ದೆಹಲಿ: ಅಧಿಕಾರದಲ್ಲಿರುವ ಅಥವಾ ಪ್ರಭಾವಿ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಲು ಹಿಂಜರಿಯುವ ತನಿಖಾ ಸಂಸ್ಥೆಗಳು, ಸಾಮಾನ್ಯ ಜನರ ವಿಷಯ ಬಂದಾಗ ಮಾತ್ರ ಅತಿಯಾದ ಆಕ್ರಮಣಶೀಲತೆ ಪ್ರದರ್ಶಿಸುತ್ತವೆ ಎಂದು ಸುಪ್ರೀಂ ಕೋರ್ಟ್ ಗಂಭೀರ ಅಸಮಾಧಾನ ವ್ಯಕ್ತಪಡಿಸಿದೆ.
ಭೂಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಆಪ್ತ ಸಹಾಯಕ ಸುಮಿತ್ ರಾಯ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ತ್ರಿಸದಸ್ಯ ಪೀಠವು ಈ ಮಹತ್ವದ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ. ಈ ಹಿಂದೆ ರಾಯ್ ಅವರ ಬಂಧನಕ್ಕೆ ತಡೆ ನೀಡಿದ್ದ ನ್ಯಾಯಾಲಯ, ಪ್ರಸ್ತುತ ನಡೆಯುತ್ತಿರುವ ತನಿಖೆಗೆ ಸಂಪೂರ್ಣ ಸಹಕಾರ ನೀಡುವಂತೆ ಸೂಚಿಸಿತ್ತು.
ವಿಚಾರಣೆ ವೇಳೆ ಸುಮಿತ್ ರಾಯ್ ಪರ ವಾದ ಮಂಡಿಸಿದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್, ಜಾರಿ ನಿರ್ದೇಶನಾಲಯವು (ಇಡಿ) ರಾಯ್ ಅವರ ಕುಟುಂಬ ಮತ್ತು ರಾಜಕೀಯ ಪಕ್ಷದ ಚಟುವಟಿಕೆಗಳ ಬಗ್ಗೆ ಮಾತ್ರವೇ ವಿಚಾರಣೆ ನಡೆಸುತ್ತಿದೆ ಹೊರತು, ಅವರ ಮೇಲೆ ಹೊರಿಸಲಾದ ಆರೋಪಗಳ ಕುರಿತಲ್ಲ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ರಾಯ್ ಅವರನ್ನು ವಿಚಾರಣೆ ನಡೆಸಲಾಗಿದ್ದು, ಅಭಿಷೇಕ್ ಬ್ಯಾನರ್ಜಿ ಅವರಿಗೆ ಸಂಬಂಧಿಸಿದ ‘ಲೀಪ್ಸ್ ಆಂಡ್ ಬೌಂಡ್ಸ್’ ಕಂಪನಿಗೆ ರಾಯ್ ₹30 ಕೋಟಿ ವರ್ಗಾಯಿಸಿದ್ದಾರೆ ಎಂದು ವಾದಿಸಿದರು.
ತನಿಖೆಯಲ್ಲಿ ವ್ಯಕ್ತಿಯ ಅಧಿಕಾರ ಅಥವಾ ಸ್ಥಾನಮಾನ ಮುಖ್ಯವಾಗದೆ, ಪ್ರಕ್ರಿಯೆಯು ನ್ಯಾಯಸಮ್ಮತ ಮತ್ತು ನಿಷ್ಪಕ್ಷಪಾತವಾಗಿರಬೇಕು ಎಂದು ಒತ್ತಿಹೇಳಿದ ನ್ಯಾಯಾಲಯ, ಸುಮಿತ್ ರಾಯ್ ಅವರ ವಿಚಾರಣೆಯ ಸಂಪೂರ್ಣ ಆಡಿಯೋ ಮತ್ತು ವಿಡಿಯೋ ರೆಕಾರ್ಡಿಂಗ್‌ಗಳನ್ನು ಸಲ್ಲಿಸುವಂತೆ ಇಡಿಗೆ ನಿರ್ದೇಶನ ನೀಡಿತು. ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 7ಕ್ಕೆ ಮುಂದೂಡಲಾಗಿದೆ.
