ಹಿಂದೂ ಸಂಘಟನೆಗಳ ಪ್ರಕಾರ ದಲಿತರು ಯಾರು? ಅನ್ಯ ಧರ್ಮದಿಂದ ಹಿಂದೂ ಧರ್ಮಕ್ಕೆ ಅಪಾಯವಿದೆ ಎಂದು ಬೊಬ್ಬೆ ಹೊಡೆಯುವ ಈ ಸಂಘಟನೆಗಳು ಹಿಂದೂ ಧರ್ಮದಲ್ಲಿಯೇ ದಲಿತರಿಗೆ ಅಪಾಯವಿದೆ ಎಂದು ಅರಿತಿಲ್ಲವೇ? ಅಥವಾ ಅರಿವಿದ್ದರೂ ಜಾಣ ಮೌನವೇ? – ಆಕಾಶ್ ಆರ್ ಎಸ್, ಯುವ ಪತ್ರಕರ್ತ.
ಈ ದೇಶದಲ್ಲಿ ಅನಾದಿಕಾಲದಿಂದಲೂ ಜಾತಿಯ ಆಧಾರದ ಮೇಲೆ, ಅಸ್ಪೃಶ್ಯತೆಯ ಸೋಂಕಿನಿಂದ ದಲಿತ ಸಮುದಾಯಗಳು ಸದಾ ಶೋಷಣೆ, ಹತ್ಯೆಗೆ ಒಳಗಾಗುತ್ತಲೆ ಬಂದಿವೆ.
ಊಟಕ್ಕೆ ತುಪ್ಪ ಹಾಕಿದ್ದಾರೆ ಎಂಬ ಆರೋಪದಿಂದ ಹಿಡಿದು ಇತ್ತೀಚಿಗೆ ನಡೆದ ಗುಜರಾತ್, ಮಹಾರಾಷ್ಟ್ರ, ಯುಪಿ ಹಾಗೂ ಮೊನ್ನೆಯಷ್ಟೆ ಕರ್ನಾಟಕದ ಸಾಗರದ ವಸತಿ ಶಾಲೆಯೊಂದರಲ್ಲಿ ನಡೆದ ದಲಿತ ವಿದ್ಯಾರ್ಥಿನಿ ಸಾವು ಪ್ರಕರಣ ಸೇರಿದಂತೆ ಒಂದಲ್ಲಾ ಒಂದು ರೀತಿಯಲ್ಲಿ ಈ ಸಮಾಜದ ಮೇಲ್ಜಾತಿಗಳ ತುಳಿತಕ್ಕೆ ಸಿಕ್ಕಿ ದಲಿತ ಸಮುದಾಯಗಳು ನಲುಗುತ್ತಲೆ ಇದೆ.
ಆದರೆ ವಿಪರ್ಯಾಸವೆಂದರೆ ಇದುವರೆಗೂ ನಾವು ಹಿಂದೂಗಳ ರಕ್ಷಣೆಗೆ ಇರುವುದು ಎಂದು ಸದಾ ಎದೆ ಬಡಿದುಕೊಳ್ಳುವ ಸಂಘಟನೆಗಳು, ರಾಜಕೀಯ ಪಕ್ಷಗಳು ಇದರ ಬಗ್ಗೆ ಸೊಲ್ಲೆತ್ತದೆ ಇವೆ. ಆ ಮೂಲಕ ದಲಿತರನ್ನು ಈ ವ್ಯವಸ್ಥೆಯಿಂದ ದೂರ ಇಡಬೇಕೆಂಬ ನಯವಾದ ಸಂದೇಶವೂ ಗೋಚರವಾಗುತ್ತಿದೆ.
ರಾಜಕೀಯ ಓಲೈಕೆಗಷ್ಟೇ ದಲಿತರೇ?
ಕಳೆದ ಒಂದು ವಾರದಿಂದ ದೇಶದಲ್ಲಿ ದಲಿತರ ಸರಣಿ ಹತ್ಯೆಯ ಸುದ್ದಿ ಕೇಳುತ್ತಲೇ ಇದ್ದೇವೆ. ಇದರ ಜತೆಗೆ ಯಾವುದೋ ಕೇರಳ ಸ್ಟೋರಿ ಎಂಬ ಸುಳ್ಳು ಸಿನಿಮಾ ಪ್ರಚಾರಕ್ಕೆ ಮುಳುಗಿರುವ ಸೋ ಕಾಲ್ಡ್ ಮಾಧ್ಯಮಗಳೂ ದಲಿತರ ಸುದ್ದಿಯನ್ನು ಮುನ್ನೆಲೆಗೆ ತರುವ ನಿರ್ಲಕ್ಷ್ಯವನ್ನು ತೋರುತ್ತಿದ್ದಾರೆ. ಇಷ್ಟೆಲ್ಲಾ ನಡೆದರೂ ಕೂಡ ಇದುವರೆಗೂ ಯಾವುದೇ ಒಂದು ಹಿಂದೂ ಸಂಘಟನೆ ಅದರ ಬಗ್ಗೆ ಚಕಾರು ಎತ್ತಿದ್ದಾಗಲಿ ಅಥವಾ ಅದನ್ನು ಪ್ರತಿಭಟಿಸಿದ್ದಾಗಲಿ ಎಲ್ಲೂ ಕಾಣುತ್ತಿಲ್ಲ. ಯಾಕೆ?. ಹಾಗಾದರೆ ದಲಿತರು ಹಿಂದೂಗಳಲ್ಲವೇ?. ಇಂತಹ ನೂರಾರು ಪ್ರಶ್ನೆಗಳು ನಮ್ಮೊಳಗೆ ನುಸುಳುತ್ತಲೆ ಇವೆ. ಆದರೆ ಅರಿಯಬೇಕಾಗಿರುವುದು ಏನೆಂದರೆ ನಾವೆಲ್ಲಾ ಹಿಂದೂಗಳು ಎಂದು ಕರೆದು ಅದರಿಂದ ಲಾಭಪಡೆಯುವುದರಲ್ಲಿ ಮುಳುಗಿರುವ ಆರ್ ಎಸ್ಎಸ್, ಬಜರಂಗದಳ, ಶ್ರೀರಾಮ ಸೇನೆ, ವಿಶ್ವ ಹಿಂದೂ ಪರಿಷತ್ ಎಂಬ ಸೋ ಕಾಲ್ಡ್ ಹಿಂದೂ ಸಂಘಟನೆಗಳು ದಲಿತರನ್ನು ರಾಜಕೀಯವಾಗಿ ಮಾತ್ರ ಓಲೈಸುವ ಪ್ರಯತ್ನದಲ್ಲಿ ಇದ್ದಾರೆಯೇ ಹೊರತು. ಅವರ ಹತ್ಯೆ, ಶೋಷಣೆ, ಹಲ್ಲೆ ಆದಾಗ ಪ್ರತಿಭಟಿಸುವುದಕ್ಕಲ್ಲ ಎಂಬುದು.
ಸ್ವಾತಂತ್ರ್ಯ ಪೂರ್ವದಿಂದಲೂ ಈ ಸಂಘಟನೆಗಳು ದಲಿತರನ್ನು ಅವರೆಲ್ಲಾ ಹಿಂದೂಗಳು, ಅವರು ನಮ್ಮವರೆಂದು ಧ್ವನಿ ಎತ್ತಿದ್ದ ಇತಿಹಾಸವೇ ಎಲ್ಲೂ ಇಲ್ಲ. ಹಾಗೇ ನೋಡಿದರೆ ಈ ದೇಶದಲ್ಲಿ ದಲಿತರ ಶೋಷಣೆ, ದಲಿತರ ಹತ್ಯೆಯ ರಕ್ತಸಿಕ್ತ ಘಟನೆಗಳು ಇತಿಹಾಸದ ಪುಟದಲ್ಲಿ ಇವೆ. ಇದರ ಜತೆಗೆ ಹಿಂದೂ ಎಂದು ಬೊಬ್ಬೆ ಹೊಡೆಯುವ ಸಂಘಟನೆಗಳ ಕರಾಳ ಮುಖವನ್ನು ಕೂಡ ಅಚ್ಚೊತ್ತಲಾಗಿದೆ.
