Home ಅಪರಾಧ ನೈರುತ್ಯ ರೈಲ್ವೆ ಆರ್‌ಪಿಎಫ್ ಆಗಸ್ಟ್ 2026ರ ಸಾಧನೆ: 33 ಮಕ್ಕಳ ರಕ್ಷಣೆ, ₹12.5 ಕೋಟಿ ಮೌಲ್ಯದ...

ನೈರುತ್ಯ ರೈಲ್ವೆ ಆರ್‌ಪಿಎಫ್ ಆಗಸ್ಟ್ 2026ರ ಸಾಧನೆ: 33 ಮಕ್ಕಳ ರಕ್ಷಣೆ, ₹12.5 ಕೋಟಿ ಮೌಲ್ಯದ ಮಾದಕವಸ್ತು ವಶ

0

ನೈರುತ್ಯ ರೈಲ್ವೆಯ (SWR) ರೈಲ್ವೆ ಭದ್ರತಾ ಪಡೆ (ಆರ್‌ಪಿಎಫ್) 2026ರ ಆಗಸ್ಟ್ ತಿಂಗಳ ತನ್ನ ಕಾರ್ಯಾಚರಣೆಯ ವರದಿಯನ್ನು ಪ್ರಕಟಿಸಿದ್ದು, ಪ್ರಯಾಣಿಕರ ಸುರಕ್ಷತೆ, ದಲ್ಲಾಳಿಗಳ ನಿಯಂತ್ರಣ ಹಾಗೂ ಮಾದಕವಸ್ತು ಸಾಗಣೆ ತಡೆಗಟ್ಟುವಲ್ಲಿ ಪ್ರಮುಖ ಯಶಸ್ಸು ಕಂಡಿದೆ.

‘ಆಪರೇಷನ್ ನನ್ಹೆ ಫರಿಶ್ತೆ’ ಅಡಿಯಲ್ಲಿ ಕುಟುಂಬಗಳಿಂದ ಬೇರ್ಪಟ್ಟಿದ್ದ 27 ಗಂಡು ಮತ್ತು 6 ಹೆಣ್ಣು ಮಕ್ಕಳು ಸೇರಿದಂತೆ ಒಟ್ಟು 33 ಮಕ್ಕಳನ್ನು ಆರ್‌ಪಿಎಫ್ ರಕ್ಷಿಸಿದೆ. ರಕ್ಷಿಸಲ್ಪಟ್ಟ ಎಲ್ಲಾ ಮಕ್ಕಳನ್ನು ಎನ್‌ಜಿಒಗಳು ಅಥವಾ ಪೊಲೀಸರ ವಶಕ್ಕೆ ಸುರಕ್ಷಿತವಾಗಿ ಒಪ್ಪಿಸಲಾಗಿದೆ. ಇದರೊಂದಿಗೆ, ‘ಆಪರೇಷನ್ ಡಿಗ್ನಿಟಿ’ ಅಡಿಯಲ್ಲಿ ರಕ್ಷಣೆ ಮತ್ತು ಆರೈಕೆಯ ಅಗತ್ಯವಿದ್ದ ನಾಲ್ವರು ಹಿರಿಯ ನಾಗರಿಕರನ್ನು ಪತ್ತೆಹಚ್ಚಿ, ಸೂಕ್ತ ಪರಿಶೀಲನೆಯ ನಂತರ ಅವರ ಕುಟುಂಬಗಳಿಗೆ ಅಥವಾ ಕಲ್ಯಾಣ ಸಂಸ್ಥೆಗಳಿಗೆ ಸೇರಿಸಲಾಗಿದೆ.

