ಮಹಿಳೆಯರ ಕೈಗೆ ಬರುವ ಒಂದೊಂದು ರೂಪಾಯಿ ಕೂಡಾ ವ್ಯರ್ಥವಾಗಲಾರದು. ನಾನಿರುವ ಬಾಡಿಗೆ ಮನೆಯಿಂದ ಜಮೀನಿಗೆ ಹೋಗಲು ನನಗೆ ಬಸ್ ಚಾರ್ಜ್ 26 ರೂಪಾಯಿ. ಅಂದರೆ ದಿನದಲ್ಲಿ 52 ರೂಪಾಯಿಗಳನ್ನು ಬಸ್ ಚಾರ್ಜ್ ಗೆಂದೇ ಮೀಸಲಿಡ ಬೇಕಾಗುತ್ತದೆ. ಶಕ್ತಿ ಯೋಜನೆಯಿಂದಾಗಿ ತಿಂಗಳಿಗೆ ಕನಿಷ್ಠ ಒಂದೂವರೆ ಸಾವಿರ ರೂಪಾಯಿ ಉಳಿದಂತಾಗುತ್ತದೆ. ಬಹುಶಃ ಈ ದುಡ್ಡನ್ನು ನಾನು ನನ್ನ ಆರೋಗ್ಯ ವಿಮೆಗಾಗಿ ಬಳಸಿಕೊಳ್ಳಬಹುದು- ಉಷಾಕಟ್ಟೆಮನೆ, ಕೃಷಿಕರು.
ಕೆಂಪು ಡಬ್ಬಿ ಎಂದು ಅಸಡ್ಡೆಯಿಂದ ಕರೆಯಲಾಗುತ್ತಿದ್ದ ಗ್ರಾಮಾಂತರ ಸಾರಿಗೆ ಮತ್ತು ಡಬ್ಬಲ್ ಡೋರಿನ ನಗರ ಸಾರಿಗೆ ಬಸ್ ಗಳು ಈಗ ಭಯಂಕರ ಸದ್ದು ಮಾಡುತ್ತಿವೆ. ನಾಳೆ ರಾಜ್ಯದ ಮುಖ್ಯಮಂತ್ರಿಗಳೇ ಸ್ವತಃ ಈ ಬಸ್ಸನ್ನೇರುತ್ತಾರೆ. ಕೆಲವು ಘಂಟೆಗಳ ಕಾಲ ಈ ಬಸ್ ನ ಕಂಡಕ್ಟರಾಗುತ್ತಾರೆ. ಸೀಟಿ ಊದಿ ‘ರೈಟ್ ರೈಟ್ ಅನ್ನಲಿದ್ದಾರೆ. ಅವರು ಡ್ಯೂಟಿ ವಹಿಸಿಕೊಳ್ಳುವುದು ಎಲ್ಲಿ ಗೊತ್ತೆ? ಮೆಜೆಸ್ಟಿಕ್ ನಲ್ಲಿ. ವಿಧಾನಸೌಧದ ಅಂಗಳದಲ್ಲಿ ಅಲ್ಲ! ಮುಖ್ಯಮಂತ್ರಿಗಳೇ ಜನಸಾಮಾನ್ಯರ ಬಳಿಗೆ ಇಳಿದು ಬರುತ್ತಾರೆ. ಇದು ಒಬ್ಬ ನಿಜವಾದ ಜನಪ್ರತಿನಿಧಿಯ ನಡೆ.
ಕಾಂಗ್ರೇಸ್ ಸರಕಾರವು ತಾನು ಅಧಿಕಾರಕ್ಕೆ ಬಂದಲ್ಲಿ ಜನತೆಗೆ ಐದು ಗ್ಯಾರಂಟಿಗಳನ್ನು ನೀಡುವುದಾಗಿ ಭರವಸೆಯನ್ನು ನೀಡಿತ್ತು. ಆ ಭರವಸೆಯನ್ನು ಗ್ಯಾರಂಟಿಯಾಗಿ ನಂಬಿದ ಜನರು ಕಾಂಗ್ರೇಸ್ ಪಕ್ಷವನ್ನು ಅಭೂತಪೂರ್ವಕವಾಗಿ ಗೆಲ್ಲಿಸಿದ್ದರು.
