Monday, April 29, 2024

ಸತ್ಯ | ನ್ಯಾಯ |ಧರ್ಮ

ಮೊಟ್ಟ ಮೊದಲು ಮಣ್ಣು ಮುಟ್ಟಿದವಳು ಹೆಣ್ಣು

ಪುರುಷರಿಗೆ ಶೆ. 24% ರಷ್ಟು  ಭೂಮಿ ಅವರ ಹೆಸರಲ್ಲಿರುತ್ತದೆ. ಆದರೆ ಮಹಿಳೆಯರು ಕೇವಲ 4% ದಷ್ಟು ಭೂಮಿ ಹೊಂದಿದ್ದಾರೆ ಎಂದು ಮಕಾಮ್ ಅನುಭವ ಹೇಳುತ್ತದೆ. ಸಣ್ಣ ಹಿಡುವಳಿದಾರ ಮಹಿಳೆಯರನ್ನು ಸಬಲಗೊಳಿಸಿ, ಅವರನ್ನು ಸ್ವಾವಲಂಬಿಯಾಗಿಸಿ ಸುಸ್ಥಿರ ಕೃಷಿ ಮೂಲಕ ಉತ್ತಮ ಜೀವನೋಪಾಯ ಕಲ್ಪಿಸಬೇಕು ಎಂಬುದು ಮಕಾಮ್ ನ ಗುರಿಯಾಗಿದೆ. ಆ ನಿಟ್ಟಿನಲ್ಲಿ ನಾವೆಲ್ಲರು ಕೂಡಾ ಮಹಿಳಾ ರೈತರ ಕುರಿತು ಯೋಚಿಸುವುದು ತುಂಬಾ ಅಗತ್ಯವಾಗಿದೆ – ಶಂಕರ್‌ ಡಿ ಸುರಳ್‌, ಸಾಮಾಜಿಕ ಕಾರ್ಯಕರ್ತರು.

ಭಾರತದ ಕೃಷಿ ಬೆಳವಣಿಗೆಯಲ್ಲಿ ನಮ್ಮ  ಹಳ್ಳಿ ಜನರು ಬಹಳ ಮುಖ್ಯ  ಪಾತ್ರವಹಿಸಿದ್ದಾರೆ. ಇದಕ್ಕೆ ಮೂಲ ಕಾರಣವೆ ನಮ್ಮ ದೇಶದ ರೈತರು. ಅದರಲ್ಲೂ ಹೆಚ್ಚು ಶ್ರಮವಿರುವುದು ಮಹಿಳೆಯರದ್ದು. ಆದರೆ ಪುರುಷ ಪ್ರಧಾನ ಸಮಾಜ ವ್ಯವಸ್ಥೆಯಲ್ಲಿ ಮಹಿಳೆಯರ ಶ್ರಮವನ್ನು ಮರೆಮಾಚಲಾಗಿದೆ. ಹಾಗಂತ ಪುರುಷರ ಶ್ರಮ ಇಲ್ಲ ಎಂದು ಹೇಳುತ್ತಿಲ್ಲ. ಆದರೆ ಪುರುಷರಷ್ಟೆ ಮಹಿಳೆಯರು ಕೂಡ ಕತ್ತೆ ತರಹ ದುಡಿಯುತ್ತಿದ್ದಾರೆ. ಆದರೆ ನಾವು ರೈತರು ಎಂದು ಹೇಳುವಾಗ ಅವರಲ್ಲಿ ಮಹಿಳೆಯರು ಕೂಡ ಇದ್ದಾರೆ ಎನ್ನುವುದನ್ನು ಗಮನಿಸುವುದೆ ಇಲ್ಲ. ಮುಂದುವರೆದು ಹೇಳುವುದಾದರೆ ಬಿತ್ತನೆ ಮಾಡುವ ಬೀಜದಿಂದ ಹಿಡಿದು ಮತ್ತೆ ಬೆಳೆ ಬಂದು ಫಸಲು ತೆಗೆಯುವವರೆಗೂ  ಮಹಿಳೆಯರ ಶ್ರಮವಿದೆ.  ಪುರುಷರು ಹೆಚ್ಚಾಗಿ ಬೀಜ ತರುವುದು, ಗೊಬ್ಬರ ಮತ್ತು ಹೊರಗಿನ ವ್ಯವಹಾರ ಮಾಡುವುದು ಬಿಟ್ಟರೆ ಉಳಿದ ಕೆಲಸಗಳಿಗೆ  ಮಹಿಳೆಯರೇ ಕೃಷಿಗೆ ಬೆನ್ನೆಲುಬು ಆಗಿದ್ದಾರೆ.

