234 ಶಾಸಕರಿಗೆ ತಿಂಗಳಿಗೆ ₹1 ಲಕ್ಷ, ಪ್ರತಿಯೊಬ್ಬರಿಗೂ ಕಾರು, ಭರ್ಜರಿ ಕೊಡುಗೆ – ತಮಿಳುನಾಡು CM ವಿಜಯ್

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ರಾಜ್ಯದ ಶಾಸಕರಿಗೆ ಭರ್ಜರಿ ಕೊಡುಗೆಯನ್ನು ಘೋಷಿಸಿದ್ದಾರೆ. ರಾಜ್ಯದ ಎಲ್ಲ 234 ಶಾಸಕರಿಗೆ ತಮ್ಮ ಕ್ಷೇತ್ರಗಳಲ್ಲಿನ ಸಾರ್ವಜನಿಕ ಕುಂದುಕೊರತೆಗಳನ್ನು ಬಗೆಹರಿಸಲು ಅನುಕೂಲವಾಗುವಂತೆ ಕಾರು ಹಾಗೂ ಇಂಧನ ಮತ್ತು ನಿರ್ವಹಣಾ ವೆಚ್ಚಕ್ಕಾಗಿ ಭತ್ಯೆ ಸಿಗಲಿದೆ ಎಂದಿದ್ದಾರೆ.ವಿಧಾನಸಭೆಯಲ್ಲಿ ನಿಯಮ 110ರ ಅಡಿಯಲ್ಲಿ ಘೋಷಣೆ ಮಾಡಿದ ಅವರು, ಶಾಸಕರಿಗೆ ವಾಹನ ಮತ್ತು ಭತ್ಯೆಯನ್ನು ಒಳಗೊಂಡಿರುವ ಹೊಸ ನೆರವಿನ ಕ್ರಮಗಳು, ಸಾರ್ವಜನಿಕರ ಅಹವಾಲುಗಳನ್ನು ಆಲಿಸಲು ಹಾಗೂ ಸರ್ಕಾರಿ ಯೋಜನೆಗಳ ಮೇಲ್ವಿಚಾರಣೆ ಮಾಡಲು ತಮ್ಮ ಕ್ಷೇತ್ರಗಳಲ್ಲಿ ಸಂಚರಿಸುವಾಗ ಇತರರನ್ನು ಅವಲಂಬಿಸದೆ ಕಾರ್ಯನಿರ್ವಹಿಸಲು ಅವರಿಗೆ ಸಹಕಾರಿಯಾಗಲಿವೆ ಎಂದು ಹೇಳಿದರು.

ಸದ್ಯ ವಿಧಾನಸಭೆಯಲ್ಲಿ ಮೊದಲ ಬಾರಿಗೆ ಆಯ್ಕೆಯಾಗಿರುವ ಹಾಗೂ ಸಾಮಾನ್ಯ ಹಿನ್ನೆಲೆಯಿಂದ ಬಂದಿರುವ ಅನೇಕ ಶಾಸಕರಿದ್ದಾರೆ ಎಂದು ತಮಿಳುನಾಡು ಸರ್ಕಾರ ತಿಳಿಸಿದೆ. ಜನಪ್ರತಿನಿಧಿಗಳಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಅವರಿಗೆ ಕಾರಿನ ಅಗತ್ಯವಿದೆ ಎಂದು ವಿಜಯ್ ಹೇಳಿದರು.ಅಗತ್ಯವಿರುವ ಸಾರಿಗೆ ಹಾಗೂ ಇತರ ವ್ಯವಸ್ಥಾಪಕ ಬೆಂಬಲವಿಲ್ಲದೆ ಶಾಸಕರು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಹೀಗಾಗಿ ತಮಗೆ ಕಾರುಗಳನ್ನು ಒದಗಿಸುವಂತೆ ವಿಸಿಕೆ (VCK) ಶಾಸಕ ಜೋತಿಮಣಿ ಹೇಳಿದ ನಂತರ ಈ ಘೋಷಣೆ ಹೊರಬಿದ್ದಿದೆ.

ಚಾಲಕ, ಇಂಧನ ಮತ್ತು ಕಾರುಗಳ ನಿರ್ವಹಣಾ ವೆಚ್ಚಗಳಿಗಾಗಿ ಶಾಸಕರಿಗೆ ತಿಂಗಳಿಗೆ ₹75,000 ಭತ್ಯೆಯನ್ನು ನೀಡಲಾಗುವುದೆಂದು ವಿಜಯ್ ಸರ್ಕಾರ ಘೋಷಿಸಿದೆ. ಜೊತೆಗೆ, ಶಾಸಕರು ಈಗ ತಮ್ಮ ಅಧಿಕೃತ ಕೆಲಸಗಳಿಗಾಗಿ ಕಾರ್ಯದರ್ಶಿಯೊಬ್ಬರನ್ನು ನೇಮಿಸಿಕೊಳ್ಳಲು ₹25,000 ರಾಜ್ಯ ಅನುದಾನವನ್ನೂ ಪಡೆಯಲಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು