ತು, ಯೋಗ್ಯತೆಯಿತ್ತು, ನಿಯಮಗಳೂ ಜೊತೆಗೂಡಿದ್ದವು. ಹಾಗಿರುವಾಗ ಅವರ ಆ ಐದು ವರ್ಷಗಳನ್ನು ಹೊರಗಿಟ್ಟು, ತಮ್ಮ ಭುಜ ತಟ್ಟಿಕೊಳ್ಳುವುದು ಆತ್ಮರತಿಯಲ್ಲದೆ ಇನ್ನೇನು?..” ಚಿಂತಕರಾದ ಮಾಚಯ್ಯ ಹಿಪ್ಪರಿಗಿ ಅವರ ಬರಹದಲ್ಲಿ‌

ಪ್ರಧಾನಿ ಮೋದಿಯವರು ಸತತವಾಗಿ ಹನ್ನೆರಡು ವರ್ಷ ಅಧಿಕಾರ ನಡೆಸುವ ಮೂಲಕ ಜವಾಹರ ಲಾಲ್‌ ನೆಹರೂ ಅವರ ದಾಖಲೆಯನ್ನು ಮುರಿದಿದ್ದಾರೆ ಎಂದು ಸಂಭ್ರಮಿಸಲಾಗುತ್ತಿದೆ. ಹೀಗೆ ಹೇಳುವವರು ನೆಹರೂ ಅಧಿಕಾರಾವಧಿಯನ್ನು 1952 ರಿಂದ 1964ರವರೆಗೆ ಪರಿಗಣಿಸುತ್ತಿದ್ದಾರೆ. ನಮಗೆ ಸ್ವಾತಂತ್ಯ್ರ ಲಭಿಸಿದ 1947 ರಿಂದ 1952ರವರೆಗಿನ ಅವರ ಪ್ರಧಾನಿ ಅವಧಿಯನ್ನು ಉದ್ದೇಶಪೂರ್ವಕವಾಗಿ ಕೈಬಿಡುತ್ತಿದ್ದಾರೆ. 1947 ರಿಂದ ಪರಿಗಣಿಸಿ, ಹುದ್ದೆಯಲ್ಲಿದ್ದಾಗಲೇ ಹೃದಯಾಘಾತದಿಂದ ನಿಧನರಾದ 1964ರವರೆಗಿನ ಆಳ್ವಿಕೆಯನ್ನು ಗಣನೆಗೆ ತೆಗೆದುಕೊಂಡರೆ ನೆಹರೂ ಅವರು ಒಟ್ಟು 16 ವರ್ಷ, 286 ದಿನಗಳ ಕಾಲ (ಒಟ್ಟಾರೆ 6130 ದಿನಗಳು) ಅಧಿಕಾರ ನಡೆಸಿದ್ದರು. ಅಂದರೆ ಹೆಚ್ಚೂಕಮ್ಮಿ ಹದಿನೇಳು ವರ್ಷಗಳು! ನಿಜ ಹೇಳಬೇಕೆಂದರೆ, ಸ್ವಾತಂತ್ಯ್ರಪೂರ್ವದಲ್ಲಿ ಅಧಿಕಾರ ಹಸ್ತಾಂತರ ಹಂಚಿಕೆಯ ಭಾಗವಾಗಿ ಬ್ರಿಟಿಷರು ರಚಿಸಿದ್ದ ಮಧ್ಯಂತರ ಸರ್ಕಾರದ ಅವಧಿಯಲ್ಲೂ (ಸೆಪ್ಟೆಂಬರ್ 2, 1946 – ಆಗಸ್ಟ್‌ 15, 1947) ನೆಹರೂ ಅವರು ಮಧ್ಯಂತರ ಸರ್ಕಾರದ ಹಂಗಾಮಿ ಪ್ರಧಾನಿಯಾಗಿದ್ದರು. ಅದನ್ನೂ ಪರಿಗಣಿಸಿದರೆ ನೆಹರೂ ಅವರ ಆಡಳಿತ ಮತ್ತಷ್ಟೂ ಲಂಭಿಸುತ್ತದೆ. ಅದು ಸ್ವಾತಂತ್ಯ್ರ ಬರುವುದಕ್ಕು ಹಿಂದಿನ ಮಾತು. ಹಾಗಾಗಿ ಬಿಟ್ಟುಬಿಡೋಣ. ಆದರೆ ಸ್ವಾತಂತ್ಯ್ರ ಸಿಕ್ಕ ನಂತರದ 1947-1952 ಅವಧಿಯನ್ನೂ ಗಣಿಸದೆ ಇರಲಾದೀತೆ?

