ರಾಜ್ಯದಲ್ಲಿ ನವೆಂಬರ್ ಕ್ರಾಂತಿಯ ಬಗ್ಗೆ ಚರ್ಚೆ ನಡೆಯುತ್ತಿದೆ. ಸಿದ್ದರಾಮಯ್ಯ ಕುರ್ಚಿ ಬಿಟ್ಟು ಕೊಟ್ಟು ಡಿ ಕೆ ಶಿವಕುಮಾರ್ ಮುಖ್ಯಮಂತ್ರಿ ಆಗ್ತಾರೋ ? ಸರ್ಕಾರ ಬಿದ್ದು ಬಿಜೆಪಿ ಅಧಿಕಾರಕ್ಕೆ ಬರುತ್ತೋ ಎಂಬುದು ನವೆಂಬರ್ ಕ್ರಾಂತಿಯಲ್ಲ. ನವೆಂಬರ್ 1 ರಿಂದ ಜಾರಿಗೆ ಬಂದಿರುವ ಲೇಬರ್ ಕೋಡ್ (ಕಾರ್ಮಿಕ ಸಂಹಿತೆ)ಯನ್ನು ಕೇರಳದ ಮಾದರಿಯಲ್ಲಿ ಕಸದ ಬುಟ್ಟಿಗೆ ಎಸೆಯುವ ಕ್ರಾಂತಿ ನಡೆಯಬೇಕಿದೆ ಎಂದು ಕಾರ್ಮಿಕ ಮುಖಂಡ ಮೀನಾಕ್ಷಿ ಸುಂದರಂ ಹೇಳಿದರು.
ಇಂದು ಸಿಪಿಐಎಂ ವತಿಯಿಂದ ಫ್ರೀಡಂ ಪಾರ್ಕ್ ನಲ್ಲಿ ನಡೆದ ಜನದನಿ ರ‌್ಯಾಲಿಯಲ್ಲಿ ಅವರು ಮಾತನಾಡುತ್ತಿದ್ದರು.
“ಭಾರತ ಸರ್ಕಾರವು ‘ಶಾಂತಿ ಕಾಯ್ದೆ’ಯನ್ನು ತಂದಿದೆ. SHANTI Bill ಪರಮಾಣು ಶಕ್ತಿ ಕ್ಷೇತ್ರದ ಖಾಸಗೀಕರಣವನ್ನು ಬೆಂಬಲಿಸುತ್ತದೆ. ಈ ಮೂಲಕ ಪರಮಾಣು ಶಕ್ತಿ ಕ್ಷೇತ್ರದಲ್ಲಿ ಖಾಸಗಿ ವಲಯದ ಪಾತ್ರವನ್ನು ವಿಸ್ತರಿಸುವ ಉದ್ದೇಶವಿದೆ. ಈ ಕ್ಷೇತ್ರದ ಸ್ವಭಾವವೇ ಅತಿ ಸಂವೇದನಾಶೀಲವಾದುದರಿಂದ ಹಲವು ಗಂಭೀರ ಅಪಾಯಗಳು ಎದುರಾಗಬಹುದು. ಪರಮಾಣು ಸ್ಥಾವರಗಳ ಅಪಘಾತಗಳ ಹೊಣೆಗಾರಿಕೆ ಪ್ರಶ್ನೆಗೆ ಸರ್ಕಾರ ಉತ್ತರ ನೀಡಬೇಕಿದೆ. ಪರಮಾಣು ಅಪಘಾತಗಳ ಪರಿಣಾಮಗಳು ದೀರ್ಘಕಾಲಿಕ ಮತ್ತು ಭೀಕರ. ಅಪಘಾತವಾದರೆ ಯಾರು ಹೊಣೆ? ಉದ್ಯೋಗದ ಖಾತರಿಯೂ ಇರುವುದಿಲ್ಲ ಖಾಸಗಿಕರಣದಿಂದಾಗಿ ಕಂಪನಿಗಳು ಎಲ್ಲಾ ಹೊಣೆಗಳಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ. ಅಂತಿಮವಾಗಿ ಸರ್ಕಾರ ಮತ್ತು ಜನರ ಮೇಲೇ ಹೊರೆ ಬೀಳುವ ಅಪಾಯ ಇದೆ” ಎಂದರು.