ಹಿಂದೂತ್ವ ಸಂಘಟನೆಗಳು ಯಾಕೆ ಮೌನವಾಗಿವೆ?
1968- ತಮಿಳುನಾಡಿನಲ್ಲಿ 44 ದಲಿತರ ಸಜೀವ ದಹನ, 1977- ಬಿಹಾರದಲ್ಲಿ17 ಜನ ಹತ್ಯೆ,1978- ಪಶ್ಚಿಮ ಬಂಗಾಳದ ಸುಂದರವನದಲ್ಲಿ ಸರ್ಕಾರದಿಂದ ದಲಿತ ನಿರಾಶ್ರಿತರ ಹತ್ಯೆ, 1984- ಆಂಧ್ರ ಪ್ರದೇಶದಲ್ಲಿ 6 ಜನ ದಲಿತರ ಹತ್ಯೆ, 3 ದಲಿತ ಮಹಿಳೆಯರ ಮೇಲೆ ಅತ್ಯಾಚಾರ, 1991- 9 ಮಂದಿ ದಲಿತರನ್ನು ಕೊಂದು ಕಾಲುವೆಗೆ ಎಸೆಯಲಾಯಿತು. 1997 ರಲ್ಲಿ ತಮಿಳುನಾಡಿನಲ್ಲಿ ದಲಿತ ಪಂಚಾಯಿತಿ ಪ್ರತಿನಿಧಿ ಹಾಗೂ ಅವನ 6 ಬೆಂಬಲಿಗರ ಕೊಲೆ, 2000ನೇ ಇಸವಿಯಲ್ಲಿ ಕರ್ನಾಟಕದಲ್ಲಿ 6 ದಲಿತರ ಸಜೀವ ದಹನ, 2003 ರಲ್ಲಿ 5 ಜನ ದಲಿತರನ್ನು ಪೊಲೀಸ್ ಠಾಣೆಯ ಎದುರು ಕೊಚ್ಚಿ ಕೊಂದದ್ದು, 2018 ಯುಪಿಯಲ್ಲಿ 4 ಜನ ದಲಿತರನ್ನು ವಾಹನಕ್ಕೆ ಕಟ್ಟಿ ಥಳಿಸಿದ್ದು, ಜೈಪುರ್ ನಲ್ಲಿ ದಲಿತ ಪೊಲೀಸ್ ಪೇದೆ ಕುದುರೆ ಸವಾರಿ ಮಾಡಿದಕ್ಕೆ ಶೋಷಣೆ, ರಾಜ್ ಕೋಟ್ ನಲ್ಲಿ ದಲಿತನೋರ್ವ ಮಲಗುಂಡಿ ಶುಚಿಗೊಳಿಸದಿದ್ದುದಕ್ಕೆ ಕೊಲೆ, ಗೋಸಾಗಾಣಿಕೆ ನೆಪದಲ್ಲಿ ದಲಿತರ ಹತ್ಯೆ, ಕೋಲಾರದ ಕಂಬಾಲ ಪಲ್ಲಿಯಲ್ಲಿ ದಲಿತ ಮಹಿಳೆಯರು ಬೌದ್ಧ ಧರ್ಮಕ್ಕೆ ಸೇರಿ ಶಿಕ್ಷಣ ಪಡೆದಿದ್ದಕ್ಕೆ ಅತ್ಯಾಚಾರ, ತಮಿಳುನಾಡಿನಲ್ಲಿ ದಲಿತನೋರ್ವನ ಶವಸಂಸ್ಕಾರಕ್ಕೆ ಮೇಲ್ವರ್ಗದವರು ದಾರಿ ಬಿಡದೆ ಸೇತುವೆ ಕೆಳಗಿನಿಂದ ಶವ ಸಾಗಿಸಿದ್ದು, ಗುಜರಾತಿನಲ್ಲಿ ದಲಿತನೋರ್ವನ ಬಟ್ಟೆ ಬಿಚ್ಚಿ ಸಾಮೂಹಿಕವಾಗಿ ಥಳಿಸಿದ್ದು, ರೋಣಾ ತಾಲೂಕಿನಲ್ಲಿ ದಲಿತ ಹತ್ಯೆ, ಉಡುಪಿಯಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದಲಿತ ಎಂಬ ಕಾರಣಕ್ಕೆ ಹಿಂದೂ ಸ್ಮಶಾನದಲ್ಲಿ ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡದಿದ್ದದ್ದು, 2019-20 ರಲ್ಲಿ ಯುಪಿಯಲ್ಲಿ ದಲಿತ ಯುವತಿ ಮನಿಷಾ ಅತ್ಯಾಚಾರ ಮಾಡಿ ಹತ್ಯೆಗೈದಿದ್ದು, ನಂಜನಗೂಡಿನಲ್ಲಿ ದಲಿತರ ಕ್ಷೌರ ಮಾಡಿದಕ್ಕೆ ಕ್ಷೌರಿಕನಿಗೆ ಬಹಿಷ್ಕಾರ ಹಾಕಿದ್ದು, 2022 ರಲ್ಲಿ ಚಾಮರಾಜನಗರದಲ್ಲಿ ಸಾರ್ವಜನಿಕ ನೀರಿನ ಟ್ಯಾಂಕ್ ನಿಂದ ದಲಿತರು ನೀರು ಕುಡಿದಿದ್ದಕ್ಕೆ ಬಹಿಷ್ಕಾರ, ಕೋಲಾರದಲ್ಲಿ ದಲಿತ ಯುವಕ ದೇವರ ಕೋಲು ಮುಟ್ಟಿದ್ದಕ್ಕೆ 50 ಸಾವಿರ ದಂಡ, ಚಿಕ್ಕಮಗಳೂರಿನಲ್ಲಿ ದಲಿತ ಕೆಲಸಗಾರನನ್ನು ಮಾಲೀಕ ಕೂಡಿ ಹಾಕಿ ಹಿಂಸೆ ನೀಡಿದ್ದು, 2023ರಲ್ಲಿ ದಲಿತ ಹುಡುಗ ಹೊಸ ಬಟ್ಟೆ ಕೂಲಿಂಗ್ ಗ್ಲಾಸ್ ಹಾಕಿದ್ದಕ್ಕೆ ಹಲ್ಲೆ, ಮಹಾರಾಷ್ಟ್ರದಲ್ಲಿ ಅಂಬೇಡ್ಕರ್ ಜಯಂತಿಯ ಮುಂದಾಳ್ತನ ವಹಿಸಿದ ಕಾರಣಕ್ಕೆ ದಲಿತ ಹುಡುಗನ ಹತ್ಯೆ, ಗುಜರಾತಿನಲ್ಲಿ ಬೆಂಡು ಮುಟ್ಟಿದಕ್ಕೆ ದಲಿತ ಹುಡುಗನ ಹೆಬ್ಬರಳು ಕತ್ತರಿಸಿರುವುದು, ತಮಿಳುನಾಡಿನಲ್ಲಿ ದಲಿತರು ದೇವಸ್ಥಾನಕ್ಕೆ ಹೋಗಬಾರದೆಂದು ಜಿಲ್ಲಾಡಳಿತದಿಂದ ಬೀಗ ಜಡಿದಿರುವುದು, ಮುಂಬೈನಲ್ಲಿ ದಲಿತ ಹುಡುಗಿಯ ಮೇಲೆ ಪ್ರಾಂಶುಪಾಲನ ನಿರಂತರ ಅತ್ಯಾಚಾರ, ಊನಾ ಪ್ರಕರಣದಲ್ಲಿ ದಲಿತ ಸಮುದಾಯದ ಸಂತ್ರಸ್ತೆ ಸಾಕ್ಷಿ ಹೇಳಿದಕ್ಕೆ ಅವರ ಮನೆಯನ್ನು ಸುಟ್ಟಿರುವುದು