‘ಅದು ಸಾರ್ವತ್ರಿಕ ಚುನಾವಣೆಯ ಮೂಲಕ ಚುನಾಯಿತವಾದ ಸರ್ಕಾರ ಆಗಿರಲಿಲ್ಲ. ಮೊದಲ ಸಾರ್ವತ್ರಿಕ ಚುನಾವಣೆ ನಡೆದದ್ದು 1952ರಲ್ಲಿ. ಹಾಗಾಗಿ ಅಲ್ಲಿಂದಾಚೆಗಿನ ಅಧಿಕಾರಾವಧಿಯನ್ನು ಮಾತ್ರ ಪರಿಗಣಿಸುತ್ತೇವೆ’ ಎಂದು ಮೋದಿ ಬೆಂಬಲಿಗರು ಮೋದಿಯವರ ಸೋಕಾಲ್ಡ್‌ ದಾಖಲೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಚುನಾವಣಾ ಪ್ರಕ್ರಿಯೆಯ ಕಾರಣಕ್ಕೆ ನೀವು ಆ ಐದು ವರ್ಷಗಳನ್ನು (1947-1952) ಸ್ವತಂತ್ರ ಭಾರತದ ಚರಿತ್ರೆಯಿಂದ ಹೊರಗಿಡುತ್ತೀರೆಂದಾದರೆ, ಆಗ ನೀವು ಪ್ರಧಾನಿ ಹುದ್ದೆಯ ಅವಧಿಯನ್ನೂ ನಿರ್ಲಕ್ಷಿಸಬಹುದು. ಆದರೆ ಹಾಗೆ ಮಾಡಲು ಸಾಧ್ಯವೇ? ಯಾಕೆಂದರೆ, ಆ ಐದು ವರ್ಷವು ಭಾರತದ ಒಟ್ಟಾರೆ ಭವಿಷ್ಯವನ್ನು ರೂಪಿಸಿದ ನಿರ್ಣಾಯಕ ಕಾಲಘಟ್ಟವಾಗಿತ್ತು. ನಮ್ಮ ಸಂವಿಧಾನ ರಚನೆಯಾಗಿ, ಅಂಗೀಕರವಾಗಿದ್ದೇ ಆ ಅವಧಿಯಲ್ಲಿ. ಅದು ಸಾರ್ವತ್ರಿಕ ಚುನಾಯಿತ ಸರ್ಕಾರದ ಅವಧಿಯಲ್ಲಿ ರಚನೆಯಾದ ಸಂವಿಧಾನವಲ್ಲ, ಹಾಗಾಗಿ ಪ್ರಸ್ತುತ ಸಂವಿಧಾನವನ್ನು ನಾವು ಪರಿಗಣಿಸುವುದಿಲ್ಲ ಎನ್ನಲು ಸಾಧ್ಯವೇ? ಅದು ಸಾಧ್ಯ ಎನ್ನುವುದಾದರೆ, ನೆಹರೂ ಅವರ ಪ್ರಧಾನಿ ಅವಧಿಯನ್ನೂ ಆ ಐದು ವರ್ಷಗಳ ಕಾಲ ಕಡಿತ ಮಾಡಲು ಅಡ್ಡಿಯಿಲ್ಲ.