ಮುಖ್ಯವಾಗಿ ಆರ್ಥಿಕವಾಗಿ ಹಿಂದುಳಿದಿರುವ ಮಹಿಳೆಯರನ್ನು ಸಬಲೀಕರಣಗೊಳಿಸುವ ಮೂಲಕ ಇಡೀ ಕುಟುಂಬವನ್ನು ಸ್ವಾವಲಂಬಿಯಾಗಿ ಕ್ರಿಯಾಶೀಲಗೊಳಿಸುವುದು ಈ ಗ್ಯಾರಂಟಿಗಳ ಉದ್ದೇಶವಾಗಿತ್ತು. ಅದರಲ್ಲಿ ಬಹುಮುಖ್ಯವಾಗಿರುವುದೇ ʼಶಕ್ತಿ ಯೋಜನೆ’. ಎಷ್ಟು ಅರ್ಥಗರ್ಭಿತವಾಗಿದೆ ಈ ಹೆಸರು! ಅನ್ನಪೂರ್ಣೆಯನ್ನು ಶಕ್ತಿಯಾಗಿ ಪರಿಭಾವಿಸುವುದು.! ಅಧ್ಯಾತ್ಮದಲ್ಲಿಯೂ ಅತ್ಯುನ್ನತ ಶಕ್ತಿ ಸ್ತ್ರೀಯೆಂದೇ ಸಂಬೋಧಿಸುತ್ತಾರೆ.. ಅವಳೇ ಶಕ್ತಿ.
ಏನಿದು ಶಕ್ತಿ ಯೋಜನೆ.?
ಸರಳವಾಗಿ ಹೇಳುವುದಾದರೆ ಇದು ಮಹಿಳೆಯರಿಗಾಗಿಯೇ ಇರುವ ಫ್ರೀ ಬಸ್ ಯೋಜನೆ. ರಾಜ್ಯದ ಎಲ್ಲಾ ಮಹಿಳೆಯರು ಜೂನ್ ಹತ್ತರಿಂದ ಕೆಂಪು ಬಸ್ ಗಳಲ್ಲಿ ಟಿಕೇಟ್ ರಹಿತವಾಗಿ ಓಡಾಡುವ ಅವಕಾಶ. ಐಷಾರಾಮಿ ಬಸ್ ಗಳನ್ನು ಹೊರತುಪಡಿಸಿ ಎಲ್ಲಾ ವೇಗದೂತ ಬಸ್ ಗಳಲ್ಲಿ ಎಷ್ಟು ದೂರ ಬೇಕಾದರೂ ಓಡಾಡಬಹುದು. ಮಹಿಳೆಯರ ಜೊತೆಗೆ ತೃತೀಯ ಲಿಂಗಿಯರನ್ನೂ ಮಹಿಳೆಯರೆಂದೇ ಪರಿಗಣಿಸಿದ್ದು ಈ ಯೋಜನೆಯ ಬಹಳ ಮಹತ್ವದ ನಿರ್ಧಾರ.
ಕಲ್ಯಾಣರಾಜ್ಯದ ಕಲ್ಪನೆಗಳಲ್ಲಿ ಸ್ವತಂತ್ರವಾಗಿ, ಬೇಕಾದಾಗ, ಬೇಕಾದಲ್ಲಿಗೆ ಹೋಗಿ ಬರುವುದೂ ಒಂದು. ಸಂಚಾರ ಅಥವಾ ನಡಿಗೆ ಅಥವಾ ತಿರುಗಾಟ ಅಂದರೆ ಚಲನಶೀಲತೆ. ಅನುಭವದ ವಿಸ್ತರಣೆ. ಅಂತರಂಗದ ಶೋಧನೆ. ಇದು ಮನುಷ್ಯಜೀವಿಗಳಿಗೆ ಸಂಬಂಧಿಸಿದ್ದು. ಇದರಲ್ಲಿ ಗಂಡು ಹೆಣ್ಣು ಎಂಬ ಬೇಧಭಾವವಿಲ್ಲ.
