ಈಗಿರುವ ಸರ್ಕಾರಕ್ಕೆ ಪರ್ಯಾಯ ರಾಜಕಾರಣವೆಂದರೆ ನೀತಿಗಳ ಬದಲಾವಣೆಯೇ ಹೊರತು ಸರ್ಕಾರ ಬದಲಾವಣೆಯಲ್ಲ. ಮುಖ್ಯಮಂತ್ರಿ ಬದಲಾವಣೆ ಎನ್ನುವುದು ಪರ್ಯಾಯವಲ್ಲ. ನೀತಿಗಳ ಬದಲಾವಣೆಯೇ ನಿಜವಾದ ಪರ್ಯಾಯ ಎಂದು ಚಿಂತಕ, ಸಿಪಿಐಎಂ ರಾಜ್ಯ ಕಾರ್ಯದರ್ಶಿ ಡಾ ಕೆ ಪ್ರಕಾಶ್ ಹೇಳಿದರು.
ಇಂದು ಫ್ರೀಡಂ ಪಾರ್ಕ್ ನಲ್ಲಿ ನಡೆದ ‘ಜನದನಿ ರ‌್ಯಾಲಿ’ಯನ್ನು ಉದ್ದೇಶಿಸಿ ಪ್ರಾಸ್ತಾವಿಕವಾಗಿ ಡಾ ಕೆ ಪ್ರಕಾಶ್ ಮಾತನಾಡಿದರು. ಅವರ ಭಾಷಣದ ಸಾರಾಂಶ ಇಲ್ಲಿದೆ :
ಪರ್ಯಾಯ ರಾಜಕಾರಣಕ್ಮಾಗಿ ಸಿಪಿಐಎಂ ಪಕ್ಷದಿಂದ ಜನದನಿ ರ‌್ಯಾಲಿ ನಡೆಯುತ್ತಿದೆ. ಹೊಸ ರಾಜಕಾರಣ, ಭರವಸೆಯ ಬೆಳಕನ್ನು ಪಸರಿಸಲು ಸಿಪಿಐಎಂ ಕಾರ್ಯಕರ್ತರು, ಶೋಷಿತ ಸಮುದಾಯಗಳ ಸಂಘಟನೆಗಖ ಕಾರ್ಯಕರ್ತರು, ಕಾರ್ಮಿಕ, ರೈತ, ಸಂಘಟಿತ, ಅಸಂಘಟಿತ ಕಾರ್ಮಿಕ ಪ್ರತಿನಿಧಿಗಳು, ದಲಿತ, ಅಲ್ಪಸಂಖ್ಯಾತ ಹೋರಾಟಗಾರರು, ಬರಹಗಾರರು, ಪತ್ರಕರ್ತರು, ಸಾಹಿತಿಗಳು ನಾವು ಫ್ರೀಡಂ ಪಾರ್ಕಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದೇವೆ.
ಈ ಸಂದರ್ಭದಲ್ಲಿ ನಾವು 1948 ರಲ್ಲಿ ಅಡಿಗರು ಬರೆದ ಕವನದ ಸಾಲನ್ನು ನೆನಪಿಸಿಕೊಳ್ಳಬೇಕು.
