ಚೆನ್ನೈ: ತಮಿಳುನಾಡು ಬಿಜೆಪಿಯ ರಾಜ್ಯ ಕಾರ್ಯದರ್ಶಿ ಅಮರ್ ಪ್ರಸಾದ್ ರೆಡ್ಡಿ ಅವರು ಬುಧವಾರ ತಮ್ಮ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ರಾಜ್ಯ ಬಿಜೆಪಿಯ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಇತ್ತೀಚೆಗೆ ಪಕ್ಷ ತೊರೆದ ಬೆನ್ನಲ್ಲೇ ಈ ಪ್ರಮುಖ ರಾಜಕೀಯ ಬೆಳವಣಿಗೆ ನಡೆದಿದೆ.
ತಮ್ಮ ರಾಜೀನಾಮೆ ನಿರ್ಧಾರವನ್ನು ಸೋಷಿಯಲ್ ಮೀಡಿಯಾ ವೇದಿಕೆಯ ಮೂಲಕ ಪ್ರಕಟಿಸಿರುವ ಅಮರ್ ಪ್ರಸಾದ್ ರೆಡ್ಡಿ, ತಾವು ಇನ್ನು ಮುಂದೆ ಅಣ್ಣಾಮಲೈ ಅವರ ಭವಿಷ್ಯದ ರಾಜಕೀಯ ಪ್ರಯಾಣ ಹಾಗೂ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ ಅಣ್ಣಾಮಲೈ ಅವರು ಬಿಜೆಪಿಯಿಂದ ಹೊರನಡೆದ ತಕ್ಷಣವೇ ಪಕ್ಷದ ಉಪಾಧ್ಯಕ್ಷ ಕಾರು ನಾಗರಾಜನ್ ಸೇರಿದಂತೆ ಸುಮಾರು 15 ಕ್ಕೂ ಹೆಚ್ಚು ಪ್ರಮುಖ ಪದಾಧಿಕಾರಿಗಳು ಹಾಗೂ ಸಂಘಟಕರು ತಮ್ಮ ಹುದ್ದೆಗಳಿಗೆ ದಿಢೀರ್ ರಾಜೀನಾಮೆ ನೀಡಿದ್ದರು. “ಅಣ್ಣಾಮಲೈ ಅವರ ನಿರ್ಗಮನದಿಂದ ತಮಿಳುನಾಡಿನಲ್ಲಿ ಪಕ್ಷದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಲ್ಲ,” ಎಂದು ಪ್ರಸ್ತುತ ಬಿಜೆಪಿ ರಾಜ್ಯ ಅಧ್ಯಕ್ಷ ನೈನಾರ್ ನಾಗೇಂದ್ರನ್ ಹೇಳಿಕೆ ನೀಡಿದ ಹೊರತಾಗಿಯೂ, ಪಕ್ಷದಲ್ಲಿ ರಾಜೀನಾಮೆಗಳ ಪರ್ವ ನಿರಂತರವಾಗಿ ಮುಂದುವರಿದಿರುವುದು ಬಿಜೆಪಿಗೆ ಭಾರಿ ಹಿನ್ನಡೆಯನ್ನುಂಟು ಮಾಡಿದೆ.
