Home ದೆಹಲಿ “ಐತಿಹಾಸಿಕ ತಪ್ಪು”: MGNREGA ರದ್ದತಿ ವಿರೋಧಿಸಿ ಮೋದಿ ಸರಕಾರಕ್ಕೆ ಪತ್ರ ಬರೆದ ಖ್ಯಾತ ಅಂತರಾಷ್ಟ್ರೀಯ ತಜ್ಞರು.

“ಐತಿಹಾಸಿಕ ತಪ್ಪು”: MGNREGA ರದ್ದತಿ ವಿರೋಧಿಸಿ ಮೋದಿ ಸರಕಾರಕ್ಕೆ ಪತ್ರ ಬರೆದ ಖ್ಯಾತ ಅಂತರಾಷ್ಟ್ರೀಯ ತಜ್ಞರು.

0

“MGNREGA” ಈಗಾಗಲೇ ತನ್ನ ಸಾಧನೆ ಮತ್ತು ಹೊಸದೇ ಆದ ವಿನ್ಯಾಸದಿಂದ ಜಗತ್ತಿನ ಗಮನ ಸೆಳೆದಿದೆ. ಈಗ ಅದನ್ನು ಕೆಡವಿ ಹಾಕುವುದು ಐತಿಹಾಸಿಕ ತಪ್ಪು.” “ದಿ ವೈರ್” ಬರಹ, ಅನುವಾದ ಸುನೈಫ್

ನವದೆಹಲಿ: ಜಗತ್ತಿನಲ್ಲಿಯೇ ಹಕ್ಕಿನ ಆಧಾರದಲ್ಲಿ ಉದ್ಯೋಗ ನೀಡುವ ಅತಿ ದೊಡ್ಡ ಸಾರ್ವಜನಿಕ ಕಾರ್ಯಕ್ರಮವಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಕಾಯ್ದೆ (MGNREGA)ಯನ್ನು ಬೆಂಬಲಿಸಿಕೊಂಡು ಜಗತ್ತಿನ ಖ್ಯಾತ ಆರ್ಥಿಕ ತಜ್ಞರು ನರೇಂದ್ರ ಮೋದಿ ಸರಕಾರಕ್ಕೆ ಪತ್ರ ಬರೆದಿದ್ದಾರೆ. ಇದೀಗ ಮೋದಿ ಸರಕಾರ ಈ ಕಾಯ್ದೆಯನ್ನು ರದ್ದುಗೊಳಿಸಿ ಅದರ ಬದಲಿಗೆ ವಿಕ್ಷಿತ್‌ ಭಾರತ್‌ – ರೋಜ್‌ಗಾರ್‌ & ಅಜೀವಿಕಾ ಮಿಷನ್‌ (ಗ್ರಾಮೀಣ್)‌ (VB – G RAM – G) ಎಂಬ ಮಸೂದೆಯನ್ನು ಜಾರಿಗೆ ತರುತ್ತಿದೆ. ಅನೇಕ ತಜ್ಞರು ಈಗಾಗಲೇ ಗುರುತಿಸಿರುವಂತೆ ಈ ಹೊಸ ಮಸೂದೆಯು ಜನರ ಉದ್ಯೋಗದ ಹಕ್ಕನ್ನು ಮೊಟಕುಗೊಳಿಸಿ, ಅದನ್ನು ಕೇಂದ್ರ ಸರಕಾರದಿಂದ ಅತಿಯಾಗಿ ನಿಯಂತ್ರಿಸಲ್ಪಡುವ ಯೋಜನೆ ಮಾತ್ರವಾಗಿ ಬದಲಾಯಿಸುತ್ತದೆ.

ಈ ಹೊಸ ಕಾನೂನು ಆಡಳಿತ ಮತ್ತು ಹಣಕಾಸಿನ ವಿಷಯದಲ್ಲಿ ಅನಗತ್ಯ ಮತ್ತು ಸಮರ್ಥನೀಯವಲ್ಲದ ಜವಾಬ್ದಾರಿಗಳನ್ನು ರಾಜ್ಯ ಸರಕಾರಗಳಿಗೆ ದಾಟಿಸುತ್ತದೆ.

ಬಾರ್ಡ್ ಕಾಲೇಜಿನ ಲೆವಿ ಎಕನಾಮಿಕ್ಸ್ ಇನ್ಸ್ಟಿಟ್ಯೂಟ್ ತಯಾರಿಸಿದ ಪತ್ರದಲ್ಲಿ MGNREGA ರದ್ದುಗೊಳಿಸುವ ಕ್ರಮವನ್ನು “ರಚನಾತ್ಮಕ ವಿಧ್ವಂಸಕತೆ” ಎಂದು ಕರೆಯಲಾಗಿದೆ. ಅದರ ರದ್ದತಿಯನ್ನು “ಐತಿಹಾಸಿಕ ತಪ್ಪು” ಎಂದು ಬಣ್ಣಿಸಿದೆ.

