Monday, June 17, 2024

ಸತ್ಯ | ನ್ಯಾಯ |ಧರ್ಮ

ಸಮಲಿಂಗಿ ವಿವಾಹಕ್ಕೆ ಕಾನೂನು ಮಾನ್ಯತೆ ಇಲ್ಲ!- ಸುಪ್ರೀಂ ಕೋರ್ಟ್‌ ತೀರ್ಪಿನಲ್ಲಿ ಏನಿದೆ?

ಬೆಂಗಳೂರು,ಅಕ್ಟೋಬರ್‌.17: ಇಂದು ಸುಪ್ರೀಂ ಕೋರ್ಟ್ ಭಾರತದಲ್ಲಿ ಕ್ವೀರ್ (ಸಮಲಿಂಗಿ) ವಿವಾಹಗಳಿಗೆ ಕಾನೂನು ಮಾನ್ಯತೆ ನೀಡಲು ನಿರಾಕರಿಸಿದೆ. ಆದಾಗ್ಯೂ, ಪೀಠದ ಎಲ್ಲಾ ನ್ಯಾಯಾಧೀಶರು ಕ್ವೀರ್  ಜೋಡಿಗಳ ಹಕ್ಕುಗಳು ಮತ್ತು ಅರ್ಹತೆಗಳನ್ನು ಪರಿಶೀಲಿಸಲು ಸಮಿತಿಯನ್ನು ರಚಿಸುವಂತೆ ಭಾರತ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಆದರೆ ಈ ಸಂಬಂಧವನ್ನು “ಮದುವೆ” ಎಂದು ಕಾನೂನು ಮಾನ್ಯತೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ

ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಹಿಮಾ ಕೊಹ್ಲಿ ಮತ್ತು ಪಿಎಸ್ ನರಸಿಂಹ ಅವರನ್ನೊಳಗೊಂಡ ಐದು ನ್ಯಾಯಾಧೀಶರ ಪೀಠವು ಏಪ್ರಿಲ್ 18, 2023 ರಂದು ಅರ್ಜಿಗಳ ವಿಚಾರಣೆಯನ್ನು ಪ್ರಾರಂಭಿಸಿತ್ತು. ಚರ್ಚೆಯ ನಂತರ, ಪೀಠವು ಮೇ 11, 2023 ರಂದು ತೀರ್ಪನ್ನು  ಕಾದಿರಿಸಿತ್ತು.

ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠವು ನಾಲ್ಕು ತೀರ್ಪುಗಳನ್ನು ಪ್ರಕಟಿಸಿತು- ಕ್ರಮವಾಗಿ ಸಿಜೆಐ ಡಿವೈ ಚಂದ್ರಚೂಡ್, ನ್ಯಾಯಮೂರ್ತಿ ಎಸ್‌ಕೆ ಕೌಲ್, ನ್ಯಾಯಮೂರ್ತಿ ರವೀಂದ್ರ ಭಟ್ ಮತ್ತು ನ್ಯಾಯಮೂರ್ತಿ ಪಿ ಎಸ್ ನರಸಿಂಹ ತೀರ್ಪನ್ನು ಬರೆದಿದ್ದಾರೆ.

ಕೆಲವು ಅಂಶಗಳಲ್ಲಿ ಈ ನ್ಯಾಯಾಧೀಶರ ನಡುವೆ ಭಿನ್ನಾಭಿಪ್ರಾಯಗಳಿವೆ.

ಕೇಸ್‌ ಮಾಹಿತಿ: Supriyo v. Union of India | Writ Petition (Civil) No. 1011 of 2022 + connected matters

ನ್ಯಾಯಾದೀಶರ ಆಭಿಪ್ರಾಯಗಳೇನು?

ಸಿಜೆಐ ಡಿವೈ ಚಂದ್ರಚೂಡ್ ಅವರು ತಮ್ಮ ತೀರ್ಪಿನಲ್ಲಿ, “ಸಾಂಸ್ಥಿಕ ಮಿತಿಗಳ” ಕಾರಣದಿಂದಾಗಿ ವಿಶೇಷ ವಿವಾಹ ಕಾಯ್ದೆಯ ನಿಬಂಧನೆಗಳನ್ನು ನ್ಯಾಯಾಲಯವು ರದ್ದುಗೊಳಿಸಲು ಅಥವಾ ರೀಡ್‌ ಮಾಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಏಕೆಂದರೆ ಅದು ಸಂಸತ್ತು ಮತ್ತು ಶಾಸಕಾಂಗದ ವ್ಯಾಪ್ತಿಗೆ ಬರುತ್ತದೆ. ಆದಾಗ್ಯೂ, ಕ್ವಿಯರ್  ಜೋಡಿಗಳ ಹಕ್ಕುಗಳು ಮತ್ತು ಅರ್ಹತೆಗಳನ್ನು ನಿರ್ಧರಿಸಲು ಕೇಂದ್ರ ಸರ್ಕಾರವು ಸಮಿತಿಯನ್ನು ರಚಿಸಬೇಕು ಎಂದು ಒಕ್ಕೂಟದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ಹೇಳಿಕೆಯನ್ನು ಮುಖ್ಯ ನ್ಯಾಯಮೂರ್ತಿ ದಾಖಲಿಸಿದ್ದಾರೆ. ತಮ್ಮ ತೀರ್ಪಿನಲ್ಲಿ, ಸಿಜೆಐ ಭಿನ್ನಲಿಂಗೀಯ ಸಂಬಂಧದಲ್ಲಿರುವ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳು (ಉದಾ.ಟ್ರಾನ್ಸ್‌ಜೆಂಡರ್‌ ಹೆಣ್ಣು- ಪುರುಷ) ವೈಯಕ್ತಿಕ ಕಾನೂನುಗಳು ಸೇರಿದಂತೆ ಅಸ್ತಿತ್ವದಲ್ಲಿರುವ ಕಾನೂನುಗಳ ಅಡಿಯಲ್ಲಿ ಮದುವೆಯಾಗುವ ಹಕ್ಕನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ. ಇದಲ್ಲದೆ, ಕ್ವೀರ್ ದಂಪತಿಗಳು ಸೇರಿದಂತೆ ಅವಿವಾಹಿತ ದಂಪತಿಗಳು ಜಂಟಿಯಾಗಿ ಮಗುವನ್ನು ದತ್ತು ಪಡೆಯಬಹುದು ಎಂದು ಅವರು ತಿಳಿಸಿದ್ದಾರೆ. ಆ ಸಂದರ್ಭದಲ್ಲಿ, ಸಿಜೆಐ ಸಿಎಆರ್‌ಎ ನಿಯಮಾವಳಿಗಳ 5(3) ನಿಬಂಧನೆಯು (Regulation 5(3) of the CARA Regulations), ಅವಿವಾಹಿತರು ಮತ್ತು LGBTQ+ ಜೋಡಿಗಳು ದತ್ತು ತೆಗೆದುಕೊಳ್ಳುವುದನ್ನು ನಿಷೇಧಿಸುವುದು, ಸಂವಿಧಾನದ 15 ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಅಭಿಪ್ರಾಯಪಟ್ಟರು. ನ್ಯಾಯಮೂರ್ತಿ ಎಸ್‌ಕೆ ಕೌಲ್ ಅವರು ಸಿಜೆಐ ಅವರ ತೀರ್ಪಿಗೆ ಸಮ್ಮತಿಸಿ, ಕ್ವೀರ್ ಸಂಬಂಧಗಳನ್ನು “ಸಂಗಾತಿಗಾಗಿ ಮತ್ತು ಪ್ರೀತಿಗಾಗಿ ಒಂದಾಗಿರುವುದು – Are to be recognised as a union to give partnership and love” ಎಂದು ಪರಿಗಣಿಸುತ್ತಾ, ವಿಶೇಷ ವಿವಾಹ ಕಾಯಿದೆಯು (Special marriage act) ಸಂವಿಧಾನದ ಆರ್ಟಿಕಲ್ 14 ಅನ್ನು ಉಲ್ಲಂಘಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಈ ಸಂಬಂಧವನ್ನು ವಿಶೇಷ ವಿವಾಹ ಕಾಯಿದೆಯ ಅಡಿಯಲ್ಲಿ ತರಲು ನ್ಯಾಯಾಲಕ್ಕೆ ಮಿತಿಗಳಿವೆ ಎಂದು ನ್ಯಾಯಮೂರ್ತಿ ಕೌಲ್ ಕೂಡ ಅಭಿಪ್ರಾಯ ತಿಳಿಸಿದ್ದಾರೆ. ಸಂಸತ್ತಿನ ಅಭಿಪ್ರಾಯವೂ ಇದೇ ಆಗಿದೆ.

