ಕಲ್ಲಕುರಿಚಿ: ತಮಿಳುನಾಡಿನ ಕಲ್ಲಕುರಿಚಿಯಲ್ಲಿ ಕಲಬೆರಕೆ ಸಾರಾಯಿ ಕುಡಿದು ಮಹಿಳೆ ಸೇರಿದಂತೆ 9 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ 40 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅವರಲ್ಲಿ ಏಳು ಮಂದಿ ಪುದುಚೇರಿಯ ಜಿಪ್‌ಮರ್ ಎನ್ನುವಲ್ಲಿ ವೈದ್ಯಕೀಯ ಸಹಾಯ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತದೇಹಗಳ ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಸಾವಿಗೆ ಕಾರಣ ತಿಳಿಯಲಿದೆ ಎಂದು ಅವರು ಹೇಳಿದ್ದಾರೆ. ಕಲ್ಲಕುರಿಚಿ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಕರುಣಾಪುರಂನಲ್ಲಿ ಈ ಘಟನೆ ಸಂಭವಿಸಿದೆ. ಮೃತರಲ್ಲಿ ಹೆಚ್ಚಿನವರು ದಿನಗೂಲಿ ಕಾರ್ಮಿಕರು.
ಕರುಣಾಪುರದ ವ್ಯಾಪಾರಿಯೊಬ್ಬರಿಂದ ಕಲಬೆರಕೆ ಮದ್ಯ ಖರೀದಿಸಿ ಕುಡಿದಿದ್ದಾರೆ ಎಂದು ತಿಳಿದುಬಂದಿದೆ. ಮಂಗಳವಾರ ಸಾರಾಯಿ ಖರೀದಿಸಿ ಕುಡಿದ ಸ್ವಲ್ಪ ಸಮಯದ ನಂತರ, ಅವರು ಉಸಿರಾಟದ ತೊಂದರೆ, ಅಸ್ಪಷ್ಟ ದೃಷ್ಟಿ, ತಲೆತಿರುಗುವಿಕೆ, ವಾಂತಿ ಮತ್ತು ಅತಿಸಾರದಂತಹ ರೋಗಲಕ್ಷಣಗಳು ಕಾಣಿಸತೊಡಗಿದವು. ಇವರಲ್ಲಿ ಮೂವರು ಬುಧವಾರ ಮುಂಜಾನೆ ಜಮುನಾ ಎನ್ನುವವರ ಮನೆಯಲ್ಲಿ ಮೃತಪಟ್ಟರೆ, ಮೂವರು ಕಲ್ಲಕುರಿಚಿ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಎಲ್ಲಾ ರೋಗಿಗಳ ರಕ್ತದ ಮಾದರಿಗಳನ್ನು ತೆಗೆದುಕೊಂಡು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇನ್ನೂ 40 ಮಂದಿಗೆ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ. ಸಾವಿನ ಹಿನ್ನೆಲೆಯಲ್ಲಿ, ಘಟನೆಯ ಬಗ್ಗೆ ಸಿಬಿಸಿಐಡಿ ತನಿಖೆಗೆ ಸರ್ಕಾರ ಬುಧವಾರ ಆದೇಶಿಸಿದೆ. ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ. ಎಸ್ಪಿ ಅವರನ್ನು ಅಮಾನತುಗೊಳಿಸಲಾಗಿದೆ.