ಬಿ ಶ್ರೀನಿವಾಸ ಅವರ ʼಗ್ಯಾರಂಟಿಯ ಬೆವರ ಹನಿಗಳುʼ ಹನಿ ಹನಿಯಾಗಿ ನಿಮ್ಮ ಭಾನುವಾರದ ಓದಿಗೆ.
ಬೆವರ ಹನಿ-೧
ಅರಚುವ ಟೀವಿ
ಪರಚುವ ಜಾಲತಾಣ
*****
ಒಂದು ಗ್ಯಾರಂಟಿಗೆ
ಏಸೊಂದು ಕಟುಕರು!
ನಿವ್ವಾಳಿಸಿ ಒಗೆದಳು ಸಿಂಗಲ್ ಲೇಡಿ
ಸಿಂಗಾಡಿ ನಿಂಗವ್ವ
ಬಸ್ಸಿಗೆ ಹಣೆಹಚ್ಚಿ!
ಬೆವರ ಹನಿ–2
ಜಾರಿಯಾದ ದಿನ
ಕೆಲವರು
ಕೋರ್ಟಿನ ಮೆಟ್ಟಿಲು
ಏರಿದ್ದರು
ಮತ್ತೂ ಕೆಲವರು
ವಿಧಾನಸೌಧದ ಮೆಟ್ಟಿಲು!
ತುಳಿದವರ ಪಾದಗಳಿಗೂ
ಗ್ಯಾರಂಟಿ ಜನರದ್ದೇ ರಕ್ಷೆ!
ಬೆವರಹನಿ-3
ಅನ್ನದ ಅಗುಳಿನ ಮೇಲೆ
ಹೆಸರಿದೆಯೋ ಇಲ್ಲವೋ…
ಹಂಗಿಸುವ ಮೀಡಿಯಾಗಳಲಿ
ಹೆಸರುಗಳಿವೆ!
ಪರದೆಗಳಿಗೂ ಅಂಟಿಕೊಳ್ಳಲಿ
ಹನಿ ಬೆವರು!
ಬೆವರಹನಿ-4
ಹೇಳುವೆ ಕೇಳಿ,
ನನ್ನಜ್ಜ -ಅಜ್ಜಿ
ಅಪ್ಪ-ಅವ್ವ
ಸುರಿಸಿದ್ದರು ಬೆವರು,
ಆದರೂ
ಅವರು ಹಸಿದಿದ್ದರು
ಬಗೆದು ನೋಡಿ ಬೇಕಾದರೆ
ಪಾವು ಗಾತ್ರದ ದೇಹಗಳ ಒಳಗೂ ಸೇರಿದೆ ಮಣ್ಣು!
ಹಸಿವೆಂದರೆ ಕಾಣಿಸುವುದಿಲ್ಲ
ಎಂದಿಗೂ ಸಾಯುವುದಿಲ್ಲ!
ಮಣ್ಣಾಗುವುದು…..!
ಈಗ ನೀವೇ ಹೇಳಿ,
ನಾನೇಕೆ ಬೆವರಿನ ಪರ ?
ಬೆವರ ಹನಿ -5
ಮನೆಯ ಮುಂದೆ ರಾಶಿ ಮಾಡಿ ಹೋದವರ ಶ್ರಮ
ಯಜಮಾನನ ಪ್ರಾಯಶ್ಚಿತ್ತ!
ಎರಡರ ಮೊತ್ತ!
ಗ್ಯಾರಂಟಿ
ಎಂದರೆ ಮತ್ತೇನಿಲ್ಲ!
ಬಿ.ಶ್ರೀನಿವಾಸ, ದಾವಣಗೆರೆ
ಕವಿ,ಲೇಖಕರು