ನ್ಯಾಯಮೂರ್ತಿ ಎಸ್ ರವೀಂದ್ರ ಭಟ್ ಅವರು ಸಿಜೆಐ ತೀರ್ಪನ್ನು ವಿರೋಧಿಸಿ, ವಿವಾಹದ ಕಾನೂನಾತ್ಮಕ ಅರ್ಹತೆಯು ಜಾರಿಯಲ್ಲಿ ಇರುವ ಕಾನೂನಿನ ಮೂಲಕ ಮಾತ್ರ ಸಾಧ್ಯ ಎಂದು ಹೇಳಿದ್ದಾರೆ. ಸಾಲಿಸಿಟರ್ ಜನರಲ್ ಅವರು

ನ್ಯಾಯಾಲಯಕ್ಕೆ ನೀಡಿದ ಹೇಳಿಕೆಗೆ ಅನುಗುಣವಾಗಿ, ಜಸ್ಟೀಸ್ ಭಟ್ ಕೂಡ ಒಕ್ಕೂಟವು LGBTQ+ ದಂಪತಿಗಳಿಗೆ ಹಕ್ಕುಗಳು ಮತ್ತು ಸೌಲಭ್ಯಗಳನ್ನು ಪರಿಶೀಲಿಸಲು ಉನ್ನತ ಅಧಿಕಾರದ ಸಮಿತಿಯನ್ನು ಸ್ಥಾಪಿಸಬೇಕು ಎಂದು ತೀರ್ಮಾನಿಸಿದ್ದಾರೆ. ಪ್ರಸ್ತುತ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ಗೆ ಈ ಬಗ್ಗೆ ಕಾನೂನು  ರಚಿಸುವ ಅಗತ್ಯವಿರುವುದಿಲ್ಲ ಎಂದು ಅವರು ಹೇಳಿದ್ದಾರೆ. ಕ್ವೀರ್ ಹಕ್ಕುಗಳಿಗೆ ಸಂಬಂಧಿಸಿದ ಹಿಂದಿನ ಪ್ರಕರಣಗಳಿಂದ ಪ್ರಸ್ತುತ ಪ್ರಕರಣವನ್ನು ಪ್ರತ್ಯೇಕಿಸಿದ ಅವರು, ನಾಗರಿಕರ ಹಕ್ಕನ್ನು ರಕ್ಷಿಸುವ ಸರ್ಕಾರದ ಕರ್ತವ್ಯದ ಆಧಾರದ ಮೇಲೆ ನ್ಯಾಯಾಲಯವು ಕ್ವಿಯರ್ ವ್ಯಕ್ತಿಗಳನ್ನು ಹಿಂಸಾಚಾರ ಅಥವಾ ಅಪರಾಧಿಗಳನ್ನಾಗಿ ಮಾಡುವುದರಿಂದ ರಕ್ಷಿಸಿದ ನಿದರ್ಶನಗಳಲ್ಲಿ ನ್ಯಾಯಾಲಯ ಮಧ್ಯಸ್ಥಿಕೆ ವಹಿಸಿತ್ತು ಎಂದು ಹೇಳಿದ್ದಾರೆ. ಆದರೂ, ಈ ಪ್ರಕರಣ ಆ ರೀತಿ ಇಲ್ಲ. ವಿವಾಹವು “ಸಾಮಾಜಿಕ ಸಂಸ್ಥೆ”ಯಾಗಿದೆ ಎಂದು ಅವರು ಪ್ರತಿಪಾದಿಸಿ “ಮದುವೆ ಒಂದು ಸಾಮಾಜಿಕ ಸಂಸ್ಥೆ (Social institute) ಎಂದು ಒಪ್ಪಿಕೊಂಡರೆ, ಅಂತಹ ಸಂಸ್ಥೆಯನ್ನು ರಚಿಸಲು ಬಯಸುವ ಸಮಾಜದ ಯಾವುದೇ ವರ್ಗವು ನ್ಯಾಯಾಲಯದ ಮಧ್ಯಸ್ಥಿಕೆಯಿಂದ ಪರಿಹಾರವನ್ನು ಪಡೆಯಬಹುದೇ?” ಎಂದು ಅವರು ಹೇಳಿದ್ದಾರೆ.