ಆದರೆ, ಈ ಮನುಷ್ಯ ಪ್ರಪಂಚದಲ್ಲಿ ಸಂಚಾರ ಎಂಬುದು ಗಂಡಿಗೆ ಅನ್ವರ್ಥನಾಮವಾಗಿ ಬಂದಿದೆ. ಹೆಣ್ಣು ಏನಿದ್ದರೂ ಮನೆವಾಳ್ತೆಗೆ ಸೀಮಿತವಾಗಿ ಆಕೆಯ ಬದುಕು ತೀರಾ ಇತ್ತೀಚೆಯವರೆಗೂ ಬಹುತೇಕ ಸ್ಥಾವರವಾಗಿತ್ತು. ಆದರೆ ಸಮಾಜ ಚಲನಶೀಲವಾದುದು. ಅದು ಹಿಂದೆ ಇದ್ದಂತೆ ಇಂದಿಲ್ಲ. ಇಂದು ಇದ್ದಂತೆ ನಾಳೆ ಇರಲಾರದು, ಇರಬಾರದು ಕೂಡಾ.
ತನ್ನ ಅಸ್ತಿತ್ವದ ಹುಡುಕಾಟದ ಕಾರಣದಿಂದಲೋ ಅಥವಾ ಸ್ವಾಭಿಮಾನದ ಬದುಕಿನ ಹಂಬಲಕ್ಕಾಗಿಯೋ ಸ್ತ್ರೀಯೊಬ್ಬಳು ವಿದ್ಯಾವಂತಳಾಗಿ, ಉದ್ಯೋಗವನ್ನು ಪಡೆದು ತನ್ನ ಸ್ವಂತ ದುಡ್ಡನ್ನು ದುಡಿದಾಗ ಕುಟುಂಬದ ಚೌಕಟ್ಟು ಹೊಸ ವಿನ್ಯಾಸವನ್ನು ಪಡೆದುಕೊಂಡಿತು. ಮೊದಮೊದಲು ಸಮಾಜದ ಮೇಲ್ ಸ್ತರದಲ್ಲಿ ಆದ ಈ ಬದಲಾವಣೆಗಳು ಕ್ರಮೇಣವಾಗಿ ಕೆಳಸ್ತರದವರೆಗೂ ಹರಡಿಕೊಳ್ಳತೊಡಗಿತು. ಇಂದು ನೋಡಿ, ಎಲ್ಲೆಲ್ಲಿಯೂ ಮಹಿಳೆಯರೇ! ಅವರೊಂದು ಸಂಘಟಿತ ಶಕ್ತಿ.
ಮಹಿಳೆಯರ ಕೈಗೆ ಬರುವ ಹಣ ವ್ಯರ್ಥವಾಗದು..
ನಮ್ಮ ರಾಜ್ಯದಲ್ಲಿ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ದುಡಿಯುವ ಲಕ್ಷಾಂತರ ಮಹಿಳೆಯರಿದ್ದಾರೆ. ಮನೆಗೆಲಸದವರಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರಿದ್ದಾರೆ. ಬೀದಿ ಬದಿಯ ವ್ಯಾಪಾರಿಗಳಿದ್ದಾರೆ. ದೊಡ್ಡ ದೊಡ್ಡ ಅಂಗಡಿಗಳಲ್ಲಿ, ಮಾಲ್ ಗಳಲ್ಲಿ ಕಡಿಮೆ ಸಂಬಳಕ್ಕೆ ಕೆಲಸಮಾಡುವ ಹುಡುಗಿಯರಿದ್ದಾರೆ. ವಲಸೆ ಕಾರ್ಮಿಕರಿದ್ದಾರೆ. ಇವರೆಲ್ಲಾ ತಮ್ಮ ಸಂಬಳದಲ್ಲಿ ಕನಿಷ್ಠ ಒಂದೂವರೆ ಸಾವಿರ ರೂಪಾಯಿಗಳನ್ನು ಬಸ್ ಚಾರ್ಜಿಗಾಗಿಯೇ ತೆಗೆದಿರಿಸಬೇಕಾಗಿತ್ತು. ಇನ್ನು ಆ ದುಡ್ಡನ್ನು ಮಕ್ಕಳ ಫೀಸಿಗಾಗಿಯೋ, ಹಾಲಿಗಾಗಿಯೋ ಅಥವಾ ತಿಂಗಳಿಗೆ ಎರಡು ಬಾರಿಯಾದರೂ ಕುಟುಂಬದೊಂದಿಗೆ ಸಂತೋಷದಿಂದ ಬಾಡೂಟ ಮಾಡಲು ಬಳಸಿಕೊಳ್ಳಬಹುದು.