ಕಟ್ಟುವೆವು ನಾವು ಹೊಸ ನಾಡೊಂದನು
ರಸದ ಬೀಡೊಂದನು
ಹೊಸನೆತ್ತರುಕ್ಕುಕ್ಕಿ ಆರಿಹೋಗುವ ಮುನ್ನ
ಹರೆಯದೀ ಮಾಂತ್ರಿಕನ ಮಾಟ ಮುಸುಳುವ ಮುನ್ನ
ಉತ್ಸಾಹಸಾಹಸದ ಉತ್ತುಂಗ ವೀಚಿಗಳ
ಈ ಕ್ಷುಬ್ಧ ಸಾಗರವು ಬತ್ತಿ ಹೋಗುವ ಮುನ್ನ
ಕಟ್ಟುವೆವು ನಾವು ಹೊಸ ನಾಡೊಂದನು
ಕಟ್ಟುವೆವು ನಾವು ಹೊಸ ನಾಡೊಂದನು
ಇದು ಅಡಿಗರ ಪದ್ಯದ ಸಾಲು. ಸ್ವಾತಂತ್ರ್ಯ ಹೋರಾಟದ ಆಶಯವೂ ಇದೇ ಆಗಿತ್ತು. ಆದರೆ ಇವತ್ತು ಸ್ಥಿತಿ ಏನಾಗಿದೆ ? ಅಡಿಗರ ಆಶಯ ಈಡೇರದ ಕಾರಣದಿಂದ ನಾವು ಇಂತಹ ಸಭೆಗಳನ್ನು ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಬಹಳ ಮುಖ್ಯವಾಗಿ, ಕೃಷಿ ಬಿಕ್ಕಟ್ಡು ಇಡೀ ದೇಶದ ದೊಡ್ಡ ಸಮಸ್ಯೆಯಾಗಿದೆ. ಕೃಷಿ ವಲಯ ಎನ್ನುವುದು ಕಾರ್ಪೋರೇಟಿಕರಣ ಆಗಿದೆ. ಭೂಸ್ವಾಧೀನ ಕಾಯ್ದೆಗಳನ್ನು ಅತ್ಯಂತ ಕೆಟ್ಟದಾಗಿ ಜಾರಿ ಮಾಡಲಾಗುತ್ತಿದೆ. ಬ್ರಿಟೀಷ್ ಕಾಲದ ಕಾರ್ಪೋರೇಟ್ ಜಮೀನ್ದಾರಿಕೆ ಚಾಲ್ತಿಯಲ್ಲಿದೆ.
ರೈತರಿಂದ ಭೂಮಿ ಕಿತ್ತು ಕಾರ್ಪೋರೇಟ್ ಕಂಪನಿಳಿಗೆ ಕೊಡುವ ರಾಜ್ಯ- ಕೇಂದ್ರ ಸರ್ಕಾರಗಳು ರೈತ ವಿರೋಧಿ ನೀತಿ ಅನುಸರಿಸುತ್ತಿದೆ.
ರೈತರು, ರೈತ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಕೇಂದ್ರದ ಬಿಜೆಪಿ ಮತ್ತು ರಾಜ್ಯದ ಕಾಂಗ್ರೆಸ್ ಸರ್ಕಾರಗಳು ರೈತರ ಸಮಸ್ಯೆ ಬಗೆಹರಿಸಲಿಲ್ಲ. ಬದಲಾಗಿ ಹೆಚ್ಚಿಸಿದವು.
ಕಾರ್ಮಿಕ ಕಾಯ್ದೆಗಳು ಕಾರ್ಮಿಕರ ಬದುಕನ್ನು ಬೀದಿಗೆ ತಂದು ನಿಲ್ಲಿಸಿದೆ. ಅತ್ಯಂತ ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಕೇಂದ್ರ ಜಾರಿ ಮಾಡುತ್ತಿದೆ.
ಬಿಜೆಪಿ ಸರ್ಕಾರದಲ್ಲಿ ಉದ್ಯೋಗ ಸೃಷ್ಟಿಯ ಯೋಜನೆಗಳೇ ಇಲ್ಲ. ಕಾಂಗ್ರೆಸ್ ಮತ್ತು ಬಿಜೆಪಿಗೆ ಉದ್ಯೋಗದ ಬಗ್ಗೆ ಯೋಜನೆ-ಯೋಚನೆಗಳೇ ಇಲ್ಲ. 30 ಸಾವಿರ ರೂಪಾಯಿಯ ಕನಿಷ್ಟ ಕೂಲಿಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ನಿರುದ್ಯೋಗಿ ಯುವ ಜನರ ಜೊತೆಯಲ್ಲಿ ನಾವು ನಿಲ್ಲಬೇಕಿದೆ.
