ಶಿವಮೊಗ್ಗದ ಸಾಗರ ತಾಲ್ಲೂಕಿನಲ್ಲಿರುವ ವನಶ್ರೀ ವಸತಿ ಶಾಲೆಯಲ್ಲಿ 13 ವರ್ಷದ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಸಾವಿನ ಹಿನ್ನೆಲೆಯಲ್ಲಿ ಶಾಲೆಯ ಆಡಳಿತ ಮಂಡಳಿ ಹಾಗೂ ಶಾಲಾ ಮುಖ್ಯಸ್ಥನ ನಡೆಯ ಬಗ್ಗೆ ಆರೋಪ ಹಾಗೂ ಅನುಮಾನ ವ್ಯಕ್ತವಾಗಿದೆ.
ಘಟನೆಯ ವಿವರ : ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಶಿವಪುರ ವಾಸಿ ಚಿನ್ನಸ್ವಾಮಿ ತನ್ನ ಇಬ್ಬರು ಮಕ್ಕಳಾದ ತೇಜಸ್ವಿನಿ ಮತ್ತು ಮಾರೇಶ ಎಂಬುವವರನ್ನು ಸಾಗರದ ವರದಹಳ್ಳಿ ರಸ್ತೆಯಲ್ಲಿ ಇರುವ ವನಶ್ರೀ ವಸತಿ ಶಾಲೆಗೆ ಇತ್ತೀಚೆಗೆ ದಾಖಲು ಮಾಡಿದ್ದಾರೆ. ಇವರ ಜೊತೆಗೆ ಇವರ ಊರಿನ ಇನ್ನೂ 5 ಮಕ್ಕಳನ್ನೂ ಇದೇ ಜೂನ್ 4 ಕ್ಕೆ ಈ ಶಾಲೆಗೆ ಸೇರಿಸಿರುತ್ತಾರೆ.
ಮಕ್ಕಳನ್ನು ದಾಖಲು ಮಾಡಿದ ಮೂರೇ ದಿನಗಳಲ್ಲಿ ಮೃತ ತೇಜಸ್ವಿನಿ ಪೋಷಕರಾದ ಚಿನ್ನಸ್ವಾಮಿಯವರಿಗೆ ಹಾಸ್ಟೆಲ್ ನಿಂದ ಮಗಳು ಅಸ್ವಸ್ಥಳಾದ ಬಗ್ಗೆ ಕರೆ ಬಂದಿದೆ. ಆದರೆ ಹಾಸ್ಟೆಲ್ ನಲ್ಲೇ ಚಿಕಿತ್ಸೆ ಕೊಡುವುದಾಗಿ ಹಾಸ್ಟೆಲ್ ಕಡೆಯಿಂದ ಮಾಹಿತಿ ನೀಡಿದ್ದಾರೆ. ನಂತರ ಮಾರನೇ ದಿನವೂ ಕರೆ ಮಾಡಿ ಮಗಳ ಆರೋಗ್ಯ ವಿಚಾರಿಸಲಾಗಿ ಅನಾರೋಗ್ಯ ಮತ್ತೆ ಉಲ್ಬಣಿಸಿದ್ದು ಆಸ್ಪತ್ರೆಗೆ ದಾಖಲು ಮಾಡಲಿದ್ದೇವೆ ಎಂದು ಮಾಹಿತಿ ಸಿಕ್ಕಿದೆ. ಯಾವುದಾದರೂ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಎಂದು ಪೋಷಕರು ಹೇಳಿದರೂ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇನ್ನು ಪೋಷಕರು ಮಗಳನ್ನು ನೋಡಲು ಸಾಗರಕ್ಕೆ ಬರುವ ಸಂದರ್ಭದಲ್ಲಾಗಲೇ ಮಗಳು ಮೃತಪಟ್ಟ ಬಗ್ಗೆ ಆಸ್ಪತ್ರೆ ವೈದ್ಯಾಧಿಕಾರಿಗಳು ದೃಢಪಡಿಸಿದ್ದಾರೆ.
