ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರಿಗೆ ಸುಪ್ರೀಂ ಕೋರ್ಟಿನಲ್ಲಿ ತೀವ್ರ ಮುಖಭಂಗವಾಗಿದೆ. 10ಕ್ಕೂ ಹೆಚ್ಚು ಮಸೂದೆಗಳನ್ನು ತನ್ನ ಬಳಿ ಇರಿಸಿಕೊಂಡಿರುವುದು ದೊಡ್ಡ ತಪ್ಪು ಎಂದು ಕೋರ್ಟ್ ಹೇಳಿದೆ. ಇದನ್ನು ಕಾನೂನು ಬಾಹಿರ ಎಂದು ಕರೆದಿರುವ ನ್ಯಾಯಾಲಯ ರಾಜ್ಯಪಾಲರಿಗೆ ಛೀಮಾರಿ ಹಾಕಿದೆ.
ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ಅವರ ಪೀಠವು, ಮಸೂದೆಗಳನ್ನು ಕಾಯ್ದಿರಿಸಿದ ದಿನಾಂಕದಿಂದ ಅಂಗೀಕರಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿತು. ಇದರೊಂದಿಗೆ, ಸ್ಟಾಲಿನ್ ಸರ್ಕಾರವು ರಾಜ್ಯಪಾಲರ ವಿರುದ್ಧ ದೊಡ್ಡ ಜಯ ಸಾಧಿಸಿದೆ.
ಈ ಹಿಂದೆ ಸ್ಟಾಲಿನ್ ಸರ್ಕಾರ ಕಳುಹಿಸಿದ್ದ 10 ಪ್ರಮುಖ ಮಸೂದೆಗಳ ಅಂಗೀಕಾರಕ್ಕೆ ರಾಜ್ಯಪಾಲ ಆರ್.ಎನ್.ರವಿ ತಡೆ ಹಾಕಿದ್ದರು. ಈ ಕ್ರಮವನ್ನು ಸ್ಟಾಲಿನ್ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಇತ್ತೀಚೆಗೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ರಾಜ್ಯಪಾಲರ ನಡವಳಿಕೆಯನ್ನು ತೀವ್ರವಾಗಿ ಟೀಕಿಸಿತು.
ರಾಜ್ಯಪಾಲರ ಕ್ರಮ ಕಾನೂನುಬಾಹಿರ ಮತ್ತು ಏಕಪಕ್ಷೀಯ ಎಂದು ಪೀಠ ತೀರ್ಪು ನೀಡಿದೆ. ರಾಜ್ಯಪಾಲರ ಕ್ರಮಗಳನ್ನು ರದ್ದುಗೊಳಿಸಲಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ.
ರಾಜ್ಯಪಾಲರು 10 ಬಿಲ್‌ಗಳನ್ನು ಕಾಯ್ದಿರಿಸಲು ರಾಷ್ಟ್ರಪತಿಗಳಿಗೆ ಸೂಚಿಸಿದ್ದರು. ಇದರಿಂದಾಗಿ ತಾನು ಮಂಡಿಸಿದ ಮಸೂದೆಗಳನ್ನು ಜಾರಿಗೆ ತರಲಾಗದೆ ಸ್ಟಾಲಿನ್ ಸರಕಾರ ಇಕ್ಕಟ್ಟಿಗೆ ಸಿಲುಕಿತ್ತು.
ಈ ಹಿನ್ನೆಲೆಯಲ್ಲಿ ಕೋರ್ಟ್ ಮೆಟ್ಟಿಲು ಹತ್ತಿದ ಸರ್ಕಾರಕ್ಕೆ ಕೋರ್ಟಿನ ತೀರ್ಪು ದೊಡ್ಡ ಮಟ್ಟದ ಗೆಲುವನ್ನು ತಂದುಕೊಟ್ಟಿದೆ.