ಭ್ರಷ್ಟಾಚಾರದ ಮಟ್ಟ ತೀವ್ರ ಹೆಚ್ಚಳವಾಗಿದೆ. ಪೊಲೀಸ್ ಠಾಣೆ, ಸರಕಾರಿ ಕಚೇರಿಯಲ್ಲಿ ಲಂಚ ಇಲ್ಲದೇ ಏನೂ ಕೆಲಸ ನಡೆಯುತ್ತಿಲ್ಲ. ಜನಸಾಮಾನ್ಯರು ಸರ್ಕಾರಿ ಕಚೇರಿಗೆ ಹೋಗದೇ ಇರುವಂತಹ ಸ್ಥಿತಿ ನಿರ್ಮಾಣ ಆಗಿದೆ.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಂಪನಿಗಳಿಗೆ ಸಾವಿರಾರು ಕೋಟಿ ತೆರಿಗೆ ವಿನಾಯಿತಿಯನ್ನು ನೀಡಿದೆ. ತೆರಿಗೆದಾರ ಜನಸಾಮಾನ್ಯರಿಗೆ ಏನು ನೀಡಿದೆ ? ಶಿಕ್ಷಣ ಎನ್ನುವುದು ಖಾಸಗಿಕರಣ, ವ್ಯಾಪಾರಿಕರಣ, ಕೋಮುವಾದಿಕರಣ ಗೊಂಡಿದೆ. ಕೇಂದ್ರದಲ್ಲಿ ಇರುವ ಬಿಜೆಪಿ ಸರ್ಕಾರವು ಅವೈಜ್ಞಾನಿಕ, ಅವೈಚಾರಿಕ ಶಿಕ್ಷಣ ನೀಡುತ್ತಿದೆ. ಅಜ್ಞಾನವನ್ನೇ ಶಿಕ್ಷಣ ಎಂದು ಸಾರಲಾಗುತ್ತಿದೆ.
ಹಣ ಇದ್ದವರಿರುಗೆ ಮಾತ್ರ ಆರೋಗ್ಯ ಎಂಬುದು ಕೇಂದ್ರ, ರಾಜ್ಯಗಳ ನೀತಿಯಾಗಿದೆ. ದುಬಾರಿಯಾಗಿರುವ ಆಸ್ಪತ್ರೆಗೆ ಹೋಗದೆಯೇ ಸಾಯಲು ತೀರ್ಮಾನ ಮಾಡುವಂತಹ ಸ್ಥಿತಿ ಜನಸಾಮಾನ್ಯರಿಗೆ ಎದುರಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರೂ ಸಿಬ್ಬಂದಿ ಇಲ್ಲ.
ವಸತಿ ಸಮಸ್ಯೆ ರಾಜ್ಯದ ಇನ್ನೊಂದು ದೊಡ್ಡ ಸಮಸ್ಯೆಯಾಗಿದೆ.
ದುಡಿಮೆ ಮಾಡಿ ಈ ನಗರಗಳಲ್ಲಿ ಬಡವರು ಸೈಟ್ ತಗೊಳ್ಳಲು ಆಗಲ್ಲ. ಅದಕ್ಕಾಗಿ ಸರ್ಕಾರ ರೂಪಿಸಿದ ವಸತಿ ಯೋಜನೆ ಹೇಗಿದೆ ? ಹಲವು ಅವಾಸ್ ಯೋಜನೆಗಳಲ್ಲಿ ಯಾರಿಗೆ ವಸತಿ, ನಿವೇಶನ ಸಿಗುತ್ತಿದೆ ? ಬಡವರು 40-50 ಲಕ್ಷ ನೀಡಿ ಸೈಟ್, ವಸತಿ ಪಡೆಯಲು ಸಾಧ್ಯವೇ?
ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಜಾಸ್ತಿಯಾಗಿದೆ. ಅಬಿವೃದ್ಧಿ ಆಗ್ತಿದೆ ಅಂತ ಹೇಳ್ತಿದ್ದಾರೆ. ಆದರೆ ಯಾರ ಅಭಿವೃದ್ದಿ ಆಗ್ತಿದೆ ? ಕೋಟ್ಯಾಧಿಪರಿಗಳು ಜಾಸ್ತಿಯಾಗುತ್ತಿದ್ದಾರೆ. ಶ್ರೀಮಂತರ ಅಭಿವೃದ್ದಿ ಆಗುತ್ತಿದೆ. ಅಂಬಾನಿ ಅಧಾನಿಗಳ ಆಸ್ತಿ ಹೆಚ್ಚಳವಾಗಿದೆ.
ಕುವೆಂಪು ಹೇಳಿದ ಮಾತು ಈ ಸಂದರ್ಭಕ್ಕೆ ಸೂಕ್ತವಾಗಿದೆ.
