ಅಯೋಧ್ಯಾ: ರಾಮ ಜನ್ಮಭೂಮಿ ದೇಗುಲ ಉದ್ಘಾಟನೆಯಾಗಿ ಒಂದು ವರ್ಷವೂ ಆಗಿಲ್ಲ, ಗರ್ಭಗುಡಿಯಲ್ಲಿ ನೀರು ಸೋರಿಕೆಯ ವರದಿಗಳು ಈಗಾಗಲೇ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ. ಮೊದಲ ಮಳೆಯಲ್ಲೇ ದೇಗುಲದ ಮೇಲ್ಛಾವಣಿ ಸೋರಲಾರಂಭಿಸಿದೆ ಎಂದು ಮಹಾದೇವಾಲಯದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಹೇಳಿದ್ದಾರೆ. ಇದು ರಾಮಮಂದಿರ ನಿರ್ಮಾಣದ ಬಗ್ಗೆ ಆತಂಕ ಮೂಡಿಸಿದೆ.
ರಾಮ ಮಂದಿರದ ನಿರ್ಮಾಣ ಕಾಮಗಾರಿಯ ಕುರಿತು ಮಾತನಾಡುವಾಗ, ಮುಖ್ಯ ಅರ್ಚಕರು ಜುಲೈ 2025 ರೊಳಗೆ ನಿರ್ಮಾಣವನ್ನು ಪೂರ್ಣಗೊಳಿಸುವುದು ಅಸಾಧ್ಯವೆಂದು ಹೇಳಿದರು. ಆದರೆ ಅದನ್ನು ತರಾತುರಿಯಲ್ಲಿ ಮುಗಿಸಿದ ಪರಿಣಾಮ ರಾಮಮಂದಿರದ ಮೇಲ್ಚಾವಣಿ ಸೋರುತ್ತಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಕ್ರಮ ಮತ್ತು ತನಿಖೆಗೆ ಒತ್ತಾಯಿಸಿದ ಮುಖ್ಯ ಅರ್ಚಕರು, ರಾಮಮಂದಿರ ನಿರ್ಮಾಣ ಕಾಮಗಾರಿ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
“ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆ ನಂತರದ ಮೊದಲ ಮಳೆಗೇ ನೀರು ಸೋರಿಕೆಯಾಗಲು ಪ್ರಾರಂಭಿಸಿದೆ. ಹಾಗಾಗೇ ರಾಮಮಂದಿರ ನಿರ್ಮಿಸಲಾದ ರಚನೆಯತ್ತ ಗಮನ ಹರಿಸುವುದು ಮುಖ್ಯ. ಜೊತೆಗೇ ಅವುಗಳನ್ನು ಕೆಲವೇ ದಿನಗಳಲ್ಲಿ ಪರಿಹರಿಸಬೇಕು. ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸದಿದ್ದರೆ ಮಳೆ ತೀವ್ರಗೊಂಡರೆ ಪ್ರಾರ್ಥನೆ ಸಲ್ಲಿಸಲು ಕಷ್ಟವಾಗುತ್ತದೆ” ಎಂದು ಪ್ರಧಾನ ಅರ್ಚಕರು ಹೇಳಿದರು.
ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಮಾತನಾಡಿ, ನಿರ್ಮಿಸಿದ ರಾಮ ಮಂದಿರದಲ್ಲಿ ನೀರು ಹರಿದು ಹೋಗಲು ಯಾವುದೇ ಮಾರ್ಗವಿಲ್ಲ, ಮೇಲಿಂದ ನೀರು ಸೋರಿಕೆಯಾದ ನಂತರ ಅದು ವಿಗ್ರಹವಿರುವ ಸ್ಥಳದಲ್ಲಿ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತಿದೆ. ಇದು ತೀವ್ರವಾದರೆ ಪೂಜೆ ಮತ್ತು ಪ್ರಾರ್ಥನೆಗೂ ತೊಡಕುಂಟಾಗಲಿಗೆ ಎಂದು ಹೇಳಿದ್ದಾರೆ.