ಪತ್ರದಲ್ಲಿ ಈ ಕೆಳಗಿನ ತಜ್ಞರು ಸಹಿ ಮಾಡಿದ್ದಾರೆ:
ಆಲಿವಿಯರ್ ಡಿ ಶುಟರ್, ಅತಿಬಡತನ ಮತ್ತು ಮಾನವ ಹಕ್ಕುಗಳ ಕುರಿತ ವಿಶ್ವಸಂಸ್ಥೆಯ ವಿಶೇಷ ವರದಿಗಾರ.
ಇಸಾಬೆಲ್ಲೆ ಫೆರೆರಾಸ್, ಸಂಶೋಧನಾ ನಿರ್ದೇಶಕಿ FNRS, ಪ್ರಾಧ್ಯಾಪಕರು ಲೌವೈನ್ ವಿಶ್ವವಿದ್ಯಾಲಯ (UCLouvain), ಸೀನಿಯರ್‌ ರಿಸರ್ಚ್ ಅಸೋಸಿಯೇಟ್‌, ಸೆಂಟರ್ ಫಾರ್ ಲೇಬರ್ ಅಂಡ್ ಜಸ್ಟ್ ಎಕಾನಮಿ, ಹಾರ್ವರ್ಡ್ ಲಾ ಸ್ಕೂಲ್.
ಜೇಮ್ಸ್ ಗಾಲ್ಬ್ರೈತ್, ಲಾಯ್ಡ್ ಎಂ. ಬೆಂಟ್ಸೆನ್ ಜೂನಿಯರ್, ಅಮೆರಿಕದ ಆಸ್ಟಿನ್ ನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾಲಯದ ಲಿಂಡನ್ ಬಿ. ಜಾನ್ಸನ್ ಸ್ಕೂಲ್ ಆಫ್ ಪಬ್ಲಿಕ್ ಅಫೇರ್ಸ್‌ನಲ್ಲಿ ಸರಕಾರ/ವ್ಯವಹಾರ ಸಂಬಂಧಗಳ ವಿಭಾಗದ ಅಧ್ಯಕ್ಷರು.
ಡ್ಯಾರಿಕ್ ಹ್ಯಾಮಿಲ್ಟನ್, ಹೆನ್ರಿ ಕೊಹೆನ್, ಅರ್ಥಶಾಸ್ತ್ರ ಮತ್ತು ಅರ್ಬನ್‌ ಪಾಲಿಸಿ ಪ್ರಾಧ್ಯಾಪಕರು, ನ್ಯೂ ಸ್ಕೂಲ್ ಫಾರ್ ಸೋಶಿಯಲ್ ರಿಸರ್ಚ್, USA.
ಮರಿಯಾನಾ ಮಝುಕಾಟೊ, ಪ್ರಾಧ್ಯಾಪಕಿ ಮತ್ತು ಸ್ಥಾಪಕ ನಿರ್ದೇಶಕಿ, ಲಂಡನ್ ವಿಶ್ವವಿದ್ಯಾಲಯ ಕಾಲೇಜು, ಇನ್ಸ್ಟಿಟ್ಯೂಟ್ ಫಾರ್ ಇನ್ನೋವೇಶನ್ ಆಂಡ್ ಪಬ್ಲಿಕ್ ಪರ್ಪಸ್.
ಥಾಮಸ್ ಪಿಕೆಟ್ಟಿ, ಪ್ರಾಧ್ಯಾಪಕರು, EHESS ಮತ್ತು ಪ್ಯಾರಿಸ್ ಸ್ಕೂಲ್ ಆಫ್ ಎಕನಾಮಿಕ್ಸ್, ಸಹನಿರ್ದೇಶಕರು, ವರ್ಲ್ಡ್‌ ಇನ್‌ ಇಕ್ವಾಲಿಟಿ ಲ್ಯಾಬ್‌ & ವರ್ಲ್ಡ್‌ ಇನ್‌ ಇಕ್ವಾಲಿಟಿ ಡೇಟಾಬೇಸ್.
ಜೋಸೆಫ್ ಇ. ಸ್ಟಿಗ್ಲಿಟ್ಜ್, ವಿಶ್ವವಿದ್ಯಾಲಯ ಪ್ರಾಧ್ಯಾಪಕ ಮತ್ತು ನೊಬೆಲ್ ಪ್ರಶಸ್ತಿ ವಿಜೇತ, ಕೊಲಂಬಿಯಾ ವಿಶ್ವವಿದ್ಯಾಲಯ, USA.
ಪಾವ್ಲಿನಾ ಆರ್. ಚೆರ್ನೆವಾ, ಅಧ್ಯಕ್ಷರು ಮತ್ತು ಅರ್ಥಶಾಸ್ತ್ರದ ಪ್ರಾಧ್ಯಾಪಕರು, ದಿ ಲೆವಿ ಎಕನಾಮಿಕ್ಸ್ ಇನ್ಸ್ಟಿಟ್ಯೂಟ್ ಆಫ್ ಬಾರ್ಡ್ ಕಾಲೇಜ್, USA.
ಇಮ್ರಾನ್ ವಲೋಡಿಯಾ, ಅರ್ಥಶಾಸ್ತ್ರದ ಪ್ರಾಧ್ಯಾಪಕ, ವಿಟ್ವಾಟರ್‌ಸ್ರಾಂಡ್ ವಿಶ್ವವಿದ್ಯಾಲಯ, ದಕ್ಷಿಣ ಆಫ್ರಿಕಾ.
ರಾಂಡಲ್ ರೇ, ಪ್ರಾಧ್ಯಾಪಕರು ಮತ್ತು ಹಿರಿಯ ವಿದ್ವಾಂಸರು, ದಿ ಲೆವಿ ಎಕನಾಮಿಕ್ಸ್ ಇನ್ಸ್ಟಿಟ್ಯೂಟ್ ಆಫ್ ಬಾರ್ಡ್ ಕಾಲೇಜ್, USA.