ಆರೋಗ್ಯದಲ್ಲಿ ಎಲ್ಲಾ ರೀತಿಯಲ್ಲೂ ಏನೂ ಸಮಸ್ಯೆ ಇಲ್ಲದ ಮಗಳಿಗೆ ಇದ್ದಕ್ಕಿದ್ದಂತೆ ಅನಾರೋಗ್ಯ ಕಾಡಿದ ಬಗ್ಗೆ, ಅದರಲ್ಲೂ ಸಾವಿಗೆ ಕಾರಣವಾಗುವ ಅನಾರೋಗ್ಯ ಉಲ್ಬಣಿಸಿದ ಬಗ್ಗೆ ಪೋಷಕರಿಗೆ ಅನುಮಾನ ವ್ಯಕ್ತವಾಗಿದೆ. ಈ ಕಾರಣದಿಂದ ಇದೊಂದು ಅಸಹಜ ಸಾವು. ಸಾವಿನ ಹಿನ್ನೆಲೆಯಲ್ಲಿ ಸೂಕ್ತ ತನಿಖೆ ನಡೆಸಬೇಕು ಎಂಬ ಕಾರಣಕ್ಕೆ ಪೋಷಕರು ಶಾಲೆಯ ಆಡಳಿತ ಮಂಡಳಿ ಮೇಲೆ ದೂರು ದಾಖಲು ಮಾಡಿದ್ದಾರೆ. ಮೃತ ತೇಜಸ್ವಿನಿ ಮರಣೋತ್ತರ ಪರೀಕ್ಷೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಮೃತದೇಹವನ್ನು ಕಳಿಸಲಾಗಿದೆ.
ಈ ಎಲ್ಲಾ ಹಿನ್ನೆಲೆಯಲ್ಲಿ ಮೃತ ವಿದ್ಯಾರ್ಥಿನಿ ತೇಜಸ್ವಿನಿ ಸಾವಿನ ಸುತ್ತ ನಿಗೂಢವಾಗಿ ಒಂದಷ್ಟು ಪ್ರಶ್ನೆಗಳು ಉದ್ಭವಿಸಿದೆ. ಅದರಂತೆ ಹಾಸ್ಟೆಲ್ ಮಕ್ಕಳನ್ನು ವಿಚಾರಿಸಿದರೆ ಹೆಚ್ಚಿನ ಮಾಹಿತಿ ಸಿಗುವ ಸಾಧ್ಯತೆ ಇದೆ.
ಪೀಪಲ್ ಟಿವಿ ಗೆ ಸಿಕ್ಕ ಮಾಹಿತಿಯಂತೆ
* ಹಿಂದಿನ ದಿನ ಮೃತ ತೇಜಸ್ವಿನಿಯ ಕಾಲಿನ ಭಾಗಕ್ಕೆ ತುಂಬಾ ನೋವುಂಟಾದ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಹೆಚ್.ಪಿ.ಮಂಜಪ್ಪನೇ ಖುದ್ದು ಕಾಲಿಗೆ ನೋವಿನ ಎಣ್ಣೆ ಹಚ್ಚಿದ್ದಾರೆ.
* ಕಾಲಿಗೆ ನೋವಿನ ಎಣ್ಣೆ ಹಚ್ಚುವಾಗ ಬೇರೆ ಯಾವ ವಿದ್ಯಾರ್ಥಿಗಳೂ ಹಾಸ್ಟೆಲ್ ರೂಮಿನ ಬಳಿಗೆ ಬಾರದಂತೆ ತಡೆದಿದ್ದರು ಎಂದು ಶಾಲೆಯ ಮಕ್ಕಳ ಕಡೆಯಿಂದ ಬಂದ ಮಾಹಿತಿ.
* ಪೋಷಕರು ಆಸ್ಪತ್ರೆಗೆ ದಾಖಲು ಮಾಡಲು ತಿಳಿಸಿದರೂ ತಾವೇ ಚಿಕಿತ್ಸೆ ನೀಡಲು ಮುಂದಾಗಿದ್ದು ಮತ್ತೊಂದು ಅನುಮಾನಕ್ಕೆ ಕಾರಣವಾಗಿದೆ.
* ಇದಾದ ನಂತರ ಬಲ್ಲ ಮೂಲಗಳ ಮಾಹಿತಿಯಂತೆ ಸಂಸ್ಥೆಯ ಮುಖ್ಯಸ್ಥ ಹೆಚ್.ಪಿ.ಮಂಜಪ್ಪ ಮೃತ ತೇಜಸ್ವಿನಿ ಮತ್ತು ಇನ್ನೊಬ್ಬ ವಿದ್ಯಾರ್ಥಿನಿ ಮಧುಗೆ ಒಂದೂವರೆ ಬಕೆಟ್ ನೀರನ್ನು ಒತ್ತಾಯಪೂರ್ವಕವಾಗಿ ಕುಡಿಸಿದ್ದಾರೆ.
