Friday, June 14, 2024

ಸತ್ಯ | ನ್ಯಾಯ |ಧರ್ಮ

ಕವನ | ಗ್ಯಾರಂಟಿಯ ಬೆವರ ಹನಿಗಳು 

ಬಿ ಶ್ರೀನಿವಾಸ ಅವರ ʼಗ್ಯಾರಂಟಿಯ ಬೆವರ ಹನಿಗಳುʼ ಹನಿ ಹನಿಯಾಗಿ  ನಿಮ್ಮ ಭಾನುವಾರದ ಓದಿಗೆ.

 ಬೆವರ ಹನಿ-೧

ಅರಚುವ ಟೀವಿ

ಪರಚುವ ಜಾಲತಾಣ

*****

ಒಂದು ಗ್ಯಾರಂಟಿಗೆ

ಏಸೊಂದು ಕಟುಕರು!

ನಿವ್ವಾಳಿಸಿ ಒಗೆದಳು ಸಿಂಗಲ್ ಲೇಡಿ 

ಸಿಂಗಾಡಿ ನಿಂಗವ್ವ

ಬಸ್ಸಿಗೆ ಹಣೆಹಚ್ಚಿ!

 ಬೆವರ ಹನಿ2

ಜಾರಿಯಾದ ದಿನ

ಕೆಲವರು

ಕೋರ್ಟಿನ ಮೆಟ್ಟಿಲು

ಏರಿದ್ದರು 

ಮತ್ತೂ ಕೆಲವರು

ವಿಧಾನಸೌಧದ ಮೆಟ್ಟಿಲು!

ತುಳಿದವರ ಪಾದಗಳಿಗೂ

ಗ್ಯಾರಂಟಿ ಜನರದ್ದೇ ರಕ್ಷೆ!

ಬೆವರಹನಿ-3 

ಅನ್ನದ ಅಗುಳಿನ ಮೇಲೆ

ಹೆಸರಿದೆಯೋ ಇಲ್ಲವೋ…

ಹಂಗಿಸುವ ಮೀಡಿಯಾಗಳಲಿ

ಹೆಸರುಗಳಿವೆ!

ಪರದೆಗಳಿಗೂ ಅಂಟಿಕೊಳ್ಳಲಿ

ಹನಿ ಬೆವರು!

 ಬೆವರಹನಿ-4

ಹೇಳುವೆ ಕೇಳಿ,

ನನ್ನಜ್ಜ -ಅಜ್ಜಿ 

ಅಪ್ಪ-ಅವ್ವ 

ಸುರಿಸಿದ್ದರು ಬೆವರು,

ಆದರೂ

ಅವರು ಹಸಿದಿದ್ದರು

ಬಗೆದು ನೋಡಿ ಬೇಕಾದರೆ 

ಪಾವು ಗಾತ್ರದ ದೇಹಗಳ ಒಳಗೂ ಸೇರಿದೆ ಮಣ್ಣು!

ಹಸಿವೆಂದರೆ ಕಾಣಿಸುವುದಿಲ್ಲ

ಎಂದಿಗೂ ಸಾಯುವುದಿಲ್ಲ!

ಮಣ್ಣಾಗುವುದು…..!

ಈಗ ನೀವೇ ಹೇಳಿ,

ನಾನೇಕೆ ಬೆವರಿನ ಪರ ?

 ಬೆವರ ಹನಿ -5

ಮನೆಯ ಮುಂದೆ ರಾಶಿ ಮಾಡಿ ಹೋದವರ ಶ್ರಮ

ಯಜಮಾನನ ಪ್ರಾಯಶ್ಚಿತ್ತ!

ಎರಡರ ಮೊತ್ತ!

ಗ್ಯಾರಂಟಿ 

ಎಂದರೆ ಮತ್ತೇನಿಲ್ಲ!

ಬಿ.ಶ್ರೀನಿವಾಸ, ದಾವಣಗೆರೆ

ಕವಿ,ಲೇಖಕರು

Related Articles

ಇತ್ತೀಚಿನ ಸುದ್ದಿಗಳು