ಸದರಿ ಪತ್ರದ ಪೂರ್ಣ ರೂಪ ಈ ಕೆಳಗಿನಂತಿದೆ.
ಈ ಕೆಳಗೆ ಸಹಿ ಮಾಡಿರುವ ವಿದ್ವಾಂಸರು, ನೀತಿ ನಿರೂಪಕರು, ವಕೀಲರು ಮತ್ತು ಸಮಾಜ ಸೇವಕರುಗಳಾದ ನಾವು (ನಾವೆಲ್ಲರೂ ಭಾರತದ ಗೆಳೆಯರು), ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNREGA) ಯ ರದ್ದತಿ ಕುರಿತು ಆಳವಾದ ಕಳವಳ ವ್ಯಕ್ತಪಡಿಸಲು ಈ ಪತ್ರವನ್ನು ಬರೆಯುತ್ತಿದ್ದೇವೆ. ಬೇಡಿಕೆ ಆಧಾರದಲ್ಲಿ, ಕಾನೂನುಬದ್ಧ ಉದ್ಯೋಗದ ಹಕ್ಕನ್ನು ಖಾತರಿ ಪಡಿಸುವ ಜಗತ್ತಿನ ಅತ್ಯಂತ ಮಹತ್ವದ ಪಾಲಿಸಿಯಾಗಿರುವ ಈ ಮಹತ್ವಪೂರ್ಣ ಕಾನೂನಿಗೆ ಮತ್ತೆ ಬದ್ಧರಾಗಲು ನಾವು ಒತ್ತಾಯಿಸುತ್ತೇವೆ.

ಸಂಸತ್ತಿನ ಸರ್ವಾನುಮತದಿಂದ ಅಂಗೀಕರಿಲ್ಪಟ್ಟಿದ್ದ MGNREGA ಯೋಜನೆಯು ಈಗಾಗಲೇ ರಾಜಕೀಯ ಸರಹದ್ದುಗಳನ್ನು ದಾಟಿಯಾಗಿದೆ. ರಾಷ್ಟ್ರೀಯ ಉದ್ಯೋಗ ಸುರಕ್ಷತಾ ಜಾಲವನ್ನು ಖಾತರಿಪಡಿಸುವ ಅದರ ಮೂಲಭೂತ ತತ್ವವು ಆರ್ಥಿಕ ಘನತೆಯನ್ನು ಮೂಲಭೂತ ಹಕ್ಕನ್ನಾಗಿ ಎತ್ತಿ ಹಿಡಿಯುತ್ತದೆ. ಈಗಾಗಲೇ ಲಭ್ಯವಿರುವ ಸಾಕ್ಷ್ಯಾಧಾರಗಳು ಇದನ್ನು ಪುಷ್ಟೀಕರಿಸುತ್ತವೆ.

