ಅಕ್ಟೋಬರ್ 18 ರ ಟೋಲ್ ಗೇಟ್ ಮುತ್ತಿಗೆ ಹೋರಾಟಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಡಳಿತದ ಪರವಾಗಿ ಇಂದು ಪಣಂಬೂರು ಪೊಲೀಸ್ ಉಪ ಆಯುಕ್ತ (ACP) ಕಚೇರಿಯಲ್ಲಿ ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್ ಅಧ್ಯಕ್ಷತೆಯಲ್ಲಿ ಸಭೆಯನ್ನು ಆಯೋಜಿಸಲಾಗಿತ್ತು.
ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಲಭ್ಯ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ACP ಮಹೇಶ್ ಕುಮಾರ್, ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಲಿಂಗೇಗೌಡ ಸಭೆಯಲ್ಲಿ ಉಪಸ್ಥಿತರಿದ್ದರು.
ಜಿಲ್ಲಾಡಳಿತದ ವಿವರಣೆ
ಸುರತ್ಕಲ್ ಟೋಲ್ ಗೇಟ್ ತೆರವು ಪ್ರಕ್ರಿಯೆಯ ಆಡಳಿತಾತ್ಮಕ ಕೆಲಸಗಳು ನಡೆಯುತ್ತಿದೆ. ತೆರುವುಗೊಳಿಸಲು ತೀರ್ಮಾನ ಆಗಿದೆ. ಇನ್ನು ಕೆಲವು ದಿನಗಳಲ್ಲಿ ತೆರವು ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಅಲ್ಲಿಯವರಗೆ ಹೋರಾಟ ಕೈ ಬಿಡುವಂತೆ ಹೋರಾಟ ಸಮಿತಿಯನ್ನು ವಿನಂತಿಸಲಾಯಿತು. ಟೋಲ್ ತೆರವಿನ ನಿರ್ಧಿಷ್ಟ ದಿನಾಂಕವನ್ನು ಪ್ರಕಟಿಸದೆ ಎಂದಿನಂತೆ ಕೆಲವೇ ದಿನಗಳಲ್ಲಿ ತೆರವು ಎಂಬ ಬಾಯಿ ಮಾತಿನ ಭರವಸೆ ಮಾತ್ರ ನೀಡಿದ್ದಾರೆ ಎಂದು ಹೋರಾಟ ಸಮಿತಿ ಹೇಳಿದೆ.
ಹೋರಾಟ ಸಮಿತಿ ವ್ಯಕ್ತಪಡಿಸಿದ ನಿಲುವು
ಕಳೆದ ಆರು ವರ್ಷಗಳಲ್ಲಿ ಈ ರೀತಿಯ ಟೋಲ್ ಗೇಟ್ ತೆರವಿನ ಹಲವು ಭರವಸೆಗಳನ್ನು ನೀಡಲಾಗಿದೆ. ಕಳೆದ ಆರು ತಿಂಗಳಿನಲ್ಲಿ ಸರಕಾರದ ಹಲವು ವೇದಿಕೆ, ವಿಧಾನ ಸಭೆಯಲ್ಲಿಯೂ ತಿಂಗಳೊಳಗೆ ಟೋಲ್ ಗೇಟ್ ತೆರವು ಎಂಬ ಹೇಳಿಕೆಗಳು ಹೊರಬಿದ್ದಿವೆ. ಆದರೆ ಆ ಹೇಳಿಕೆಗಳು ಜಾರಿಗೆ ಬಂದಿಲ್ಲ. ಈಗಲೂ ಭರವಸೆ ಜಾರಿಗೆ ಬರುತ್ತದೆ ಎಂಬ ವಿಶ್ವಾಸ ಜನತೆಗೆ ಇಲ್ಲ.
ಆದುದರಿಂದ ಟೋಲ್ ಸಂಗ್ರಹ ಸ್ಥಗಿತಗೊಳ್ಳದೆ ಹೋರಾಟ ಹಿಂಪಡೆಯಲು ಸಾಧ್ಯವಿಲ್ಲ. ಎರಡೂ ಜಿಲ್ಲೆಗಳ ನೂರಾರು ಸಂಘಟನೆಗಳು ಅಕ್ಟೋಬರ್ 18 ರ ಮುತ್ತಿಗೆ ತೀರ್ಮಾನವನ್ನು ಬೆಂಬಲಿಸಿವೆ. ಭಾಗಿಗಳಾಗಿವೆ. ಟೋಲ್ ಸಂಗ್ರಹ ಸ್ಥಗಿತಗೊಳ್ಳದೆ, ಭರವಸೆಯ ಆಧಾರದಲ್ಲಿ ಹೋರಾಟ ಮುಂದೂಡಲು ಅವರು ಯಾರ ಸಮ್ಮತಿಯೂ ಇಲ್ಲ. ಹೋರಾಟವನ್ನು ಒಕ್ಕೊರಲಿನಿಂದ ಬೆಂಬಲಿಸುತ್ತಿರುವ ಜನತೆಯೂ ಇದನ್ನು ಒಪ್ಪವುದಿಲ್ಲ ಎಂದು ಹೇಳಿದರು.

