Friday, April 26, 2024

ಸತ್ಯ | ನ್ಯಾಯ |ಧರ್ಮ

ಸುರತ್ಕಲ್‌ ಟೋಲ್ಗೇಟ್‌ ಅವಶೇಷ ತೆರವು: ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಹರ್ಷ

suratkal toll gate removed: ಸತತ ಏಳು ವರ್ಷಗಳ ಹೋರಾಟದ ಫಲವಾಗಿ ವರ್ಷದ ಹಿಂದೆ ಟೋಲ್ ಸಂಗ್ರಹ ಸ್ಥಗಿತ ಗೊಂಡಿದ್ದ ಸುರತ್ಕಲ್ ಟೋಲ್ ಪ್ಲಾಜ಼ಾದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿದ್ದ ನಿರುಪಯೋಗಿ ಟೋಲ್ ಬೂತ್ ಗಳ ಸಹಿತ ಟೋಲ್ ಗೇಟ್ ಅವಶೇಷಗಳನ್ನು ಜನಾಗ್ರಹಕ್ಕೆ ಮಣಿದು ಹೆದ್ದಾರಿ ಪ್ರಾಧಿಕಾರ ಕೊನೆಗೂ ತೆರವು ಕಾರ್ಯಾಚರಣೆ ಆರಂಭಿಸಿದೆ. ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಈ ಕುರಿತು ಹರ್ಷ ವ್ಯಕ್ತ ಪಡಿಸಿದ್ದು, ಜನತೆಯ ಒಗ್ಗಟ್ಟಿನ ಹೋರಾಟದ ಮುಂದೆ ಯಾವುದೂ ಅಸಾಧ್ಯವಲ್ಲ, ಅವಶೇಷಗಳ ತೆರವು ಮೂಲಕ ಸುರತ್ಕಲ್ ಟೋಲ್ ಗೇಟ್ ತೆರವು ಹೋರಾಟ ಪೂರ್ಣಗೊಂಡಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಸುರತ್ಕಲ್ ಟೋಲ್ ಗೇಟ್ ತೆರವುಗೊಂಡಿರುವುದು “ಹೋರಾಟ ಸಮಿತಿ” ನೇತೃತ್ವದಲ್ಲಿ ಸಮಾನ ಮನಸ್ಕ ಸಂಘಟನೆಗಳು, ನಾಗರಿಕರು ಸತತ ಏಳುವರ್ಷಗಳ ಕಾಲ ಸತತವಾಗಿ ನಡೆಸಿದ ಹೋರಾಟದ ಫಲ. ಟೋಲ್ ಸಂಗ್ರಹ ಸ್ಥಗಿತಗೊಂಡು ವರ್ಷ ದಾಟಿದರೂ ಟೋಲ್ ಗೇಟ್ ತೆರವುಗೊಳಿಸದೆ ಅಪಾಯಕಾರಿ ಸ್ಥಿತಿಯಲ್ಲಿ ಉಳಿಸಿದ್ದು ಹಲವು ಅನುಮಾನಗಳಿಗೆ, ಅಸಮಾಧನಗಳಿಗೆ ಕಾರಣವಾಗಿತ್ತು. ಟೋಲ್ ಸಂಗ್ರಹ ಮತ್ತೆ ಪುನರಾರಂಭಗೊಳ್ಳುವ ವದಂತಿಗಳು ಹರಡಿದ್ದವು. ಈ ಹಿನ್ನಲೆಯಲ್ಲಿ ಹೋರಾಟ ಸಮಿತಿಯು ಟೋಲ್ ಸಂಗ್ರಹ ಸ್ಥಗಿತಗೊಂಡ ಪ್ರಥಮ ವಾರ್ಷಿಕ ದಿನದಂದು ಟೋಲ್ ಗೇಟ್ ಮುಂಭಾಗ ಸಂಭ್ರಮಾಚರಣೆ ಸಭೆ ಹಮ್ಮಿಕೊಂಡು ನಿರುಪಯೋಗಿ ಟೋಲ್ ಗೇಟ್ ಅವಶೇಷ ತೆರವುಗೊಳಿಸಲು ಬಲವಾಗಿ ಆಗ್ರಹಿಸಿತ್ತು. ಅಂತಿಮವಾಗಿ ಈಗ ಸುರತ್ಕಲ್ ಟೋಲ್ ಗೇಟ್ ಅವಶೇಷ ತೆರವುಗೊಳ್ಳುತ್ತಿದ್ದು, ಕರಾವಳಿ ಕರ್ನಾಟಕದ ಅಪೂರ್ವ ಹೋರಾಟವೊಂದು ಈ ಮೂಲಕ ಯಶಸ್ವಿಯಾಗಿ ಸಮಾರೋಪಗೊಂಡಂತಾಗಿದೆ ಎಂದು ಹೋರಾಟ ಸಮಿತಿ ತಿಳಿಸಿದೆ. ಹೋರಾಟದ ಕೊನೆಯವರೆಗೂ ಕೈಜೋಡಿಸಿದ ಸಮಾನ ಮನಸ್ಕ ಸಂಘಟನೆಗಳು, ನಾಗರಿಕರಿಗೆ ಧನ್ಯವಾದ ಸಲ್ಲಿಸಿದೆ.