ಇನ್ನು ಪ್ರಧಾನಿ ಹುದ್ದೆ ಎನ್ನುವುದು ಕೇವಲ ಚುನಾವಣಾ ಹೊಣೆಗಾರಿಕೆಯನ್ನೊತ್ತ ಹುದ್ದೆಯಲ್ಲ, ಅದು ದೇಶವನ್ನು ಮುನ್ನಡೆಸುವ ನಾಯಕತ್ವದ ಹೊಣೆ ಹೊತ್ತ ಹುದ್ದೆ. ಆ ಹುದ್ದೆಯ ಆಯ್ಕೆಗೆ ಚುನಾವಣಾ ಪ್ರಕ್ರಿಯೆಯನ್ನು ಮಾನದಂಡವಾಗಿ ಬಳಸಲಾಗುತ್ತದೆ ಎಂದ ಮಾತ್ರಕ್ಕೆ, ಆ ಹುದ್ದೆಯ ಹೊಣೆಗಾರಿಕೆಯನ್ನು ಚುನಾವಣೆಗಳಿಂದಲೇ ಅಳೆಯುವುದು ತಪ್ಪಾಗುತ್ತದೆ. ಯಾಕೆಂದರೆ, ಐ ಕೆ ಗುಜ್ರಾಲ್‌, ದೇವೇಗೌಡರು ಮತ್ತು ಮನಮೋಹನ್‌ ಸಿಂಗ್‌ ಅವರು ಪ್ರಧಾನಿಗಳಾದಾಗ ಅವರು ಸಾರ್ವತ್ರಿಕ ಚುನಾವಣೆಯಲ್ಲಿ ಜನರಿಂದ ನೇರವಾಗಿ ಆಯ್ಕೆಯಾದ ಸಂಸದರಾಗಿರಲಿಲ್ಲ; ಬದಲಿಗೆ, ರಾಜ್ಯಸಭಾ ಸದಸ್ಯರುಗಳಾಗಿದ್ದರು. ರಾಜ್ಯಸಭಾ ಸದಸ್ಯರೂ ಪ್ರಧಾನಿಯಾಗುವ ಅವಕಾಶವನ್ನು ನಮ್ಮ ಸಂವಿಧಾನ ಕಲ್ಪಿಸಿದೆ. ಹಾಗಾಗಿ ಇವರ್‍ಯಾರೂ, ಪ್ರಧಾನಿಯಾಗುವ ಉದ್ದೇಶದಿಂದಲೇ ತಮ್ಮತಮ್ಮ ನಾಯಕತ್ವಗಳಲ್ಲಿ ಚುನಾವಣೆಗಳನ್ನು ಎದುರಿಸಿದವರಲ್ಲ. ಆ ಪೈಕಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವಾಗ ನಮ್ಮ ದೇವೇಗೌಡರು ರಾಜ್ಯಸಭಾ ಸದಸ್ಯರೂ ಆಗಿರಲಿಲ್ಲ. ಎಂಎಲ್‌ಎ ಆಗಿ, ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಆದರೆ ಸಂವಿಧಾನದ ಪ್ರಕಾರ ಸಂಸತ್ತಿನ ಉಭಯ ಸದನದ ಸದಸ್ಯರಲ್ಲದಿದ್ದರೂ ಪ್ರಧಾನಿಯಾಗಬಹುದು, ಆದರೆ ಪ್ರಧಾನಿಯಾದ ಆರು ತಿಂಗಳ ಒಳಗೆ ರಾಜ್ಯಸಭೆ ಅಥವಾ ಲೋಕಸಭೆ ಸದಸ್ಯರಾಗಿ ಆಯ್ಕೆಯಾಗಬೇಕು ಎಂಬ ನಿಯಮವಿದೆ. ಅದರ ಪ್ರಕಾರ ಪ್ರಧಾನಿಯಾದ ನಂತರ, ಎಂಎಲ್‌ಎ ಸ್ಥಾನಕ್ಕೆ ರಾಜೀನಾಮೆ ನೀಡಿ, ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು! ಪ್ರಧಾನಿ ಹುದ್ದೆಗೇರಲು ಬೇಕಾದ ಬಹುಮತವು ನಿಬಂಧನೆಗೊಳಪಟ್ಟು ಅವರಿಗೆ ಲಭಿಸಿದ್ದರಿಂದ ಇವರೆಲ್ಲ ಪ್ರಧಾನಿಗಳಾದರು. ಆಯಾ ಕಾಲಘಟ್ಟದಲ್ಲಿರುವ ಮಾನದಂಡಗಳ ಅರ್ಹತೆ ಪೂರೈಸಿ ಅವರು ಪ್ರಧಾನಿಯಾದರೋ? ಇಲ್ಲವೋ? ಎಂಬುದನ್ನು ನಾವು ಪರಿಗಣಿಸಬೇಕೆ ಹೊರತು, ಈಗಿನ ನಮ್ಮ ಮಾನಡಂಗಳನ್ನಿಟ್ಟು ನಮ್ಮ ಮೂಗಿನ ನೇರಕ್ಕೆ ಅಂದಾಜಿಸುವುದಲ್ಲ. ಉದಾಹರಣೆಗೆ, ಇವತ್ತಿನ ನಮ್ಮ ನಿಯಮಗಳು ರಾಜ್ಯಸಭಾ ಸದಸ್ಯರೂ ಪ್ರಧಾನಿಯಾಗಬಹುದು ಎಂದಿದೆ. ಅದರಂತೆ ಮೇಲೆ ವಿವರಿಸಿದ ಹಲವರು ಪ್ರಧಾನಿಗಳಾಗಿದ್ದಾರೆ. ಅಕಸ್ಮಾತ್ ಮುಂದೆ, ಈ ನಿಯಮಕ್ಕೆ ಯಾರಾದರೂ ತಿದ್ದುಪಡಿ ತಂದು, ಕೇವಲ ಲೋಕಸಭಾ ಚುನಾವಣೆಗಳಲ್ಲಿ ನೇರವಾಗಿ ಜನರಿಂದ ಚುನಾಯಿತರಾದ ಸಂಸದರು ಮಾತ್ರ ಪ್ರಧಾನಿಗಳಾಗಬೇಕು ಎಂದು ನಿಯಮ ಬದಲಿಸಿದರು ಅಂತಿಟ್ಟುಕೊಳ್ಳಿ. ಅಲ್ಲಿಂದಾಚೆಗಿನ ಪ್ರಧಾನಿಗಳನ್ನು ನಾವು ಅದರಂತೆಯೇ ಆಯ್ಕೆ ಮಾಡಿಕೊಳ್ಳುತ್ತೇವೆ. ಹಾಗಂತ, ಅದಕ್ಕೂ ಮೊದಲು ರಾಜ್ಯಸಭಾ ಸದಸ್ಯರಾಗಿ ಪ್ರಧಾನಿಯಾಗಿದ್ದವರ ಅವಧಿಗಳನ್ನೇ ಅಸಿಂಧುಗೊಳಿಸುತ್ತೇವೆಯೇ?

1947ರಲ್ಲಿ ನೆಹರೂ ಪ್ರಧಾನಿಯಾದದ್ದು ಕೂಡಾ ಆಗ ಚಾಲ್ತಿಯಲ್ಲಿದ್ದ ಗವರ್ನಮೆಂಟ್ ಆಫ್‌ ಇಂಡಿಯಾ ಆಕ್ಟ್‌ 1935ರ ನಿಯಮಗಳ ಅನ್ವಯವೆ! ಈಗ ಹಲವರು ವಾದಿಸುತ್ತಿರುವಂತೆ ಬ್ರಿಟಿಷರು ಮನಸ್ಸಿಗೆ ಬಂದಂತೆ, ಒಂದಷ್ಟು ಜನರ ನಡುವೆ ನೆಹರೂ ಅವರನ್ನು ಆಯ್ಕೆ ಮಾಡಿ ಪ್ರಧಾನಿಯಾಗಿ ಪಟ್ಟ ಕಟ್ಟಿ ಹೋಗಿದ್ದಲ್ಲ. ಆಗ ಕೂಡಾ ಚುನಾವಣೆ ಎದುರಿಸಿ, ಕಾಂಗ್ರೆಸ್‌ ಪಕ್ಷ ಬಹುಮತ ಪಡೆದು, ನೆಹರೂ ಅವರು ಪ್ರಧಾನಿಯಾಗಿ ಆಯ್ಕೆಯಾಗಿದ್ದರು. ಆದರೆ ಆಗಿನ ಚುನಾವಣಾ ಪ್ರಕ್ರಿಯೆ ಈಗಿನಂತಿರಲಿಲ್ಲ ಅಷ್ಟೆ. ನಿಯಮಗಳು ಈಗ ಬದಲಾಗಿವೆಯೆಂದ ಮಾತ್ರಕ್ಕೆ, ಆಗಿನ ನಿಯಮಗಳ ಅನ್ವಯವೇ ಆಯ್ಕೆಯಾದ ವ್ಯಕ್ತಿಯ ಸ್ಥಾನವನ್ನು ನಾವು ಅಸಿಂಧುಗೊಳಿಸಲಾದೀತೆ?

ಎರಡನೇ ವಿಶ್ವಯುದ್ಧದ ನಂತರ ಆರ್ಥಿಕವಾಗಿ ಹೈರಾಣಾದ ಬ್ರಿಟಿಷರಿಗೆ ಭಾರತದಂತಹ ಬೃಹತ್‌ ರಾಷ್ಟ್ರವನ್ನು ನಿಭಾಯಿಸುವ ಚೈತನ್ಯವಾಗಲಿ, ಆಸಕ್ತಿಯಾಗಲಿ ಉಳಿದಿರಲಿಲ್ಲ. ಆದಷ್ಟು ಬೇಗ ಅಧಿಕಾರ ಹಸ್ತಾಂತರ ಮಾಡಿ ತೊಲಗಲು ಆತುರವಾಗಿದ್ದರು. ಆದರೆ ಅಧಿಕಾರ ಹಸ್ತಾಂತರ ಎಂದರೆ, ರಾತ್ರೋರಾತ್ರಿ ಸ್ವಾತಂತ್ಯ್ರ ಕೊಟ್ಟಿದ್ದೇವೆ ಎಂದು ಗಂಟುಮೂಟೆ ಕಟ್ಟಿಕೊಂಡು ಹೊರಟುಹೋಗುವುದಲ್ಲ. ಅದೊಂದು diplomatic exit. ಅದಕ್ಕಾಗಿ ಇಲ್ಲೊಂದು ಮಧ್ಯಂತರ ಸರ್ಕಾರ ರಚನೆ ಮಾಡಿ, ಅದರ ಸುಪರ್ದಿಗೆ ಅಧಿಕಾರ ಕೊಟ್ಟು ನಿರ್ಗಮಿಸುವುದು ಬ್ರಿಟಿಷರ ಉದ್ದೇಶವಾಗಿತ್ತು. ಹಾಗಾಗಿ 1946ರಲ್ಲಿ ಪ್ರಾಂತೀಯ ಚುನಾವಣೆಗಳನ್ನು ನಡೆಸುತ್ತಾರೆ.

ಆದರೆ ಆ ಚುನಾವಣಾ ಪ್ರಕ್ರಿಯೆ ಈಗಿನಂತಿರಲಿಲ್ಲ. ಗವರ್ನಮೆಂಟ್ ಆಫ್‌ ಇಂಡಿಯಾ ಆಕ್ಟ್‌ 1935ರ ಪ್ರಕಾರ ಎಲ್ಲರಿಗೂ ಮತದಾನ ಮಾಡುವ ಹಕ್ಕಿರಲಿಲ್ಲ. ಸರ್ಕಾರಕ್ಕೆ ತೆರಿಗೆ ಕಟ್ಟುವ, ಕನಿಷ್ಠ ಅರ್ಹತೆಯಷ್ಟು ಭೂ ಒಡೆತನ ಹೊಂದಿರುವ, ನಿಗದಿತ ಕನಿಷ್ಠ ಶೈಕ್ಷಣಿಕ ಅರ್ಹತೆ ಹೊಂದಿದ ಮತ್ತು ಸರ್ಕಾರಕ್ಕೆ ನೇರವಾಗಿ ತೆರಿಗೆ ಪಾವತಿಸುವವರಿಗೆ ಮಾತ್ರ ಮತಚಲಾಯಿಸುವ ಹಕ್ಕು ನೀಡಲಾಗಿತ್ತು. 1935ರಲ್ಲಿ ಈ ನಿಯಮವನ್ನು ಬ್ರಿಟಿಷರು ಜಾರಿಗೆ ತಂದಾಗ ಕಾಂಗ್ರೆಸ್‌ ಪಕ್ಷ ಒಕ್ಕೊರಲಿನಿಂದ ವಿರೋಧಿಸಿತ್ತು. ಪ್ರತಿಯೊಬ್ಬ ವಯಸ್ಕರಿಗೆ ಮತದಾನದ ಹಕ್ಕು ನೀಡದೆ, ಕೇವಲ ಮೇಲ್ವರ್ಗದ ಮತ್ತು ಬ್ರಿಟಿಷ್‌ ವಸಾಹತು ಪರ ಒಲವುಳ್ಳವರಿಗೆ ಮತದಾನದ ಹಕ್ಕು ನೀಡಿರುವ ಈ ಕಾಯ್ದೆಯನ್ನು ತಿರಸ್ಕರಿಸುವುದಾಗಿ ನೆಹರೂ ಅಧ್ಯಕ್ಷತೆಯಲ್ಲಿ ನಡೆದ ಲಖ್ನೋ ಕಾಂಗ್ರೆಸ್‌ ಅಧಿವೇಶನದಲ್ಲಿ ನಿರ್ಣಯ ಅಂಗೀಕರಿಸಲಾಗಿತ್ತು. ವೈಯಕ್ತಿಕವಾಗಿ ನೆಹರೂ ಆ ಅರೆಬರೆ ಮತದಾನದ ನೀತಿಯ ವಿರುದ್ಧವಿದ್ದರು. “ಬಲಿಷ್ಠ ಬ್ರೇಕ್‌ಗಳನ್ನು ಹೊಂದಿದ, ಆದರೆ ಎಂಜಿನ್ನೇ ಇಲ್ಲದ ಮೋಟಾರ್‍‌ ಗಾಡಿ ಇದು” ಎಂದು ಅವರು ಲೇವಡಿ ಮಾಡಿದ್ದರು. ಬಾಬಾಸಾಹೇಬ್‌ ಅಂಬೇಡ್ಕರರಂತೂ ದುಂಡುಮೇಜಿನ ಸಮ್ಮೇಳನದಲ್ಲೆ ಇಂತಹ ಪ್ರಸ್ತಾವನೆಯ ವಿರುದ್ಧ ಕಿಡಿಕಾರಿದ್ದರು. ಶಿಕ್ಷಣ, ಭೂಒಡೆತನ ಮತ್ತು ಆರ್ಥಿಕ ಸ್ವಾವಲಂಬನೆಯಿಂದ ಚಾರಿತ್ರಿಕವಾಗಿ ವಂಚನೆಗೆ ಒಳಗಾದ ದಲಿತರಿಗೆ ಬ್ರಿಟಿಷರ ಈ ನೀತಿ ಮತ್ತೊಂದು ದೊಡ್ಡ ವಂಚನೆ ಎಂದು ವಾದಿಸಿದ್ದರು.