‘ಆಪರೇಷನ್ ಉಪಲಬ್ಧ್’ ಅಡಿಯಲ್ಲಿ ಟಿಕೆಟ್ ಕಪ್ಪು ಮಾರುಕಟ್ಟೆ ಮತ್ತು ದಲ್ಲಾಳಿಗಳ ವಿರುದ್ಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದ್ದು, ವಿವಿಧ ಟ್ರಾವೆಲ್ ಏಜೆನ್ಸಿಗಳ ಮೇಲೆ ದಾಳಿ ನಡೆಸಲಾಗಿದೆ. ರೈಲ್ವೆ ಕಾಯ್ದೆಯ ಸೆಕ್ಷನ್ 143 ರ ಅಡಿಯಲ್ಲಿ 12 ಮಂದಿ ದಲ್ಲಾಳಿಗಳನ್ನು ಬಂಧಿಸಲಾಗಿದ್ದು, ₹53,001 ಮೌಲ್ಯದ 18 ಚಾಲ್ತಿಯಲ್ಲಿರುವ (ಲೈವ್) ಟಿಕೆಟ್‌ಗಳು ಹಾಗೂ ₹2,32,909 ಮೌಲ್ಯದ 56 ಬಳಸಿದ ಟಿಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

‘ಆಪರೇಷನ್ ನಾರ್ಕೋಸ್’ ಅಡಿಯಲ್ಲಿ ಮಾದಕವಸ್ತು ಕಳ್ಳಸಾಗಣೆಯ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ಪಡೆ, 127.5 ಕೆಜಿ ಗಾಂಜಾ ಮತ್ತು ಬರೋಬ್ಬರಿ 14.98 ಕೆಜಿ ಆಂಫೆಟಮೈನ್ ವಶಪಡಿಸಿಕೊಂಡಿದೆ. ಜಪ್ತಿ ಮಾಡಲಾದ ಒಟ್ಟು ಮಾದಕವಸ್ತುಗಳ ಮೌಲ್ಯ ₹12.5 ಕೋಟಿ ಎಂದು ಅಂದಾಜಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ. ಇನ್ನು ‘ಆಪರೇಷನ್ ಸತರ್ಕ್’ ಅಡಿಯಲ್ಲಿ 8 ಪ್ರತ್ಯೇಕ ಪ್ರಕರಣಗಳಲ್ಲಿ 89 ಲೀಟರ್ ಅಕ್ರಮ ಮದ್ಯವನ್ನು ವಶಪಡಿಸಿಕೊಂಡು ಅಬಕಾರಿ ಇಲಾಖೆಗೆ ಒಪ್ಪಿಸಲಾಗಿದೆ.

ಪ್ರಯಾಣಿಕರ ಸುರಕ್ಷತೆ ಹಾಗೂ ಕುಂದುಕೊರತೆಗಳಿಗೆ ತ್ವರಿತವಾಗಿ ಸ್ಪಂದಿಸಿರುವ ಆರ್‌ಪಿಎಫ್, ರೈಲುಗಳಲ್ಲಿ ಮರೆತುಬಿಟ್ಟಿದ್ದ ಲ್ಯಾಪ್‌ಟಾಪ್‌ಗಳು, ಮೊಬೈಲ್ ಫೋನ್‌ಗಳು ಮತ್ತು ಚಿನ್ನಾಭರಣಗಳು ಸೇರಿದಂತೆ ಒಟ್ಟು ₹66.41 ಲಕ್ಷ ಮೌಲ್ಯದ ವಸ್ತುಗಳನ್ನು 67 ಪ್ರತ್ಯೇಕ ಘಟನೆಗಳಲ್ಲಿ ಪತ್ತೆಹಚ್ಚಿ ವಾರಸುದಾರರಿಗೆ ಮರಳಿಸಿದೆ.

ಏಕಾಂಗಿಯಾಗಿ ಪ್ರಯಾಣಿಸುವ ಮಹಿಳೆಯರ ಸುರಕ್ಷತೆಗಾಗಿ ‘ಮೇರಿ ಸಹೇಲಿ’ ಯೋಜನೆಯಡಿ 32 ವಿಶೇಷ, ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳ ಮೇಲೆ ನಿಗಾ ಇರಿಸಲಾಗಿದೆ. ರೈಲುಗಳಲ್ಲಿ ನಿರಂತರ ಭದ್ರತೆ ಕಾಪಾಡಲು ನಿತ್ಯ 125 ರಿಂದ 130 ಆರ್‌ಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದ್ದು, ಪ್ರತಿದಿನ 36 ರಿಂದ 40 ರೈಲುಗಳಿಗೆ ಬೆಂಗಾವಲು ಭದ್ರತೆ ಒದಗಿಸಲಾಗುತ್ತಿದೆ.

You cannot copy content of this page

Exit mobile version