* ಇಷ್ಟೆಲ್ಲಾ ಆಧುನಿಕ ತಂತ್ರಜ್ಞಾನದ ಚಿಕಿತ್ಸೆ ವೈದ್ಯಕೀಯ ಲೋಕದಲ್ಲಿ ಲಭ್ಯವಿದ್ದರೂ ವಿದ್ಯಾರ್ಥಿನಿಯರಿಗೆ ಬಕೆಟ್ ಗಟ್ಟಲೆ ನೀರನ್ನು ಕುಡಿಸಿದ್ದು ಯಾಕೆ? ಇದು ಮಕ್ಕಳ ಆರೋಗ್ಯಕ್ಕೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬ ಸಾಮಾನ್ಯ ಜ್ಞಾನ ಯಾಕೆ ಸಂಸ್ಥೆಯ ಮುಖ್ಯಸ್ಥ ಹೆಚ್.ಪಿ.ಮಂಜಪ್ಪನವರಿಗೆ ಬಂದಿಲ್ಲ ಎಂಬುದು ದೊಡ್ಡ ಪ್ರಶ್ನೆ.
* ಇನ್ನು ಶಾಲೆಯ ಚಟುವಟಿಕೆಗಳ ಬಗ್ಗೆ ಸ್ಥಳೀಯರಲ್ಲಿ ಹಲವಷ್ಟು ಅನುಮಾನಗಳಿದ್ದು, ಇಲ್ಲಿ ನಡೆಯುವ ಯಾವೊಂದು ಚಟುವಟಿಕೆಗಳೂ ಹೊರ ಬಾರದೇ ಇರುವಂತೆ ಹಲವಷ್ಟು ವರ್ಷಗಳಿಂದ ಗೌಪ್ಯತೆ ಕಾಪಾಡುತ್ತಾ ಬಂದಿರುವ ಬಗ್ಗೆಯೂ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.
ಸಧ್ಯಕ್ಕೆ ಇವೆಲ್ಲಾ ಕಾರಣಗಳಿಂದ ಅಪ್ರಾಪ್ತ ಬಾಲಕಿ ತೇಜಸ್ವಿನಿ ಸಾವಿನ ಹಿನ್ನೆಲೆಯಲ್ಲಿ ಅನುಮಾನಗಳು ವ್ಯಕ್ತವಾಗಿದ್ದು ಇತ್ತ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಹಿನ್ನೆಲೆಯಲ್ಲಿ ತೇಜಸ್ವಿನಿ ಪೋಷಕರು ನೀಡಿದ ದೂರಿನ ಅನ್ವಯ ಸಾಗರ ಗ್ರಾಮಾಂತರ ಠಾಣೆಯಲ್ಲಿ FIR ದಾಖಲಾಗಿದೆ.
ಇದರ ಜೊತೆಗೆ ಸ್ಥಳೀಯರು ತೇಜಸ್ವಿನಿ ಸಾವಿಗೆ ಸೂಕ್ತ ತನಿಖೆ ನಡೆಸಬೇಕು ಹಾಗೂ ಶಾಲಾ ಮುಖ್ಯಸ್ಥ ಹೆಚ್.ಪಿ ಮಂಜಪ್ಪ ಒಬ್ಬ ಪ್ರಭಾವಿ ವ್ಯಕ್ತಿಯಾಗಿರುವ ಹಿನ್ನೆಲೆಯಲ್ಲಿ ಸಾಕ್ಷ್ಯ ನಾಶ ಮಾಡಬಹುದಾದ ಅನುಮಾನ ಕೂಡಾ ವ್ಯಕ್ತವಾಗಿದೆ. ಹಾಗಾಗಿ ಸ್ಥಳೀಯರು ಹಾಗೂ ಸಾಮಾಜಿಕ ಹೋರಾಟಗಾರರು #JustiseForTejaswini ಅಭಿಯಾನಕ್ಕೆ ಕರೆ ನೀಡಿದ್ದಾರೆ. ಸತ್ಯಾಸತ್ಯತೆ ಪೊಲೀಸರ ತನಿಖೆಯಿಂದ ಹೊರಬರಬೇಕಿದೆ.