ಮಹಿಳೆಯರ ಕೈಗೆ ಬರುವ ಒಂದೊಂದು ರೂಪಾಯಿ ಕೂಡಾ ವ್ಯರ್ಥವಾಗಲಾರದು. ನೀವು ಗಮನಿಸಿದ್ದೀರಾ? ಚೀಟಿ ಹಾಕಿ ದುಡ್ಡು ಉಳಿಸಿ ಅದನ್ನು ಕುಟುಂಬದ ಸಂಕಷ್ಟಕಾಲದಲ್ಲಿ ಅಪತ್ ಧನವಾಗಿ ಬಳಸುವವರಲ್ಲಿ ಮುಕ್ಕಾಲುಪಾಲು ಜನ ಮಹಿಳೆಯರೇ ಆಗಿದ್ದಾರೆ. ಮನೆಗೆಲಸಕ್ಕೆ ಬರುವ ಹೆಚ್ಚಿನ ಎಲ್ಲಾ ಮಹಿಳೆಯರ ಗಂಡಂದಿರು ಒಂದೋ ಕುಡುಕರಾಗಿರ್ತಾರೆ. ಇಲ್ಲವೇ ವಿವಾಹಬಾಹಿರ ಸಂಬಂಧ ಇಟ್ಟುಕೊಂಡಿರ್ತಾರೆ.
ಸರಕಾರದ ಗ್ಯಾರಂಟಿಗಳನ್ನು ಬಿಟ್ಟಿ ಭಾಗ್ಯ, ತಮ್ಮ ಟ್ಯಾಕ್ಸ್ ಹಣದ ಪೋಲು ಎಂದೆಲ್ಲಾ ಒಂದು ವರ್ಗ ಆಡಿಕೊಳ್ಳುತ್ತಿದೆ. ಇವರೆಲ್ಲಾ ಕಂಫರ್ಟ್ ವಲಯಗಳಲ್ಲಿ ಬದುಕುತ್ತಿರುವ ಅಥವಾ ಹಾಗೆಂದು ಭಾವಿಸಿಕೊಂಡಿರುವ ಮತ್ಸರ ಜೀವಿಗಳು. ಇವರೆಲ್ಲಾ ಪ್ರಭುತ್ವ ಕೊಟ್ಟ ಉಂಬಳಿಗಳಿಂದಲೇ, ಸರಕಾರ ಕೊಟ್ಟ ಬಿಟ್ಟಿ ಭಾಗ್ಯಗಳಿಂದಲೇ ಉನ್ನತ ಸ್ಥಾನಮಾನ ಮತ್ತು ಶಿಕ್ಷಣವನ್ನು ಪಡೆದುಕೊಂಡವರು. ಇವರಿಗೆ ತಾವು ಲಕ್ಷ ಲಕ್ಷ ಸಂಬಳ ಎಣಿಸಿಕೊಳ್ಳುವ, ಪಿಂಚಣಿ ಪಡೆಯುತ್ತಿರುವ ಬಿಟ್ಟಿ ಭಾಗ್ಯ ಗಿರಾಕಿಗಳೆಂಬ ಕನಿಷ್ಠ ಜ್ಞಾನವೂ ಇಲ್ಲ. ಇಂತವರಿಗೆ ನಾಳೆಯ ಬಗ್ಗೆ ಯೋಚನೆಯಿಲ್ಲದೆ ನೆಮ್ಮದಿ ಸಂತೋಷಗಳಿಂದ ಅಂದಂದಿನ ಬದುಕನ್ನು ಪೂರ್ಣವಾಗಿ ಬದುಕುತ್ತಿರುವ ಬಡವರನ್ನು ಕಂಡರೆ ಹೊಟ್ಟೆಕಿಚ್ಚು. ವಾಸ್ತವ ಬದುಕಿನ ಅರಿವಿಲ್ಲದ ಈ ಕಲ್ಪನಾಜೀವಿಗಳಿಗೆ ಬದುಕುವುದಕ್ಕೆ ಒಂದು ಅಮಲು ಬೇಕು. ಬಿಜೆಪಿ ಎಂಬ ಪಕ್ಷ ಅದನ್ನವರಿಗೆ ಯಥೇಚ್ಛವಾಗಿ ನೀಡಿದೆ.
ಆಟೋ ಕ್ಯಾಬ್ ಓಡಿಸುವವರು ಚಿಂತಿಸಬೇಕಿಲ್ಲ..