ಆದರೂ ಬ್ರಿಟಿಷರು ಆ ಮತದಾನ ಪದ್ಧತಿಯನ್ನು ಜಾರಿಗೆ ತಂದರು. ಆಗ ಮತದಾನವನ್ನು ಬಹಿಷ್ಕರಿಸಿ ಪ್ರತಿಭಟಿಸಬೇಕೆಂದು ನೆಹರೂ ಮುಂದಾದರು. ಆದರೆ ಸರ್ದಾರ್‍‌ ವಲ್ಲಬ್‌ ಭಾಯ್‌ ಪಟೇಲ್‌ ಅದಕ್ಕೆ ಒಪ್ಪಲಿಲ್ಲ. ಒಂದುವೇಳೆ ಈಗ, ಕಾಂಗ್ರೆಸ್‌ ಚುನಾವಣೆಗಳನ್ನು ಬಹಿಷ್ಕರಿಸಿದರೆ ಮೂಲಭೂತವಾದಿ ಮತ್ತು ವಸಾಹತುಶಾಹಿ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಸಂಸತ್‌ ಪ್ರವೇಶಿಸುತ್ತಾರೆ, ಆಗ ನಾವು ನಮ್ಮ ಧ್ವನಿಯನ್ನು ಕಳೆದುಕೊಳ್ಳಬೇಕಾಗುತ್ತೆ; ಅದರ ಬದಲು, ಚುನಾವಣೆಗೆ ಸ್ಪರ್ಧಿಸಿ ಸಂಸತ್ತಿನಲ್ಲಿ ನಮ್ಮ ಧ್ವನಿ ಉಳಿಸಿಕೊಳ್ಳೋಣ, ಸಂಪೂರ್ಣ ಸ್ವಾತಂತ್ಯ್ರದ ನಂತರ ನಮ್ಮ ಇಚ್ಛೆಯಂತೆ, ಎಲ್ಲರಿಗೂ ಮತದಾನದ ಹಕ್ಕನ್ನು ಖಾತ್ರಿ ಮಾಡಿಕೊಳ್ಳೋಣ ಎಂದು ವಾದಿಸಿದರು. ಹಾಗಾಗಿ 1937 ಮತ್ತು 1946 ಪ್ರಾಂತೀಯ ಚುನಾವಣೆಗಳಲ್ಲಿ ಕಾಂಗ್ರೆಸ್‌ ಸ್ಪರ್ಧಿಸಿತು. ಬಹುಶಃ ಇದೇ ಉದ್ದೇಶದಿಂದಲೇ ಬಾಬಾ ಸಾಹೇಬರು ಕೂಡಾ, ಎಲ್ಲರಿಗೂ ಮತದಾನದ ಹಕ್ಕು ಇಲ್ಲದ ನಿಯಮವನ್ನು ವಿರೋಧಿಸಿದ್ದರೂ, ಈ ಎರಡು ಚುನಾವಣೆಗಳಲ್ಲಿ ಕ್ರಮವಾಗಿ ತಮ್ಮ ಇಂಡಿಪೆಂಡೆಂಟ್ ಲೇಬರ್ ಪಾರ್ಟಿ (ಐಎಲ್‌ಪಿ) ಹಾಗೂ ಶೆಡ್ಯೂಲ್ಡ್ ಕಾಸ್ಟ್‌ ಫೆಡರೇಷನ್‌ (ಎಸ್‌ ಸಿ ಎಫ್‌) ಮೂಲಕ ಸ್ಪರ್ಧಿಸಿದ್ದರು.