ಜಸ್ಟಿಸ್ ಎಸ್ ರವೀಂದ್ರ ಭಟ್ ಅವರು ಕ್ವಿರ್ ದಂಪತಿಗಳಿಗೆ ನ್ಯಾಯಾಲಯವು ಕಾನೂನನ್ನು ರಚಿಸಲು ಸಾಧ್ಯವಿಲ್ಲ ಮತ್ತು ನೀತಿಗೆ ಸಂಬಂಧಿಸಿದಂತೆ ಹಲವಾರು ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗಿರುವುದರಿಂದ ಅದನ್ನು ಶಾಸಕಾಂಗ ಮಾಡಬೇಕೆಂದು ಹೇಳಿದ್ದಾರೆ. ಆದರೂ, ಗೇ-ಲೆಸ್ಬಿಯನ್ ದಂಪತಿಗಳು ಸಂಬಂಧಗಳ ಹಕ್ಕನ್ನು ಹೊಂದಿದ್ದಾರೆ ಎಂದು ಅವರು ಪುನರುಚ್ಚರಿಸಿದರು. ನ್ಯಾಯಮೂರ್ತಿ ಭಟ್ ತಮ್ಮ ತೀರ್ಪಿನಲ್ಲಿ, “ಪ್ರತಿಯೊಬ್ಬ ಕ್ವೀಯರ್ ವ್ಯಕ್ತಿಗೂ ಸಂಗಾತಿಯನ್ನು ಆಯ್ಕೆ ಮಾಡುವ ಹಕ್ಕಿದೆ. ಆದರೆ ಅಂತಹ ಸಂಬಂಧವನ್ನು ಕಡಿದುಕೊಳ್ಳುವ ಹಕ್ಕುಗಳನ್ನು ಗುರುತಿಸುವುದಲ್ಲಿ ಸರ್ಕಾರದ ಪಾತ್ರವಿರುವುದಿಲ್ಲ. ಈ ಅಂಶದಲ್ಲಿ ನಾವು ಸಿಜೆಐ ಜೊತೆ ಭಿನ್ನಾಭಿಪ್ರಾಯ ಹೊಂದಿದ್ದೇವೆ,” ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದಲ್ಲದೆ, ವಿಶೇಷ ವಿವಾಹ ಕಾಯಿದೆಯ ಜೆಂಡರ್‌ ನ್ಯೂಟ್ರಲ್ ವ್ಯಾಖ್ಯಾನವು ಎಲ್ಲರಿಗೂ ಸಮಾನವಾಗಿರುವುದಿಲ್ಲ, ಮಹಿಳೆಯರು ಉದ್ದೇಶಪೂರ್ವಕವಲ್ಲದೆಯೂ  ದುರ್ಬಲತೆಗೆ ಒಡ್ಡಿಕೊಳ್ಳಬಹುದಾದ ಸಾಧ್ಯತೆಗಳಿವೆ ಎಂದು ಅವರು ಹೇಳಿದ್ದಾರೆ. ಕ್ವೀಯರ್ ಜೋಡಿಗೆ ಪಿಎಫ್, ಇಎಸ್‌ಐ, ಪಿಂಚಣಿ ಮುಂತಾದ ಪ್ರಯೋಜನಗಳ ನಿರಾಕರಣೆ ತಾರತಮ್ಯವಾಗಿದೆ ಎಂದು ಗುರುತಿಸಿದ ನ್ಯಾಯಮೂರ್ತಿ ಭಟ್, ಈ ಸಮಸ್ಯೆಗಳನ್ನು ಪರಿಹರಿಸುವುದು ಹಲವಾರು ಕಾನೂನುಗಳನ್ನು ಜಾರಿಗೊಳಿಸಬೇಕು ಮತ್ತು ಉನ್ನತ ಸಮಿತಿಯನ್ನು ರಚಿಸಬೇಕೆಂದು ಹೇಳಿದ್ದಾರೆ.  