ಹೀಗೇ ಭಾರತದುದ್ದಕ್ಕೂ ದಲಿತರನ್ನು ಜಾತಿ ಆಧಾರದ ಮೇಲೆ ನಿರಂತವಾಗಿ ಹತ್ಯೆ, ಶೋಷಣೆ ಮಾಡುತ್ತಲೆ ಬಂದಿದ್ದಾರೆ. ಆದರೆ ಆರ್ ಎಸ್ಎಸ್, ಬಜರಂಗದಳ, ಶ್ರೀರಾಮ ಸೇನೆ, ವಿಶ್ವ ಹಿಂದೂ ಪರಿಷತ್ ಎಂಬ ಸಂಘಟನೆಗಳು ಇದುವರೆಗೂ ಮೌನ ಮುರಿದಿಲ್ಲ ಯಾಕೆ? ಹಾಗಾದರೆ ದಲಿತರೆಲ್ಲಾ ಯಾರು? ಇದರಿಂದ ಒಂದಂತೂ ಸ್ಪಷ್ಟವಾಗಿ ಅರ್ಥವಾಗುತ್ತಿದೆ- ಹಿಂದೂ ಎಂದು ಬೊಬ್ಬೆ ಹೊಡೆಯುವ ಸಂಘಟನೆಗಳೆಲ್ಲಾ ತನ್ನೊಳಗೆಯೇ ಜಾತಿವಾದವನ್ನು ಪೋಷಣೆ ಮಾಡುತ್ತಲೆ ಬರುತ್ತಿರುವುದು.
ಜಾಣ ಮೌನವೇ?
ಹಿಂದೂ ಸಂಘಟನೆಗಳು ಎಂದು ರೂಪಗೊಂಡಿರುವ ಈ ಸೋ ಕಾಲ್ಡ್ ಹಿಂದೂ ಸಂಘಟನೆಗಳು ಈ ದೇಶವನ್ನು ಹಿಂದೂ ರಾಷ್ಟ್ರ ಮಾಡುತ್ತೇವೆಂದು ಹೇಳಿಕೆ ನೀಡುತ್ತಲೆ ಬಂದಿದ್ದಾರೆಯೇ ಹೊರತು ಹಿಂದೂಗಳಿಂದಲೇ ದಲಿತರ ಶೋಷಣೆ, ಹತ್ಯೆ ಆಗುತ್ತಿದೆ ಎಂದು ಯಾವುದೇ ಹೇಳಿಕೆ ನೀಡಿದ್ದಾಗಲಿ, ನಾವೆಲ್ಲಾ ಸಮಾನರು ಎಂಬ ಸಂದೇಶ ರವಾನಿಸಿದ್ದಾಗಲಿ ಇಲ್ಲ. ಹಾಗೆ ನೋಡುವುದಾದರೆ ಈ ಸಂಘಟನೆಗಳು ಸದಾ ಅನ್ಯ ಧರ್ಮದ ಮೇಲೆ ವಿಷಕಾರಿ ಕೋಮುದ್ವೇಷ ಬಿತ್ತುವಲ್ಲಿ, ಸಮಾಜದ ಶಾಂತಿ ಸುವ್ಯವಸ್ಥೆ ಹಾಳು ಮಾಡುವುದರಲ್ಲೆ ಕಾಲ ಕಳೆದಿದ್ದಾರೆ. ಇದರ ಜತೆಗೆ ಈ ದೇಶದಲ್ಲಿ ಸ್ವಾಮಿ ವಿವೇಕಾನಂದ, ನಾರಾಯಣಗುರು ಅವರ ಹಿಂದೂ ಧರ್ಮ ಪರಿಕಲ್ಪನೆಯನ್ನು ಇಂದಿನ ಯುವಮನಸ್ಸುಗಳಿಂದ ಅಳಿಸಿ ಹಾಕಿ ಹಿಂದೂತ್ವ ಎಂಬ ಮನುವಾದಿಗಳ ಹೂರಣ ತಲೆಗೆ ತುಂಬಿಸಿದ್ದಾರೆ. ಹೀಗೆ ತುಂಬಿಸಿರುವುದರಿಂದಲೇ ಇಂದು ದಲಿತರ ಸರಣಿ ಹತ್ಯೆಯಾದರೂ ದಲಿತ ಸಮುದಾಯದ ಅದೆಷ್ಟೋ ಯುವಕರು ಇದರ ಬಗ್ಗೆ ಮಾತು ಕೂಡ ಆಡದೆ ಹಿಂದೂ ರಾಷ್ಟ್ರದ ಅಮಲಿನಲ್ಲಿ ಮುಳುಗಿರುವುದು. ಅದಕ್ಕೆ ಕಾರಣ ಆರ್ ಎಸ್ಎಸ್, ಬಜರಂಗದಳ, ಶ್ರೀರಾಮಸೇನೆ, ವಿಶ್ವ ಹಿಂದೂ ಪರಿಷತ್ ಸಂಘಟನೆಗಳ ಕಾಲಾಳುಗಳಾಗಿ ಅವರೆಲ್ಲಾ ಕಾರ್ಯ ನಿರ್ವಹಿಸುತ್ತಿರುವುದು. ಹಾಗಾದರೆ ಈ ಹಿಂದೂ ಸಂಘಟನೆಗಳ ಪ್ರಕಾರ ದಲಿತರು ಯಾರು?. ಅನ್ಯ ಧರ್ಮದಿಂದ ಹಿಂದೂ ಧರ್ಮಕ್ಕೆ ಅಪಾಯವಿದೆ ಎಂದು ಬೊಬ್ಬೆ ಹೊಡೆಯುವ ಈ ಸಂಘಟನೆಗಳು ಹಿಂದೂ ಧರ್ಮದಲ್ಲಿಯೇ ದಲಿತರಿಗೆ ಅಪಾಯವಿದೆ ಎಂದು ಅರಿತಿಲ್ಲವೇ? ಅಥವಾ ಅರಿವಿದ್ದರೂ ಜಾಣ ಮೌನವೇ?
ಗೋಲ್ವಾಲ್ಕರ್ ಚಿಂತನೆಯ ಪಾಲಕರು..
“ಮನುಸ್ಮೃತಿಯ ಮುಖ್ಯ ಉದ್ದೇಶ ಅತ್ಯಲ್ಪಸಂಖ್ಯಾತ ಸವರ್ಣೀಯರ ವರ್ಗಹಿತಾಸಕ್ತಿಯನ್ನು ಕಾಪಾಡಿಕೊಳ್ಳುವುದು ಮತ್ತು ಬಹುಸಂಖ್ಯಾತ ಕೆಳಜಾತಿಗಳ ಜನರನ್ನು ಶೋಷಣೆಗೆ ಒಳಪಡಿಸುವುದೇ ಆಗಿರುತ್ತದೆ”. (ಬಸವಣ್ಣ ಮತ್ತು ಅಂಬೇಡ್ಕರ್ ಹಾಗೂ ಇತರ ಲೇಖನ ಪುಸ್ತಕ) ಎಂದು ಅಂಬೇಡ್ಕರ್ ಹೇಳಿದ್ದರು. ಆದರೆ ಅದು 21 ನೇ ಶತಮಾನದಲ್ಲಿ ಯಥಾವತ್ತಾಗಿಯೇ ಗೋಚರವಾಗುತ್ತಿದೆ. ಹಿಂದೂ ಧರ್ಮದಲ್ಲಿ ನಾವೆಲ್ಲಾ ಹಿಂದೂಗಳು ಎಂದು ಹೇಳಿಕೊಳ್ಳುವುದಕ್ಕಿಂತ ಜಾತಿ ಸಮೀಕರಣದಿಂದ ಎದೆಯುಬ್ಬಿಸಿ ನಡೆಯುವವರೆ ಹೆಚ್ಚಾಗಿದ್ದಾರೆ. ಆ ಮನೋಭಾವದಿಂದಲೆ ಅದೆಷ್ಟೋ ಹಿಂದೂ ಸಂಘಟನೆಗಳು ದಲಿತರ ಪರವಾಗಿ ಧ್ವನಿ ಎತ್ತುವುದಿಲ್ಲ. ಯಾಕೆಂದರೆ ಅದರ ಮುಖ್ಯಸ್ಥ, ಸಂಸ್ಥಾಪಕ ಎಲ್ಲರೂ ಮೇಲ್ಜಾತಿಯವರೇ, ಅಲ್ಲದೇ ಅವರೆಲ್ಲಾ ಬಯಸುವುದು ಕೂಡ ಗುಲಾಮಗಿರಿಯ ಸಮಾಜವನ್ನೇ. ಆ ದೃಷ್ಟಿಯಿಂದ ನೋಡುವುದಾದರೆ ಆರ್ ಎಸ್ ಎಸ್ ಸಂಸ್ಥಾಪಕ ಗೋಲ್ವಾಲ್ಕರ್ ತನ್ನ “ ಬಂಚ್ ಆಫ್ ಥಾಟ್ಸ್” ಕೃತಿಯಲ್ಲಿ “ ನಾನು ಇಂಗ್ಲೀಷರ ಗುಲಾಮಗಿರಿ ಮಾಡಲು ಜೀವನ ಪರ್ಯಂತ ಸಿದ್ಧನಿದ್ದೇನೆ. ಆದರೆ, ದಲಿತರಿಗೆ, ಹಿಂದುಳಿದವರಿಗೆ, ಮುಸ್ಲಿಮರಿಗೆ ಸರಿಸಮಾನ ಅಧಿಕಾರ ಕೊಡುವುದಾದರೆ ನನಗೆ ಅಂತಹ ಸ್ವಾತಂತ್ರ್ಯ ಬೇಡ” ಸ್ವಾತಂತ್ರ್ಯ ಸಿಕ್ಕರೂ ಮೊದಲು ಸವರ್ಣೀಯರು ಮಾಡಬೇಕಾದ ಕೆಲಸ ದೇಶದ ಆಡಳಿತ ದಲಿತರ ಕೈಯಲ್ಲಿ ಕೊಡಬಾರದು, ಅವರ ಮಕ್ಕಳು ಶಿಕ್ಷಣ ಪಡೆಯಬಾರದು, ಉನ್ನತ ಅಧಿಕಾರಿಯಾಗಬಾರದು, ಅವರ ಮಕ್ಕಳು ಅಪೌಷ್ಠಿಕತೆಯಿಂದ ನರಳಬೇಕು, ದಲಿತರು ಗುಲಾಮಗಿರಿಯಲ್ಲೇ ಸಾಯಬೇಕು” ಎಂದಿದ್ದಾರೆ. ಅದನ್ನು ಗೋಲ್ವಾಲ್ಕರ್ ಅನುಯಾಯಿಗಳು ಚಾಚು ತಪ್ಪದೆ ಪಾಲಿಸುತ್ತಿದ್ದಾರೆ.
ಸಂವಿಧಾನ ಬಂದು ಈ ದೇಶದಲ್ಲಿ ಪ್ರಜಾಪ್ರಭುತ್ವ ನೆಲಗೊಂಡರೂ ಇನ್ನೂ ಸಮಾನತೆಯ ಕೊರತೆ ಎದ್ದು ಕಾಣುತ್ತಿದೆ ಎಂದರೆ ಅದಕ್ಕೆ ತಾರತಮ್ಯ ಮನಸ್ಥಿತಿಯೇ ಕಾರಣ. ಇಂತಹ ಜಾತಿವಾದಿಗಳ ಕೂಟ ʼಹಿಂದೂ ನಾವೆಲ್ಲ ಒಂದುʼ ಎಂದು ಜನರನ್ನು ಒಗ್ಗೂಡಿಸಿ ಈ ದೇಶವನ್ನು ಮನುವಿನ ಅಡಿಗೆ ಶರಣಾಗಿಸುವ ನಿರಂತರ ಪ್ರಯತ್ನದಲ್ಲಿಯೇ ಇದೆ.
ಆಕಾಶ್.ಆರ್.ಎಸ್
ಯುವ ಪತ್ರಕರ್ತರು
ಇದನ್ನೂ ಓದಿ-ಕುಸ್ತಿಪಟುಗಳ ಮೇಲೆ ನಡೆದ ಅತ್ಯಾಚಾರ ದೇಶದ ಮೇಲಿನ ಅತ್ಯಾಚಾರವಲ್ಲವೇ?