ಟೋಲ್ ಸಂಗ್ರಹ ತಕ್ಷಣ ಕೈಬಿಡಿ
ಟೋಲ್ ಸಂಗ್ರಹವನ್ನು ತಕ್ಷಣ ಕೈ ಬಿಡಬೇಕು. ಸರಕಾರದ ಹೇಳಿಕೆಯ ಪ್ರಕಾರ ಇನ್ನು ಕೆಲವೇ ದಿನದಲ್ಲಿ ತೆರವಿಗೆ ಬೇಕಾದ ಪ್ರಕ್ರಿಯೆ ಪೂರ್ಣಗೊಳ್ಳುವುದಾದರೆ, ತೀರ್ಮಾನ ಜಾರಿಯಾಗುವುದಾದರೆ ಅಲ್ಲಿಯವರಗಿನ ಒಂದಿಷ್ಟು ದಿನಗಳ ಟೋಲ್ ಸಂಗ್ರಹವನ್ನು ಬಿಟ್ಟುಕೊಟ್ಟರೆ ದೊಡ್ಡ ನಷ್ಟವೇನೂ ಆಗುವುದಿಲ್ಲ. ಏಳು ವರ್ಷಗಳ ಕಾಲ ಸತತವಾಗಿ ನೂರಾರು ಕೋಟಿ ರೂಪಾಯಿ ಸುರತ್ಕಲ್ ಟೋಲ್ ಗೇಟ್ ನಲ್ಲಿ ಈಗಾಗಲೆ ಸಂಗ್ರಹಿಸಲಾಗಿದೆ. ಆದುದರಿಂದ ಜನರ ಆಕ್ರೋಶ, ಆಗ್ರಹವನ್ನು ಮನ್ನಿಸಿ ಟೋಲ್ ಸಂಗ್ರಹವನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಬೇಕು. ಅಕ್ಟೋಬರ್ 18 ರ ಟೋಲ್ ಗೇಟ್ ಮುತ್ತಿಗೆ ಪ್ರತಿಭಟನೆಯನ್ನು ಶಾಂತಿಯುತವಾಗಿ ನಡೆಸಲಿದ್ದೇವೆ. ಟೋಲ್ ಸಂಗ್ರಹ ಸ್ಥಗಿತಗೊಂಡಿರುವುದು ಖಾತರಿಗೊಳ್ಳುವವರಗೆ ಮುತ್ತಿಗೆ ಮುಂದುವರಿಯಲಿದೆ ಎಂದು ತಿಳಿಸಲಾಯಿತು. ಮೂವತ್ತುಕ್ಕೂ ಹೆಚ್ಚು ಮುಖಂಡರು ಹೋರಾಟ ಸಮಿತಿಯನ್ನು ಪ್ರತಿನಿಧಿಸಿ ಸಭೆಯಲ್ಲಿ ಭಾಗಿಗಳಾಗಿದ್ದರು.
ಜಿಲ್ಲಾಧಿಕಾರಿಗೆ ಇಂದಿನ ಸಭೆಯಲ್ಲಿ ಹೋರಾಟ ಸಮಿತಿ ವ್ಯಕ್ತಪಡಿಸಿದ ಅಭಿಪ್ರಾಯವನ್ನು ತಲುಪಿಸಲಾಗುವುದು ಎಂದು ಹೇಳಿ ಸಭೆಯನ್ನು ಮುಕ್ತಾಯಗೊಳಿಸಿದರು.
ಅಕ್ಟೋಬರ್ 18 ರ ಟೋಲ್ ಗೇಟ್ ಮುತ್ತಿಗೆ ತೀರ್ಮಾನದಂತೆ ಶಾಂತಿಯುತವಾಗಿ ನಡೆಯಲಿದೆ. ಯಾವುದೇ ವದಂತಿಗಳಿಗೆ ಕಿವಿಗೊಡದೆ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಅಂದು ಬೆಳಿಗ್ಗೆ 9:30 ಕ್ಕೆ ಸುರತ್ಕಲ್ ಟೋಲ್ ಗೇಟ್ ಮುಂಭಾಗ ಸೇರಬೇಕು. ಯಾವುದೇ ಕಾರಣಕ್ಕೂ ಪ್ರಚೋದನೆಗೆ ಒಳಗಾಗದೆ ಟೋಲ್ ತೆರವು ಹೋರಾಟದ ಯಶಸ್ಸಿಗೆ ಕೈ ಜೋಡಿಸಬೇಕು ಎಂದು ಮನವಿ ಮಾಡುತ್ತಿದ್ದೇವೆ. ಟೋಲ್ ಗೇಟ್ ನಲ್ಲಿ ಸುಂಕ ಸಂಗ್ರಹ ಸ್ಥಗಿತಗೊಳ್ಳದೆ ಈ ಬಾರಿಯ ಹೋರಾಟ ಮುಗಿಯುವುದಿಲ್ಲ ಎಂದು ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕರಾದ ಮುನೀರ್ ಕಾಟಿಪಳ್ಳ ಅವರು ಹೇಳಿದರು.