ಕರಿಯರದೊ ಬಿಳಿಯರದೊ ಯಾರದಾದರೆ ಏನು
ಸಾಮ್ರಾಜ್ಯವಾವಗಂ ಸುಲಿಗೆ ರೈತರಿಗೆ
ವಿಜಯನಗರವೊ ಮೊಗಲರಾಳ್ವಿಕೆಯೊ ಇಂಗ್ಲಿಷರೊ
ಎಲ್ಲರೂ ಜಿಗಣೆಗಳೆ ನನ್ನ ನೆತ್ತರಿಗೆ
ಕತ್ತಿ ಪರದೇಶಿಯಾದರೆ ಮಾತ್ರ ನೋವೆ
ನಮ್ಮವರೆ ಹದಹಾಕಿ ತಿವಿದರದು ಹೂವೆ
ನಾವು ಎಂತಹ ಸ್ವಾತಂತ್ರ್ಯ ಪಡೆದಿದ್ದೇವೆ ಎಂದು ಕುವೆಂಪು ಪ್ರಶ್ನಿಸಿದ್ದಾರೆ. ಈ ಪ್ರಶ್ನೆ ಈಗಲೂ ಪ್ರಸ್ತುತವಾಗಿದೆ. ಹಾಗಾಗಿಯೇ ಇಂತಹ ಸಂದರ್ಭದಲ್ಲಿ ಪರ್ಯಾಯ ರಾಜಕಾರಣದ ಪ್ರಶ್ನೆ ಎತ್ತಿದ್ದೇವೆ. ಸರ್ಕಾರ ಅಥವಾ ಮುಖ್ಯಮಂತ್ರಿ ಬದಲಾವಣೆಯಿಂದ ಜನರ ಬದುಕು ಬದಲಾಗಲ್ಲ. ನೀತಿಯಿಂದ ಜನರ ಬದುಕು ಬದಲಾಗುತ್ತದೆ. ಬಹುಸಂಖ್ಯಾತ ದಲಿತರು, ಆದಿವಾಸಿಗಳು, ಶೋಷಿತರು, ಸಂಘಟಿತ- ಅಸಂಘಟಿತ ಕಾರ್ಮಿಕರಿಗಾಗಿ, ರೈತರು, ಬಡವರಿಗಾಗಿ ನೀತಿ ಏನು ರೂಪಿಸುತ್ತೀರಿ ಎನ್ನುವುದು ಪರ್ಯಾಯವನ್ನು ಸೂಚಿಸುತ್ತದೆ.
ನವೆಂಬರ್ 1 ರಿಂದ ನಾವು ಕರ್ನಾಟಕ 5 ಲಕ್ಷ ಮನೆಗಳಿಗೆ ಭೇಟಿ ನೀಡಿದ್ದೇವೆ. ನಮ್ಮ ಕಾರ್ಯಕರ್ತರು ಮನೆ ಮನೆಗಳಿಗೆ ತೆರಳಿ ಜನರ ಸಮಸ್ಯೆ ಬಗ್ಗೆ ಚರ್ಚಿಸಿದ್ದಾರೆ. ಸಿಪಿಐಎಂ ಒಂದೇ ಪರ್ಯಾಯ ರಾಜಕಾರಣ ಮಾಡಲು ಸಾಧ್ಯವಿಲ್ಲ. ಎಲ್ಲಾ ಎಡ, ಪ್ರಜಾಸತ್ತಾತ್ಮಕ ಪಕ್ಷಗಳು ಮತ್ತು ವ್ಯಕ್ತಿಗಳನ್ನೂ ಒಳಗೊಂಡ ಎಡಪ್ರಜಾಸತ್ತಾತ್ಮಕ ಪರ್ಯಾಯ ಕಟ್ಟಬೇಕು. ಎಲ್ಲಾ ಚಳವಳಿಗಳ ಮಧ್ಯೆ ಐಕ್ಯತೆ ಗಟ್ಟಿಗೊಳಿಸಿ ಜನರೆಡೆಗೆ ಕೊಂಡೊಯ್ಯಬೇಕಿದೆ. ಹಾಗಾಗಿ ಈ ರ‌್ಯಾಲಿಗೆ ಜನದನಿ ರ‌್ಯಾಲಿ ಎಂದು ಕರೆಯಲಾಗಿದೆ.
