ತಮಿಳುನಾಡು ರಾಜಕೀಯ ಹೈಡ್ರಾಮಾ: ವಿಜಯ್ ಪ್ರಮಾಣವಚನ ಇಂದೂ ಅನುಮಾನ!

ತಮಿಳುನಾಡು ರಾಜಕೀಯ ಕ್ಷಣಕ್ಕೊಂದು ಮಲುಪು ಪಡೆಯುತ್ತಿದ್ದು, ಹೊಸ ಸರ್ಕಾರ ರಚನೆಯ ಪ್ರಕ್ರಿಯೆಯಲ್ಲಿ ತೀವ್ರ ಅನಿಶ್ಚಿತತೆ ಮುಂದುವರಿದಿದೆ. ಶನಿವಾರ ಬೆಳಿಗ್ಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ತಮಿಳಗ ವೆಟ್ರಿ ಕಳಗಂ (TVK) ಅಧ್ಯಕ್ಷ ವಿಜಯ್ ಸಿದ್ಧತೆ ನಡೆಸಿದ್ದರೂ, ಶುಕ್ರವಾರ ರಾತ್ರಿ ನಡೆದ ಬೆಳವಣಿಗೆಗಳು ಅದಕ್ಕೆ ಅಡ್ಡಿಯಾಗಿವೆ.

ವಿಡುತಲೈ ಚಿರುತೈಗಳ್ ಕಟ್ಚಿ (VCK) ಪಕ್ಷದಿಂದ ಅಧಿಕೃತ ಬೆಂಬಲ ಪತ್ರ ಸಿಗದ ಕಾರಣ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರು ಪ್ರಮಾಣವಚನಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಕಟಣೆ ಹೊರಡಿಸಿಲ್ಲ. 234 ಸದಸ್ಯ ಬಲದ ವಿಧಾನಸಭೆಯಲ್ಲಿ ಸರ್ಕಾರ ರಚಿಸಲು 118 ಶಾಸಕರ ಬೆಂಬಲ ಅಗತ್ಯವಿದ್ದು, ವಿಜಯ್ ಅವರು 116 ಶಾಸಕರ ಸಹಿಯುಳ್ಳ ಬೆಂಬಲ ಪತ್ರವನ್ನು ಸಲ್ಲಿಸಿದ್ದಾರೆ.

ವಿಸಿ ಕೆ ಮತ್ತು ಐಯುಎಂಎಲ್ (IUML) ಪಕ್ಷಗಳ ಬೆಂಬಲದೊಂದಿಗೆ ಟಿವಿಕೆ ಬಲ 120ಕ್ಕೆ ಏರಲಿದೆ ಎಂದು ಈ ಮೊದಲು ಲೆಕ್ಕಾಚಾರ ಹಾಕಲಾಗಿತ್ತು. ಆದರೆ, ತಾವು ಡಿಎಂಕೆ ಮೈತ್ರಿಕೂಟದಲ್ಲೇ ಮುಂದುವರಿಯುವುದಾಗಿ ಐಯುಎಂಎಲ್ ಶುಕ್ರವಾರ ರಾತ್ರಿ ಸ್ಪಷ್ಟಪಡಿಸಿದೆ. ಮತ್ತೊಂದೆಡೆ, ವಿಸಿ ಕೆ ತನ್ನ ಅಂತಿಮ ನಿರ್ಧಾರವನ್ನು ಶನಿವಾರ ಪ್ರಕಟಿಸುವುದಾಗಿ ತಿಳಿಸಿದೆ.

ಮೈತ್ರಿ ಪಕ್ಷಗಳ ನಾಯಕರನ್ನು ವೈಯಕ್ತಿಕವಾಗಿ ಭೇಟಿ ಮಾಡದೆ, ಕೇವಲ ವಾಟ್ಸಾಪ್ ಸಂದೇಶದ ಮೂಲಕ ಬೆಂಬಲ ಕೋರಿದ ವಿಜಯ್ ಅವರ ನಡೆಗೆ ವಿಸಿ ಕೆ ನಾಯಕ ಸಿಂತನೈ ಸೆಲ್ವನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂತಹ ಗಂಭೀರ ಸಂದರ್ಭದಲ್ಲಿ ಕೇವಲ ಮೆಸೇಜ್ ಮೂಲಕ ಪ್ರತಿಕ್ರಿಯಿಸಲು ಹೇಳಿರುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ.

ಇತ್ತ ಎಎಂಎಂಕೆ (AMMK) ನಾಯಕ ಟಿಟಿವಿ ದಿನಕರನ್ ಅವರು ರಾಜ್ಯಪಾಲರನ್ನು ಭೇಟಿ ಮಾಡಿ, ಸರ್ಕಾರ ರಚಿಸಲು ಎಐಎಡಿಎಂಕೆ ನಾಯಕ ಎಡಪ್ಪಾಡಿ ಪಳನಿಸ್ವಾಮಿ ಅವರನ್ನು ಆಹ್ವಾನಿಸುವಂತೆ ಮನವಿ ಮಾಡಿದ್ದಾರೆ. ಕೇವಲ ಒಬ್ಬ ಶಾಸಕರಿರುವ ತಮ್ಮ ಪಕ್ಷವು ಪಳನಿಸ್ವಾಮಿ ಅವರಿಗೆ ಬೆಂಬಲ ನೀಡಲಿದೆ ಎಂದು ಅವರು ಪತ್ರ ನೀಡಿದ್ದಾರೆ.

ವಿಜಯ್ ಅವರ ಪರವಾಗಿ ಸಿಪಿಐ ಮತ್ತು ಸಿಪಿಎಂ ಪಕ್ಷಗಳು ಬೆಂಬಲ ಘೋಷಿಸಿದ್ದು, ಇದರಿಂದ ರಾಜಕೀಯ ಸಮೀಕರಣಗಳು ಕುತೂಹಲಕಾರಿಯಾಗಿವೆ. ಕೇಂದ್ರ ಸರ್ಕಾರವು ರಾಜ್ಯಪಾಲರ ಕಚೇರಿಯ ಮೂಲಕ ತಮಿಳುನಾಡಿನಲ್ಲಿ ಪರೋಕ್ಷವಾಗಿ ಆಡಳಿತ ನಡೆಸಲು ಪ್ರಯತ್ನಿಸುತ್ತಿದೆ ಎಂದು ವಿರೋಧ ಪಕ್ಷಗಳು ಈ ನಡುವೆ ಗಂಭೀರ ಆರೋಪ ಮಾಡಿವೆ.

ಸರ್ಕಾರ ರಚನೆಗೆ ಸಂಬಂಧಿಸಿದಂತೆ ಬಹುಮತ ಸಾಬೀತುಪಡಿಸಲು ವಿಜಯ್ ಅವರಿಗೆ ಮೇ 10ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ತಿಳಿದುಬಂದಿದೆ. ಅಲ್ಲಿಯವರೆಗೆ ತಮಿಳುನಾಡಿನ ರಾಜಕೀಯ ಹೈಡ್ರಾಮಾ ಮುಂದುವರಿಯುವ ಎಲ್ಲಾ ಸಾಧ್ಯತೆಗಳಿವೆ.

Related Articles

ಇತ್ತೀಚಿನ ಸುದ್ದಿಗಳು