ಬೀಜ ಹೇಗೆ ಮಣ್ಣಲ್ಲಿ ಇಟ್ಟರೆ ಬೇಗ ಮೊಳಕೆ ಬರುತ್ತದೆ ಎಂದು ಮಹಿಳೆಯರಿಗೆ ಗೊತ್ತೇ  ಹೊರತು ಪುರುಷರಿಗೆ ಗೊತ್ತಿಲ್ಲ.  ಬೀಜದ ಮೂಗನ್ನು ಮುಂದೆ ಮಾಡಿ ಬೀಜ ಇಟ್ಟರೆ ಬೇಗ ಮೊಳಕೆ ಬರುತ್ತದೆ ಎಂದು ಹೆಣ್ಣುಮಕ್ಕಳು ಹೇಳುತ್ತಿರುತ್ತಾರೆ. ಬಿತ್ತಿದ ನಂತರ ಕಳೆ ತೆಗೆಯುವುದು, ನೀರು ಹರಿಸುವುದು, ಕೊಯ್ಯುವುದು, ತೆನೆ ಮುರಿಯುವುದು, ಗೊಬ್ಬರ ಹಾಕುವುದು ಅಷ್ಟೆ ಅಲ್ಲದೆ ಪುರುಷರ ಜೊತೆಗೆ ಸರಿಸಮಾನವಾಗಿ ಎಡೆಕುಂಟೆ ಹೊಡೆಯುವುದು ಕೂಡಾ ಅವರೇ ಮಾಡುತ್ತಾರೆ. ಪೌಷ್ಟಿಕ ಆಹಾರ ಬೆಳೆಗಳನ್ನು ಬೆಳೆಯಲು ಮಹಿಳೆಯರೇ ಹೆಚ್ಚು ಪ್ರೋತ್ಸಾಹ ನೀಡುತ್ತಾರೆ. ಯಾಕೆಂದರೆ ಅಡುಗೆಯಲ್ಲಿ ಮುಖ್ಯವಾಗಿ ಬೇಕಾದ ಎಳ್ಳು ಗುರೆಳ್ಳು, ಅಗಸೆ, ಪುಂಡೆ,  ತೊಗರಿ, ಹೆಸರು, ಮಡಿಕೆ, ಅಲಸಂದಿ, ಅವರೆ ಕಾಳು ಮುಂತಾದ ದ್ವಿದಳ ಧಾನ್ಯಗಳ ಅವಶ್ಯಕತೆ ಅವರಿಗೆ ತಾನೇ ಗೊತ್ತು. ಇವುಗಳ ಬಿತ್ತನೆಗೆ ಉತ್ತರ ಕರ್ನಾಟಕ ಭಾಗದಲ್ಲಿ ಅಕ್ಕಡಿ ಎಂದು ಕರೆಯುತ್ತಾರೆ. ಮಿಶ್ರ ಬೆಳೆಯಾಗಿ ಸಿರಿಧಾನ್ಯವನ್ನು ಬೆಳೆಯಲು ಹೆಣ್ಣುಮಕ್ಕಳು ಒತ್ತಾಯ ಮಾಡುತ್ತಾರೆ. ಹಿಡಿಯಾಕಿ ಪಡಿ ಬೆಳೆಯಬಹುದೆಂಬ ಗಾದೆ ಮಾತು ಇದೆ. ಒಂದು ಕೈಯಲ್ಲಿ ಒಂದು ಹಿಡಿ ಎಲ್ಲಾ ತರಹದ ದ್ವಿದಳ ಧಾನ್ಯಗಳ ಬೀಜಗಳನ್ನು ಬೆರಸಿ ಮಿಶ್ರಣ ಮಾಡಿ ಅಕ್ಕಡಿ ಎಂದು ಹಾಕುತ್ತಾರೆ. ಕೆಲವು ಬಾರಿ ಬಿತ್ತನೆ ಮಾಡುವ ಸಂದರ್ಭದಲ್ಲಿ ಗಂಡಸರಿಗೆ ತಿಳಿ ಹೇಳುತ್ತಾರೆ. ಅಡುಗೆ ಮಾಡುವವರು ನಾವು, ನಮ್ಮ ಕಷ್ಟ ನಮಗೆ, ಬೆಳಿಗ್ಗೆಯಾದ ತಕ್ಷಣ ಪಲ್ಯ ಜೋಡಿಸಬೇಕೆಂದರೆ ಕಾಳುಗಳು ಬೇಕು. ಹಾಗಾಗಿ ಧಾನ್ಯಗಳನ್ನು ಬಿತ್ತಲೇ ಬೇಕೆನ್ನುವುದು ಮಹಿಳೆಯರ ಹಠ. ಅವರ ವಿಚಾರ ಮತ್ತು ಶ್ರಮ ನಮ್ಮ ಜೀವನದ ನಾಡಿ ಮಿಡಿತವಾಗಿದೆ ಎಂದೂ ಹೇಳಬಹುದು. ಆದರೆ ಇಷ್ಟು ಶ್ರಮವಹಿಸಿದರೂ ಮಹಿಳಾ ರೈತರು ಎಂದು ಹೇಳಿಕೊಳ್ಳುವ ಅವಕಾಶ ಮತ್ತು ಹಕ್ಕುಗಳನ್ನು ಯಾರೂ  ನೀಡಿರುವುದಿಲ್ಲ.  ಕಾರಣ ಪುರುಷಾಧಿಪತ್ಯ ಆಳ್ವಿಕೆ.