“ಕೇಂದ್ರ ಸರ್ಕಾರ ಕಾರ್ಮಿಕ ಸಂಹಿತೆಗಳನ್ನು ತಂದಿದೆ. ಆ ಮೂಲಕ ಕಾರ್ಮಿಕರಿಗೆ ಅನ್ಯಾಯ ಆದರೆ ಅದರ ವಿರುದ್ದ ದ್ವನಿಗೂಡಿಸುವ ಅವಕಾಶ ಇಲ್ಲ. ಮುಷ್ಕರ ಹೂಡುವ ಅವಕಾಶವೂ ಇಲ್ಲ. ಎಷ್ಟು ಬೇಕಾದರೂ ಶೋಷಣೆ ಮಾಡಬಹುದು ಎನ್ನುದನ್ನು ಲೇಬರ್ ಕೋಡ್ ಹೇಳುತ್ತದೆ. ಕಾರ್ಮಿಕರಿಗೆ ರಕ್ಷಣೆ ಕೊಡದೇ ಇರುವ ಸಂಹಿತೆಗೆ ಕಾರ್ಮಿಕ ಸಂಹಿತೆ ಎಂದು ಹೆಸರು ನೀಡಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಕಾರ್ಮಿಕ ಸಂಹಿತೆಯನ್ನು ಜಾರಿ ಮಾಡದಿರಲು ಪಿನರಾಯಿ ವಿಜಯನ್ ನೇತೃತ್ವದ ಕೇರಳ ಸರ್ಕಾರ ಘೋಷಿಸಿದೆ. ಕಾರ್ಮಿಕ ಹಕ್ಕು ಎನ್ನುವುದು ಬಿಕ್ಷೆ ಅಲ್ಲ, ಕಾರ್ಮಿಕರು ಹೋರಾಟದ ಮೂಲಕ ಪಡೆದುಕೊಂಡ ಹಕ್ಕು ಎಂದು ಕೇರಳ ಸರ್ಕಾರ ಹೇಳಿದೆ. ಕರ್ನಾಟಕ ರಾಜ್ಯ ಸರ್ಕಾರ ಯಾಕೆ ಕೇರಳ ಮಾಧರಿಯಲ್ಲಿ ಕಾರ್ಮಿಕ ಸಂಹಿತೆ ವಿರುದ್ದ ನಿಲುವು ತೆಗೆದುಕೊಳ್ಳುವುದಿಲ್ಲ ? ಕರ್ನಾಟಕ ರಾಜ್ಯದ ವಿಧಾನಸಭೆಯಲ್ಲಿ ಕಾರ್ಮಿಕ ಸಂಹಿತೆಯ ಬಗ್ಗೆ ಚರ್ಚೆಯೇ ಆಗಿಲ್ಲ. ಕಾರ್ಮಿಕ ಮತ್ತು ಆರ್ಥಿಕ ನೀತಿಗಳಲ್ಲಿ ಕಾಂಗ್ರೆಸ್ ಗೂ ಬಿಜೆಪಿಗೂ ಯಾವುದೇ ವ್ಯತ್ಯಾಸ ಇಲ್ಲ ಎಂದರ್ಥ” ಎಂದು ಮೀನಾಕ್ಷಿ ಸುಂದರಂ ಹೇಳಿದರು.
ಆರ್ಥಿಕ ನೀತಿಗಳ ವಿಷಯದಲ್ಲಿ ಕಾಂಗ್ರೆಸ್ ಗೆ ಬಿಜೆಪಿ ಪರ್ಯಾಯವಲ್ಲ. ಬಿಜಪಿಗೆ ಕಾಂಗ್ರೆಸ್ ಪರ್ಯಾಯವಲ್ಲ. ಕಾಂಗ್ರೆಸ್ ಬಿಜೆಪಿ ಪಕ್ಷಗಳಿಗೆ ಜೆಡಿಎಸ್ ಪರ್ಯಾಯ ಅಲ್ಲವೆ ಅಲ್ಲ. ಪರ್ಯಾಯವಾಗಬೇಕಿರುವುದು ಎಡಪ್ರಜಾಸತ್ತಾತ್ಮಾಕ ಪರ್ಯಾಯ ರಾಜಕಾರಣ ಮಾತ್ರ. ರೈತರ ಭೂಸ್ವಾಧೀನದ ಪ್ರಶ್ನೆ , ಅಂಗನವಾಡಿ, ಬಿಸಿಯೂಟ, ಪಂಚಾಯತ್ ನೌಕರರು, ಅಸಂಘಟಿತ ಕಾರ್ಮಿಕರು, ಹಮಾಲಿ ಕಾರ್ಮಿಕರ ಶೋಷಣೆ ತಡೆಯಲು ಆಗದ ಸರ್ಕಾರ ರಾಜ್ಯದಲ್ಲಿದೆ ಎಂದು ಮೀನಾಕ್ಷಿ ಸುಂದರಂ ಹೇಳಿದರು.
ನವೆಂಬರ್ ಕ್ರಾಂತಿಯೆಂದರೆ ಡಿಕೆಶಿ ಸಿಎಂ ಆಗುವುದೋ, ಸಿದ್ದರಾಮಯ್ಯ ಕುರ್ಚಿ ಉಳಿಸಿಕೊಳ್ಳುವುದೊ ಅಲ್ಲ. ಒಂದು ಮುಕ್ಕಾಲು ಕೋಟಿ ಜನರಿಗೆ ಕನಿಷ್ಟ ಕೂಲಿ ಸಿಗುವುದೇ ನಿಜವಾದ ಕ್ರಾಂತಿ. ಇದನ್ನೇ ಪರ್ಯಾಯ ರಾಜಕಾರಣ ಎನ್ನುತ್ತೇವೆ ಎಂದು ಕಾರ್ಮಿಕ ಮುಖಂಡ ಮೀನಾಕ್ಷಿ ಸುಂದರಂ ಹೇಳಿದರು.
