9ನೇ ತರಗತಿಯಲ್ಲೇ ಏಕೆ?: ತೃತೀಯ ಭಾಷೆ ನೀತಿ ಕುರಿತು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆ

ದೆಹಲಿ: ಸಿಬಿಎಸ್‌ಇ ಪಠ್ಯಕ್ರಮದಲ್ಲಿ 9ನೇ ತರಗತಿಯಿಂದ ತೃತೀಯ ಭಾಷೆಯನ್ನು ಕಡ್ಡಾಯವಾಗಿ ಜಾರಿಗೆ ತರುತ್ತಿರುವ ಕೇಂದ್ರ ಸರ್ಕಾರದ ನೀತಿಯನ್ನು ಸುಪ್ರೀಂ ಕೋರ್ಟ್ ಗುರುವಾರ ಪ್ರಶ್ನಿಸಿದೆ. ಬೋರ್ಡ್ ಪರೀಕ್ಷೆಗಳ ಹೊಸ್ತಿಲಿನಲ್ಲಿರುವಾಗ ಇಂತಹ ನಿರ್ಧಾರ ಕೈಗೊಳ್ಳುವುದರಿಂದ ವಿದ್ಯಾರ್ಥಿಗಳ ಮೇಲೆ ಅನಗತ್ಯ ಶೈಕ್ಷಣಿಕ ಒತ್ತಡ ಹೆಚ್ಚಾಗುತ್ತದೆ ಎಂದು ಜಸ್ಟೀಸ್ ಬಿ.ವಿ. ನಾಗರತ್ನ ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ, ಕೇಂದ್ರ ಸರ್ಕಾರ ಜಾರಿಗೆ ತಂದಿದೆ ಎಂಬ ಒಂದೇ ಕಾರಣಕ್ಕಾಗಿ ಇಡೀ ಶಿಕ್ಷಣ ನೀತಿಯನ್ನು ವಿರೋಧಿಸಬೇಡಿ ಎಂದು ತಮಿಳುನಾಡು ಸರ್ಕಾರಕ್ಕೂ ಸುಪ್ರೀಂ ಕೋರ್ಟ್ ಕಿವಿಮಾತು ಹೇಳಿದೆ. ರಾಜ್ಯದಲ್ಲಿ ಮೂರು ಭಾಷೆಗಳ ಸೂತ್ರವನ್ನು ಅನುಸರಿಸುವ ಜವಾಹರ್ ನವೋದಯ ವಿದ್ಯಾಲಯಗಳ (JNV) ಸ್ಥಾಪನೆ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಇನ್ನೂ ಚರ್ಚೆಗಳು ನಡೆಯುತ್ತಿವೆ ಎಂದು ನ್ಯಾಯಾಲಯ ತಿಳಿಸಿದೆ.

ತಮಿಳುನಾಡಿನ ಪ್ರತಿ ಜಿಲ್ಲೆಯಲ್ಲೂ ಜವಾಹರ್ ನವೋದಯ ವಿದ್ಯಾಲಯಗಳನ್ನು ಸ್ಥಾಪಿಸಲು ಸಹಕರಿಸಬೇಕು ಎಂದು ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶವನ್ನು ಸವಾಲು ಮಾಡಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಆರ್. ಮಹದೇವನ್ ಅವರಿದ್ದ ಪೀಠವು ನಡೆಸಿತು.

ವಿಚಾರಣೆ ವೇಳೆ, ತೃತೀಯ ಭಾಷೆಯನ್ನು 9ನೇ ತರಗತಿಯಿಂದಲೇ ಏಕೆ ಕಡ್ಡಾಯಗೊಳಿಸಬೇಕು ಎಂದು ಜಸ್ಟೀಸ್ ನಾಗರತ್ನ ಪ್ರಶ್ನಿಸಿದರು. 10ನೇ ತರಗತಿಯ ಬೋರ್ಡ್ ಪರೀಕ್ಷೆಗಳಿಗೆ ಸಿದ್ಧರಾಗುತ್ತಿರುವ ವಿದ್ಯಾರ್ಥಿಗಳು ಈಗಾಗಲೇ 8ನೇ ತರಗತಿಯಿಂದಲೇ ತೀವ್ರ ಶೈಕ್ಷಣಿಕ ಒತ್ತಡವನ್ನು ಎದುರಿಸುತ್ತಿರುತ್ತಾರೆ. ಹೀಗಿರುವಾಗ 9ನೇ ತರಗತಿಯಲ್ಲಿ ಹೊಸ ಭಾಷೆಯೊಂದನ್ನು ಪರಿಚಯಿಸುವುದು ಸರಿಯಲ್ಲ ಎಂದು ಅವರು ಆಕ್ಷೇಪಿಸಿದರು.

“9ನೇ ತರಗತಿಯ ಹಂತವು ವಿದ್ಯಾರ್ಥಿಗಳಿಗೆ ಈಗಾಗಲೇ ತುಂಬಾ ಒತ್ತಡದಿಂದ ಕೂಡಿರುತ್ತದೆ. ಇಂತಹ ಸಮಯದಲ್ಲಿ ಹೊಸ ಭಾಷೆಯನ್ನು ತರುವುದು ಬೇಡ. ತೃತೀಯ ಭಾಷೆಯನ್ನು ಕಲಿಸಬೇಕಿದ್ದರೆ ಅದನ್ನು 5 ಅಥವಾ 6ನೇ ತರಗತಿಯಲ್ಲೇ ಆರಂಭಿಸಿ, 9ನೇ ತರಗತಿಯ ವೇಳೆಗೆ ಅದನ್ನು ನಿಲ್ಲಿಸಬೇಕು. ಇಂದಿನ ವಿದ್ಯಾರ್ಥಿಗಳು ಎದುರಿಸುತ್ತಿರುವ ಒತ್ತಡವನ್ನು ಗಮನಿಸಿ ನಿಮ್ಮ ಸರ್ಕಾರಕ್ಕೆ ಸೂಕ್ತ ಸಲಹೆ ನೀಡಿ” ಎಂದು ಕೇಂದ್ರ ಸರ್ಕಾರದ ಪರ ವಕೀಲರಿಗೆ ಜಸ್ಟೀಸ್ ನಾಗರತ್ನ ಸೂಚಿಸಿದರು.

ತಮಿಳುನಾಡು ಸರ್ಕಾರವು ನವೋದಯ ಶಾಲೆಗಳ ವಿಚಾರದಲ್ಲಿ ಹಠ ಹಿಡಿಯದೆ, ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಕೇಂದ್ರದೊಂದಿಗೆ ಸಕಾರಾತ್ಮಕವಾಗಿ ಚರ್ಚಿಸಬೇಕು ಎಂದು ಕೋರ್ಟ್ ತಿಳಿಸಿದ್ದು, ಮುಂದಿನ ವಿಚಾರಣೆಯನ್ನು ಆಗಸ್ಟ್ 11ಕ್ಕೆ ಮುಂದೂಡಿದೆ.

Related Articles

ಇತ್ತೀಚಿನ ಸುದ್ದಿಗಳು