1946ರ ಪ್ರಾಂತೀಯ ಚುನಾವಣೆಯಲ್ಲಿ ಒಟ್ಟು 1585 ಸ್ಥಾನಗಳ ಪೈಕಿ 923 ಸ್ಥಾನಗಳಲ್ಲಿ (58.3%) ಗೆಲ್ಲುವ ಮೂಲಕ ಭರ್ಜರಿ ಬಹುಮತ ಪಡೆಯಿತು. ಅಲ್ಲದೇ ಹನ್ನೊಂದು ಪ್ರಾಂತ್ಯಗಳ ಪೈಕಿ ಎಂಟು ಪ್ರಾಂತ್ಯಗಳಲ್ಲಿ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡಿತು. ಅಧಿಕಾರ ಹಸ್ತಾಂತರ ಮಾಡುವ ಉದ್ದೇಶದಿಂದಲೇ ಬ್ರಿಟಿಷರು 1946ರಲ್ಲಿ ನಡೆಸಿದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಬಹುತದಿಂದ ಗೆದ್ದ ಕಾರಣಕ್ಕೆ, ಕಾಂಗ್ರೆಸ್‌ ಪಕ್ಷವನ್ನು ಮಧ್ಯಂತರ ಸರ್ಕಾರ ರಚನೆ ಮಾಡಲು ವೈಸ್‌ರಾಯ್‌ ಲಾರ್ಡ್‌ ವೆವ್ವೆಲ್ ಆಹ್ವಾನಿಸಿದರು ಮತ್ತು ಅದರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ನೆಹರೂ ಅವರು ಮಧ್ಯಂತರ ಪ್ರಧಾನಿಯಾದರು. 1947ರ ಆಗಸ್ಟ್‌ 15ರಂದು ಸ್ವಾತಂತ್ಯ್ರ ಘೋಷಣೆಯಾದಾಗ, ಬಹುಮತವಿದ್ದ ನೆಹರೂ ಮಧ್ಯಂತರ ಸರ್ಕಾರ, ಪೂರ್ಣಾವಧಿ ಸರ್ಕಾರವಾಗಿ ರೂಪಾಂತರಗೊಂಡಿತು. ಆಗಿನ ಮಧ್ಯಂತರ ಸಂಸತ್ತು, ಸಂವಿಧಾನ ರಚನಾ ಸಭೆಯಾಗಿ ಪರಿವರ್ತನೆಯಾಯಿತು.

ಅಂಗೀಕಾರವಾಗಿ ಜಾರಿಯಲ್ಲಿದ್ದ ನಿಯಮಗಳ ಪ್ರಕಾರ ನಡೆದ ಚುನಾವಣೆಯಲ್ಲಿ (ಆ ನಿಯಮಗಳನ್ನು ಕಾಂಗ್ರೆಸ್‌ ಕೂಡಾ ವಿರೋಧಿಸಿದ್ದರೂ) ಗೆದ್ದು, ಬಹುಮತದೊಂದಿಗೆ ಸರ್ಕಾರ ರಚಿಸಿ ಪ್ರಧಾನಿಯಾದ ನೆಹರೂ ಅವರ ಆ ಐದು ವರ್ಷಗಳ ಅವಧಿಯನ್ನು ಹೇಗೆ ತಾನೇ ಅಸಿಂಧುಗೊಳಿಸಿ ಲೆಕ್ಕಹಾಕುವಿರಿ?