ಫ್ರೀ ಬಸ್ ಅಲ್ವಾ.. ಇನ್ನು ಮಹಿಳೆಯರು ಬೇಕೆಂದಾಗಲೆಲ್ಲ ತವರುಮನೆಗೆ, ಪೇಟೆಗೆ ಎಂದೆಲ್ಲಾ ಹೊರಟುಬಿಡ್ತಾರೆ. ಮನೆಯಲ್ಲಿ ಇರೋದೇ ಇಲ್ಲ ಎಂದೆಲ್ಲಾ ಹಲುಬುವ, ಗೇಲಿ ಮಾಡುವ ಮಾತುಗಳನ್ನು ಕೆಲವು ಕ್ಲಬ್ ಹೌಸ್ ಮಾತುಕತೆಯಲ್ಲಿ ಕೇಳಿದ್ದೇನೆ. ಸೋಶಿಯಲ್ ಮೀಡಿಯಾಗಳಲ್ಲಿ ಕೆಲವು ವಿಡಿಯೋಗಳನ್ನು ನೋಡಿದ್ದೇನೆ. ಇದೆಲ್ಲಾ ಕೆಲವು ಉಂಡಾಡಿ ಗಂಡುಗಳ ರೋಧನೆ. ಇವರೆಲ್ಲಾ ಎಂದೂ ಒಬ್ಬ ಜವಾಬ್ದಾರಿಯುತ ಗಂಡಸಾಗಿ, ಮನೆಯ ಯಜಮಾನನಾಗಿ ವರ್ತಿಸಿದವರೇ ಅಲ್ಲಾ. ಇವರಿಗೆಲ್ಲಾ, ಹೆಣ್ಣಿಗೆ ಅರ್ಥಿಕ ಸ್ವಾತಂತ್ರ್ಯ ಸಿಕ್ಕಿ ತಮ್ಮನ್ನು ಮೂಲೆಗುಂಪು ಮಾಡ್ತಾರೇನೋ ಎಂಬ ಭಯ. ಇನ್ನು ತಮ್ಮ ಜೀವನ ನಿರ್ವಹಣೆಗಾಗಿ ಆಟೋ, ಕ್ಯಾಬ್ ಗಳನ್ನೇ ನಂಬಿಕೊಂಡವರು ತಮ್ಮ ಸಂಪಾದನೆಗೆ ಧಕ್ಕೆಯಾಗಬಹುದೆನೋ ಎಂಬ ಆತಂಕವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಅವರು ಚಿಂತಿಸಬೇಕಾಗಿಲ್ಲ. ಅಟೋ, ಕ್ಯಾಬ್ ಗಳಲ್ಲಿ ಓಡಾಡಿ ಅಭ್ಯಾಸ ಆಗಿರುವವರು ಕೆಂಪು ಬಸ್ ಗಳಿಗೆ ಹಿಂದಿರುಗಲಾರರು. ಅದು ಕೊಡುವ ಪ್ರೈವಸಿ ಮತ್ತು ಕಂಫರ್ಟ್ ಅವರು ಖರ್ಚು ಮಾಡುವ ಹಣಕ್ಕಿಂತಲೂ ಮಿಗಿಲಾದುದು ಎಂಬ ಮನೋಭಾವ ಅವರದು.
ನಾನು ಕೂಡಾ ಯೋಜನೆಯ ಫಲಾನುಭವಿಯಾಗುವೆ…
ನಾನು ಕೂಡಾ ‘ಶಕ್ತಿʼ ಯೋಜನೆಯ ಫಲಾನುಭವಿಯಾಗಲು ಬಯಸುತ್ತೇನೆ ಅದು ಖಂಡಿತವಾಗಿಯೂ ನನಗೆ ಹೆಮ್ಮೆಯ ವಿಚಾರವೇ. ನನ್ನ ಸರಕಾರ ನನ್ನ ಬಗ್ಗೆ ಕಾಳಜಿ ವಹಿಸಿದೆ ಎಂಬ ವಿಚಾರವೇ ನನಗೆ ಹುಮ್ಮಸು ನೀಡುತ್ತಿದೆ..