MGNREGA ವಾರ್ಷಿಕವಾಗಿ ಸುಮಾರು 50 ದಶಲಕ್ಷ ಕುಟುಂಬಗಳಿಗೆ ಸುಮಾರು 2 ಬಿಲಿಯನ್‌ ದಿನಗಳ ಕೆಲಸವನ್ನು ಉತ್ಪಾದಿಸಿ ಕೊಡುತ್ತದೆ. ಈ ಕಾರ್ಮಿಕರಲ್ಲಿ ಅರ್ಧಕ್ಕಿಂತ ಹೆಚ್ಚು ಮಹಿಳೆಯರಿದ್ದಾರೆ ಮತ್ತು 40% ದಷ್ಟು ಪರಿಶಿಷ್ಟ ಜಾತಿ ಮತ್ತು ಬುಡಕಟ್ಟುಗಳಿಗೆ ಸೇರಿದವರು. ಆ ಮೂಲಕ ಸಮಾನತೆಯ ಆಶಯವನ್ನು ಜಾರಿಗೆ ತಂದಿದೆ. ಈ ಯೋಜನೆಯ ಆರಂಭಿಕ ವರ್ಷಗಳಲ್ಲಿ ಅಭೂತಪೂರ್ವ ಮಟ್ಟದಲ್ಲಿ ಗ್ರಾಮೀಣ ವೇತನ ಬೆಳವಣಿಗೆಯನ್ನು ಕಂಡಿತ್ತು. ಆರ್ಥಿಕ ಉತ್ಪಾದನೆ ಮತ್ತು ದಕ್ಷತೆಯ ಮೇಲೆ ಸಕಾರಾತ್ಮಕ ಪರಿಣಾಮ ಉಂಟಾಗಿರುವುದನ್ನು ಅಧ್ಯಯನಗಳು ದೃಢಪಡಿಸಿದವು. ಕಾರ್ಯಕ್ರಮದ ಬಗ್ಗೆ ಇದ್ದ ತಪ್ಪು ಊಹಾಪೋಹಗಳನ್ನು ಆ ಮೂಲಕ ತಳ್ಳಿ ಹಾಕಲಾಯಿತು.

ಆದರೂ ಕೂಡ, ದೀರ್ಘಕಾಲದ ಪಾವತಿ ಬಾಕಿ ಮತ್ತು ಪಾವತಿಯಲ್ಲಿ ವಿಳಂಬಗಳು ಯೋಜನೆಯ ಅನುಷ್ಠಾನಕ್ಕೆ ಅಡ್ಡಿಯಾಗಿದ್ದವು. ಆದರೆ ಈಗ ಯೋಜನೆಗೆ ರಾಜ್ಯಗಳು ವಿನಿಯೋಗಿಸಬೇಕೆಂಬ ಬದಲಾವಣೆ ಮತ್ತು ಅದಕ್ಕೆ ಪೂರಕವಾದ ಹಣಕಾಸಿನ ಬೆಂಬಲ ನೀಡದಿರುವಿಕೆ ಒಟ್ಟು ಯೋಜನೆಯ ಅಸ್ತಿತ್ವಕ್ಕೆ ಬೆದರಿಕೆಯಾಗಿದೆ. ರಾಜ್ಯಗಳಿಗೆ ಕೇಂದ್ರದಷ್ಟು ಹಣಕಾಸಿನ ಸಾಮರ್ಥ್ಯವಿರುವುದಿಲ್ಲ. ಹೊಸ ಹಣಕಾಸು ಮಾದರಿಯು ದುರಂತಮಯವಾಗಿ ಪರಿಣಮಿಸಲಿದೆ. ಉದ್ಯೋಗ ಒದಗಿಸುವ ಕಾನೂನಾತ್ಮಕ ಜವಾಬ್ದಾರಿ ರಾಜ್ಯಗಳ ಪಾಲಿಗಾದರೆ, ಕೇಂದ್ರದ ಹಣಕಾಸಿನ ನೆರವನ್ನು ಕೂಡ ಹಿಂಪಡೆಯಲಾಗಿದೆ. ಈ ಹಿಂದೆ ವೆಚ್ಚದ 25% ದಷ್ಟು ರಾಜ್ಯಗಳು ಭರಿಸುತ್ತಿದ್ದದ್ದು ಈಗ 40% ದಿಂದ 100% ದವರೆಗೆ ಭರಿಸಬೇಕಾಗಿದೆ. ಆದ್ದರಿಂದ ಬಡರಾಜ್ಯಗಳು ಯೋಜನೆಗಳಿಗೆ ಅನುಮೋದನೆಯನ್ನು ನೀಡದೆ, ಬೇಡಿಕೆಯನ್ನು ನೇರವಾಗಿ ತಗ್ಗಿಸಿ ಬಿಡುವ ಅಪಾಯವಿದೆ.