ನಾವು  ಅಕ್ಟೋಬರ್ 15 ರಂದು ಮಹಿಳಾ ರೈತರ ದಿನವೆಂದು ಆಚರಿಸಬೇಕು. ಮಕಾಮ್ ಮಹಿಳಾ ಕಿಸಾನ್ ಅಧಿಕಾರ ಮಂಚ್ ಸಂಸ್ಥೆಯು ಮಹಿಳಾರೈತರ  ಹಕ್ಕುಗಳನ್ನು ಎತ್ತಿ ಹಿಡಿಯುವುದರ ಜೊತೆಗೆ ಅವರು ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳುವಲ್ಲಿ ಬೆಂಬಲಿಸುತ್ತಿದೆ. ಪುರುಷರಿಗೆ ಶೆ. 24% ರಷ್ಟು  ಭೂಮಿ ಅವರ ಹೆಸರಲ್ಲಿರುತ್ತದೆ. ಆದರೆ ಮಹಿಳೆಯರು ಕೇವಲ 4% ದಷ್ಟು ಭೂಮಿ ಹೊಂದಿದ್ದಾರೆ ಎಂದು ಮಕಾಮ್ ಅನುಭವ ಹೇಳುತ್ತದೆ. ಸಣ್ಣ ಹಿಡುವಳಿದಾರ ಮಹಿಳೆಯರನ್ನು ಸಬಲಗೊಳಿಸಿ ಸ್ವಾವಲಂಬಿಯಾಗಿಸಿ ಸುಸ್ಥಿರ ಕೃಷಿ ಮೂಲಕ ಉತ್ತಮ ಜೀವನೋಪಾಯ ಕಲ್ಪಿಸಬೇಕು ಎಂಬುದು ಮಕಾಮ್ ನ ಗುರಿಯಾಗಿದೆ. ಆ ನಿಟ್ಟಿನಲ್ಲಿ ನಾವೆಲ್ಲರು ಕೂಡಾ ಮಹಿಳಾ ರೈತರ ಕುರಿತು ಯೋಚಿಸುವುದು ತುಂಬಾ ಅಗತ್ಯವಾಗಿದೆ.

ಮಹಿಳಾ ರೈತರು ನಮ್ಮ ದೇಶದ ಶ್ರಮ ಜೀವಿಗಳು. ಇವರನ್ನು ಯಾರು ಕೂಡಾ ಗುರುತಿಸುವುದಿಲ್ಲ. ಅವರನ್ನು ಯಾರು ಕೂಡ ಬೆಂಬಲಿಸುವುದಿಲ್ಲ‌.  ಕೃಷಿ ಕ್ಷೇತ್ರದಲ್ಲಿ ಎಲ್ಲೊ ಒಬ್ಬರೋ ಇಬ್ಬರೋ  ಹೆಣ್ಣುಮಕ್ಕಳಿಗೆ ಅಪರೂಪದ ಒಂದು ಅಭಿನಂದನೆ ಸಲ್ಲಿಸಿರಬಹುದು. ಆದರೆ ತಳಮಟ್ಟದಲ್ಲಿ  ಯೋಚಿಸಿದಾಗ ತಮ್ಮ ಬದುಕಿನ ಜೊತೆಗೆ ಸೆಣಸಾಟ ನಡೆಸುತ್ತಾ  ಭೂಮಿಗಾಗಿ ದುಡಿಯುವಂತಹ ಮಹಿಳೆಯರಿಗೆ ಅವಕಾಶಗಳನ್ನು ನೀಡುವುದರ ಮೂಲಕ ನಾವು  ಅವರನ್ನು ಎಷ್ಟು ಮುಂಚೂಣಿಗೆ ತರುತ್ತಿದ್ದೇವೆ? ಅವರು ಜೀವನದಲ್ಲಿ ಸೋತಾಗ ಎಷ್ಟರ ಮಟ್ಟಿಗೆ ಬೆನ್ನಿಗೆ ನಿಂತಿದ್ದೇವೆ? ಎಂದು ನಮ್ಮೊಳಗೆ ನಾವು ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ. ಮುಂದಿನ ದಿನಗಳಲ್ಲಾದರು ಮಹಿಳಾ ರೈತರ ಹಿತ ದೃಷ್ಟಿಗೆ ಸರಕಾರ ಗಮನಹರಿಸಿ  ಹೊಸ ಯೋಜನೆ ರೂಪಿಸಲೆಂದು ನಮ್ಮ ಆಶಯವಾಗಿದೆ.

ಶಂಕರ್.ಡಿ.ಸುರಳ್, ಕೊಪ್ಪಳ

ಸಾಮಾಜಿಕ ಕಾರ್ಯಕರ್ತರು

ಇದನ್ನೂ ಓದಿಸುಳ್ಳು ಸುದ್ದಿಗಳ ಮಹಾಸಾಗರ

Related Articles

ಇತ್ತೀಚಿನ ಸುದ್ದಿಗಳು