ಇದಲ್ಲದೇ, ಅಸ್ತಿತ್ವದಲ್ಲಿರುವ ಕಾನೂನುಗಳ ಪ್ರಕಾರ ಮದುವೆಯಾಗಲು ತೃತೀಯಲಿಂಗಿಗಳಿಗೆ ಇರುವ ಹಕ್ಕುಗಳ ಬಗ್ಗೆ  ನ್ಯಾಯಮೂರ್ತಿ ಭಟ್ ಅವರು ಸಿಜೆಐ ಜೊತೆ ಒಪ್ಪಿಗೆ ಸೂಚಿಸಿದ್ದಾರೆ. ಅವರು ಕ್ವಿಯರ್ ದಂಪತಿಗಳ ದತ್ತು ಪಡೆಯುವ ಹಕ್ಕಿನ ಬಗ್ಗೆ ಸಿಜೆಐ ಜೊತೆಗೆ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. CARA ನಿಯಂತ್ರಣದ 5 (3) ನಿಯಮವನ್ನು ಅಸಂವಿಧಾನಿಕವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಜಸ್ಟಿಸ್ ಹಿಮಾ ಕೊಹ್ಲಿ ಅವರು ಜಸ್ಟೀಸ್ ಭಟ್ ಅವರ ಮಾತಿಗೆ ಸಹಮತ ವ್ಯಕ್ತಪಡಿಸಿದ್ದಾರೆ.

