ಪಶ್ಚಿಮ ಬಂಗಾಳದ ಮನೆಯೊಂದರ ಮೇಲೆ ಅನುಮಾನಾಸ್ಪದ ವಸ್ತು ಕಂಡುಬಂದಿದ್ದು ಅದು ಕಾಶ್ಮೀರಿ ಯುವಕರು ವೈರ್ ಲೆಸ್ ಸಾಮಗ್ರಿ ಹೊಂದಿದ್ದಾರೆ, ಅಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದೆ ಎಂದು ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಸುವೆಂದು ಅಧಿಕಾರಿ ಗಂಭೀರವಾಗಿ ಆರೋಪಿಸಿದ್ದರು. ಆದರೆ ತನಿಖೆಯ ನಂತರ ಆರೋಪಿಸಿದ ವ್ಯಕ್ತಿಯೇ ನಗೆಪಾಟಲಿಗೆ ಈಡಾಗಿದ್ದಾರೆ.
ಇಬ್ಬರು ಕಾಶ್ಮೀರಿಗಳು ಪಶ್ಚಿಮ ಬಂಗಾಳದ ಬರುಯಿಪುರದ ಮನೆ ಮೇಲ್ಛಾವಣಿಯಲ್ಲಿ ಅದನ್ನು ಸ್ಥಾಪಿಸಿದ್ದಾರೆ ಎಂಬ ಮಾಹಿತಿಗಳು ತನಗೆ ಬಂದಿವೆ. ಅಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದೆ ಎಂದು ಆರೋಪಿಸಿದರು. ಮನೆಯ ಮೇಲ್ಚಾವಣಿಯಲ್ಲಿ ಇದ್ದ ಸಾಧನದ ಚಿತ್ರವನ್ನು ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಹಂಚಿಕೊಂಡ ಬಿಜೆಪಿ ನಾಯಕ ಸುವೆಂದು ಅಧಿಕಾರಿ,ಪಶ್ಚಿಮ ಬಂಗಾಳ ಯಾವುದೇ “ಅನುಮಾನಾಸ್ಪದ ಚಟುವಟಿಕೆ” ನಡೆಯುತ್ತಿದೆಯೇ ಎಂದು ತನಿಖೆ ನಡೆಸಲು ಪೊಲೀಸರಿಗೆ ಒತ್ತಡ ಹೇರಿದ್ದರು.
ತಕ್ಷಣವೇ ಕಾರ್ಯಪ್ರವೃತ್ತರಾದ ಪಶ್ಚಿಮ ಬಂಗಾಳದ ಪೊಲೀಸರು ಸುವೆಂದು ಅಧಿಕಾರಿ ಸೂಚಿಸಿದ ವಿಳಾಸ ತಲುಪಿ ಪರಿಶೀಲನೆ ನಡೆಸಿದ್ದಾರೆ. ಆದರೆ ಅದೊಂದು ವೈಫೈ ಸಾಧನವಾಗಿದ್ದು, ಇಂಟರ್ನೆಟ್ ವೇಗ ಹೆಚ್ಚಿಸಲು ಇದನ್ನು ಬಳಸಲಾಗುತ್ತದೆ ಎಂಬ ಸತ್ಯ ಹೊರಬಿದ್ದಿದೆ. ಅಷ್ಟೇ ಅಲ್ಲದೆ ಈ ಸಾಧನವನ್ನು ಹಲವು ಮಂದಿ ಬಳಸುತ್ತಾರೆ ಎಂದೂ ಪೊಲೀಸರು ತಿಳಿಸಿದ್ದಾರೆ.
ವಾಸ್ತವದಲ್ಲಿ, ಸುವೆಂದು ಅಧಿಕಾರಿ ಸೂಚಿಸಿದ ಇಬ್ಬರು ವ್ಯಕ್ತಿಗಳು, ಒಬ್ಬರು ಹಿಂದೂ ಮತ್ತು ಇನ್ನೊಬ್ಬರು ಮುಸ್ಲಿಂ. ಆದರೆ ಅವರು ಕಾಶ್ಮೀರಿಗಳಲ್ಲ. ಇಬ್ಬರೂ ಮಧ್ಯಪ್ರದೇಶದವರು, ಸುಮಾರು ಮೂರು ವಾರಗಳ ಹಿಂದೆ ಬರುಯಿಪುರದಲ್ಲಿ ಒಂದು ಫ್ಲಾಟ್ ಅನ್ನು ಬಾಡಿಗೆಗೆ ಪಡೆದಿದ್ದಾರೆ. ವೃತ್ತಿಯಲ್ಲಿ ಎಂಜಿನಿಯರ್‌ಗಳಾದ ಅವರು ಪಶ್ಚಿಮ ಬಂಗಾಳದಲ್ಲಿ ಮೀನು ಕೃಷಿಯಲ್ಲಿ ವ್ಯಾಪಾರ ಅವಕಾಶಗಳನ್ನು ಅನ್ವೇಷಿಸುತ್ತಿದ್ದರು ಎಂದು ತಿಳಿದು ಬಂದಿದೆ.
ತನಿಖೆಯ ನಂತರ “ಅವರ ಫ್ಲಾಟ್‌ನಲ್ಲಿ ಸರಳವಾದ ಜಿಯೋಫೈಬರ್ ನೆಟ್‌ವರ್ಕ್ ಇದೆ, ಇದನ್ನು ಹಲವಾರು ನಾಗರಿಕರು ಬಳಸುತ್ತಾರೆ, ಅದರಲ್ಲಿ ಯಾವುದೇ ಅನುಮಾನವಿಲ್ಲ” ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳ ಮೂಲಕ ಹಂಚಿಕೊಳ್ಳಲಾದ ಈ ರೀತಿಯ ಮಾಹಿತಿಯು ಉದ್ದೇಶವನ್ನೇ ವಿಫಲಗೊಳಿಸುತ್ತದೆ. ಯಾವುದೇ ವ್ಯಕ್ತಿಯ ವಿರುದ್ಧ ಸತ್ಯಗಳನ್ನು ಪರಿಶೀಲಿಸದೆ ಯಾವುದೇ ರೀತಿಯ ಸಾರ್ವಜನಿಕ ಪ್ರಚೋದನೆಯು ಕಾನೂನುಬದ್ಧವಾಗಿ ಶಿಕ್ಷಾರ್ಹವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.