Home ದೇಶ ಮೊಹಮ್ಮದ್ ದೀಪಕ್ ಪಾಲಿಗೆ ದೊಡ್ಡ ರಿಲೀಫ್ ಕೊಟ್ಟ ಸುಪ್ರೀಂ ಕೋರ್ಟ್: ಎಫ್‌ಐಆರ್ ತನಿಖಾ ಪ್ರಕ್ರಿಯೆಗೆ ಮಧ್ಯಂತರ...

ಮೊಹಮ್ಮದ್ ದೀಪಕ್ ಪಾಲಿಗೆ ದೊಡ್ಡ ರಿಲೀಫ್ ಕೊಟ್ಟ ಸುಪ್ರೀಂ ಕೋರ್ಟ್: ಎಫ್‌ಐಆರ್ ತನಿಖಾ ಪ್ರಕ್ರಿಯೆಗೆ ಮಧ್ಯಂತರ ತಡೆ

0

ಡೆಹ್ರಾಡೂನ್: ಉತ್ತರಾಖಂಡದಲ್ಲಿ ಮುಸ್ಲಿಂ ಅಂಗಡಿಯೊಬ್ಬರ ಪರ ನಿಂತು ಬಜರಂಗದಳದ ಕಾರ್ಯಕರ್ತರನ್ನು ಎದುರಿಸಿ ಸಾಮಾಜಿಕ ಜಾಲತಾಣಗಳಲ್ಲಿ ‘ಮೊಹಮ್ಮದ್ ದೀಪಕ್’ ಎಂದೇ ಖ್ಯಾತಿ ಗಳಿಸಿದ್ದ ಜಿಮ್ ಮಾಲೀಕ ದೀಪಕ್ ಕುಮಾರ್‌ಗೆ ಸುಪ್ರೀಂ ಕೋರ್ಟ್‌ನಿಂದ ಮಹತ್ವದ ಕಾನೂನು ರಿಲೀಫ್ ದೊರೆತಿದೆ. ಅವರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಮತ್ತು ಅದರ ಮುಂದಿನ ಎಲ್ಲಾ ವಿಚಾರಣಾ ಪ್ರಕ್ರಿಯೆಗಳಿಗೆ ನ್ಯಾಯಾಲಯ ತಡೆ ನೀಡಿದೆ.

ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠವು, ತಮ್ಮ ವಿರುದ್ಧದ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ದೀಪಕ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ನೋಟಿಸ್ ಜಾರಿ ಮಾಡಿದೆ ಹಾಗೂ ಮುಂದಿನ ಪ್ರಕ್ರಿಯೆಗಳಿಗೆ ತಡೆ ನೀಡಿದೆ. ಇದರೊಂದಿಗೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದು ಅಥವಾ ಸಾರ್ವಜನಿಕ ಹೇಳಿಕೆ ನೀಡುವುದನ್ನು ನಿರ್ಬಂಧಿಸಿದ್ದ ಉತ್ತರಾಖಂಡ ಹೈಕೋರ್ಟ್‌ನ ಆದೇಶಕ್ಕೂ ಸುಪ್ರೀಂ ಕೋರ್ಟ್ ತಡೆ ನೀಡಿದೆ.

ಅಂಗಡಿಯ ಹೆಸರಿನಲ್ಲಿ ‘ಬಾಬಾ’ ಎಂಬ ಪದವನ್ನು ಬಳಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಜರಂಗದಳ ಕಾರ್ಯಕರ್ತರನ್ನು ದೀಪಕ್ ಎದುರಿಸಿದ್ದರು. ಆ ವೇಳೆ ಅವರು “ನನ್ನ ಹೆಸರು ಮೊಹಮ್ಮದ್ ದೀಪಕ್” ಎಂದು ಉತ್ತರಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.

ದೀಪಕ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಘಟನೆಗೆ ಸಂಬಂಧಿಸಿದಂತೆ ದೀಪಕ್ ಅವರೇ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ; ಬದಲಾಗಿ ಅವರ ಮೇಲೆಯೇ ಎಫ್‌ಐಆರ್ ದಾಖಲಿಸಲಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಈ ಹಿಂದೆ ಹೈಕೋರ್ಟ್ ಎಫ್‌ಐಆರ್ ರದ್ದುಪಡಿಸಲು ನಿರಾಕರಿಸಿ, ತನಿಖೆಗೆ ಸಹಕರಿಸುವಂತೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೆ ನೀಡದಂತೆ ದೀಪಕ್‌ಗೆ ನಿರ್ಬಂಧ ವಿಧಿಸಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

You cannot copy content of this page

Exit mobile version