ಈ ರಚನಾತ್ಮಕ ವಿಧ್ವಂಸಕತೆಯು ವಿವೇಚನಾಯುಕ್ತ “ಸ್ವಿಚ್‌ ಆಫ್‌” ಅಧಿಕಾರವನ್ನು ಹೊಂದಿದೆ. ಆ ಮೂಲಕ ಯೋಜನೆಯನ್ನು ಅನಿಯಂತ್ರಿತವಾಗಿ ಸ್ಥಗಿತಗೊಳಿಸಲು ಮತ್ತು ಉದ್ಯೋಗ ಖಾತರಿಯನ್ನು ಅರ್ಥಹೀನಗೊಳಿಸಲು ಅನುವು ಮಾಡಿಕೊಡುತ್ತದೆ. ಪಶ್ಚಿಮ ಬಂಗಾಲದಲ್ಲಿ ಕಳೆದ ಮೂರು ವರ್ಷಗಳಿಂದ ಪಾವತಿ ತಡೆ ಹಿಡಿದಿರುವುದು ರಾಜಕೀಯ ದುರುಪಯೋಗವನ್ನು ಬೊಟ್ಟು ಮಾಡಿ ತೋರಿಸುತ್ತದೆ. ಹಣಕಾಸು ನೀಡದೆ, ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸದೆ, ಆದೇಶಗಳನ್ನು ನೀಡುವ ಮೂಲಕ ಹೊಸ ಮಸೂದೆಯು ಈ ಅಪಾಯವನ್ನು ಸಾಂಸ್ಥಿಕಗೊಳಿಸುತ್ತದೆ.

MGNREGA ಯೋಜನೆಯ ಬೇಡಿಕೆ ಆಧಾರಿತ ಶೈಲಿಯು ವೇತನವನ್ನು ನೀಡುವುದರ ಜೊತೆಗೆ, ಗ್ರಾಮಗಳಲ್ಲಿ ಬಾವಿಗಳು, ರಸ್ತೆಗಳು, ಕೊಳಗಳು ಮೊದಲಾದ ಸಾರ್ವಜನಿಕ ಆಸ್ತಿಗಳನ್ನು ನಿರ್ಮಿಸುತ್ತದೆ. ಆ ಮೂಲಕ ಸ್ಥಳೀಯ ಆರ್ಥಿಕತೆಗೆ ಉತ್ತೇಜನ ನೀಡುತ್ತದೆ. ಆದರೆ, ಆರ್ಥಿಕವಾಗಿ ಅಸಮರ್ಥವಾಗಿರುವ ರಾಜ್ಯಗಳಿಗೆ ಯೋಜನೆಗಳನ್ನು ದಾಟಿಸುವ ಮೂಲಕ ಇಂತಹ ಬಹುಸ್ತರದ ಲಾಭಗಳನ್ನು ಇಲ್ಲವಾಗಿಸಲಾಗುತ್ತದೆ.

MGNREGA ಈಗಾಗಲೇ ತನ್ನ ಸಾಧನೆ ಮತ್ತು ಹೊಸದೇ ಆದ ವಿನ್ಯಾಸದಿಂದ ಜಗತ್ತಿನ ಗಮನ ಸೆಳೆದಿದೆ. ಈಗ ಅದನ್ನು ಕೆಡವಿ ಹಾಕುವುದು ಐತಿಹಾಸಿಕ ತಪ್ಪು. ಬಡತನ ನಿರ್ಮೂಲನೆ, ಸಾಮಾಜಿಕ ನ್ಯಾಯ ಮತ್ತು ಪರಿಸರದ ಬಗೆಗಿನ ಕಾಳಜಿಗಳನ್ನು ಆ ಮೂಲಕ ಕೈ ಬಿಟ್ಟಂತಾಗುತ್ತದೆ. ಕೇಂದ್ರದ ಖಚಿತವಾದ ಹಣಕಾಸು ವ್ಯವಸ್ಥೆ, ಸಕಾಲಿಕ ವೇತನ ಮತ್ತು ಮೂಲಭೂತ ಉದ್ಧೇಶವಾದ ಉದ್ಯೋಗದ ಹಕ್ಕಿನ ಖಾತರಿಯನ್ನು ಮರುಸ್ಥಾಪಿಸಲು ನಾವು ಈ ಮೂಲಕ ಕರೆ ನೀಡುತ್ತಿದ್ದೇವೆ.

You cannot copy content of this page

Exit mobile version