Home ಇನ್ನಷ್ಟು ಕೋರ್ಟು - ಕಾನೂನು ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಸಿಂಧುತ್ವದ ಕುರಿತು ಇಂದು ಸುಪ್ರೀಂಕೋರ್ಟ್ ತೀರ್ಪು

ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಸಿಂಧುತ್ವದ ಕುರಿತು ಇಂದು ಸುಪ್ರೀಂಕೋರ್ಟ್ ತೀರ್ಪು

0

ದೆಹಲಿ: ವಿವಿಧ ರಾಜ್ಯಗಳಲ್ಲಿ ಚುನಾವಣಾ ಆಯೋಗವು (EC) ಹಮ್ಮಿಕೊಂಡಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಸಾಂವಿಧಾನಿಕ ಸಿಂಧುತ್ವವನ್ನು ಸವಾಲು ಮಾಡಿ ಸಲ್ಲಿಕೆಯಾಗಿರುವ ಅರ್ಜಿಗಳ ಕುರಿತು ಸುಪ್ರೀಂಕೋರ್ಟ್ ಬುಧವಾರದಂದು (ಮೇ 27) ತನ್ನ ಬಹುಮುಖ್ಯ ತೀರ್ಪನ್ನು ಪ್ರಕಟಿಸಲಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ ಮತ್ತು ವಿ.ಎಂ. ಪಂಚೋಲಿ ಅವರನ್ನೊಳಗೊಂಡ ಪೀಠವು ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿ ಕಳೆದ ಜನವರಿ 29 ರಂದೇ ತನ್ನ ತೀರ್ಪನ್ನು ಕಾಯ್ದಿರಿಸಿತ್ತು.

ಸಂವಿಧಾನದ ವಿಧಿ 326, ಜನಪ್ರತಿನಿಧಿ ಕಾಯ್ದೆ 1950 ಮತ್ತು ಅದಕ್ಕೆ ಸಂಬಂಧಿಸಿದ ನಿಯಮಾವಳಿಗಳ ಅಡಿಯಲ್ಲಿ ಚುನಾವಣಾ ಆಯೋಗಕ್ಕೆ ಪ್ರಸ್ತುತ ರೂಪದಲ್ಲಿ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ನಡೆಸಲು ಕಾನೂನಾತ್ಮಕ ಅಧಿಕಾರವಿದೆಯೇ ಇಲ್ಲವೇ ಎಂಬುದನ್ನು ಅತ್ಯುನ್ನತ ನ್ಯಾಯಾಲಯವು ಇಂದು ನಿರ್ಧರಿಸಲಿದೆ.

ಬಿಹಾರ ಸೇರಿದಂತೆ ಹಲವು ರಾಜ್ಯಗಳಲ್ಲಿ ವಿಶೇಷ ತೀವ್ರ ಪರಿಷ್ಕರಣೆ ನಡೆಸಲು ಚುನಾವಣಾ ಆಯೋಗವು ಜೂನ್ 2025 ರಲ್ಲಿ ಮಹತ್ವದ ನಿರ್ಧಾರ ಕೈಗೊಂಡಿತ್ತು. ಆಯೋಗದ ಈ ಕ್ರಮವನ್ನು ವಿರೋಧಿಸಿ ಕಳೆದ ವರ್ಷ ಜೂನ್ ತಿಂಗಳಲ್ಲೇ ಸುಪ್ರೀಂಕೋರ್ಟ್‌ಗೆ ಅರ್ಜಿಗಳ ಮಹಾಪೂರವೇ ಹರಿದುಬಂದಿತ್ತು.

ಇಡೀ ಪ್ರಕ್ರಿಯೆಯು ಭಾರತೀಯ ಸಂವಿಧಾನದ ವಿಧಿ 14, 19, 21, 325, 326 ರ ಉಲ್ಲಂಘನೆಯಾಗಿದೆ ಹಾಗೂ ಜನಪ್ರತಿನಿಧಿ ಕಾಯ್ದೆ 1950 ಮತ್ತು ಮತದಾರರ ನೊಂದಣಿ ನಿಯಮಗಳು 1960 ರ ನಿಬಂಧನೆಗಳಿಗೆ ಸಂಪೂರ್ಣ ವಿರುದ್ಧವಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು. ವಿಷಯದ ಗಾಂಭೀರ್ಯತೆಯನ್ನು ಪರಿಗಣಿಸಿ ನ್ಯಾಯಾಲಯವು ನಂತರದ ದಿನಗಳಲ್ಲಿ ದೇಶದ ಎಲ್ಲಾ ರಾಜಕೀಯ ಪಕ್ಷಗಳನ್ನೂ ಈ ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿ ಸೇರಿಸಿತ್ತು.

ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR), ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (PUCL) ನಂತಹ ಪ್ರಮುಖ ಸರ್ಕಾರೇತರ ಸಂಸ್ಥೆಗಳು (NGO), ರಾಜಕೀಯ ಹೋರಾಟಗಾರ ಯೋಗೇಂದ್ರ ಯಾದವ್, ಸಂಸದರಾದ ಮಹುವಾ ಮೊಯಿತ್ರಾ, ಮನೋಜ್ ಝಾ, ಕೆ.ಸಿ. ವೇಣುಗೋಪಾಲ್, ಸುಪ್ರಿಯಾ ಸುಳೆ, ಮುಜಾಹಿದ್ ಆಲಂ ಹಾಗೂ ನ್ಯಾಷನಲ್ ಫೆಡರೇಶನ್ ಫಾರ್ ಇಂಡಿಯನ್ ವುಮೆನ್ (NFIW) ಸೇರಿದಂತೆ ಹಲವು ಪ್ರಮುಖರು ಈ ಸಾಂವಿಧಾನಿಕ ಹೋರಾಟದ ಅರ್ಜಿದಾರರಾಗಿದ್ದಾರೆ.

You cannot copy content of this page

Exit mobile version