ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಸುರೇಶ್‌ಗೌಡ ಅವರು ಈ ಹಿಂದೆ ಆರ್‌ಎಸ್‌ಎಸ್ ಟೀಕಿಸಿ, ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಹೊಗಳಿ ಮಾತನಾಡಿದ್ದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಲವು ಕಾಂಗ್ರೆಸ್ ನಾಯಕರು ಈ ವಿಡಿಯೋವನ್ನು ಪೋಸ್ಟ್ ಮಾಡುವ ಮೂಲಕ ಆರ್‌ಎಸ್‌ಎಸ್ ಕಾರ್ಯವೈಖರಿಯನ್ನು ಟೀಕಿಸಿದ್ದಾರೆ.
ಚಿತ್ತಾಪುರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥಸಂಚಲನ ವಿವಾದ ಭುಗಿಲೆದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಈ ವಿಡಿಯೋವನ್ನೇ ಬಿಜೆಪಿ ವಿರುದ್ಧ ಅಸ್ತ್ರವನ್ನಾಗಿ ಬಳಸುತ್ತಿದೆ. ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಇಬ್ಬರೂ ಎಕ್ಸ್‌ನಲ್ಲಿ ವಿಡಿಯೊ ಹಂಚಿಕೊಂಡು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಬಿಕೆ ಹರಿಪ್ರಸಾದ್ ತಮ್ಮ ಎಕ್ಸ್ ಖಾತೆಯಲ್ಲಿ ಆರ್‌ಎಸ್‌ಎಸ್ ಈ ದೇಶ, ಸಮಾಜ, ಸಂವಿಧಾನಕ್ಕೆ ಮಾತ್ರ ಮಾರಕವಲ್ಲ. ಸ್ವತಃ ಬಿಜೆಪಿ ನಾಯಕರಿಗೂ ಮಾರಕವಾಗಿದೆ..! ಈ ಸತ್ಯವನ್ನು ಹೇಳಿದ್ದು ಬಿಜೆಪಿಯವರೇ ಹೊರತು ನಾವಲ್ಲ. ಆರ್‌ಎಸ್‌ಎಸ್‌ನವರು ಕಡುಭ್ರಷ್ಟರು ಎಂಬ ಸತ್ಯವನ್ನು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸುರೇಶ್ ಗೌಡರೇ ಹೇಳಿದ್ದಾರೆ. ಇದಕ್ಕೆ ಉತ್ತರ ಹೇಳುವ ಧೈರ್ಯ ಬಿಜೆಪಿ ನಾಯಕರಾದ ಬಿ.ವೈ.ವಿಜಯೇಂದ್ರ, ಆರ್.ಅಶೋಕ್ ಅವರಿಗಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಆರ್‌ಎಸ್‌ಎಸ್ ಸರ್ವಾಧಿಕಾರಿತನಕ್ಕೆ ಬಿಜೆಪಿಯ ಬಲಿಷ್ಠ ನಾಯಕರೂ ಬಲಿಯಾಗಿ ಬಿಲ ಸೇರಿದ್ದಾರೆ. ಆರ್‌ಎಸ್‌ಎಸ್ ಎಂಬ ವಿಷಜಂತು ಬಿಜೆಪಿಯವರನ್ನೂ ಸುಟ್ಟು ಬೂದಿ ಮಾಡಿದೆ. ಈಗ ಬಿಜೆಪಿಯವರು ಸ್ಪರ್ಧೆಗೆ ಬಿದ್ದವರಂತೆ ಆರ್‌ಎಸ್‌ಎಸ್ ಪರ ಸಮರ್ಥನೆಗೆ ಇಳಿದು ನಮ್ಮನ್ನು ನಿಂದಿಸುತ್ತಿದ್ದಾರೆ. ಬಿಜೆಪಿಯವರ ಈ ಸಮರ್ಥನಾ ಅಭಿಯಾನ ನಡೆಯುತ್ತಿರುವುದು ಆರ್‌ಎಸ್‌ಎಸ್ ಮೇಲಿನ ಭಕ್ತಿಯಿಂದಲ್ಲ, ಭಯದಿಂದ..! ಆರ್‌ಎಸ್‌ಎಸ್‌ನ ಕಾಲಾಳುಗಳಂತೆ ವರ್ತಿಸದಿದ್ದರೆ ಬಿಜೆಪಿಯವರಿಗೆ ಭವಿಷ್ಯವೂ ಇಲ್ಲ, ಬದುಕೂ ಇಲ್ಲ ಎಂದು ಹರಿಪ್ರಸಾದ್ ಹೇಳಿದ್ದಾರೆ.
ರಾಜ್ಯದಲ್ಲಿ ಆರ್‌ಎಸ್‌ಎಸ್ ಅತ್ಯಂತ ಭ್ರಷ್ಟ ಮತ್ತು ಶಕ್ತಿಶಾಲಿ. ಆರ್‌ಎಸ್‌ಎಸ್ ಫಲಾನುಭವಿಗಳ ಪಟ್ಟಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಳಿ ಇದೆ. ಅವರು ಅಧಿಕಾರ ಉಳಿಸಿಕೊಳ್ಳಲು ಆರ್‌ಎಸ್‌ಎಸ್‌ಗೆ ಹಣ ನೀಡಿದ್ದರು. ಆರ್‌ಎಸ್‌ಎಸ್ ಪತ್ರಿಕೆಗಳಿಗೆ ಯಡಿಯೂರಪ್ಪನವರು ಹಣ ನೀಡುವ ಮೂಲಕ ಲಾಭ ಮಾಡಿಕೊಟ್ಟಿದ್ದಾರೆ. ಹಿಂದುಳಿದ ತಾಲೂಕುಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಉದ್ದೇಶಿಸಲಾದ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ 100 ಕೋಟಿ ರೂ.ಗಿಂತ ಹೆಚ್ಚು ಹಣವನ್ನು ಈ ಸೋಕಾಲ್ಡ್ “ಎನ್‌ಜಿಒ” ಲೂಟಿ ಮಾಡಿದೆ ಎಂಬ ಸ್ಪೋಟಕ ವಿಷಯವನ್ನು ತನಿಖೆಗಳು ಬಹಿರಂಗಪಡಿಸಿವೆ ಎಂದು ಕಿಡಿಕಾರಿದ್ದಾರೆ.