ಜಸ್ಟಿಸ್ ಭಟ್ ಅವರ ಮಾತಿಗೆ ಸಮ್ಮತಿಸಿದ ನ್ಯಾಯಮೂರ್ತಿ ಪಿ.ಎಸ್.ನರಸಿಂಹ ಅವರು ಮದುವೆಯಾಗಲು ಯಾವುದೇ ಅನರ್ಹ ಹಕ್ಕು ಇಲ್ಲ ಮತ್ತು ವಿವಾಹದ ಹಕ್ಕು ಶಾಸನಬದ್ಧ ಹಕ್ಕು, ಇಲ್ಲವೇ ಅದೊಂದು ಸಂಪ್ರದಾಯಿಕವಾಗಿ ಬಂದ ರಿವಾಜು ಎಂದು ಹೇಳಿದ್ದಾರೆ. CARA ನಿಯಮಗಳು ಮತ್ತು ಕ್ವಿರ್ ದಂಪತಿಗಳ ದತ್ತು ಪಡೆಯುವ ಹಕ್ಕಿನ ವಿಚಾರದಲ್ಲಿ ನ್ಯಾಯಮೂರ್ತಿ ಭಟ್ ಅವರ ಅಭಿಪ್ರಾಯವನ್ನು ಅವರು ಒಪ್ಪಿಕೊಂಡಿದ್ದಾರೆ. CARA ನಿಯಮಾವಳಿಗಳನ್ನು ಅಸಾಂವಿಧಾನಿಕವೆಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳಿದ್ದಾರೆ. ಪಿಂಚಣಿ, ಪಿಎಫ್, ಗ್ರಾಚ್ಯುಟಿ, ವಿಮೆ ಇತ್ಯಾದಿಗಳಿಂದ ಕ್ವೀಯರ್ ದಂಪತಿಗಳನ್ನು ಹೊರಗಿಡುವ ಶಾಸಕಾಂಗದ ಯೋಜನೆಗಳ ಪರಿಶೀಲನೆಯನ್ನು ಕೈಗೊಳ್ಳುವ ಅಗತ್ಯವಿದೆ ಎಂದು ನ್ಯಾಯಮೂರ್ತಿ ನರಸಿಂಹ ಹೇಳಿದ್ದಾರೆ.

ಈ  ತೀರ್ಪಿನ ವಿಚಾರಣೆಯ ಬ್ಯಾಚ್ ಸಲಿಂಗ ದಂಪತಿಗಳು, ಟ್ರಾನ್ಸ್ಜೆಂಡರ್ ವ್ಯಕ್ತಿಗಳು ಮತ್ತು LGBTQIA+ ಕಾರ್ಯಕರ್ತರು ಸಲ್ಲಿಸಿದ ಇಪ್ಪತ್ತು ಅರ್ಜಿಗಳಿದ್ದವು. ಈ ಅರ್ಜಿಗಳು ಸಾಮೂಹಿಕವಾಗಿ ವಿಶೇಷ ವಿವಾಹ ಕಾಯಿದೆ 1954, ಹಿಂದೂ ವಿವಾಹ ಕಾಯಿದೆ 1955, ಮತ್ತು ವಿದೇಶಿ ವಿವಾಹ ಕಾಯಿದೆ 1969 ಗಳು ಮಾಡುವ ನಿಯಂತ್ರಣಗಳನ್ನು ಪ್ರಶ್ನಿಸಿವೆ. ನಿರ್ದಿಷ್ಟವಾಗಿ, ಈ ಶಾಸನಗಳು ಸದ್ಯ ಭಿನ್ನಲಿಂಗೀಯವಲ್ಲದ ವಿವಾಹಗಳನ್ನು ಪರಿಗಣಿಸುವುದಿಲ್ಲ. ಹೀಗಾಗಿ LGBTQIA+ ಸಮುದಾಯದ ವಿರುದ್ದದ ತಾರತಮ್ಯ ಎಂದೆಂದಿಗೂ ಇರುತ್ತದೆ ಎಂದು ಅವರು ಅರ್ಜಿಯಲ್ಲಿ ಪ್ರತಿಪಾದಿಸಿದ್ದರು. ವಿಚಾರಣೆಯ ಸಂದರ್ಭದಲ್ಲಿ, ಪೀಠವು ಸವಾಲನ್ನು ವಿಶೇಷ ವಿವಾಹ ಕಾಯ್ದೆಗೆ ಮಾತ್ರ ಸೀಮಿತಗೊಳಿಸುತ್ತದೆ ಮತ್ತು ವೈಯಕ್ತಿಕ ಕಾನೂನುಗಳಿಗೂ ಇದಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ.  ಹೀಗಾಗಿ, ಹಿಂದೂ ವಿವಾಹ ಕಾಯ್ದೆಗೆ ಸಂಬಂಧಿಸಿದ ಸವಾಲನ್ನು ಸ್ವೀಕರಿಸಲಿಲ್ಲ.