ಎಲ್ಲವನ್ನೂ ದ್ವೇಷ ಮತ್ತು ಸೇಡಿನ ತಕ್ಕಡಿಯಲ್ಲಿಟ್ಟು ತೂಗುವ ಹಾಗೂ ನಮ್ಮ ಸ್ವಾತಂತ್ಯ್ರ ಚರಿತ್ರೆಯ ಬಗ್ಗೆ ಗೌರವಾದರಗಳು ಇಲ್ಲದವರು ಮಾತ್ರ ಹೀಗೆ ತಮ್ಮ ಹೆಚ್ಚುಗಾರಿಕೆಯನ್ನು ಸಂಭ್ರಮಿಸಲು ಕ್ಷುಲ್ಲಕ ನೆಪಗಳನ್ನು ಹುಡುಕಿ `ನೆಹರೂ ದಾಖಲೆ ಮುರಿದ’ ಆತ್ಮರತಿ ಅನುಭವಿಸಬೇಕೆ ಹೊರತು; ಅದು ಚರಿತ್ರೆಯ ವಾಸ್ತವವಾಗಿ ದಾಖಲಾಗುವುದಿಲ್ಲ. ನಾವು ಶ್ರೇಷ್ಠ ಎಂದು ಸಾರಿಕೊಳ್ಳುವ ಆತುರದ ಮನಸ್ಥಿತಿಯ ಅನಾವರಣ ಇದು! ಆ ಆತುರವು ಅವರು ನರಳುತ್ತಿರುವ ಚಾರಿತ್ರಿಕ ಕೀಳರಿಮೆಯನ್ನೂ ಅನಾವರಣಗೊಳಿಸುತ್ತಿದೆ…

ಕೊನೆಯ ಮಾತು: ನೆಹರೂ ಅವರು ಪಟೇಲರನ್ನು ವಂಚಿಸಿ, ಮಹಾತ್ಮಗಾಂಧಿಯವರ ಒತ್ತಾಸೆಯಿಂದ ಕಾಂಗ್ರೆಸ್‌ನ ಅಧ್ಯಕ್ಷರಾಗಿ, ನಂತರ ಪ್ರಧಾನಿಯಾಗಿ ಆಯ್ಕೆಯಾದರು ಎಂಬ ಅರ್ಧಸತ್ಯದಂತಹ ಸುಳ್ಳಿ ಕಥೆಯನ್ನೂ ಕೆಲವರು ಹೇಳುವುದುಂಟು. ಪಟೇಲರ ಬದಲು ನೆಹರೂ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲು ಕಾಂಗ್ರೆಸ್‌ ಬಳಿ, ಗಾಂಧಿ ಬಳಿ ಅವರದೇ ಕಾರಣಗಳಿದ್ದವು. ಆ ಕಾರಣಗಳಿಗೆ ಸ್ವತಃ ಪಟೇಲರ ಸಮ್ಮತಿ, ಸಹಕಾರಗಳೂ ಇದ್ದವು. ಗೃಹಮಂತ್ರಿಯಾಗಿ ಮುಂದೆ ನೆಹರೂ ಜೊತೆ ಪಟೇಲರು ಹೆಗಲುಕೊಟ್ಟು ದುಡಿದಿದ್ದೇ ಇದಕ್ಕೆ ಸಾಕ್ಷಿ. ಅದೇನೆ ಆಗಲಿ, ಅದು ಕಾಂಗ್ರೆಸ್‌ ಪಕ್ಷದೊಳಗಿನ ಆಂತರಿಕ ಸಂಗತಿ. 1946ರ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಬಹುಮತ ಸಿಕ್ಕಿತ್ತೇ ವಿನಾ, ಅಧ್ಯಕ್ಷ ಅಥವಾ ಪ್ರಧಾನಿ ಅಭ್ಯರ್ಥಿ ಯಾರಾಗಬೇಕು ಎಂಬುದಕ್ಕಲ್ಲ. ಹಾಗಾಗಿ ಆ ಪಕ್ಷದ ಆಂತರಿಕ ನಿರ್ಣಯವನ್ನು ಚುನಾವಣೆಯ ಫಲಿತಾಂಶದ ಜೊತೆ ಹೆಣೆದು ನೋಡಲಾಗದು. ಒಟ್ಟಾರೆ ಹೇಳುವುದಾದರೆ, 1947ರಲ್ಲಿ ಭಾರತದ ಪ್ರಥಮ ಪ್ರಧಾನಿಯಾಗಿ ಆಯ್ಕೆಯಾಗಲು ನೆಹರೂ ಅವರಿಗೆ ಅರ್ಹತೆಯಿತ್ತು, ಯೋಗ್ಯತೆಯಿತ್ತು, ನಿಯಮಗಳೂ ಜೊತೆಗೂಡಿದ್ದವು. ಹಾಗಿರುವಾಗ ಅವರ ಆ ಐದು ವರ್ಷಗಳನ್ನು ಹೊರಗಿಟ್ಟು, ತಮ್ಮ ಭುಜ ತಟ್ಟಿಕೊಳ್ಳುವುದು ಆತ್ಮರತಿಯಲ್ಲದೆ ಇನ್ನೇನು?

You cannot copy content of this page

Exit mobile version