ನಾನೊಬ್ಬಳು ರೈತ ಮಹಿಳೆ. ಹಳ್ಳಿಯಲ್ಲಿದ್ದೇನೆ. ಸಣ್ಣ ಹಿಡುವಳಿದಾರಳು. ನನ್ನ ಜಮೀನಿನಲ್ಲಿ ಇರುವ ಮನೆ ತೀರಾ ಜೀರ್ಣಾವಸ್ಥೆಯಲ್ಲಿ ಇರುವ ಕಾರಣದಿಂದಾಗಿ ಪಕ್ಕದ ಪೇಟೆಯಲ್ಲಿ ಬಾಡಿಗೆ ಮನೆಯಲ್ಲಿದ್ದೇನೆ. ಅಲ್ಲಿಂದ ಜಮೀನಿಗೆ ಹೋಗಲು ನನಗೆ ಬಸ್ ಚಾರ್ಜ್ ೨೬ ರೋಪಾಯಿ ಆಗುತ್ತದೆ. ಅಂದರೆ ದಿನದಲ್ಲಿ ೫೨ ರೂಪಾಯಿಗಳನ್ನು ಬಸ್ ಚಾರ್ಜ್ ಗೆಂದೇ ಮೀಸಲಿಡಬೇಕಾಗುತ್ತದೆ. ಶಕ್ತಿ ಯೋಜನೆಯಿಂದಾಗಿ ತಿಂಗಳಿಗೆ ಕನಿಷ್ಠ ಒಂದೂವರೆ ಸಾವಿರ ರೂಪಾಯಿ ಉಳಿದಂತಾಗುತ್ತದೆ. ಬಹುಶಃ ಈ ದುಡ್ಡನ್ನು ನಾನು ಆರೋಗ್ಯ ವಿಮೆಗಾಗಿ ಬಳಸಿಕೊಳ್ಳಬಹುದು. ಯಾಕೆಂದರೆ ಕಳೆದ ತಿಂಗಳಿನಲ್ಲಿ ನಾನು ಸುಮಾರು ಒಂದು ಲಕ್ಷ ರೂಪಾಯಿಯಷ್ಟು ಆಸ್ಪತ್ರೆ ಬಿಲ್ಲನ್ನು ಕಟ್ಟಬೇಕಾಗಿ ಬಂದಿತ್ತು. ಅದಕ್ಕೆ ಇನ್ನಿಲ್ಲದಷ್ಟು ಕಷ್ಟ ಪಡಬೇಕಾಯಿತು. ಹಿಂದಿನ ಸರಕಾರ ಜಾರಿಗೆ ತಂದ ‘ಯಶಸ್ವಿನಿ’ ಹೆಲ್ತ್ ಇನ್ಶೂರೆನ್ಸ್ ಕಾರ್ಡ್ ಗೆ ಆಸ್ಪತ್ರೆಯವರು ಕ್ಯಾರೇ ಅಂದಿರಲಿಲ್ಲ. ಆಗಲೇ ಪ್ರೈವೇಟ್ ಇನ್ಶೂರೆನ್ಸ್ ಮಾಡಿಸಬೇಕು ಎಂದು ನಿರ್ಧರಿಸಿಕೊಂಡಿದ್ದೆ.
ನಾನು ತುಂಬಾ ಸುತ್ತಾಡುತ್ತೇನೆ. ಉತ್ತರದ ಹಿಮಾಲಯದಿಂದ ದಕ್ಷಿಣದ ಕನ್ಯಾಕುಮಾರಿಯತನಕ ಓಡಾಡಿದ್ದೇನೆ. ಆದರೆ ಕರ್ನಾಟಕವನ್ನು ತುಂಬಾ ಕಡಿಮೆ ನೋಡಿದ್ದೇನೆ. ಅದರಲ್ಲಿಯೂ ಉತ್ತರಕರ್ನಾಟಕದ ಬಗ್ಗೆ ನನ್ನ ಜ್ಞಾನ ಏನಿದ್ದರೂ ಪುಸ್ತಕದ ಬದನೆಕಾಯಿ ಅಷ್ಟೇ. ಹಾಗಾಗಿ ನನ್ನ ಮುಂದಿನ ಪಯಣ ಉತ್ತರ ಕರ್ನಾಟಕವನ್ನು ಸುತ್ತುವುದು ಮತ್ತು ಅರಿಯುವುದು.
ಉಷಾಕಟ್ಟೆಮನೆ. ಬಂಡಿಹೊಳೆ
ಕೃಷಿಕರು
ಇದನ್ನೂ ಓದಿ-ಗ್ಯಾರಂಟಿಗಳು: ಜನರಿಗೆ ಖುಶಿ; ಪ್ರತಿಪಕ್ಷಕ್ಕೆ ಉರಿ!