ವಿಚಾರಣೆಯ ಸಂದರ್ಭದಲ್ಲಿ, ಕೇಂದ್ರ ಸರ್ಕಾರವು ಈ ಸಂಬಂಧವನ್ನು “ಮದುವೆ” ಎಂದು ಕಾನೂನಾತ್ಮಕವಾಗಿ ಮಾನ್ಯ ಮಾಡದೆ ಸಮಲಿಂಗ ಮತ್ತು ಕ್ವಿಯರ್ ದಂಪತಿಗಳಿಗೆ ಕೆಲವು ಕಾನೂನು ಹಕ್ಕುಗಳನ್ನು ನೀಡಬಹುದೇ ಎಂಬುದನ್ನು ಪರಿಶೀಲಿಸಲು ಸಮಿತಿಯನ್ನು ರಚಿಸುವ ಇಚ್ಛೆಯನ್ನು ವ್ಯಕ್ತಪಡಿಸಿದೆ. ಸಲಿಂಗ ಮತ್ತು ಕ್ವೀಯರ್ ದಂಪತಿಗಳು ಸರ್ಕಾರದ ಯೋಜನೆಗಳನ್ನು ಮತ್ತು ಸಾಮಾಜಿಕ ಭದ್ರತೆಯನ್ನು‌, ಜಂಟಿ ಬ್ಯಾಂಕ್ ಖಾತೆ, ಜೀವ ವಿಮಾ ಪಾಲಿಸಿಗಳು, ಪಿಎಫ್, ಪಿಂಚಣಿ ಇತ್ಯಾದಿಗಳಲ್ಲಿ ನಾಮಿನಿ ಹೊಂದಲು ಸಾಧ್ಯವಾಗುವಂತೆ ಕ್ರಮಗಳನ್ನು ತರಲು ಸೂಚನೆ ನೀಡಲಾಗಿದೆ.

ಹಿರಿಯ ವಕೀಲರಾದ ಮುಕುಲ್ ರೋಹಟಗಿ, ಡಾ.ಅಭಿಷೇಕ್ ಮನು ಸಿಂಘ್ವಿ, ರಾಜು ರಾಮಚಂದ್ರನ್ ಕೆ.ವಿ.ವಿಶ್ವನಾಥನ್, ಡಾ.ಮೇನಕಾ ಗುರುಸ್ವಾಮಿ, ಜಯನಾ ಕೊಠಾರಿ, ಸೌರಭ್ ಕಿರ್ಪಾಲ್, ಆನಂದ್ ಗ್ರೋವರ್, ಗೀತಾ ಲೂತ್ರಾ, ವಕೀಲರಾದ ಅರುಂಧತಿ ಕಟ್ಜು, ವೃಂದಾ ಗ್ರೋವರ್, ಕರುಣಾ ನಂದಿ ಮುಂತಾದವರು ಅರ್ಜಿ ಸಲ್ಲಿಸಿದ್ದರು. . ಕೇಂದ್ರ ಸರ್ಕಾರದ ಪರವಾಗಿಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು. ಅರ್ಜಿಗಳನ್ನು ವಿರೋಧಿಸಿ ಮಧ್ಯಪ್ರದೇಶ ರಾಜ್ಯದ ಪರ ಹಿರಿಯ ವಕೀಲ ರಾಕೇಶ್ ದ್ವಿವೇದಿ ವಾದ ಮಂಡಿಸಿದರು. ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಅರವಿಂದ್ ದಾತಾರ್ ಕೂಡ ಅರ್ಜಿಗಳನ್ನು ವಿರೋಧಿಸಿ ವಾದ ಮಂಡಿಸಿದರು.

Related Articles

ಇತ್ತೀಚಿನ ಸುದ್ದಿಗಳು