ಅದೇ ಸಂದರ್ಭ, ಸುರತ್ಕಲ್ ನಂತೂರು ಹೆದ್ದಾರಿ ಸಮಸ್ಯೆಗಳು, ಮುಖ್ಯವಾಗಿ ಹೆದ್ದಾರಿಗುಂಡಿಗಳನ್ನು ಪೂರ್ತಿ ಮುಚ್ಚುವುದು, ಸರ್ವಿಸ್ ರಸ್ತೆ, ಚರಂಡಿಗಳನ್ನು ನಿರ್ಮಿಸಿ ರಸ್ತೆಯನ್ನು ಸುಸಜ್ಜಿತಗೊಳಿಸುವುದು, ನಂತೂರು, ಕೆಪಿಟಿ ಮೇಲ್ಸೇತುವೆ, ಕೂಳೂರು ಸೇತುವೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವ ಬೇಡಿಕೆ ಈಡೇರಿಕೆಗಾಗಿ ಹೋರಾಟ ಮುಂದುವರಿಸುವುದಾಗಿ ಹೋರಾಟ ಸಮಿತಿ ತಿಳಿಸಿದೆ.

ಹಾಗೆಯೆ, ನಂತೂರು, ಮೂಡಬಿದ್ರೆ ನಡುವೆ, ಬಿಸಿ ರೋಡ್, ಗುಂಡ್ಯ ನಡುವೆ, ಬಿಸಿ ರೋಡ್, ಚಾರ್ಮಾಡಿ ನಡುವೆ, ಮಾಣಿ, ಸಂಪಾಜೆ ನಡುವೆ ಒಟ್ಟು ಏಳು ಟೋಲ್ ಗೇಟ್ ಗಳು ನಿರ್ಮಾಣಗೊಳ್ಳುವ ಪ್ರಸ್ಥಾಪ ಕರಾವಳಿಯ ನಾಗರಿಕರಲ್ಲಿ ಭೀತಿಗೆ ಕಾರಣವಾಗಿದೆ. ಈ ಕುರಿತು ಜಿಲ್ಲೆಯ ಸಂಸದರು, ಶಾಸಕರು ಮಧ್ಯ ಪ್ರವೇಶಿಸಬೇಕು, ಟೋಲ್ ಗೇಟ್ ಗಳನ್ನು ಕನಿಷ್ಟ ಮಟ್ಟಕ್ಕಿಳಿಸುವ ಮೂಲಕ ತಮ್ಮ ಕರ್ತವ್ಯ ನಿರ್ವಹಿಸಬೇಕು, ಹಾಗೆಯೆ ಜನತೆ ಈ ಕುರಿತು ಈಗಲೇ ಧ್ವನಿ ಎತ್ತಬೇಕು ಎಂದು ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಪ್ರಕಟಣೆಯಲ್ಲಿ ತಿಳಿಸಿದ್ಧಾರೆ.

Related Articles

ಇತ್ತೀಚಿನ ಸುದ್ದಿಗಳು