Home ಇನ್ನಷ್ಟು ಕೋರ್ಟು - ಕಾನೂನು ಐದು ವರ್ಷಗಳಿಂದ ವಿಚಾರಣೆ ಇಲ್ಲದೆ ಜೈಲಿನಲ್ಲಿಟ್ಟಿದ್ದೀರಿ: ಉಮರ್ ಖಾಲಿದ್ ಜಾಮೀನು ಅರ್ಜಿ ವಿಚಾರಣೆ ವೇಳೆ ದೆಹಲಿ...

ಐದು ವರ್ಷಗಳಿಂದ ವಿಚಾರಣೆ ಇಲ್ಲದೆ ಜೈಲಿನಲ್ಲಿಟ್ಟಿದ್ದೀರಿ: ಉಮರ್ ಖಾಲಿದ್ ಜಾಮೀನು ಅರ್ಜಿ ವಿಚಾರಣೆ ವೇಳೆ ದೆಹಲಿ ಪೊಲೀಸರಿಗೆ ಸುಪ್ರೀಂ ಛೀಮಾರಿ

0

ದೆಹಲಿ: 2020ರ ಈಶಾನ್ಯ ದೆಹಲಿ ಗಲಭೆಗಳಿಗೆ ಸಂಬಂಧಿಸಿದ ಯುಎಪಿಎ (UAPA) ಪ್ರಕರಣದಲ್ಲಿ ಆರೋಪಿಗಳು ಸುಮಾರು ಐದು ವರ್ಷಗಳಿಂದ ವಿಚಾರಣೆ ಇಲ್ಲದೆ ಜೈಲಿನಲ್ಲಿ ಇದ್ದಾರೆ ಎಂಬುದನ್ನು ಸುಪ್ರೀಂ ಕೋರ್ಟ್ ಎತ್ತಿ ತೋರಿಸಿದೆ.

ಇನ್ನು ಹೆಚ್ಚಿನ ವಿಳಂಬ ಮಾಡಬಾರದು, ಜಾಮೀನು ಪರಿಶೀಲನೆಯ ಕುರಿತು ಏನಾದರೂ ಮಾಡಲು ಸಾಧ್ಯವೇ ಅಥವಾ ಇಲ್ಲವೇ ಎಂಬುದನ್ನು ತಿಳಿಸುವಂತೆ ಸುಪ್ರೀಂ ಪೀಠವು ದೆಹಲಿ ಪೊಲೀಸರಿಗೆ ಸೂಚಿಸಿದೆ. ಸಾಮಾಜಿಕ ಕಾರ್ಯಕರ್ತರಾದ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್, ಗುಲ್ಫಿಷಾ ಫಾತಿಮಾ, ಮೀರಾನ್ ಹೈದರ್ ಮತ್ತು ಇತರ ಇಬ್ಬರು ಸಲ್ಲಿಸಿದ್ದ ಜಾಮೀನು ಅರ್ಜಿಗಳಿಗೆ ಉತ್ತರ ನೀಡಲು ವಿಫಲರಾದ ದೆಹಲಿ ಪೊಲೀಸರಿಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ.

ದೆಹಲಿ ಹೈಕೋರ್ಟ್‌ನ ಜಾಮೀನು ನಿರಾಕರಣೆಯ ತೀರ್ಪನ್ನು ಪ್ರಶ್ನಿಸಿ ಆರು ಮಂದಿ ಸಲ್ಲಿಸಿದ ಜಾಮೀನು ಅರ್ಜಿಗಳ ವಿಚಾರಣೆಯನ್ನು ಸೋಮವಾರ ನ್ಯಾಯಮೂರ್ತಿಗಳಾದ ಜಸ್ಟಿಸ್ ಅರವಿಂದ್ ಕುಮಾರ್ ಮತ್ತು ಜಸ್ಟಿಸ್ ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಪೀಠ ನಡೆಸಿತು. ಈ ಅರ್ಜಿಗಳಿಗೆ ಉತ್ತರ ನೀಡಲು ದೆಹಲಿ ಪೊಲೀಸರಿಗೆ ಸಾಕಷ್ಟು ಸಮಯವನ್ನು ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರೂ, ಅವರು ಉತ್ತರವನ್ನು ಸಲ್ಲಿಸಿಲ್ಲ ಎಂದು ಪೀಠ ತಿಳಿಸಿತು.

ದೆಹಲಿ ಪೊಲೀಸರ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಎಸ್.ವಿ. ರಾಜು ಅವರು ಉತ್ತರ ಸಲ್ಲಿಸಲು ಎರಡು ವಾರಗಳ ಸಮಯವನ್ನು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠವು, “ನಾವು ಸ್ಪಷ್ಟಪಡಿಸಿದ್ದೇವೆ. ನೀವು (ಎಎಸ್‌ಜಿ) ಮೊದಲ ಬಾರಿಗೆ ಹಾಜರಾಗಿದ್ದರೂ ಸಹ, ನಾವು ಸಾಕಷ್ಟು ಸಮಯವನ್ನು ನೀಡಿದ್ದೇವೆ” ಎಂದು ಹೇಳಿತು. ಹಾಗಾಗಿ ಮಂಗಳವಾರ ಅಥವಾ ಬುಧವಾರದೊಳಗೆ ವಾದಿಸುವಂತೆ ಎಎಸ್‌ಜಿ ಅವರಿಗೆ ಪೀಠ ಸೂಚಿಸಿತು. ಆದರೆ, ಅವರು ಈ ಅರ್ಜಿಗಳಿಗೆ ಉತ್ತರಗಳನ್ನು ಸಲ್ಲಿಸಲು ಹೆಚ್ಚಿನ ಸಮಯ ಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠವು, “ಬೇಡ, ಬೇಡ, ಕೌಂಟರ್ ಜೊತೆ ಗುರುವಾರ ವಾದಿಸಿ. ಅರ್ಜಿದಾರರ ಪರ ವಕೀಲರಾದ ಕಪಿಲ್ ಸಿಬಲ್ ಅವರು ದೀಪಾವಳಿಗೆ ಮೊದಲೇ ವಿಚಾರಣೆ ನಡೆಸಲು ಕೋರಿದ್ದರು, ಆದರೆ ನಾವೇ ಬೇಡವೆಂದಿದ್ದೆವು,” ಎಂದು ತಿಳಿಸಿತು. ಕೊನೆಗೆ, ಈ ಅರ್ಜಿಗಳ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಲಾಯಿತು.

You cannot copy content of this page

Exit mobile version